ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಂಡಿತ್ ರಾಜೀವ ತಾರಾನಾಥ ನೆನಪು: ಸರೋದ್‌ ನಾದ ಸ್ತಬ್ಧ...

ಪಂಡಿತ್ ರಾಜೀವ ತಾರಾನಾಥ ಅಸ್ತಂಗತ; ಅಭಿಮಾನಿಗಳ ಕಂಬನಿ
Published 12 ಜೂನ್ 2024, 6:35 IST
Last Updated 12 ಜೂನ್ 2024, 6:35 IST
ಅಕ್ಷರ ಗಾತ್ರ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿನ ಸರೋದ್ ನಾದ ಮಂಗಳವಾರ ಸ್ತಬ್ಧವಾಗಿದೆ. ಸಂಗೀತ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥರ ನಿಧನಕ್ಕೆ ಇಲ್ಲಿನ ಕಲಾಸಕ್ತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಸರೋದ್ ಮಾಂತ್ರಿಕನ ಜೊತೆಗಿನ ಒಡನಾಟದ ನೆನಪನ್ನು ಅವರ ಆಪ್ತರು, ಒಡನಾಡಿಗಳು ‘ಪ್ರಜಾವಾಣಿ’ ಜೊತೆ ತೆರೆದಿಟ್ಟರು.

‘ಮಣಿಪಾಲ್ ಆಸ್ಪತ್ರೆಯಲ್ಲಿ ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ನಿತ್ಯ ಹತ್ತಾರು ಮಂದಿ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರದವರು ಕಾಣಲು ಬರುತ್ತಿದ್ದರು. ತಾರಾನಾಥರು ಅವರನ್ನೆಲ್ಲ ಮಾತನಾಡಿಸಿ, ಹಾಡಿಸಿಯೇ ಕಳುಹಿಸುತ್ತಿದ್ದರು. ತಾವೂ ಹಾಡುತ್ತಿದ್ದರು’ ಎಂದು ಸ್ಮರಿಸುತ್ತಾರೆ ಆಪ್ತ, ಲೇಖಕ ಟಿ.ಎಸ್‌. ವೇಣುಗೋಪಾಲ್‌.

‘2009ರಲ್ಲಿ ಅವರು ಮೈಸೂರಿನಲ್ಲಿ ನೆಲೆಗೊಂಡರು. ಕಳೆದ 12 ವರ್ಷಗಳಿಂದ ಒಡನಾಟವಿತ್ತು. ಸಂಗೀತ, ಸಾಹಿತ್ಯದ ಮೇಲೆ ಆಸಕ್ತಿ ಇದ್ದವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಮೊದಲು ಕಾಣಲು ಹೋದಾಗ  ಹೆದರಿಕೆಯಾಗಿತ್ತು. ನಮ್ಮನ್ನು ಕಾಳಜಿ ಮಾಡುತ್ತಿದ್ದರು. ಪ್ರೀತಿಯೆಂದರೆ ಕಾಳಜಿ ಎನ್ನುತ್ತಿದ್ದ ಅವರು ಸಣ್ಣತನ, ಅಹಂಕಾರವಿರದ ದೊಡ್ಡ ಮನುಷ್ಯ’ ಎಂದು ನೆನೆಯುತ್ತಾರೆ.

‘ಸಂಗೀತ ಬರದಿದ್ದವರಿಗೂ ಕೇಳ್ರಿ ಬರುತ್ತದೆ ಎನ್ನುತ್ತಿದ್ದರು. ಅವರ ಗುರುಗಳಾದ ಪಂಡಿತ್ ರವಿಶಂಕರ್‌ ಅವರ ಬಗ್ಗೆ ಮೊದಲ ಪುಸ್ತಕವನ್ನು ‘ರಾಗಾಮಾಲಾ’ದಿಂದ ಪ್ರಕಟಿಸಲಾಯಿತು. ಎಲ್ಲ ಪುಸ್ತಕಗಳ ಪ್ರಕಟಣೆಯ ಹಿಂದಿನ ಪ್ರೇರಣೆ ಅವರೇ. ಸಾಹಿತ್ಯದ ದೊಡ್ಡ ವಿಮರ್ಶಕರಾಗಿದ್ದರೂ ಸರೋದ್‌ ಕಲಿಯಲು ಕೋಲ್ಕತ್ತಗೆ ಹೋದಾಗ ಅವರ ಗುರು ಅಲಿ ಅಕ್ಬರ್ ಖಾನ್ ಅವರಲ್ಲಿ ಏನೂ ಹೇಳಿರಲಿಲ್ಲ. ಎಲ್ಲ ಕಲಿತಿದ್ದೀನಿ. ನಾನೂ ಪ್ರಾಧ್ಯಾಪಕ ಎಂದರೆ ಅದು ಅಹಂಕಾರ ಎನ್ನುತ್ತಿದ್ದರು’ ಎಂದು ಸ್ಮರಿಸಿದರು. 

‘ಷೇಕ್ಸ್‌ಪಿಯರ್ ಕುರಿತ ಆರ್ಡೆನ್‌ ವಿಮರ್ಶಾ ಸರಣಿ ಪುಸ್ತಕದಲ್ಲಿ ರಾಜೀವ ತಾರಾನಾಥರ ಹೆಸರಿದೆ. ಯಾವೊಬ್ಬ ಭಾರತೀಯ ವಿಮರ್ಶಕನ ಹೆಸರೂ ಅದರಲ್ಲಿ ಇಲ್ಲ. ಅವರಷ್ಟು ಸಾಹಿತ್ಯದ ಬಗ್ಗೆ ಓದಿಕೊಂಡ, ಸಂಗೀತವನ್ನು ಆಲಿಸಿದ ವ್ಯಕ್ತಿ ಇನ್ನೊಬ್ಬರಿಲ್ಲ’ ಎಂದು ಹೇಳಿದರು.

ರಾಜೀವ ತಾರಾನಾಥ

ರಾಜೀವ ತಾರಾನಾಥ

‘ವೇದಿಕೆಗೆ ಕರೆಸಿ ಹಾರ ಹಾಕಿದ್ದರು’

ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸವನ್ನು ಮೈಸೂರಿನ ಒಂದು ಬೀದಿ ಮಾಡುತ್ತದೆಂದು ಪಂಡಿತ್‌ ರಾಜೀವ ತಾರಾನಾಥ ಅವರು 2014ರಲ್ಲಿ ಸಂಗೀತ ವಿಶ್ವವಿದ್ಯಾಲಯದ ಸಮಾರಂಭವೊಂದರಲ್ಲಿ ನಮ್ಮ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ ಕುರಿತು ಹೇಳಿದ್ದರು. ವೇದಿಕೆಗೆ ನನ್ನನ್ನು ಕರೆಸಿಕೊಂಡು ಹಾರವನ್ನು ಹಾಕಿದ್ದರು. 1972ರಲ್ಲಿ 8ನೇ ಕ್ರಾಸ್‌ನಲ್ಲಿ ಮೊದಲ ಸಂಗೀತ ಕಛೇರಿ ನೀಡಿದ್ದರು. ಇಲ್ಲಿ ಐದಾರು ಕಛೇರಿಗಳನ್ನು ನೀಡಿದ್ದಾರೆ. ಸದಾ ಕ್ರಿಯಾಶೀಲರಾಗಿದ್ದ ಅವರು ಬೆಳಗ್ಗಿನ ರಿಯಾಜ್‌ ತಪ್ಪಿಸುತ್ತಿರಲಿಲ್ಲ. ಕೊನೆಯ ವರ್ಷಗಳನ್ನು ಮೈಸೂರಿನಲ್ಲಿಯೇ ಕಳೆದಿದ್ದಾರೆ. ಅವರು ಬಂದ ಮೇಲೆ ಇಲ್ಲಿ ಹಿಂದೂಸ್ಥಾನಿ ಸಂಗೀತ ಕಛೇರಿಗಳು ಹೆಚ್ಚಿದವು. –ಸಿ.ಆರ್.ಹಿಮಾಂಶು ಶ್ರೀಪ್ರಸನ್ನ ವಿದ್ಯಾ ಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌ನ ಕಾರ್ಯದರ್ಶಿ

‘ಸರಳ ಸಜ್ಜನಿಕೆಯ ಅಪ್ಪಟ ಮನುಷ್ಯ’

ಸರಳ ಸಜ್ಜನಿಕೆಯ ಅಪ್ಪಟ ಮನುಷ್ಯರಾಗಿದ್ದ ರಾಜೀವ ತಾರಾನಾಥರು ಯಾವಾಗಲೂ ಪರಿಪೂರ್ಣವಾದದ್ದನ್ನು ಸಾಧಿಸಬೇಕು. ಸಂಗೀತ ಸಾಹಿತ್ಯ ಯಾವುದರಲ್ಲೇ ಆಗಿರಲಿ ಔನ್ನತ್ಯ ಮುಟ್ಟಬೇಕೆನ್ನುತ್ತಿದ್ದರು. ಸಂಗೀತ ಹಾಗೂ ಸಾಹಿತ್ಯವೇ ಅವರ ಬದುಕಾಗಿತ್ತು. ಇಂಗ್ಲಿಷ್‌ ಸಾಹಿತ್ಯ ಲೋಕದ ಹೊಸ ಲೇಖಕರ ಪುಸ್ತಕಗಳನ್ನು ಆಸಕ್ತಿಯಿಂದ ಓದುತ್ತಿದ್ದರು. ವಿಶ್ವ ಸಾಹಿತ್ಯದ ಬಗ್ಗೆ ಅವರಷ್ಟು ಜ್ಞಾನಿಗಳು ಯಾರೂ ಇರಲಿಲ್ಲ. ಮಹಾಯುದ್ಧದ ಕುರಿತ ಪುಸ್ತಕಗಳನ್ನು ಓದಿಕೊಂಡಿದ್ದರು. ಕನ್ನಡ ಲೇಖಕರು ಪುಸ್ತಕ ಕಳುಹಿಸಿದರೆ ಓದಿ ಅಭಿಪ್ರಾಯ ತಿಳಿಸುತ್ತಿದ್ದರು. ಚೆನ್ನಾಗಿದ್ದರೆ ಮನೆಗೆ ಬಂದು ಕಾಣುವಂತೆ ಹೇಳುತ್ತಿದ್ದರು. ಪಂಡಿತ್‌ ತಾರಾನಾಥ ಫೌಂಡೇಶನ್ ಮೂಲಕ ಮೈಸೂರಿನಲ್ಲಿ ನೂರಾರು ಸಂಗೀತ ಕಛೇರಿಗಳನ್ನು ಆಯೋಜಿಸಿದರು. ದೇಶದ ಯುವ ಸಂಗೀತಗಾರರನ್ನು ಕರೆಸಿಕೊಂಡು ಕಛೇರಿ ನಂತರ ಹೆಚ್ಚಿನ ಗೌರವಧನ ನೀಡುತ್ತಿದ್ದ ಉದಾರಿಯಾಗಿದ್ದರು. ಅವರ ರುಚಿ– ಅಭಿರುಚಿ ಉತ್ತಮವಾಗಿತ್ತು. –ಜಿ.ಪಿ.ಬಸವರಾಜು ಲೇಖಕ

‘ಸಾಮಾಜಿಕ ಕಳಕಳಿಯ ಮೇರು ಕಲಾವಿದ’

ಸಂಗೀತ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಬಗ್ಗೆ ಮುನ್ನೋಟವಿತ್ತು. ಕಿರಿಯ ಕಲಾವಿದರು ಲೇಖಕರನ್ನು ಪ್ರೋತ್ಸಾಹಿಸುತ್ತಿದ್ದರು. ಸಾಮಾಜಿಕ ಕಳಕಳಿಯಿದ್ದ ಮೇರು ಕಲಾವಿದ ಅವರಾಗಿದ್ದರು. 15 ವರ್ಷಗಳಿಂದಲೂ ಒಡನಾಟವನ್ನು ಹೊಂದಿದ್ದೆ. ಯಾವಾಗ ಹೋದಾಗಲು ರಾಗದ ವಿಮರ್ಶೆ ಮಾಡುತ್ತಿದ್ದರು. ಸೂಕ್ಷ್ಮತೆ ಹೇಳುತ್ತಿದ್ದರು. ತಪ್ಪಿದ್ದರೆ ಸರಿದಾರಿಗೆ ತರುತ್ತಿದ್ದರು. ಅವರು ಮೇಷ್ಟ್ರಷ್ಟೇ ಆಗಿರಲಿಲ್ಲ ತರಬೇತಿ ಜೊತೆ ಪ್ರದರ್ಶಕ ಕಲಾವಿದರಾಗಿದ್ದರು. ಆಸ್ಪತ್ರೆಗೆ ಹೋದಾಗ ರಾಗಗಳನ್ನು ಹಾಡುತ್ತಿದ್ದ ಅವರು ನೋವನ್ನು ಸಹಿಸುವ ಶಕ್ತಿ ಇದರಲ್ಲಿದೆ ಎನ್ನುತ್ತಿದ್ದರು. ಸಂಗೀತವನ್ನು ಧ್ಯಾನಿಸುತ್ತಿದ್ದರು. –ಪಂಡಿತ್ ವೀರಭದ್ರಯ್ಯ ಹಿರೇಮಠ ಹಿಂದೂಸ್ಥಾನಿ ಗಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT