ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ದಸರೆ | ಪ್ರವಾಸಿಗರ ಆಕರ್ಷಣೆ: ಕಾಣದ ಚಟುವಟಿಕೆ!

ದಸರಾ ಮಹೋತ್ಸವದ ಕಾರ್ಯಕ್ರಮಗಳ ಪಟ್ಟಿ ಸಿದ್ಧವಾಗಿಲ್ಲ, ಗೋಲ್ಡ್‌ ಕಾರ್ಡ್‌ ಬಿಡುಗಡೆಯಾಗಿಲ್ಲ
Published : 23 ಸೆಪ್ಟೆಂಬರ್ 2024, 6:52 IST
Last Updated : 23 ಸೆಪ್ಟೆಂಬರ್ 2024, 6:52 IST
ಫಾಲೋ ಮಾಡಿ
Comments

ಮೈಸೂರು: ನಾಡಹಬ್ಬ ಮೈಸೂರು ದಸರೆಗೆ ಹೊರ ರಾಜ್ಯ ಹಾಗೂ ದೇಶಗಳ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಈವರೆಗೂ ಯಾವುದೇ ಚಟುವಟಿಕೆಗಳು ನಡೆಯದೇ ಇರುವುದು, ಪ್ರವಾಸೋದ್ಯಮವನ್ನೇ ‘ನೆಚ್ಚಿಕೊಂಡಿರುವವರ’ ವಿವಿಧ ಉದ್ಯಮ ವಲಯದವರ ಅಸಮಾಧಾನಕ್ಕೆ ಕಾರಣವಾಗಿದೆ.

ಅ.3ರಿಂದ ಅ.12ರವರೆಗೆ ನಡೆಯಲಿರುವ ದಸರೆಗೆ ಕೆಲವೇ ದಿನಗಳು ಬಾಕಿ ಇವೆ. ಆದರೆ, ಇದರ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯವನ್ನು ಸರ್ಕಾರದಿಂದ ಆರಂಭಿಸಿಲ್ಲ.

ಬೆಂಗಳೂರು, ನವದೆಹಲಿ, ಚೆನ್ನೈ, ಹೈದರಾಬಾದ್ ಮೊದಲಾದ ದೊಡ್ಡ ದೊಡ್ಡ ನಗರಗಳ ವಿಮಾನ ನಿಲ್ದಾಣ ಮೊದಲಾದ ಕಡೆಗಳಲ್ಲಿ ನಾಡಹಬ್ಬದ ಪ್ರಚಾರ ಶುರುವಾಗಿಲ್ಲ. ಅಲ್ಲದೇ, ಕಾರ್ಯಕ್ರಮಗಳ ಪಟ್ಟಿಯೂ ಸಿದ್ಧವಾಗಿಲ್ಲದಿರುವುದು ಪ್ರವಾಸಿಗರಿಗೆ ಮಾಹಿತಿ ಕೊರತೆ ಎದುರಾಗುವುದಕ್ಕೆ ಕಾರಣವಾಗಿದೆ. ನಗರದಲ್ಲೂ ಹೋರ್ಡಿಂಗ್‌ಗಳನ್ನು ಕೂಡ ಹಾಕಿಲ್ಲ. ಜಾಹೀರಾತು ಶುರು ಮಾಡಿಲ್ಲ.

‘ಜಿಲ್ಲಾಡಳಿತದಿಂದ ಕಾರ್ಯಕ್ರಮಗಳ ಪಟ್ಟಿಯನ್ನು ಪ್ರಕಟಿಸದೇ ಇರುವುದರಿಂದಾಗಿ, ಇಂತಹ ದಿನ ಇಂತಹ ಕಾರ್ಯಕ್ರಮ ಆಯೋಜನೆಯಾಗಿದೆ ಎಂದು ತಿಳಿಸಿ ಪ್ರವಾಸಿಗರನ್ನು ಆಹ್ವಾನಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಯಾವ್ಯಾವ ಖ್ಯಾತ ನಾಮರಿಂದ ಸಂಗೀತ ಸಂಜೆ ಇದೆ ಎಂಬ ಮಾಹಿತಿಯೂ ನಮಗಿಲ್ಲ’ ಎಂದು ಟೂರ್ಸ್‌ ಅಂಡ್‌ ಟ್ರಾವೆಲ್ಸ್‌ನವರು, ಹೋಟೆಲ್‌ ಉದ್ಯಮಿಗಳು ಮೊದಲಾದ ಪ್ರವಾಸೋದ್ಯಮ ಭಾಗೀದಾರರು ತಿಳಿಸುತ್ತಾರೆ.

ಕಾರ್ಯಕ್ರಮ ಪಟ್ಟಿ ನೀಡಿದ್ದರೆ...: ‘ಈ ಬಾರಿ, ನಾಡಹಬ್ಬವನ್ನು ಅದ್ದೂರಿಯಾಗಿ ನಡೆಸಲಾಗುವುದು ಎಂದು ಸರ್ಕಾರ ಹೇಳಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಅದಕ್ಕೆ ತಕ್ಕಂತೆ ಪ್ರವಾಸೋದ್ಯಮಕ್ಕೆ ಇಂಬು ನೀಡುವ ಚಟುವಟಿಕೆಗಳು ನಡೆದಿಲ್ಲದಿರುವುದು ಬೇಸರ ತರಿಸಿದೆ. ಮುಖ್ಯವಾಗಿ ಈ ವೇಳೆಗಾಗಲೇ ಎಲ್ಲ ಕಾರ್ಯಕ್ರಮಗಳ ಪಟ್ಟಿ ದೊರೆತಿದ್ದರೆ ನಾವು ‍ಪ್ರಚಾರ ಮಾಡಲು ಅನುಕೂಲ ಆಗುತ್ತಿತ್ತು’ ಎಂದು ಟೂರ್ಸ್‌ ಅಂಡ್‌ ಟ್ರಾವೆಲ್ಸ್‌ ಕಂಪನಿಯೊಂದನ್ನು ನಡೆಸುತ್ತಿರುವ ಬಿ.ಎಸ್. ಪ್ರಶಾಂತ್‌ ತಿಳಿಸಿದರು.

‘ಪ್ರತಿ ವರ್ಷವೂ ನಡೆಸಲಾಗುವ ಈ ಉತ್ಸವಕ್ಕೆ ನಡೆಯುವ ಪೂರ್ವ ತಯಾರಿ ಸಾಲದಾಗಿದೆ. ಈ ವೇಳೆಗಾಗಲೇ ‘ಗೋಲ್ಡ್‌ ಕಾರ್ಡ್‌’ಗಳನ್ನು ಬಿಡುಗಡೆ ಮಾಡಬೇಕಿತ್ತು. ಉತ್ಸವದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಪಟ್ಟಿಯ ಪ್ರಚಾರ ಆಗಬೇಕಿತ್ತು. ಅದನ್ನು ಆಧರಿಸಿ, ಹೊರ ರಾಜ್ಯ–ದೇಶದ ಪ್ರವಾಸಿಗರು ಬರುವುದಕ್ಕೆ ಪ್ಲಾನ್‌ ಮಾಡಿಕೊಳ್ಳುತ್ತಾರೆ. ಪ್ರತಿ ಬಾರಿಯೂ ಕೊನೇ ಕ್ಷಣದಲ್ಲಿ ಸರ್ಕಸ್‌ ಮಾಡುವುದು ತಪ್ಪುತ್ತಿಲ್ಲ’ ಎಂದು ಅವರು ಹೇಳಿದರು.

ವಿಮಾನ ನಿಲ್ದಾಣದಲ್ಲಿ ಪ್ರಚಾರ ಆಗಬೇಕಿತ್ತು: ‘ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜಿಸಬೇಕು. ಗೋಲ್ಡ್‌ ಕಾರ್ಡ್‌ ಮಾರಾಟದ ಪ್ರಮಾಣವನ್ನು ಜಾಸ್ತಿ ಮಾಡಬೇಕು. ಆಸನಗಳ ಸಂಖ್ಯೆ ನಮೂದಿಸಿ, ಅವರಿಗೆಂದೇ ಕಾಯ್ದಿರಿಸಬೇಕು. ಬೆಂಗಳೂರು ಮೊದಲಾದ ವಿಮಾನ ನಿಲ್ದಾಣಗಳಲ್ಲಿ ಈ ವೇಳೆಗಾಗಲೇ ಪ್ರಚಾರ ಕಾರ್ಯ ಶುರುವಾಗಬೇಕಿತ್ತು. ಆ ಖ್ಯಾತ ಗಾಯಕ ಅಥವಾ ಗಾಯಕಿಯ ಕಾರ್ಯಕ್ರಮ ವೀಕ್ಷಿಸಿ ಪ್ರವಾಸಕ್ಕೆ ಹೋಗಿ ಬರೋಣ ಎಂದು ಪ್ಲಾನ್‌ ಮಾಡುವವರು ಇರುತ್ತಾರೆ. ಅಂಥವರನ್ನು ಆಕರ್ಷಿಸುವ ಕೆಲಸವಾಗಬೇಕು. ಪ್ರವಾಸಿಗರು ಬಂದರೆ ಮಾತ್ರವೇ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ; ಆರ್ಥಿಕ ಚಟುವಟಿಕೆಗಳು ನಡೆಯುತ್ತವೆ. ಈ ನಿಟ್ಟಿನಲ್ಲಿ ಪ್ರಚಾರ ಚುರುಕುಗೊಳ್ಳಬೇಕು’ ಎನ್ನುತ್ತಾರೆ ಅವರು.

‘ಜಿಲ್ಲಾಡಳಿತವು ದಸರಾ ಜಾಲತಾಣವನ್ನು ಬಹಳಷ್ಟು ತಡವಾಗಿ ಬಿಡುಗಡೆ ಮಾಡಿದೆ. ಅದರಲ್ಲಿ ಸಮರ್ಪಕ ಮಾಹಿತಿಯೇ ಇಲ್ಲ. ಕಾರ್ಯಕ್ರಮಗಳ ಪಟ್ಟಿಯನ್ನೇ ಹಾಕಿಲ್ಲ. ಇದರಿಂದ ಪ್ರವಾಸಿಗರನ್ನು ಆಕರ್ಷಿಸುವುದು ಕಷ್ಟ’ ಎನ್ನುತ್ತಾರೆ ಮತ್ತೊಬ್ಬ ಟ್ರಾವೆಲ್ಸ್‌ನವರು.

‘ನಾರುತ್ತಿರುವ ಕೆಳಸೇತುವೆ ಸ್ವಚ್ಛಗೊಳಿಸಿ’

ನಾಡಹಬ್ಬ ಸಮೀಪಿಸುತ್ತಿದ್ದರೂ ಕೆಳಸೇತುವೆಗಳನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿಲ್ಲ. ಅಂಬಾವಿಲಾಸ ಅರಮನೆ ಕಡೆಯಿಂದ–ದಸರಾ ವಸ್ತುಪ್ರದರ್ಶನಕ್ಕೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್‌ ಸೇರಿದಂತೆ ನಗರದಲ್ಲಿರುವ ಇತರ ಕೆಳಸೇತುವೆಗಳು ಗಬ್ಬೆದ್ದು ಹೋಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಾದಚಾರಿಗಳ ಉಪಯೋಗಕ್ಕಾಗಿ ನಿರ್ಮಿಸಿದ ಅವು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಕೆಲವು ಅಂಡರ್‌ಪಾಸ್‌ಗಳಿಗೆ ಬೀಗ ಹಾಕಲಾಗಿದೆ! ‘ನಗರಪಾಲಿಕೆ ಅಧಿಕಾರಿಗಳು ಇನ್ನಾದರೂ ಅಂಡರ್‌ಪಾಸ್‌ಗಳನ್ನು ಸ್ವಚ್ಛಗೊಳಿಸಲು ಹಾಗೂ ಜನರ ಬಳಕೆಗೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು. ದಸರಾ ಸಂದರ್ಭದಲ್ಲಾದರೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೋರಾಟಗಾರ ವಿಕ್ರಂ ಅಯ್ಯಂಗಾರ್ ಒತ್ತಾಯಿಸಿದರು.

ಪ್ರಚಾರ ಉಪ ಸಮಿತಿಯೇ ಇಲ್ಲ!

ದಸರಾ ಸಂದರ್ಭದಲ್ಲಿ ಹಿಂದೆಲ್ಲಾ ಪ್ರಚಾರಕ್ಕೆಂದು ಅಧಿಕಾರಿಗಳು ಮತ್ತು ಅಧಿಕಾರೇತರರನ್ನು ಒಳಗೊಂಡ ಉಪ ಸಮಿತಿಯನ್ನು ರಚಿಸಲಾಗುತ್ತಿತ್ತು. ಅದಕ್ಕೆ ಇಂತಿಷ್ಟು ಅನುದಾನ ಕೊಡಲಾಗುತ್ತಿತ್ತು. ಆ ಸಮಿತಿಯು ವಿಭಿನ್ನ ಹಾಗೂ ವೈವಿಧ್ಯಮಯ ಪ್ರಚಾರ ಚಟುವಟಿಕೆಗಳನ್ನು ನಡೆಸುತ್ತಿತ್ತು. ಆದರೆ ಈ ಬಾರಿ ಆ ಉಪ ಸಮಿತಿಯನ್ನೇ ರಚಿಸಿಲ್ಲ. ಹೋದ ವರ್ಷವೂ ಮಾಡಿರಲಿಲ್ಲ.

ದಸರಾ ಪ್ರಚಾರ ಸಮಿತಿಯೊಂದನ್ನು ರಚಿಸಿ ಅದು ಇಡೀ ವರ್ಷ ಕಾರ್ಯನಿರ್ವಹಿಸುವಂತೆ ಮಾಡಬೇಕು. ನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ದೂರದೃಷ್ಟಿ ಬೇಕು
-ಬಿ.ಎಸ್. ಪ್ರಶಾಂತ್ ಅಧ್ಯಕ್ಷ ಮೈಸೂರು ಸಂಘ–ಸಂಸ್ಥೆಗಳ ಒಕ್ಕೂಟ
ದಸರಾ ಪ್ರಚಾರ ಕಾರ್ಯವನ್ನು ಜೂನ್‌ ಮೊದಲ ವಾರದಿಂದಲೇ ಶುರು ಮಾಡಬೇಕಿತ್ತು. ಪ್ರತಿ ವರ್ಷವೂ ಅದನ್ನೇ ಹೇಳುತ್ತಲೇ ಬಂದಿದ್ದೇವೆ. ಅದಕ್ಕೆ ಆಸಕ್ತಿ ತೋರಿಸುತ್ತಿಲ್ಲ
-ಸಿ.ನಾರಾಯಣಗೌಡ ಅಧ್ಯಕ್ಷ ಜಿಲ್ಲಾ ಹೋಟೆಲ್ ಮಾಲೀಕರ ಸಂಘ
ಪ್ರವಾಸಿಗರನ್ನು ಆಕರ್ಷಿಸಲೆಂದೇ ಪ್ರವಾಸೋದ್ಯಮ ಇಲಾಖೆಯಿಂದಲೂ ವಿಶೇಷ ಜಾಲತಾಣ ಬಿಡುಗಡೆ ಮಾಡಲಾಗುವುದು. ಪ್ರವಾಸೋದ್ಯಮ ದಿನಾಚರಣೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ
-ಎಂ.ಕೆ. ಸವಿತಾ ಜಂಟಿ ನಿರ್ದೇಶಕಿ ಪ್ರವಾಸೋದ್ಯಮ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT