ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಬಾರಿ ಮೈಸೂರು | ಜೇಬು ಸುಡುವ ಹೋಟೆಲ್, ತಳ್ಳುಗಾಡಿ ‘ಆಹಾರ’

ಕಡಿವಾಣಕ್ಕೆ ಕ್ರಮ ಕೈಗೊಳ್ಳದ ಪಾಲಿಕೆ, ಸಂಬಂಧಿಸಿದ ಇಲಾಖೆ!
Published : 5 ಸೆಪ್ಟೆಂಬರ್ 2024, 6:27 IST
Last Updated : 5 ಸೆಪ್ಟೆಂಬರ್ 2024, 6:27 IST
ಫಾಲೋ ಮಾಡಿ
Comments

ಮೈಸೂರು: ಪ್ರವಾಸೋದ್ಯಮವೇ ಜೀವಾಳವಾಗಿರುವ ನಗರ ಹಾಗೂ ಇಲ್ಲಿಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿರುವ ಹೋಟೆಲ್‌ಗಳಲ್ಲಿನ ತಿಂಡಿ–ತಿನಿಸುಗಳ ಬೆಲೆ ಕೂಡ ಇತ್ತೀಚಿನ ವರ್ಷಗಳಲ್ಲಿ ಹಲವು ಪಟ್ಟು ಜಾಸ್ತಿಯಾಗಿದೆ. ಕಾಫಿ–ಟೀ ದರವೂ ಗ್ರಾಹಕರ ಬಾಯಿ ಸುಡುತ್ತಿದೆ!

ಕುಟುಂಬದ ನಾಲ್ಕೈದು ಮಂದಿ ‘ಮಧ್ಯಮ ವರ್ಗದ ಹೋಟೆಲ್‌’ಗೆ ಹೋದರೂ ಸಾವಿರಾರು ರೂಪಾಯಿ ಬಿಲ್ ಆಗುತ್ತದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ತೆರಿಗೆಯ ಹೊರೆಯನ್ನೂ ಗ್ರಾಹಕರ ಮೇಲೆಯೇ ಹಾಕಲಾಗುತ್ತದೆ. ಜತೆಗೆ, ‘ಸೇವಾ ಶುಲ್ಕ’ವನ್ನೂ ಕಟ್ಟಬೇಕು. ಇನ್ನು ದೊಡ್ಡವು ಎನಿಸುವ ‘ಸ್ಟಾರ್‌’ ಹೋಟೆಲ್‌ಗಳಿಗೆ ಹೋದರೆ ಬಿಲ್‌ ಮತ್ತಷ್ಟು ‘ಭಾರ’ದ್ದೇ ಆಗಿರುತ್ತದೆ. ಅಲ್ಲಿಗೆ ಹೋಗುವುದಕ್ಕೆ ಕೆಳ ಹಾಗೂ ಮಧ್ಯಮ ವರ್ಗದವರು ಹಿಂದೇಟು ಹಾಕುವ ಸ್ಥಿತಿ ಇದೆ.

ಬಹುತೇಕ ಕಡೆಗಳಲ್ಲಿ ‘ಎಂಆರ್‌ಪಿ’ಗಿಂತಲೂ ಜಾಸ್ತಿ ಬೆಲೆ ಪಡೆಯುತ್ತಾರೆ. ಲೀಟರ್‌ ನೀರಿಗೆ ₹ 20 ಎಂಆರ್‌ಪಿ ಇದ್ದರೆ, ಹೋಟೆಲ್‌ಗಳವರು ₹ 40 ಬಿಲ್‌ ಮಾಡುತ್ತಾರೆ. ₹ 40 ಇರುವ ತಂಪು ಪಾನೀಯಕ್ಕೆ ಅವರು ಬಿಲ್‌ ಹಾಕುವುದು ದುಪ್ಪಟ್ಟು ಅಂದರೆ ₹ 80!. ಹೀಗೆ... ಹಲವು ಪದಾರ್ಥಗಳ ಮೇಲೆ ಮನಬಂದಂತೆ ದರ ವಿಧಿಸುತ್ತಿದ್ದರೂ ಸಂಬಂಧಿಸಿದ ಇಲಾಖೆಯವರು ಕಡಿವಾಣ ಹಾಕುವ ಕೆಲಸ ಮಾಡುತ್ತಿರುವುದು ಕಂಡುಬಂದಿಲ್ಲ. ಪರಿಣಾಮ, ಗ್ರಾಹಕರಿಂದ ‘ಹೆಚ್ಚುವರಿ ವಸೂಲಿ’ ಎಗ್ಗಿಲ್ಲದೆ ಮುಂದುವರಿಯುತ್ತಲೇ ಇದೆ.

ಯಾವುದೇ ತೆರಿಗೆಯ ಗೊಡವೆಯೇ ಇಲ್ಲದ ‘ತಳ್ಳುಗಾಡಿ’ಗಳಲ್ಲಿ ‘ಫಾಸ್ಟ್‌ ಫುಡ್‌’ ವ್ಯವಹಾರ ನಡೆಸುವ ಕಡೆಗಳಲ್ಲೂ ತಿಂಡಿ–ತಿನಿಸುಗಳ ಬೆಲೆ ಜಾಸ್ತಿಯಾಗಿದೆ. ಉದಾಹರಣೆಗೆ, ಕೆಲವೇ ವರ್ಷಗಳಲ್ಲಿ ₹ 20ರಿಂದ ₹ 25 ಇದ್ದ ರೈಸ್‌ಬಾತ್‌ ಬೆಲೆ ಈಗ ಸರಾಸರಿ ₹ 40ರಿಂದ ₹ 50ಕ್ಕೆ ಏರಿಕೆಯಾಗಿದೆ. ಎರಡು ಇಡ್ಲಿಗೆ ಸರಾಸರಿ ₹ 20–₹ 25 ಇದೆ.

2ರಿಂದ 3 ಪಟ್ಟು ಹೆಚ್ಚಳ:

ಸಸ್ಯಾಹಾರದ ಜೊತೆಗೆ ಮಾಂಸಾಹಾರದ ಬೆಲೆಯೂ ಹೆಚ್ಚಾಗಿದೆ. ಚಿಕನ್‌ ಬಿರಿಯಾನಿ ಹಾಗೂ ಮಟನ್‌ ಬಿರಿಯಾನಿ ದರವೂ ದುಪ್ಪಟ್ಟು, ಕೆಲವೆಡೆ ಮೂರು ಪಟ್ಟು ಏರಿಕೆಯಾಗಿದೆ. ‘ಮಧ್ಯಮ ವರ್ಗ’ದ ಹೋಟೆಲ್‌ಗಳಲ್ಲೇ ಚಿಕನ್ ಬಿರಿಯಾನಿಯು ₹ 200ರ ಆಸುಪಾಸಿನಲ್ಲಿದೆ. ಆದರೆ, ಪ್ರಮಾಣ (ಕ್ವಾಂಟಿಟಿ)ದಲ್ಲೇನೋ ಜಾಸ್ತಿಯಾಗಿಲ್ಲ. ವ್ಯಾಪಕವಾಗಿ ಹೆಚ್ಚಾಗುತ್ತಿರುವ ಬೆಲೆ ಏರಿಕೆಯು, ಹೋಟೆಲ್‌ಗಳನ್ನೇ ನೆಚ್ಚಿಕೊಂಡಿರುವವರ ಜೇಬನ್ನು ಸುಡುತ್ತಲೇ ಇದೆ. ವಿವಿಧ ‘ಚಹಾ’ ಅಥವಾ ‘ಕಾಫಿ’ ಹೆಸರಿನಲ್ಲಿ ದರ ಹೆಚ್ಚಳದ ತಂತ್ರವನ್ನು ಹೊಸದಾಗಿ ಆರಂಭಗೊಳ್ಳುತ್ತಿರುವ ಅಂಗಡಿಗಳು ಮಾಡುತ್ತಿರುವುದು ಕಂಡುಬಂದಿದೆ ಎನ್ನುತ್ತಾರೆ ಗ್ರಾಹಕರು.

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್‌) ಉತ್ಪನ್ನವಾದ ‘ನಂದಿನಿ’ ಹಾಲಿನ ಅರ್ಧ ಲೀಟರ್‌ ಪ್ಯಾಕೆಟ್‌ ಹಾಗೂ ಒಂದು ಲೀಟರ್‌ ಹಾಲಿನ ಪ್ಯಾಕೆಟ್‌ ದರವನ್ನು ತಲಾ ₹2ರಂತೆ ಹೆಚ್ಚಿಸಲಾಯಿತು. ಪರಿಷ್ಕೃತ ದರವು ಇದೇ ಜೂನ್ 26ರಿಂದ ಅನ್ವಯವಾಗಿದೆ. ಅರ್ಧ ಲೀಟರ್ ಮತ್ತು ಒಂದು ಲೀಟರ್‌ ಹಾಲಿನ ಪ್ಯಾಕೆಟ್‌ಗಳಿಗೆ ಮಾತ್ರ ತಲಾ 50 ಮಿ.ಲೀ. ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ, ಪ್ರತಿ ಪ್ಯಾಕೆಟ್‌ನ ದರವನ್ನು ₹2 ಹೆಚ್ಚಿಸಲಾಗಿದೆ. ಅರ್ಧ ಲೀಟರ್‌ ಪ್ಯಾಕೆಟ್‌ನಲ್ಲಿ 550 ಮಿ.ಲೀ., ಒಂದು ಲೀಟರ್‌ ಪ್ಯಾಕೆಟ್‌ನಲ್ಲಿ 1050 ಮಿ.ಲೀ. ಹಾಲು ಲಭ್ಯವಾಗುತ್ತಿದೆ. ದರ ಹೆಚ್ಚಳದಿಂದ ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ ದರ ₹24 ಹಾಗೂ ಒಂದು ಲೀಟರ್‌ನ ಪ್ಯಾಕೆಟ್‌ ದರ ₹44 ಆಗಿದೆ. ಸರ್ಕಾರವೇನೋ ಹೆಚ್ಚುವರಿ ಹಾಲು ನೀಡಿ ಹೆಚ್ಚುವರಿ ಹಣ ನಿಗದಿಪಡಿಸಿತು. ಇದನ್ನೇ ನೆಪವಾಗಿಸಿಕೊಂಡ ಹೋಟೆಲ್‌ನವರು, ಟೀ–ಕಾಫಿ ಅಂಗಡಿಯವರು ದರವನ್ನು ಹೆಚ್ಚಿಸಿದರು.

ಸರಾಸರಿ ₹ 10 ಇದ್ದ ಒಂದು ಲೋಟ ಟೀ–ಕಾಫಿ ಬೆಲೆಯನ್ನು ₹ 12ಕ್ಕೆ, ₹12 ಇದ್ದದ್ದನ್ನು ₹ 15ಕ್ಕೆ ಏರಿಸಲಾಯಿತು. ₹ 25ಕ್ಕೆ ಕಾಫಿ–ಟೀ ಮಾರುವುದು ಕೂಡ ಕಂಡುಬರುತ್ತಿದೆ. ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಇದರ ಬೆಲೆ ದುಪ್ಪಟ್ಟಿದೆ.

‘ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಕ್ಕಂತೆ, ನಾವೂ ಆಹಾರ ಪದಾರ್ಥಗಳ ದರ ಏರಿಸಲೇಬೇಕಾದ ಅನಿವಾರ್ಯ ಇದೆ. ಇಲ್ಲದಿದ್ದರೆ ನಮಗೆ ಲಾಭವೇ ಆಗುವುದಿಲ್ಲ’ ಎಂಬ ಸಮರ್ಥನೆ ಹೋಟೆಲ್‌ ಉದ್ಯಮಿಗಳದ್ದಾಗಿದೆ.

‘ಹೋಟೆಲ್‌ ಕೆಲಸಕ್ಕೆ ಹೊಸ‌ಬರು ಬರುತ್ತಿಲ್ಲ. ಹೀಗಾಗಿ ಇರುವವರಿಗೆ ವೇತನ ಜಾಸ್ತಿ ಕೊಡಬೇಕಾಗಿದೆ. ಜಿಎಸ್‌ಟಿ ಸೇರಿದಂತೆ ವಿವಿಧ ತೆರಿಗೆಗಳ ಹೊರೆ ಇದೆ. ದಿನಸಿ ಸೇರಿದಂತೆ ಕಚ್ಚಾ ಪದಾರ್ಥಗಳ ಬೆಲೆ, ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆ ಆಗುತ್ತಲೇ ಇದೆ. ಇದರಿಂದಾಗಿ ಹೋಟೆಲ್ ಉದ್ಯಮಿಗಳು ತತ್ತರಿಸುತ್ತಿದ್ದು, ಇಂತಿಷ್ಟು ಬೆಲೆ ಏರಿಸಲೇಬೇಕಾದ ಅನಿವಾರ್ಯತೆಗೆ ಸಿಲುಕುತ್ತಿದ್ದಾರೆ. ಪೈಪೋಟಿ ಎದುರಿಸಲಾಗದವರು ಮುಚ್ಚುತ್ತಿರುವುದೂ ಇದೆ’ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಪ್ರತಿಕ್ರಿಯಿಸಿದರು.

ಸಂಕಷ್ಟಕ್ಕೆ ಸಿಲುಕಿರುವ ಜನರು

‘ರಾಜ್ಯ ಸರ್ಕಾರ ‘ಗ್ಯಾರಂಟಿ’ ಯೋಜನೆಗಳಿಗೆ ಹಣ ಹೊಂದಿಸಲು ಹಾಲು ಮೊಸರು ಪೆಟ್ರೋಲ್ ಡೀಸೆಲ್ ವಾಣಿಜ್ಯ ವಿದ್ಯುತ್ ದರಗಳನ್ನು ಹೆಚ್ಚಿಸಿದೆ. ಹೋಟೆಲ್‌ಗಳಲ್ಲಿ ಟೀ-ಕಾಫಿ ಕುಡಿಯುವುದು ಕೂಡ ಕೆಳ ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗಿದೆ. ಅಲ್ಲಿ ಊಟ–ಉಪಾಹಾರದ ಬಗ್ಗೆ ಯೋಚಿಸುವುದೂ ಕಷ್ಟವಾಗಿದೆ. ಮದ್ಯದ ದರ ಹೆಚ್ಚಳದಿಂದ ಅವುಗಳನ್ನು ಪೂರೈಸುವ ಹೋಟೆಲ್‌ಗಳಲ್ಲಿನ ಆಹಾರ ಪದಾರ್ಥವೂ ಏರಿಕೆಯಾಗಿದೆ. ಜನರು ಹಲವು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್.

‘ಶುಚಿತ್ವವೂ ಇರುವುದಿಲ್ಲ’

‘ರಸ್ತೆ ಬದಿ ಫಾಸ್ಟ್‌ಫುಡ್‌ಗಳಲ್ಲಿ ಪಾನಿಪುರಿ ಮೊದಲಾದ ಪದಾರ್ಥಗಳ ತಳ್ಳುಗಾಡಿಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಇದರಿಂದ ಅಲ್ಲಿ ಆಹಾರ ಸೇವಿಸುವವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇದಕ್ಕೆ ನಗರಪಾಲಿಕೆಯವರು ಕಡಿವಾಣ ಹಾಕಬೇಕು. ಗ್ರಾಹಕರ ಆರೋಗ್ಯ ರಕ್ಷಣೆಗೆ ಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಮಾಜಿ ಮೇಯರ್‌ ಮೋದಾಮಣಿ.

ತಕ್ಷಣ ಏರಿಸ್ತಾರೆ ಇಳಿಸುವುದೇ ಇಲ್ಲ!

ಅಡುಗೆ ಅನಿಲ ಸಿಲಿಂಡರ್‌ ಬೆಲೆ ಜಾಸ್ತಿಯಾದಾಗ ಆಹಾರ ಪದಾರ್ಥಗಳ ಬೆಲೆ ಏರಿಸಲಾಗುತ್ತದೆ. ಆದರೆ ಸಿಲಿಂಡರ್‌ ಬೆಲೆ ಇಳಿಕೆಯಾದಾಗ ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗುವುದೇ ಇಲ್ಲ! ರಸ್ತೆ ಬದಿ ಅಥವಾ ಮೂಲೆ(ಕಾರ್ನರ್)ಗಳಲ್ಲಿನ ತಳ್ಳುಗಾಡಿಗಳಲ್ಲಿ ಸಿಗುವ ಪದಾರ್ಥಗಳೂ ದುಬಾರಿಯಾಗಿವೆ. ಆಯಾ ‘ರಸ್ತೆ’ಗಳನ್ನು ಆಧರಿಸಿ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸ ಮಾಡಲಾಗುತ್ತಿದೆ.

ಹೋಟೆಲ್‌ಗಳಲ್ಲಿ ಎಂಆರ್‌ಪಿ ಮೇಲೆ ಹೆಚ್ಚಿನ ಬೆಲೆ ತೆಗೆದುಕೊಳ್ಳುವುದನ್ನು ನಿಯಂತ್ರಣ ಹೇರುವ ಅಧಿಕಾರ ನಮಗಿಲ್ಲ. ದೂರುಗಳಿದ್ದಲ್ಲಿ ಗ್ರಾಹಕರ ವ್ಯಾಜ್ಯಗಳ ವೇದಿಕೆಗೆ ಸಲ್ಲಿಸಬಹುದು.
ಡಾ.ವೆಂಕಟೇಶ್, ಆರೋಗ್ಯಾಧಿಕಾರಿ ಮಹಾನಗರಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT