ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಲ್ಪಗಳಲ್ಲಿ ಸ್ವಾತಂತ್ರ್ಯ ಹೋರಾಟದ ‘ಹೆಜ್ಜೆ’

ಸಿದ್ಧಾರ್ಥನಗರದ ಕಾವಾ ಆವರಣಕ್ಕೆ ಕಲಾಕೃತಿಗಳ ‘ರಂಗು’
Published : 4 ಅಕ್ಟೋಬರ್ 2024, 5:24 IST
Last Updated : 4 ಅಕ್ಟೋಬರ್ 2024, 5:24 IST
ಫಾಲೋ ಮಾಡಿ
Comments

ಮೈಸೂರು: ಸಂವಿಧಾನದ ಪೀಠಿಕೆ, ಸ್ವಾತಂತ್ರ್ಯ ‌ಚಳವಳಿ ಹಾಗೂ ಸ್ವಾತಂತ್ರ್ಯ ‌ಹೋರಾಟಗಾರರ ಕುರಿತ ಶಿಲ್ಪಕಲಾ ಕೃತಿಗಳು ಮತ್ತು ವಿವಿಧ ವಿಷಯಗಳ ಮೇಲೆ ಮೂಡಿಬಂದಿರುವ ಚಿತ್ರಕಲಾಕೃತಿಗಳು ಇಲ್ಲಿನ ಸಿದ್ಧಾರ್ಥ ನಗರದಲ್ಲಿರುವ ಚಾಮರಾಜೇಂದ್ರ ಸರ್ಕಾರಿ ‌ದೃಶ್ಯಕಲಾ ಕಾಲೇಜಿನ (ಕಾವಾ) ಆವರಣಕ್ಕೆ ಮೆರುಗು ನೀಡುತ್ತಿವೆ.

ದಸರಾ ಮಹೋತ್ಸವ ಅಂಗವಾಗಿ ಲಲಿತಕಲೆ ಹಾಗೂ ‌ಕರಕುಶಲ ಕಲೆ ಉಪ ಸಮಿತಿಯಿಂದ ನಡೆಸಿದ ರಾಜ್ಯಮಟ್ಟದ ಚಿತ್ರಕಲಾ ಹಾಗೂ ಶಿಲ್ಪಕಲಾ‌ ಶಿಬಿರದಲ್ಲಿ ಸಿದ್ಧಗೊಂಡ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದ್ದು, ಕಲಾಸಕ್ತರನ್ನು ಕೈಬೀಸಿ ಕರೆಯುತ್ತಿವೆ.

ಈ ಹಿಂದೆ ಇಂತಹ ಶಿಬಿರವನ್ನು ಹುಣಸೂರು ರಸ್ತೆಯ ಕಲಾಮಂದಿರದ ಆವರಣದಲ್ಲಿ ನಡೆಸಲಾಗುತ್ತಿತ್ತು. ಈ ಸಲ ಕಾವಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ, ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕೊನೆಗೂ ಡಾಂಬರು ಕಂಡುಕೊಂಡಿದೆ! ಇದು ಹಲವು ವರ್ಷಗಳಿಂದಲೂ ಮಣ್ಣಿನ ರಸ್ತೆಯೇ ಆಗಿತ್ತು. ಆದರೆ, ಒಳಾವರಣದಲ್ಲಿ ಮಣ್ಣಿನ ರಸ್ತೆಯೇ ಇದೆ. ಅಲ್ಲಿನ ಕೆಸರುಮಯವಾದ ವಾತಾವರಣವನ್ನು ಮರೆಸುವ ರೀತಿಯಲ್ಲಿ ಅತ್ಯುತ್ತಮ ಕಲಾಕೃತಿಗಳು ಮೂಡಿಬಂದಿವೆ.

ಸ್ವಾತಂತ್ರ್ಯ ಹೋರಾಟದ ಸನ್ನಿವೇಶಗಳ ಪ್ರತಿರೂಪವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಶಿಲೆಗಳಲ್ಲಿ ರೂಪ ತಳೆದ ಕಲಾಕೃತಿಗಳು ಸ್ವಾತಂತ್ರ್ಯ ಸೇನಾನಿಗಳ ಮೇಲಿನ ಅಭಿಮಾನವನ್ನು ಹೆಚ್ಚಿಸುತ್ತಿವೆ.

ವಿವಿಧೆಡೆಯ ಕಲಾವಿದರು: ನಾಡಿನ ವಿವಿಧ ಭಾಗಗಳ ಕಲಾವಿದರು ಪಾಲ್ಗೊಂಡಿದ್ದ ಶಿಬಿರದಲ್ಲಿ, ಸಂವಿಧಾನ ಪೀಠಿಕೆ, ಕರ್ನಾಟಕದ ಲಾಂಛನ, ಸುಭಾಷ್ ಚಂದ್ರ‌‌ ಬೋಸ್, ಬಿರ್ಸಾ ಮುಂಡಾ, ಕಲ್ಟಿವೇಷನ್ ಆಫ್ ಮೈಂಡ್ ವಿಷಯದ ಕಲಾಕೃತಿ, ಸಂಸತ್‌ ಭವನ, ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ದಂಡಿ ಸತ್ಯಾಗ್ರಹ, ಭಗತ್ ಸಿಂಗ್ ಮೊದಲಾದ ಶಿಲ್ಪಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಲಲಿತಕಲೆ, ಕರಕುಶಲ ಕಲೆಗಳ ಕಲಾಕೃತಿಗಳು ಹಾಗೂ ರಾಷ್ಟ್ರಮಟ್ಟದ ಕರಕುಶಲ ಕಲೆಗಳ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

ವುಡ್‌ಕಟ್‌ನಲ್ಲಿ ಮೂಡಿದ ಕಡ್ಬಡಯ್ಯ, ಕಾಗದದಲ್ಲಿ ರೂಪ ಪಡೆದ ಸಾಂಟಾ ಕ್ಲಾಸ್, ಕೊಕ್ಕರೆಗಳು, ಸೌತೆಕಾಯಿ ಬೀಜಗಳಿಂದ ಸಿದ್ಧವಾದ ಆರತಿಕಟ್ಟು, ಮರದ ತುಂಡಿನಲ್ಲಿ ತಯಾರಾದ ಬಣ್ಣದ ಗರಿ, ಸನ್ ಬೋರ್ಡ್‌ನಲ್ಲಿ ರೂಪ ಪಡೆದ ದೊಡ್ಡ ಗಡಿಯಾರ, ಮರದ ತುಂಡಿನಲ್ಲಿ ಮಾಡಿದ ಚಾಮುಂಡಿ ಬೆಟ್ಟದ ವಿಹಂಗಮ ನೋಟ, ಮಣ್ಣಿನಲ್ಲಿ ಮೂಡಿದ ಅಥಣಿ ಮುರುಘರಾಜೇಂದ್ರ ಶಿವಯೋಗಿ ಸ್ವಾಮೀಜಿ, ಹಂಪಿ ಕಲ್ಲಿನ ರಥ, ಬಾಲ್ಯದ ನೆನಪು ಕಟ್ಟಿಕೊಡುವ ‌ಕಲಾಕೃತಿಗಳು, ಅಮ್ಮನ ಪ್ರೀತಿಯ ಸ್ಮರಣೆ, ಲೋಹದಿಂದ ಮೂಡಿದ ಮೀನು ಮತ್ತದರ ಲೋಕ, ಸಾಂಪ್ರದಾಯಿಕ ‌ಚಿತ್ರ ಕಲಾಕೃತಿಗಳು, ಮೈಸೂರು ‌ಶೈಲಿ ಚಿತ್ರಕಲಾಕೃತಿಗಳು, ಕಲ್ಲಿನಲ್ಲಿ ಮೂಡಿದ ಹಾವಿನಂತಹ ಜಡೆ, ತೈಲವರ್ಣ, ಜಲವರ್ಣದಲ್ಲಿ ಮೂಡಿಬಂದಿರುವ ಕಲಾಕೃತಿಗಳು ಆಕರ್ಷಿಸುತ್ತಿವೆ.

ಅವಳ ಅಳಲು: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಬಿಂಬಿಸುವ ‘ಅವಳ ಅಳಲು’ ಮಿಶ್ರಮಾಧ್ಯಮದ ಕಲಾಕೃತಿ ಗಮನ ಸೆಳೆಯುತ್ತಿದೆ. ಅದರಲ್ಲಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಗಳನ್ನು ಬಳಸಿರುವುದು ವಿಶೇಷ.

ರಾಮನಗರದ ಹಿರಿಯ ಕಲಾವಿದ ಶಿವಪ್ರಸಾದ್ ಅವರು 12 ದಿನಗಳ‌ ‘ಸಮಕಾಲೀನ ಶಿಲ್ಪಕಲಾ‌ ಶಿಬಿರ’ದ ಸಂಚಾಲಕ ಹಾಗೂ ಬೆಂಗಳೂರಿನ ನಾಗಪ್ಪ ಪ್ರಧಾನ ನಿರ್ದೇಶಕರಾಗಿದ್ದರು. 

ರಾಜ್ಯ ಮಟ್ಟದ ಈ ಶಿಲ್ಪಕಲಾ ಶಿಬಿರದಲ್ಲಿ ಕಲಾವಿದರಾದ ವಿಜಯಪುರದ ಮಹಾಂತೇಶ ಎಂ. ಪಲದಿನ್ನಿ, ಬಾಗಲಕೋಟೆಯ ದಾನಯ್ಯ ಚೌಕಿಮಠ, ಉಡುಪಿಯ ನರೇಶ್ ನಾಯ್ಕ, ಚಿಕ್ಕಮಗಳೂರಿನ ಸುಕೇಶ್ ಬಿ.ಸಿ., ಬೆಂಗಳೂರು ಗ್ರಾಮಾಂತರದ ಗಿರೀಶ್, ವಿಜಯನಗರದ ಪ್ರಮೋದ್ ಆಚಾರ್, ಮೈಸೂರಿನ ಎಲ್.ಬಸವರಾಜ್ ಹಾಗೂ ಸಂಗೀತಾ ಆರ್. ಮತ್ತು ಯಾದವಗಿರಿಯ ಪ್ರಶಾಂತ್‌ಕುಮಾರ್ ಪಾಲ್ಗೊಂಡಿದ್ದರು.

ಕಾವಾದಲ್ಲಿ ಪ್ರದರ್ಶಿಸಿರುವ ಕಲಾಕೃತಿಗಳು
ಕಾವಾದಲ್ಲಿ ಪ್ರದರ್ಶಿಸಿರುವ ಕಲಾಕೃತಿಗಳು
ಕಾವಾದಲ್ಲಿ ಪ್ರದರ್ಶಿಸಿರುವ ಶಿಲ್ಪಕಲಾಕೃತಿ
ಕಾವಾದಲ್ಲಿ ಪ್ರದರ್ಶಿಸಿರುವ ಶಿಲ್ಪಕಲಾಕೃತಿ
ಕಾವಾದಲ್ಲಿ ಪ್ರದರ್ಶಿಸಿರುವ ಶಿಲ್ಪಕಲಾಕೃತಿ
ಕಾವಾದಲ್ಲಿ ಪ್ರದರ್ಶಿಸಿರುವ ಶಿಲ್ಪಕಲಾಕೃತಿ

‘ಕಾವಾ’ ಸಮಸ್ಯೆ ಪರಿಹಾರಕ್ಕೆ ಕ್ರಮ:

ತಂಗಡಗಿ ಮೈಸೂರು: ‘ಕಾವಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಕೆಲವು ಸಮಸ್ಯೆಗಳಿರುವುದು ಗೊತ್ತಿದ್ದು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಭರವಸೆ ನೀಡಿದರು. ದಸರಾ ಲಲಿತಕಲೆ ಹಾಗೂ ‌ಕರಕುಶಲ ಕಲೆ ಉಪ ಸಮಿತಿಯಿಂದ ಕಾವಾ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಇಲ್ಲಿನ ಅತಿಥಿ ಉಪನ್ಯಾಸಕರ ವೇತನಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. ‘ಮೈಸೂರು ಮಹಾರಾಜರು ಹಾಕಿಕೊಟ್ಟ ದಾರಿಯಲ್ಲೇ‌ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ’ ಎಂದರು. ಕಾವಾದ ಪ್ರಭಾರ ಡೀನ್ ಎ.ದೇವರಾಜ್ ಮಾತನಾಡಿ ‘ಇಲ್ಲಿ 200 ವಿದ್ಯಾರ್ಥಿಗಳಿದ್ದಾರೆ. 22 ಬೋಧಕರ ಹುದ್ದೆ ಮಂಜೂರಾಗಿದ್ದು ಈ ಪೈಕಿ ಐವರಷ್ಟೆ ಕಾಯಂ ನೌಕರರು ಇದ್ದಾರೆ. ನಾಲ್ವರು ಅತಿಥಿ ಉಪನ್ಯಾಸಕರಿದ್ದಾರೆ. ಅವರಿಗೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಕಾಲೇಜುಗಳವರಿಗೆ ನೀಡುವ ವೇತನವನ್ನು ಕೊಡಬೇಕು. ಈ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಡೀನ್ ಹುದ್ದೆಗೆ ಕಲಾವಿದರೊಬ್ಬರನ್ನು ನೇಮಿಸಬೇಕು. ಈ ಹುದ್ದೆಯು ಹಲವು ವರ್ಷಗಳಿಂದ ಪ್ರಭಾರದಲ್ಲೇ ಮುಂದುವರಿದಿದೆ’ ಎಂದು ತಿಳಿಸಿದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಕಲಾವಿದರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್ ಭೋಪಾಲದ ಇಂದಿರಾ ಗಾಂಧಿ ಮಾನವ ವಸ್ತುಸಂಗ್ರಹಾಲಯದ ನಿರ್ದೇಶಕ ಅಮಿತ್ ಪಾಂಡೆ ಶಿಲ್ಪಕಲಾ‌ ಅಕಾಡೆಮಿ ಅಧ್ಯಕ್ಷ ಎಂ.ಸಿ. ರಮೇಶ್ ಲಲಿತಕಲಾ‌ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಕಲಾವಿದರಾದ ಚಂದ್ರಶೇಖರ್ ಬಿಂದುರಾಜ್ ಬಿರಾದಾರ್ ಎಚ್.ಎಂ. ಜಯಶಂಕರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT