ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆದ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರ ವಿರುದ್ದ ಇಲ್ಲಿನ ಲೋಕಾಯುಕ್ತ ಪೊಲೀಸರು ಶುಕ್ರವಾರ ಎಫ್ಐಆರ್ ದಾಖಲಿಸಿದ್ದಾರೆ.

ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದು, ಅವರ ಪತ್ನಿ ಬಿ.ಎಂ. ಪಾರ್ವತಿ ಎರಡನೇ ಆರೋಪಿ, ಭಾವಮೈದುನ ಮಲ್ಲಿಕಾರ್ಜುನಸ್ವಾಮಿ ಮೂರನೇ ಹಾಗೂ ಜಮೀನಿನ ಮಾಲೀಕ ದೇವರಾಜು ನಾಲ್ಕನೇ ಆರೋಪಿಯಾಗಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್ 154 ಅಡಿ ಅಡಿ ಎಫ್‌ಐಆರ್ ದಾಖಲಾಗಿದೆ. ಭಾರತೀಯ ದಂಡಸಂಹಿತೆ ಕಾಯ್ದೆಯ ಕಲಂ 120ಬಿ, 166, 403, 406, 420, 426, 465, 486, 340, 351 ಹಾಗೂ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 9, 13, ಬೇನಾಮಿ ಆಸ್ತಿ ವಹಿವಾಟು ತಡೆ ಕಾಯ್ದೆ 1988ರ ಕಲಂ 3, 53, 54 ಹಾಗೂ ಕರ್ನಾಟಕ ಭೂ ಕಬಳಿಕೆ ಕಾಯ್ದೆ 2011ರ ಕಲಂ 3,4 ಅಡಿ ಪೊಲೀಸರು ತನಿಖೆ ನಡೆಸಲಿದ್ದಾರೆ.

‘ಸಿದ್ದರಾಮಯ್ಯ ಕುಟುಂಬವು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಮುಡಾದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆದಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಬೇಕು’ ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ಬುಧವಾರ ಸೂಚಿಸಿತ್ತು.

ಲೋಕಾಯುಕ್ತದ ಮೈಸೂರು ಎಸ್‌ಪಿ ಟಿ.ಜೆ. ಉದೇಶ್ ಎಫ್‌ಐಆರ್ ದಾಖಲಿಸಿದ್ದು, ಪ್ರಕರಣದ ತನಿಖೆ ಕೈಗೊಳ್ಳಲಿದ್ದಾರೆ. ನಾಲ್ವರೂ ಆರೋಪಿಗಳ ವಿಚಾರಣೆಯನ್ನು ಶೀಘ್ರ ನಡೆಸುವ ಸಾಧ್ಯತೆ ಇದೆ. 3 ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ನ್ಯಾಯಾಲಯವು ಸೂಚಿಸಿದೆ.

ಮೈಸೂರಿನಲ್ಲಿದ್ದಾಗಲೇ ಎಫ್‌ಐಆರ್:

ಶುಕ್ರವಾರದಿಂದ ಮೈಸೂರು ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಅವರು ನಗರದಲ್ಲಿರುವಾಗಲೇ ಪ್ರಕರಣ ದಾಖಲಾಗಿದೆ. ತನಿಖಾಧಿಕಾರಿ ಟಿ.ಜೆ. ಉದೇಶ್ ತಿಂಗಳ ಹಿಂದಷ್ಟೇ ಲೋಕಾಯುಕ್ತ ಎಸ್‌ಪಿಯಾಗಿ ಮೈಸೂರಿಗೆ ವರ್ಗಾವಣೆಗೊಂಡಿದ್ದರು.

ಶುಕ್ರವಾರ ಬೆಳಿಗ್ಗೆಯಷ್ಟೇ ನ್ಯಾಯಾಲಯದ ಅಧಿಕೃತ ಆದೇಶ ಪೊಲೀಸರ ಕೈಸೇರಿತ್ತು. ಪ್ರಕರಣವನ್ನು ಸಿಆರ್‌ಪಿಸಿ ಅಡಿ ದಾಖಲಿಸಬೇಕೆ ಇಲ್ಲವೇ ಬಿಎನ್‌ಎಸ್ ಅಡಿ ದಾಖಲಿಸಬೇಕೆ ಎಂಬ ಗೊಂದಲ ಮೂಡಿತ್ತು. ಈ ಸಂಬಂಧ ಎಸ್‌ಪಿ ಉದೇಶ್ ಲೋಕಾಯುಕ್ತ ಎಡಿಜಿಪಿ ಮನೀಶ್ ಅವರಿಗೆ ಇ–ಮೇಲ್ ಕಳುಹಿಸಿ ಮಾರ್ಗದರ್ಶನ ಕೋರಿದ್ದರು. ನ್ಯಾಯಾಲಯದ ಆದೇಶದ ಅನ್ವಯ ಪ್ರಕರಣ ದಾಖಲಿಸುವಂತೆ ಎಡಿಜಿಪಿ ಸೂಚಿಸಿದ್ದರು.

ಮಧ್ಯಾಹ್ನ 1.15ರ ವೇಳೆಗೆ ಎಫ್‌ಐಆರ್ ದಾಖಲಾಯಿತು. ದೂರುದಾರ ಸ್ನೇಹಮಯಿ ಕೃಷ್ಣ ಸಂಜೆ 5.30ರ ವೇಳೆಗೆ ಲೋಕಾಯುಕ್ತ ಕಚೇರಿಗೆ ಧಾವಿಸಿ, ಎಫ್‌ಐಆರ್ ಪ್ರತಿ ಸ್ವೀಕರಿಸಿದರು.

ಏನಿದೆ ಎಫ್‌ಐಆರ್‌ನಲ್ಲಿ?:

ಒಟ್ಟು 16 ಪುಟಗಳ ಎಫ್‌ಐಆರ್‌ನಲ್ಲಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರ ವಿರುದ್ಧ ದೂರುದಾರರು ಮಾಡಿರುವ ಆರೋಪಗಳನ್ನು ಉಲ್ಲೇಖಿಸಲಾಗಿದೆ.

ಕೆಸರೆ ಗ್ರಾಮದ ಸರ್ವೆ ಸಂಖ್ಯೆ 462, 464ಕ್ಕೆ ಸಂಬಂಧಿಸಿದಂತೆ 1968ರಿಂದ 2023ರ ನವೆಂಬರ್ 9ರವರೆಗೆ ನಡೆದಿರುವ ಎಲ್ಲ ಭೂವ್ಯವಹಾರಗಳ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಲಿದ್ದಾರೆ.

‘ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ 1996–1999 ಹಾಗೂ 2004–2006ರವರೆಗೆ ಹಾಗೂ ಮುಖ್ಯಮಂತ್ರಿಯಾಗಿ 2013–2018ರವರೆಗೆ ಹಾಗೂ ಪ್ರಸ್ತುತ ಅವಧಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಹಾಗೂ ರಾಜಕೀಯ ಪ್ರಭಾವ ಬಳಸಿದ್ದಾರೆ’ ಎಂದು ಆರೋಪಿಸಲಾಗಿದೆ.

ಆರೋಪಗಳು:

ಡಿನೋಟಿಫೈ ಸಮಯದಲ್ಲಿ ಸಿದ್ದರಾಮಯ್ಯ ಡಿಸಿಎಂ:

‘ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರ ಮೂಲ ಮಾಲೀಕರಾದ ನಿಂಗ ಉರುಫ್ ಜವರ ಅವರ ಪುತ್ರ ದೇವರಾಜು 1968ರಲ್ಲೇ ಉದ್ದೇಶಿತ ಜಮೀನಿನ ಹಕ್ಕು ಖುಲಾಸೆ ಮಾಡಿಕೊಂಡಿದ್ದರೂ ಜಮೀನು ತಮ್ಮದೆಂದು ಬಿಂಬಿಸಿಕೊಂಡು ಅಕ್ರಮ ಎಸಗಿದ್ದಾರೆ. 1992ರಲ್ಲಿ ಜಮೀನನಲ್ಲಿ ಮುಡಾ ದೇವನೂರು ಬಡಾವಣೆ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಿದ್ದು, 1996ರಲ್ಲಿ ಜಮೀನಿನ ಭೂಸ್ವಾಧೀನ ಕೈಬಿಡುವಂತೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ, 1998ರಲ್ಲಿ ಜಮೀನಿನ ಡಿನೋಟಿಫೈ ಮಾಡುವಾಗ ಸಿದ್ದರಾಮಯ್ಯ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಪ್ರಭಾವ ಬೀರಿದ್ದಾರೆ’ ಎಂದು ದೂರಲಾಗಿದೆ.

‘2003ರಲ್ಲಿಯೇ ಈ ಜಮೀನಿನಲ್ಲಿ ಮುಡಾ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿದ್ದರೂ 2004ರ ಆಗಸ್ಟ್‌ನಲ್ಲಿ ದೇವರಾಜು ಅವರಿಂದ ಮಲ್ಲಿಕಾರ್ಜುನ ಸ್ವಾಮಿ ಜಮೀನನ್ನು ಖರೀದಿಸಿದ್ದರು. ದಾಖಲೆಗಳ ವ್ಯತ್ಯಾಸವಿದ್ದರೂ ನೋಂದಣಿ ಮಾಡಿಕೊಡಲಾಗಿದೆ. ಆಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದು ಅಧಿಕಾರ ದುರುಪಯೋಗಪಡಿಸಿಕೊಂಡು ನೋಂದಣಿ ಮಾಡಿಸಿಕೊಟ್ಟಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ.

‘ಜಮೀನಿನಲ್ಲಿ ಮುಡಾ ಬಡಾವಣೆ ನಿರ್ಮಿಸಿದ್ದರೂ 2005ರಲ್ಲಿ ಅಂದಿನ ಜಿಲ್ಲಾಧಿಕಾರಿ ಎಸ್.ಸೆಲ್ವಕುಮಾರ್ ಭೂಪರಿವರ್ತನೆ ಮಾಡಿಕೊಟ್ಟಿದ್ದಾರೆ. 2010ರಲ್ಲಿ ಅದನ್ನು ಮಲ್ಲಿಕಾರ್ಜುನ ಸ್ವಾಮಿಯು, ಬಿ.ಎಂ. ಪಾರ್ವತಿ ಹೆಸರಿಗೆ ಕೃಷಿ ಭೂಮಿ ಎಂದು ನೋಂದಣಿ ಮಾಡಿಕೊಟ್ಟಿದ್ದಾರೆ. 2013ರ ತರುವಾಯ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕವೇ, ಪಾರ್ವತಿಯವರು ಬದಲಿ ಜಮೀನು ಕೋರಿ ಮುಡಾಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮುಡಾ ಸಭೆಯ ನಿರ್ಣಯದಂತೆ ಅವರಿಗೆ 50:50 ನಿಯಮದ ಅಡಿ ಬದಲಿ ನಿವೇಶನಗಳನ್ನು ನೀಡಲು 2021ರಲ್ಲಿ ಅಂದಿನ ಆಯುಕ್ತ ಡಿ.ಬಿ.ನಟೇಶ್ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಸ್ಪಷ್ಟನೆ ಬರುವ ಮುನ್ನವೇ ಪಾರ್ವತಿಯವರಿಗೆ ಮಂಜೂರಾತಿ ಪತ್ರ ನೀಡಿದ್ದಾರೆ. ನಿಯಮಗಳನ್ನು ಮೀರಿ 50:50 ಅನುಪಾತದಲ್ಲಿ ಒಟ್ಟು 38,284 ಚ.ಅಡಿಯ ಬದಲಿ ನಿವೇಶನಗಳನ್ನು ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಮಂಜೂರು ಮಾಡಲಾಗಿದೆ.

‘2022ರ ಜನವರಿ 12ರಂದು ಸಿದ್ದರಾಮಯ್ಯ ಪ್ರಭಾವ ಬಳಸಿ ಉಪ ನೋಂದಣಾಧಿಕಾರಿಗಳನ್ನು ಸರ್ಕಾರಿ ಅತಿಥಿಗೃಹಕ್ಕೆ ಕರೆಯಿಸಿಕೊಂಡು ಪತ್ನಿ ಹೆಸರಿಗೆ 14 ನಿವೇಶನಗಳನ್ನು ನೋಂದಣಿ ಮಾಡಿಸಿಕೊಟ್ಟಿದ್ದಾರೆ. ಅವರ ಪುತ್ರ ಯತೀಂದ್ರ, ವರುಣ ಕ್ಷೇತ್ರದ ಶಾಸಕರಾಗಿ ಮುಡಾ ಸಭೆಗಳಲ್ಲಿ ಪಾಲ್ಗೊಂಡಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ’ ಎಂದು ದೂರುದಾರರು ಆರೋಪಿಸಿರುವುದನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಿದ್ದರಾಮಯ್ಯ ಬೆಂಬಲಕ್ಕೆ ಹೈಕಮಾಂಡ್: ಖರ್ಗೆ

ಬೆಂಗಳೂರು:‘ಮುಡಾ ಹಗರಣ ಸಣ್ಣ ಪ್ರಕರಣ. ಆದರೆ, ಈ ಬಗ್ಗೆ ಪ್ರತಿನಿತ್ಯ ಚರ್ಚಿಸಲಾಗುತ್ತಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಾರೆ. ಅವರ ಬೆಂಬಲಕ್ಕೆ ನಾನೂ ಸೇರಿದಂತೆ ಹೈಕಮಾಂಡ್ ನಿಂತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಎಫ್‌ಐಆರ್ ಆದ ಕೂಡಲೇ ಅವರು (ಸಿದ್ದರಾಮಯ್ಯ) ರಾಜೀನಾಮೆ ನೀಡಬೇಕು ಎನ್ನುವುದಾದರೆ, ಗೋಧ್ರಾ ನಂತರದ ಹತ್ಯಾಕಾಂಡದ ನೈತಿಕ ಹೊಣೆ ಹೊತ್ತು ಅಂದು ನರೇಂದ್ರ ಮೋದಿ ರಾಜೀನಾಮೆ ನೀಡಿದ್ದರಾ? ಅಮಿತ್ ಶಾ ಅವರ ಮೇಲೆ ಎಷ್ಟು ಪ್ರಕರಣ ದಾಖಲಾಗಿದ್ದವು’ ಎಂದು ಪ್ರಶ್ನಿಸಿದರು.

‘ಯಾರನ್ನೇ ಆಗಲಿ ವೈಯಕ್ತಿಕವಾಗಿ ಗುರಿ ಮಾಡ ಬಾರದು. ಸಿದ್ದರಾಮಯ್ಯ ವರ್ಚಸ್ಸಿಗೆ ಕಳಂಕ ಹಚ್ಚುವ ಮೂಲಕ ಕಾಂಗ್ರೆಸ್ ಪಕ್ಷಕ್ಕೂ ಹಾನಿ ಮಾಡುವುದು ಬಿಜೆಪಿ ಉದ್ದೇಶ’ ಎಂದು ಹೇಳಿದರು.

ಸಿಬಿಐ ತನಿಖೆಗೆ ಕೋರಿ ರಿಟ್

ಬೆಂಗಳೂರು: ‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಮೈಸೂರಿನ ಸ್ನೇಹಮಯಿ ಕೃಷ್ಣ ಶುಕ್ರವಾರ ದಾಖಲಿಸಿರುವ ಈ ರಿಟ್ ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ಅರ್ಜಿಯಲ್ಲಿ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಿಬಿಐ ನಿರ್ದೇಶಕ, ಮೈಸೂರು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ, ರಾಜ್ಯ ಡಿಜಿ–ಐಜಿಪಿ, ಲೋಕಾಯುಕ್ತ ಎಡಿಜಿಪಿ, ವಿಜಯನಗರ ಪೊಲೀಸ್ ಠಾಣಾಧಿಕಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಎಂ.ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಮತ್ತು ಜೆ.ದೇವರಾಜು ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.