ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು | ಅಪಹರಣಕ್ಕೊಳಗಾಗಿದ್ದ ನಾಲ್ವರ ರಕ್ಷಣೆ: ಮೂವರು ಆರೋಪಿಗಳ ಬಂಧನ

ಸಿಂಧನೂರು–ಪುಣೆ ಪೊಲೀಸರ ಜಂಟಿ ಕಾರ್ಯಾಚರಣೆ
Published : 1 ಅಕ್ಟೋಬರ್ 2024, 15:44 IST
Last Updated : 1 ಅಕ್ಟೋಬರ್ 2024, 15:44 IST
ಫಾಲೋ ಮಾಡಿ
Comments

ಸಿಂಧನೂರು : ಮಹಾರಾಷ್ಟ್ರದ ಪುಣೆಯಲ್ಲಿ ಏಳು ಜನರನ್ನು ಅಪಹರಿಸಿ ತಲಾ ₹1 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಮೂವರು ಅಪಹರಣಕಾರರನ್ನು ಸಿಂಧನೂರು ತಾಲ್ಲೂಕಿನ ಕುನ್ನಟಗಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಪೊಲೀಸರು ಬಂಧಿಸಿದ್ದಾರೆ. ಅಪಹರಣಕ್ಕೆ ಒಳಗಾಗಿದ್ದ ನಾಲ್ವರು ಯುವಕರನ್ನು ರಕ್ಷಿಸಲಾಗಿದೆ.

ಪುಣೆಯ ದೇವಸ್ಥಾನವೊಂದರಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ಏಳು ಜನರನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಂತ ತಾಲ್ಲೂಕಿನ ತಿಕ್ಕುಂದಿ ಗ್ರಾಮದ ರಾಮು ಅಪ್ಪರಾಜು, ದತ್ತ ಶಿವಾಜಿ, ಹರ್ಷಕ ಸುರೇಶ ಪಾಟೀಲ್ ಮತ್ತಿತರರು ಸೇರಿ ಅಪಹರಿಸಿದ್ದಾರೆ. ಮುಖ್ಯ ಆರೋಪಿ ರಾಮು ಪತ್ನಿಯ ಸಂಬಂಧಿ ವಾಸು ಅವರ ಸಹಕಾರದಿಂದ ಸಿಂಧನೂರು ತಾಲ್ಲೂಕಿನ ಕುನ್ನಟಗಿ ಗ್ರಾಮದ ಮನೆಯೊಂದರಲ್ಲಿ ನಾಲ್ವರನ್ನು ಕೂಡಿ ಹಾಕಿಡಲಾಗಿತ್ತು. ಉಳಿದ ಮೂವರನ್ನು ಸಾಂಗ್ಲಿಗೆ ಕರೆದೊಯ್ಯಲಾಗಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಂತ್ರಸ್ತರ ಕಡೆಯವರಿಗೆ ಭಾನುವಾರ ಸಂಜೆ ಕರೆ ಮಾಡಿ ಅಪಹರಣಕ್ಕೆ ಒಳಗಾದವರನ್ನು ಬಿಡಬೇಕಾದರೆ ತಲಾ ₹1 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಪೋಷಕರು ಪುಣೆಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪುಣೆಯ ಪೊಲೀಸರು ಮೊಬೈಲ್ ಟ್ರ್ಯಾಕ್‌ ಮಾಡಿ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಸಿಂಧನೂರು ಸರ್ಕಲ್ ಇನ್‌ಸ್ಪೆಕ್ಟರ್ ವೀರಾರೆಡ್ಡಿ, ಗ್ರಾಮೀಣ ಪೊಲೀಸ್ ಠಾಣೆಯ ಸಬ್‍ಇನ್‌ಸ್ಪೆಕ್ಟರ್ ಮಹ್ಮದ್ ಇಸಾಕ್ ನೇತೃತ್ವದ ತಂಡ ಮತ್ತು ಪುಣೆಯ ಪೊಲೀಸರ ತಂಡ ಜಂಟಿ ಕಾರ್ಯಾಚರಣೆ ನಡೆಸಿತ್ತು.

ಗುಂಡು ಹಾರಿಸುವ ಬೆದರಿಕೆ: ಕುನ್ನಟಗಿ ಗ್ರಾಮದ ಮನೆಯ ಮೇಲೆ ಪೊಲೀಸರ ತಂಡ ದಾಳಿ ನಡೆಸಿದಾಗ, ಅಪಹರಣಕಾರರು ಪಿಸ್ತೂಲ್ ತೋರಿಸಿ ಮನೆಯೊಳಗೆ ಬಂದರೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದರು. ತಕ್ಷಣವೇ ಪೊಲೀಸ್ ಅಧಿಕಾರಿಗಳು ಠಾಣೆಯಿಂದ ಹೆಚ್ಚುವರಿ ಸಿಬ್ಬಂದಿ ಹಾಗೂ ಶಸ್ತ್ರಾಸ್ತ್ರಗಳನ್ನು ತರಿಸಿಕೊಂಡು ಮನೆಯನ್ನು ಸುತ್ತುವರಿದರು. ಬಳಿಕ ಮನೆಯೊಳಗೆ ನುಗ್ಗಿ ಆರೋಪಿಗಳಾದ ರಾಮು ಅಪ್ಪರಾಜು, ದತ್ತ ಶಿವಾಜಿ, ಹರ್ಷಕ ಸುರೇಶ ಪಾಟೀಲ್‍ನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಪಹರಣಕ್ಕೆ ಒಳಗಾಗಿದ್ದ ಸ್ಟಪನ್ ಭಜರಂಗ ಲಾಂಡೆ (23), ಶುಭಂ ಭಜರಂಗ ಲಾಂಡೆ (22), ಕೃಷ್ಣ ಗಜಾನನ ಪಾಂಡ್ರೆ (22), ಓಂಕಾರ ಗಜಾನನ ಪಾಂಡ್ರೆ (20) ಅವರನ್ನು ಪುಣೆಗೆ ಕರೆದೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT