ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು: ಮಳೆ ನಡುವೆ ಜರುಗಿದ ದಸರಾ ಮೆರವಣಿಗೆ

Published : 4 ಅಕ್ಟೋಬರ್ 2024, 14:30 IST
Last Updated : 4 ಅಕ್ಟೋಬರ್ 2024, 14:30 IST
ಫಾಲೋ ಮಾಡಿ
Comments

ಸಿಂಧನೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಪ್ರಥಮ ಬಾರಿಗೆ ಸಿಂಧನೂರಿನಲ್ಲಿ ಹಮ್ಮಿಕೊಂಡಿರುವ 9 ದಿನಗಳ ಕಲ್ಯಾಣ ದಸರಾ ಮಹೋತ್ಸವದ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಕ್ರವಾರ ಸಂಜೆ ಚಾಲನೆ ನೀಡಿದರು.

ಗಾಂಧಿವೃತ್ತದಲ್ಲಿ ಸಾಯಂಕಾಲ 4 ಗಂಟೆಗೆ ಆರಂಭವಾದ ಮೆರವಣಿಗೆ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಕಾಲೇಜಿಗೆ 6 ಗಂಟೆಗೆ ತಲುಪಿತು. ಮೆರವಣಿಗೆಯುದ್ಧಕ್ಕೂ ಸಾರ್ವಜನಿಕರು ಅಂಗಡಿ, ಮುಂಗಟ್ಟುಗಳ ಮೇಲೆ ಮತ್ತು ರಸ್ತೆಬದಿ ನಿಂತು ಮೆರವಣಿಗೆಯನ್ನು ಕುತೂಹಲದಿಂದ ವೀಕ್ಷಿಸಿದರು.

ಮೆರವಣಿಗೆಯಲ್ಲಿ ಬಳ್ಳಾರಿಯ ಅಶ್ವರಾಮಣ್ಣ ಕಲಾತಂಡದ ಹಗಲುವೇಷ ನೃತ್ಯ, ಹಾಸಂದಿಯ ಬಸವಶ್ರೀ ಮಹಿಳಾ ತಂಡದ ವೀರಗಾಸೆ, ಮಂಡ್ಯದ ಚಿಕ್ಕಬೋರಯ್ಯ ತಂಡದ ಪೂಜಾ ಕುಣಿತ, ಪ್ರವೀಣ ತಂಡದ ಗಾರುಡಿ ಗೊಂಬೆ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು.

ಹುಲಗುಂಚಿಯ ಗೋವಿಂದಪ್ಪ ತಂಡದ ಚರ್ಮವಾದ್ಯ, ಗೋನವಾರದ ಅಯ್ಯಾಳಪ್ಪ ತಂಡದ ಡೊಳ್ಳು ಕುಣಿತ, ಯಾಪಲಪರ್ವಿಯ ಚಿನ್ನಪ್ಪ ತಂಡದ ಹಗಲುವೇಷ ಕುಣಿತ, ಹಸಮಕಲ್ ಅಮರೇಶ ತಂಡದ ಬೆದರುಬೊಂಬೆ ಆಟಗಳನ್ನು ಜನರು ನಿಬ್ಬೆರಗಾಗಿ ನೋಡಿದರು.

ಸಿಂಧನೂರಿನ ಹನುಮಂತಪ್ಪ ಭಜಂತ್ರಿ ತಂಡದ ಬ್ಯಾಂಡ್ ಸೆಟ್, ಬಸವರಾಜ ಕಲ್ಲೂರು ತಂಡದ ವೀರಗಾಸೆ, ಸ್ಫೂರ್ತಿ ಯುವಕ ಮಂಡಳಿಯ ಯಂಕಮ್ಮ ಸಂಗಡಿಗರಿಂದ ಮಹಿಳಾ ಡೊಳ್ಳು ಪ್ರದರ್ಶನ, ಪಟೇಲವಾಡಿಯ ಮೌನೇಶ ತಂಡದ ತಾಶ್‌ಮೇಳ, ಕಂಪ್ಲಿಯ ರಮೇಶ ತಂಡದ ಡೋಲ್ ವಾದನಗಳು ಸಾರ್ವಜನಿಕರನ್ನು ಆಕರ್ಷಿಸಿದವು.

ವರುಣನ ಅಡ್ಡಿ: ಮಧ್ಯಾಹ್ನ 3 ಗಂಟೆಯಿಂದಲೇ ಮೋಡ ಮುಸುಕಿದ ವಾತಾವರಣವಿತ್ತು. ಆಗಾಗ ತುಂತುರು ಹನಿಗಳು ಉದುರಿದವು. ಕೆಲಬಾರಿ ಗುಡುಗು, ಮಿಂಚಿನ ಶಬ್ದಗಳು ಕೇಳಿ ಬಂದವು. ಸಂಘಟಕರು ಕಳೆದೊಂದು ತಿಂಗಳಿನಿಂದ ಅದ್ದೂರಿ ಮೆರವಣಿಗೆ ಮಾಡಬೇಕೆಂಬ ಆಸೆ ಹೊತ್ತಿದ್ದರು. ಇನ್ನೇನು ಮೆರವಣಿಗೆಗೆ ಚಾಲನೆ ಸಿಗುತ್ತಿದ್ದಂತೆ ಮಳೆರಾಯನ ಆರ್ಭಟ ಶುರುವಾಯಿತು. ಆದರೂ ವರುಣನ ಅಡ್ಡಿಯ ಮಧ್ಯೆಯೆ ಎಲ್ಲಾ ಕಲಾವಿದರು ತಮ್ಮ ತಮ್ಮ ವಾದ್ಯಗಳೊಂದಿಗೆ ಹುರುಪಿನಿಂದಲೇ ಮಳೆಯಲ್ಲಿಯೇ ಹೊರಟರು. ಸಾರ್ವಜನಿಕರು ಅಂಗಡಿಯ ಚಾಟಿನಲ್ಲಿ ಮೆರವಣಿಗೆಯನ್ನು ವೀಕ್ಷಿಸಿದ್ದು ಕಂಡುಬಂತು. ಇನ್ನು ಕೆಲವರು ಕೊಡೆಗಳನ್ನು ಹಿಡಿದುಕೊಂಡು ನೋಡಿದರು. ಕೆಲ ಯುವಕರು ಮಳೆಯ ಮಧ್ಯೆದಲ್ಲಿಯೇ ಕಲಾವಿದರ ಬಳಿಗೆ ಹೋಗಿ ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ಚಿತ್ರಗಳನ್ನು ಸೆರೆ ಹಿಡಿದು ಕೊಂಡರು.

ಪೊಲೀಸರ ಹರಸಾಹಸ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಗಮನದ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ಪೊಲೀಸರು ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸಲು ಮುಂದಾದರು. ಮೆರವಣಿಗೆ ಆರಂಭವಾಗುತ್ತಿದ್ದಂತೆ ಖಾಕಿ ಪಡೆ ಎಲ್ಲೆಡೆ ಏಕಮುಖ ಸಂಚಾರಕ್ಕೆ ಮುಂದಾದರು. ದ್ವಿಚಕ್ರ ವಾಹನ ಸವಾರರಿಗೆ ಹಳೇಬಜಾರ್ ಮೂಲಕ ಸಂಚರಿಸಲು ಸೂಚಿಸಿದರು. ಪ್ರಮುಖ ವೃತ್ತಗಳಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪೊಲೀಸರು ಬೆಳಗಿನಿಂದ ಸಂಜೆಯವರೆಗೂ ವಾಹನ ದಟ್ಟಣೆ, ಸುಗಮ ಸಂಚಾರಕ್ಕೆ ಹರಸಾಹಸ ಪಟ್ಟರು.
ತೆರೆದ ವಾಹನದಲ್ಲಿ ಮುಖ್ಯಮಂತ್ರಿ ಮೆರವಣಿಗೆ ನಿಗದಿತ ಸಮಯಕ್ಕಿಂತ ಒಂದುವರೆ ತಾಸು ವಿಳಂಬವಾಗಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆರವಣಿಗೆಗೆ ಚಾಲನೆ ನೀಡಿ ತೆರೆದ ವಾಹನ ಏರಿದರು.

ಅವರೊಂದಿಗೆ ಕಾನೂನು ಸಂಸದಿಯ ಸಚಿವ ಎಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ ಪಾಟೀಲ, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ, ಶಾಸಕರಾದ ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ರಾಘವೇಂದ್ರ ಹಿಟ್ನಾಲ್, ನಾಗರಾಜ ಸಿರುಗುಪ್ಪ, ದದ್ದಲ್ ಬಸನಗೌಡ, ಹಂಪಯ್ಯ ನಾಯಕ, ಎ.ವಸಂತಕುಮಾರ, ಮಾಜಿ ಶಾಸಕರಾದ ಬಯ್ಯಾಪುರ ಅಮರೇಗೌಡ, ವೆಂಕಟರಾವ್ ನಾಡಗೌಡ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತೆರೆದ ವಾಹನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಸಿಂಧನೂರಿನಲ್ಲಿ ಶುಕ್ರವಾರ ನಡೆದ ಕಲ್ಯಾಣ ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಕುಂಭ ಹೊತ್ತು ಸಹಸ್ರಾರು ಮಹಿಳೆಯರು ಭಾಗವಹಿಸಿದ್ದರು.
ಸಿಂಧನೂರಿನಲ್ಲಿ ಶುಕ್ರವಾರ ನಡೆದ ಕಲ್ಯಾಣ ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಕುಂಭ ಹೊತ್ತು ಸಹಸ್ರಾರು ಮಹಿಳೆಯರು ಭಾಗವಹಿಸಿದ್ದರು.
ಸಿಂಧನೂರಿನಲ್ಲಿ ಶುಕ್ರವಾರ ನಡೆದ ಕಲ್ಯಾಣ ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಯಾಪಲಪರ್ವಿಯ ಚಿನ್ನಪ್ಪ ತಂಡದ ಹಗಲುವೇಷ ಕುಣಿತವನ್ನು ಜನರು ಕುತೂಹಲದಿಂದ ವೀಕ್ಷಿಸಿದರು.
ಸಿಂಧನೂರಿನಲ್ಲಿ ಶುಕ್ರವಾರ ನಡೆದ ಕಲ್ಯಾಣ ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಯಾಪಲಪರ್ವಿಯ ಚಿನ್ನಪ್ಪ ತಂಡದ ಹಗಲುವೇಷ ಕುಣಿತವನ್ನು ಜನರು ಕುತೂಹಲದಿಂದ ವೀಕ್ಷಿಸಿದರು.
ಸಿಂಧನೂರಿನಲ್ಲಿ ಶುಕ್ರವಾರ ನಡೆದ ಕಲ್ಯಾಣ ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಹಸಮಕಲ್ ಅಮರೇಶ ತಂಡದ ಬೆದರುಬೊಂಬೆ ಆಟದ ಕಲಾವಿದರು ಭಾಗವಹಿಸಿರುವುದು.
ಸಿಂಧನೂರಿನಲ್ಲಿ ಶುಕ್ರವಾರ ನಡೆದ ಕಲ್ಯಾಣ ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಹಸಮಕಲ್ ಅಮರೇಶ ತಂಡದ ಬೆದರುಬೊಂಬೆ ಆಟದ ಕಲಾವಿದರು ಭಾಗವಹಿಸಿರುವುದು.
ಸಿಂಧನೂರಿನಲ್ಲಿ ಶುಕ್ರವಾರ ನಡೆದ ಕಲ್ಯಾಣ ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ತೆರೆದ ವಾಹನದ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವರಾದ ಹೆಚ್.ಕೆ.ಪಾಟೀಲ್ ಶರಣಪ್ರಕಾಶ ಪಾಟೀಲ್ ಎನ್.ಎಸ್.ಭೋಸರಾಜ್ ಸೇರಿದಂತೆ ಶಾಸಕರು ಸಂಸದರು ಮಾಜಿ ಶಾಸಕರು ಪಾಲ್ಗೊಂಡಿದ್ದರು.
ಸಿಂಧನೂರಿನಲ್ಲಿ ಶುಕ್ರವಾರ ನಡೆದ ಕಲ್ಯಾಣ ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ತೆರೆದ ವಾಹನದ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವರಾದ ಹೆಚ್.ಕೆ.ಪಾಟೀಲ್ ಶರಣಪ್ರಕಾಶ ಪಾಟೀಲ್ ಎನ್.ಎಸ್.ಭೋಸರಾಜ್ ಸೇರಿದಂತೆ ಶಾಸಕರು ಸಂಸದರು ಮಾಜಿ ಶಾಸಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT