ಮೈಸೂರು: ಯುದ್ಧ, ದೌರ್ಜನ್ಯದ ವಿರುದ್ಧ ಆಕ್ರೋಶ. ಮನುಷ್ಯ–ಮಾನವೀಯತೆಯ ಮಹತ್ವಕ್ಕೆ ಕನ್ನಡಿ. ಪ್ರಭುತ್ವಕ್ಕೆ ತೊಡೆ ತಟ್ಟಿದ ಕವನಗಳು.

– ದಸರಾ ಅಂಗವಾಗಿ ಇಲ್ಲಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಪ್ರಧಾನ ಕವಿಗೋಷ್ಠಿಯಲ್ಲಿ ಕವನ ವಾಚಿಸಿದವ ಬಹುತೇಕ ಕವಿಗಳು ಪ್ರಭುತ್ವ ಹಾದಿ ತಪ್ಪಿದಾಗ ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇವೆ ಎಂಬ ಸಂದೇಶ ರವಾನಿಸಿದರು. ಎಲ್ಲರಿಗೂ ಸಂಕಷ್ಟ ತಂದೊಡ್ಡುವ ಯುದ್ಧದ ಮನಸ್ಥಿತಿಯನ್ನು ವಿರೋಧಿಸಿದರು. ಮಾನವೀತಯೆ ವಿಜೃಂಭಿಸುತ್ತಿರಲಿ ಎಂಬ ಆಶಯ ವ್ಯಕ್ತಪಡಿಸಿದರು.

ಉಕ್ರೇನ್ ಯುದ್ಧ, ಮಣಿಪುರ ಗಲಾಟೆ, ಧರ್ಮ–ಧರ್ಮದ ನಡುವಿನ ಸಂಘರ್ಷ ಮೊದಲಾದ ಕವನಗಳು ಸಾಮಾಜಿಕ ಪ್ರಜ್ಞೆ ಮೆರೆದವು. ಹಲವು ಕವನಗಳು ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸಿ, ಪರಿಹಾರವನ್ನೂ ಸೂಚಿಸಿದವು. ಯುದ್ಧದ ಭೀಕರತೆ ಹಾಗೂ ಮನುಷ್ಯ ಮನುಷ್ಯನಾಗಬೇಕಾದ ಇಂದಿನ ತುರ್ತನ್ನು ಒತ್ತಿ ಹೇಳಿದವು.

‘ಧರೆ ಹತ್ತಿ ಉರಿಯುತಿದೆ’ ಎಂಬ ಕವನ ವಾಚಿಸಿದ ಹೊರೆಯಾಲ ದೊರೆಸ್ವಾಮಿ, ‘ಎಲ್ಲೆಂದರಲ್ಲಿ ಸಿಡಿಗುಂಡಗಳ ಆರ್ಭಟಕ್ಕೆ... ಬಿಕ್ಕುತಿದೆ ಮಾನವತೆ’ ಎಂದು ಕಳವಳ ವ್ಯಕ್ತಪಡಿಸಿದರು. ‘ಶಾಂತಿ ತೊಟ್ಟಿಲಲ್ಲಿ ದಾನವತೆ ಅಳಿದು ಮಾನವತೆ ಜೋಕುಯ್ಯಾಲೆ ಆಡುತಿರಲಿ’ ಎಂದು ಆಶಿಸಿದರು.

ದೃಷ್ಟಿದೋಷವುಳ್ಳ ಶಿವರಾಜ್ ಶಾಸ್ತ್ರಿ ಹೆರೂರ ತಮ್ಮಂತೆಯೇ ಇರುವವರ ಸಂವೇದನೆಯನ್ನು ‘ಅನುಭವ ಮೀಮಾಂಸೆ’ ಮೂಲಕ ಪ್ರಸ್ತುತಪಡಿಸಿದರು. ಆಂತರಿಕ ಸೌಂದರ್ಯ ಮುಖ್ಯ ಎಂಬ ಸಂದೇಶ ಸಾರಿದ ಅವರಿಗೆ ಸಭಿಕರಿಂದ ಚಪ್ಪಾಳೆಯ ಮೆಚ್ಚುಗೆ ದೊರೆಯಿತು.

ನೀಲಗಿರಿ ತಳವಾರ ಅವರು ಮಂಡಿಸಿದ ‘ಅವತರಿಸಿ ಬರಲಿ’ ಕವನದಲ್ಲಿ ‘ಗುಂಡಿಟ್ಟು ಕೊಂಡವಗೆ ಭಾರತ ರತ್ನಕ್ಕಾಗಿ ಒತ್ತಾಯ’ ಎಂಬ ಸಾಲು ಗಮನಸೆಳೆಯಿತು.

ಒಬ್ಬರೂ ಇಲ್ಲ ಕೇಳಲು ಅವನ ನೋವ:

ಮೀನಾ ಪಾಟೀಲ ತಮ್ಮ ‘ಕೊನೆಯ ಮನುಷ್ಯ’ ಕವನದಲ್ಲಿ ‘ಒಣಗಿದ ಮರದ ಕೆಳಗೆ ಕುಳಿತಿದೆ ಒಂದು ಬಡ ಜೀವ ಒಬ್ಬರೂ ಇಲ್ಲ ಕೇಳಲು ಅವನ ನೋವ’ ಎಂದು ವ್ಯಥೆಪಟ್ಟರು.

ಹರಿನಾಥ್ ಬಾಬು ಶಿರಗುಪ್ಪ ‘ಬಣ್ಣದ ಕೌದಿಯಲಿ ಸೂಜಿಯ ನೆರಳು’ ಕಂಡರೆ, ಪ್ರಭಾಕರ ಜೋಶಿ ಸೇಡಂ, ‘ಶಮಿ ವೃಕ್ಷದ ಮೇಲೆ’ ಕವನದಲ್ಲಿ ‘ಅರಸೊತ್ತಿಗೆ ಆಸೆ ಆಳಿದಿಲ್ಲ ವಿಶ್ವಮಾನವರಾಗುತ್ತಿಲ್ಲ. ಯಾರೇ ಸತ್ತರೂ ಅದು ನಮ್ಮವರ ಸಾವೇ, ಯಾತಕೆ ಬೇಕು ಯುದ್ಧ?’ ಎಂದು ಕೇಳಿ ಕಾಳಜಿ ವ್ಯಕ್ತಪಡಿಸಿದರು.

ಶ್ರೀನಿವಾಸ ಜೋಕಟ್ಟೆ ತಮ್ಮ ‘ಬಾಲ್ಕನಿಯ ಪಾರಿವಾಳ’ದ ಸ್ಥಿತಿಯನ್ನು ಕಟ್ಟಿಕೊಟ್ಟರೆ, ಕೆ. ಷರೀಫಾ ಅವರು ‘ಈ ಭೂಮಿ ನನ್ನದು’ ಕವನ ವಾಚಿಸಿದರು. ಯುದ್ಧದ ಸಂಕಷ್ಟವನ್ನು ತೆರೆದಿಟ್ಟ ಅವರು, ‘ಕದನದಲ್ಲಿ ಸಿಕ್ಕುವುದು ಬೂದಿ ಮಾತ್ರ ಆ ಬೆಂಕಿಗೆ ಒಂದು ಅಕ್ಕಿಯ ಕಾಳನ್ನೂ ಬೇಯಿಸುವ ಶಕ್ತಿ ಇಲ್ಲ!’ ಎಂದು ಪ್ರತಿಪಾದಿಸಿದರು.

ಚೀಮನಹಳ್ಳಿ ರಮೇಶ್ ಬಾಬು, ‘ಕೇಳದಿರು ಮಗುವೇ...’ ಎಂದು ಕೋರಿದರೆ, ರವೀಂದ್ರನಾಥ ನಾಯಕ್ ಕೆಲವು ಹಾಯ್ಕುಗಳನ್ನು ಓದಿದರು.

ನರೇಂದ್ರ ರೈ ದೇರ್ಲ ‘ನಾನು ಹೊರಟಿದ್ದೇನೆ’ ಕವನದಲ್ಲಿ ‘ನಮ್ಮೂರ ಜಾತ್ರೆಯಲ್ಲಿ ಮಾರಾಟಕ್ಕಿಟ್ಟಿದ್ದು ಹೃದಯಗಳನ್ನು...’ ಎಂದು ಕಳವಳ ವ್ಯಕ್ತಪಡಿಸಿದರು. ಜಾತ್ರೆಗಳಲ್ಲಿ ವ್ಯಾಪಾರಕ್ಕೂ ಧರ್ಮದ ಲೇಪನ ಹಚ್ಚುತ್ತಿರುವುದಕ್ಕೆ ನೊಂದುಕೊಂಡರು. ಕ್ಯಾಲೆಂಡರ್, ಗಡಿಯಾರ, ಭೂಪಟವಿಲ್ಲದ ಊರಿಗೆ ಹೊರಟಿದ್ದೇನೆ ಎಂದರು.

ಮಾಧವಿ ಭಂಡಾರಿ ಕೆರೆಕೋಣ ‘ನಡುವೆ ಸುಳಿವಾತ್ಮ’ ಕವನದಲ್ಲಿ ತಾರತಮ್ಯಕ್ಕೆ ಕನ್ನಡಿ ಹಿಡಿದರು. ಪ್ರೊ.ಎಂ.ಎಸ್. ಶೇಖರ್, ‘ಜೋಡೆಲೆ ಜೊನ್ನೆ’ ಕವನ ಮಂಡಿಸಿದರು. ಮಿಅದ್ ಜಿ.ಎಂ. ಅವರು ‘ಮನುಷ್ಯ’ ಕವನದಲ್ಲಿ ಧರ್ಮ–ಧರ್ಮದ ನಡುವಿನ ಸಂಘರ್ಷದಿಂದ ಸಿಗುವುದು ಮಣ್ಣು ಮಾತ್ರವೇ ಎಂದು ಪ್ರತಿಪಾದಿಸಿದರು.

ಮೀನಾ ಮೈಸೂರು ‘ಸೂಜಿದಾರ ಕಳೆದು ಹೋಗಿದೆ ಹುಡುಕಿಕೊಡಿ ಪ್ಲೀಸ್’ ಎಂದು ಕೇಳಿದರೆ, ಎಚ್.ಆರ್. ಸುಜಾತಾ, ‘ಉರಿಯುತ್ತಿರುವ ಮಣಿಪುರ’ಕ್ಕೆ ಕನ್ನಡಿ ಹಿಡಿದರು. ವಿಲ್ಸನ್ ಕಟೀಲ್ ‘ಯುದ್ಧ ಅಲ್ಲಿ ಮತ್ತು ಇಲ್ಲಿ’ ಎನ್ನುವುದನ್ನು ವಿವರಿಸಿ, ಪ್ರಭುತ್ವದ ನಿರ್ಲಕ್ಷ್ಯವನ್ನು ಖಂಡಿಸಿದರು.

ತಾರಿಣಿ ಶುಭದಾಯಿನಿ ಅವರು ‘ಕೋಳಿ ಕೂಗುವುದರೊಳಗಾಗಿ’ ಹಾಗೂ ಬಾ.ಹ.ರಮಾಕುಮಾರಿ ‘ಅನಾಮಿಕ ಮನಸ್ಸಿಗೆ ಬಂದು ಹೋದ ಭಾವಗಳು’ ಕವನ ವಾಚಿಸಿದರು.

ಸಭಾಂಗಣ ಭರ್ತಿಯಾಗಿರಲಿಲ್ಲ. ಮಾಧವಿ ಭಂಡಾರಿ ಕವಿತೆ ವಾಚಿಸುವಾಗ ವಿದ್ಯುತ್ ಕಡಿತಗೊಂಡಿತು. ಹತ್ತು ನಿಮಿಷ ಸಭಾಂಗಣದಲ್ಲಿ ಕತ್ತಲು ಆವರಿಸಿತ್ತು.

ಅಧ್ಯಕ್ಷತೆ ವಹಿಸಿದ್ದ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ‘ದಸರಾ ಕವಿಗೋಷ್ಠಿಗೆ ಪ್ರತಿಷ್ಠೆ ಇದೆ. ಇಲ್ಲಿ ಭಾಗವಹಿಸಲು ಬಹಳ ಬೇಡಿಕೆ ಇರುತ್ತದೆ. ಹೀಗಾಗಿ, ಕವಿಗಳ ಆಯ್ಕೆ ಬಹಳ ಕಷ್ಟ. ನಾನೂ ಹಿಂದೆ ಕಾರ್ಯಾಧ್ಯಕ್ಷನಾಗಿ ಮಾಡಿದ್ದೆ’ ಎಂದು ಅನುಭವ ಹಂಚಿಕೊಂಡರು.

‘ಕವಿಗಳು ತಮ್ಮ ಕವನದ ಮೂಲಕ ಮನುಷ್ಯ ಪರವಾಗಿ ಉಸಿರಾಡಿದರು. ಪ್ರಭುತ್ವಕ್ಕೆ ಅಂಜದೇ ಕವಿತೆಗಳನ್ನು ಮಂಡಿಸಿದರು. ಪ್ರಭುತ್ವವನ್ನು ಎದುರಿಸುವ ಶಕ್ತಿ ಅವರಿಗಿದೆ ಎನಿಸಿತು. ಓದುಗರ ಪ್ರಜ್ಞೆಯನ್ನು ಅರಳಿಸುವುದೇ ನಿಜವಾದ ಕಾವ್ಯ ಎಂದು ತಿಳಿದುಕೊಂಡವನು ನಾನು’ ಎಂದು ಹೇಳಿದರು.

‘ಈಚೆಗೆ, ಬಹಳ ಬೇಗ ಪ್ರಸಿದ್ಧಿಯಾಗಬೇಕು ಎಂಬ ಮೋಹಕ್ಕೆ ಒಳಗಾಗುತ್ತಿದ್ದೇವೆ. ಇದು ಸರಿಯಲ್ಲ. ಕಾವ್ಯಕ್ಕೆ ಬೇಕಾಗಿರುವುದು ಸಹನೆ. ಇದು ಸರಿಯಲ್ಲ, ತಪ್ಪು ಎಂದು ಹೇಳಲು ಲೋಕದ ತಿಳಿವಳಿಕೆ ಅಗತ್ಯ’ ಎಂದು ತಿಳಿಸಿದರು.

ಕವಯತ್ರಿ ಶಶಿಕಲಾ ವಸ್ತ್ರದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.