ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ದಸರಾ: ಭದ್ರತೆಗೆ ಐದು ಸಾವಿರ ಪೊಲೀಸರು

ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಮಾಹಿತಿ
Published : 1 ಅಕ್ಟೋಬರ್ 2024, 15:32 IST
Last Updated : 1 ಅಕ್ಟೋಬರ್ 2024, 15:32 IST
ಫಾಲೋ ಮಾಡಿ
Comments

ಮೈಸೂರು: ‘ನಾಡಹಬ್ಬ ದಸರಾ ಮಹೋತ್ಸವದ ಭದ್ರತೆಗೆ ಐದು ಸಾವಿರ ಪೊಲೀಸ್‌ ಅಧಿಕಾರಿ ಸಿಬ್ಬಂದಿ ನಿಯೋಜಿಸಲಾಗಿದ್ದು, ಎರಡು ಹಂತದಲ್ಲಿ ಭದ್ರತೆ ಕೈಗೊಂಡಿದ್ದೇವೆ’ ಎಂದು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಮಾಹಿತಿ ನೀಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅ.3ರಿಂದ 10ರವರೆಗೆ 16 ಎಸ್‌ಪಿ, 599 ಇತರೆ ಪೊಲೀಸ್‌ ಅಧಿಕಾರಿಗಳು, 2,381 ಸಿಬ್ಬಂದಿ ಒಳಗೊಂಡ ತಂಡ ಮೊದಲ ಹಂತದಲ್ಲಿ ಭದ್ರತೆ ವ್ಯವಸ್ಥೆ ನಿಭಾಯಿಸಲಿದೆ. ಎರಡನೇ ಹಂತದಲ್ಲಿ ಅ.11ರಿಂದ ಜಂಬೂಸವಾರಿಯವರೆಗೆ 2 ಡಿಐಜಿ, 27 ಎಸ್‌ಪಿ, 989 ಇತರೆ ಪೊಲೀಸ್‌ ಅಧಿಕಾರಿ, 3,981 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ’ ಎಂದರು.

‘10 ಸಿಎಆರ್, 33 ಕೆಎಸ್‌ಆರ್‌ಪಿ, 29 ಎಎಸ್‌ಸಿ, 3 ಬಿಡಿಡಿಎಸ್, 1 ಗರುಡಾ ಪಡೆ, 1 ಐಎಸ್‌ಡಿ, ಸಿಐಇಡಿ ತುಕಡಿ ನಿಯೋಜಿಸಲಾಗುತ್ತಿದೆ. 1,500 ಹೋಂ ಗಾರ್ಡ್‌ಗಳೂ ಕಾರ್ಯ ನಿರ್ವಹಿಸಲಿದ್ದಾರೆ. ದಸರಾ ಭದ್ರತೆಗಾಗಿ ನಗರದಲ್ಲಿ ಈಗಾಗಲೇ ಅಳವಡಿಸಿರುವ 13,140 ಕಾಯಂ ಸಿಸಿಟಿವಿ ಕ್ಯಾಮೆರಾಗಳ ಜತೆಗೆ, ಹೆಚ್ಚುವರಿಯಾಗಿ ಅರಮನೆ, ಬನ್ನಿಮಂಟಪ ಮೈದಾನ, ಮೆರವಣಿಗೆ ಮಾರ್ಗ ಹಾಗೂ ಇತರೆ ಪ್ರಮುಖ ಸ್ಥಳಗಳಲ್ಲಿ 150 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 20 ಅಗ್ನಿಶಾಮಕ ದಳ, 20 ಆಂಬುಲೆನ್ಸ್‌ ನಿಯೋಜಿಲಾಗಿದೆ. ನೆರೆ ಜಿಲ್ಲೆ, ರಾಜ್ಯಗಳಿಂದ ಅಪರಾಧಿಗಳು ಬಂದು ಕೃತ್ಯ ಎಸಗುವುದನ್ನು ತಡೆಗಟ್ಟಲು ನುರಿತ ಅಪರಾಧ ವಿಭಾಗದ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಮೊಬೈಲ್ ಕಮಾಂಡ್ ಸೆಂಟರ್‌ ಬಳಸಲಾಗುತ್ತಿದ್ದು, ಬಸ್‌ನಲ್ಲಿ ಸಿಸಿಟಿವಿ, ಬಾಡಿವೋರ್ನ್ ಕ್ಯಾಮೆರಾ, ಲಾಂಗ್ ಡಿಸ್ಟೆನ್ಸ್ ವಿಡಿಯೋಗ್ರಫಿ ಮತ್ತು ಫೋಟೋಗ್ರಫಿ ವ್ಯವಸ್ಥೆ ಇದೆ. ಅರಮನೆ ಮತ್ತು ಬನ್ನಿಮಂಟಪದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಬಾಡಿವೋರ್ನ್‌ ಕ್ಯಾಮೆರಾ ವಿತರಿಸಲಾಗುತ್ತದೆ. ಪ್ರಮುಖ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಡ್ರೋನ್‌ ಕ್ಯಾಮೆರಾಗಳಿಂದ ಕಣ್ಗಾವಲು ಮಾಡಲಾಗುವುದು. ಪೊಲೀಸರು ಎದ್ದು ಕಾಣುವ ರೀತಿಯಲ್ಲಿ ಎತ್ತರದ ಪ್ಲಾಟ್ ಫಾರ್ಮ್‌ ನಿರ್ಮಿಸಿ ಪೊಲೀಸರನ್ನು ಮೆಗಾ ಫೋನ್ ಸಮೇತ ಕರ್ತವ್ಯಕ್ಕೆ ನಿಯೋಜಿಸಲಾಗುವುದು’ ಎಂದರು.

‘ಪ್ರವಾಸಿಗರಿಗೆ ಮಾಹಿತಿ ನೀಡಲು, ಸಾರ್ವಜನಿಕರಿಗೆ, ಅಗತ್ಯವಿರುವವರಿಗೆ ಪೊಲೀಸ್ ಸಹಾಯ ನೀಡಲು ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಹಾಯ ಕೇಂದ್ರ ತೆರೆಯಲಾಗುತ್ತಿದೆ. ಪೊಲೀಸ್ ಸಹಾಯಕೇಂದ್ರಕ್ಕೆ ನಿಯೋಜಿಸಿರುವ ಪೊಲೀಸರು, ಪ್ರವಾಸಿ ಮಿತ್ರರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಏಕಮುಖ ಸಂಚಾರ, ರಕ್ಷಣಾ ವ್ಯವಸ್ಥೆ ಕುರಿತು ಮಾಹಿತಿ ನೀಡಲಿದ್ದಾರೆ. ಜತೆಗೆ ಸಾರ್ವಜನಿಕರಿಗೆ ಸುರಕ್ಷತೆ ಮತ್ತು ಮಾಹಿತಿಗಾಗಿ ಕಿರು ಹೊತ್ತಿಗೆ ವಿತರಿಸಲಾಗುವುದು’ ಎಂದು ಹೇಳಿದರು.‌

‘ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ 24*7 ಅಪರಾಧ ವಿಭಾಗದ ಪೊಲೀಸರ ನಿಯೋಜಿಸುತ್ತೇವೆ. ನಗರ ವ್ಯಾಪ್ತಿಯಲ್ಲಿ ಗಸ್ತು ವಾಹನ ನಿಯೋಜಿಸಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ ನಿಗಾವಣೆಗಾಗಿ ವೀಕ್ಷಣಾ ಗೋಪುರ ಸ್ಥಾಪಿಸಲಾಗುವುದು. ನಗರಕ್ಕೆ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಿದ್ದು, ವಾಹನಗಳ ಪರಿಶೀಲನೆ ನಡೆಸಲಾಗುವುದು. ದಸರಾ ಕಾರ್ಯಕ್ರಮ ಸ್ಥಳ, ನಗರದ ಪ್ರಮುಖ ಸ್ಥಳಗಳಲ್ಲಿ ಎಎಸ್‌ಸಿ ತಂಡದಿಂದ ಪರಿಶೀಲನೆ ನಡೆಸಲಾಗುವುದು. ಗುಡ್ ಮಾರ್ನಿಂಗ್ ಬೀಟ್‌ ನಿರ್ವಹಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಮುಂಜಾಗ್ರತವಾಗಿ ರೌಡಿ ಶೀಟರ್‌, ಗೂಂಡಾ, ಕಮ್ಯೂನಲ್ ಗೂಂಡಾ ವಿರುದ್ಧ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಚಾಮುಂಡಿ ಪಡೆ ಕಾರ್ಯ ನಿರ್ವಹಿಸಲಿದೆ. ಹೋಟೆಲ್‌, ರೆಸಾರ್ಟ್‌ಗಳನ್ನು ದಿಢೀರ್‌ ತಪಾಸಣೆ ಮಾಡಲು ಪ್ರತ್ಯೇಕ ತಂಡ ನಿಯೋಜಿಸಿದ್ದೇವೆ’ ಎಂದರು.

ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ ಇದ್ದರು.

ಎರಡು ಹಂತದಲ್ಲಿ ಭದ್ರತೆ 150 ಸಿಸಿಟಿವಿ ಕ್ಯಾಮೆರಾ ಅಳವಡಿಕೆ 1,500 ಹೋಂಗಾರ್ಡ್‌ಗಳ ಬಳಕೆ

ತಾತ್ಕಾಲಿಕ ಬಸ್‌ ನಿಲ್ದಾಣ

ಅ.11 ಮತ್ತು 12ರಂದು ಸಾರಿಗೆ ಬಸ್‌ಗಳಿಗೆ ನಗರದ ಹೊರ ಭಾಗದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಬರುವ ಬಸ್‌ ಸಾತಗಳ್ಳಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಹುಣಸೂರು ಬೋಗಾದಿ ಹಾಗೂ ಎಚ್‌.ಡಿ.ಕೋಟೆ ರಸ್ತೆಯಿಂದ ಆಗಮಿಸುವ ಬಸ್‌ ಮಹಾರಾಜ ಕಾಲೇಜು ಮೈದಾನ ನಂಜನಗೂಡಿನಿಂದ ಬರುವ ಬಸ್‌ ಗುಂಡುರಾವ್‌ ನಗರ ಮೈದಾನ ಬನ್ನೂರು ತಿ.ನರಸೀಪುರ ರಸ್ತೆ ಮೂಲಕ ಬರುವ ಬಸ್‌ಗಳಿಗೆ ಲಲಿತ್‌ ಮಹಲ್ ಮೈದಾನದಲ್ಲಿ ತಾತ್ಕಾಲಿಕ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಸೀಮಾ ಲಾಟ್ಕರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT