ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಬಿನಿ ವ್ಯಾಪ್ತಿಯ ನಾಲೆಗೆ ನೀರು ಹರಿಸಿ: ರೈತರಿಂದ ಕಾಡಾ ಕಚೇರಿಗೆ ಮುತ್ತಿಗೆ

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ
Published : 6 ಜುಲೈ 2024, 13:29 IST
Last Updated : 6 ಜುಲೈ 2024, 13:29 IST
ಫಾಲೋ ಮಾಡಿ
Comments

ಮೈಸೂರು: ಕಬಿನಿ ವ್ಯಾಪ್ತಿಯ ನಾಲೆ ಹಾಗೂ ಕೆರೆ–ಕಟ್ಟೆಗಳಿಗೆ ನೀರು ಬಿಡಬೇಕು ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ಶನಿವಾರ ಪ್ರತಿಭಟಿಸಿದರು.

ನಗರದ ಗನ್‌ಹೌಸ್‌ ವೃತ್ತದ ಬಳಿಯ ಕುವೆಂಪು ಉದ್ಯಾನದಲ್ಲಿ ಜಮಾಯಿಸಿದ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕಾಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ‘ಕಬಿನಿ ಅಣೆಕಟ್ಟು ಭರ್ತಿಯಾಗುವ ಹಂತದಲ್ಲಿದೆ. ಹೀಗಿದ್ದರೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಾಲೆ ಮತ್ತು ಕೆರೆಕಟ್ಟೆಗಳಿಗೆ ನೀರು ಬಿಡಲು ಜನಪ್ರತಿನಿಧಿಗಳು ಹಾಗೂ ಕಾಡಾ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ ವರ್ಷ ತಮಿಳುನಾಡಿಗೆ ನೀರು ಬಿಟ್ಟು ಕಬಿನಿ ಅಚ್ಚುಕಟ್ಟು ಭಾಗದ ರೈತರನ್ನು ಬರಪೀಡಿತ ಪ್ರದೇಶದಂತೆ ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ಜೀವನೋಪಾಯಕ್ಕೆ  ಭತ್ತ, ರಾಗಿ, ಜಾನುವಾರುಗಳಿಗೆ ಮೇವು ಬೆಳೆದುಕೊಂಡಿದ್ದ ಕೃಷಿ ಕಾರ್ಮಿಕರಿಗೆ ಬೆನ್ನಿನ ಮೇಲೆ ಬರೆ ಎಳೆದಂತಾಗಿದೆ. ಕಾವೇರಿ ನ್ಯಾಯಾಧಿಕರಣ ಪ್ರಾಧಿಕಾರದ ಆದೇಶವನ್ನು ಪಾಲಿಸಿ ಈ ಭಾಗದ ರೈತರಿಗೆ ದ್ರೋಹ ಮಾಡಿ ಸರ್ಕಾರ ಉಳಿಸಿಕೊಳ್ಳಲು ತಂತ್ರಗಾರಿಕೆ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ಇದೇ ಭಾಗದಿಂದ ಮುಖ್ಯಮಂತ್ರಿಯಾಗಿ ಆರಿಸಿ ಹೋದ ಸಿದ್ದರಾಮಯ್ಯ ಅವರಿಗೆ ಸಮಸ್ಯೆಯ ವಿಮರ್ಶೆ ಮಾಡಲು ಕಾಲಾವಕಾಶವಿಲ್ಲದೆ ಹೋಗಿದೆ. ಅವರು ಚಳವಳಿ ಮಾಡಿ ನೀರು ಬಿಡಿಸಿಕೊಳ್ಳುವ ದೌರ್ಭಾಗ್ಯವನ್ನು ರೈತರಿಗೆ ಕರುಣಿಸಿದ್ದಾರೆ. ಮಂಡ್ಯ ಜಿಲ್ಲೆಗೆ ಬೆಣ್ಣೆ, ಮೈಸೂರು, ಚಾಮರಾಜನಗರ ಜಿಲ್ಲೆಗೆ ಸುಣ್ಣವೆಂಬ ನೀತಿ ಬಿಡಬೇಕು’ ಎಂದು ಆಗ್ರಹಿಸಿದರು.

‘ಅಚ್ಚುಕಟ್ಟು ಭಾಗದ ರೈತರಿಗೆ ವ್ಯವಸಾಯಕ್ಕೆ ನೀರು ನೀಡುವುದಿಲ್ಲ. ನಂತರ ಕಟ್ಟು ನೀರನ್ನು ಹರಿಸುತ್ತೇವೆ ಎಂಬ ಕರಪತ್ರ ಹಂಚಲು ನೀರಾವರಿ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸುತ್ತಾರೆ. ಈ ರೀತಿಯ ಕರಪತ್ರದೊಂದಿಗೆ ಗ್ರಾಮಕ್ಕೆ ಬಂದರೆ ಅಚ್ಚುಕಟ್ಟು ಭಾಗದ ರೈತರು ಅಧಿಕಾರಿಗಳನ್ನು ಬಾರುಕೋಲು ಚಳವಳಿಯ ಮುಖಾಂತರ ಪ್ರಶ್ನಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕಾಡಾ ಉಪ ಎಂಜಿನಿಯರ್‌ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ‘ಜುಲೈ 10ರಿಂದ ಕೆರೆಕಟ್ಟೆ ಮತ್ತು ನಾಲೆಗಳಿಗೆ ನೀರು ಬಿಡುತ್ತೇವೆ’ ಎಂದು ಲಿಖಿತ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಸಂಘದ ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಮೈಸೂರು ಜಿಲ್ಲಾಧ್ಯಕ್ಷ ಹಾಡ್ಯ ರವಿ, ರಾಜ್ಯ ಉಪಾಧ್ಯಕ್ಷ ಕೆ.ಆರ್.ನಗರ ತಿಮ್ಮಪ್ಪ, ದೇವೇಂದ್ರಪ್ಪ ಟಿ, ಶಿವರುದ್ರಪ್ಪ, ಜಯಸ್ವಾಮಿ, ಅಂಬಳೆ ಮಹದೇವಸ್ವಾಮಿ, ಮುದ್ದಳ್ಳಿ ಶಿವಣ್ಣ, ದೇವಿರಮ್ಮನಹಳ್ಳಿ ಮಹೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT