ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಿಳಿಪಾಠ ಹೇಳಲು ಸಭೆಗೆ ಬರಬೇಡಿ: ಆರ್.ಬಸನಗೌಡ ತುರುವಿಹಾಳ

Published : 10 ಸೆಪ್ಟೆಂಬರ್ 2024, 14:10 IST
Last Updated : 10 ಸೆಪ್ಟೆಂಬರ್ 2024, 14:10 IST
ಫಾಲೋ ಮಾಡಿ
Comments

ಮಸ್ಕಿ: ‘ಪ್ರಮುಖ ಇಲಾಖೆ ಅಧಿಕಾರಿಗಳ ಮುಖ್ಯಸ್ಥರ ಪರವಾಗಿ ಯಾವುದೇ ಮಾಹಿತಿ ಇಲ್ಲದೇ ಸಭೆಗೆ ಬಂದು ಗಿಳಿಪಾಠ ಹೇಳುವ ಸಿಬ್ಬಂದಿಯನ್ನು ಹೊರ ಕಳಿಸಿ, ಅನುಮತಿ ಇಲ್ಲದೇ ಗೈರು ಆದ ಅಧಿಕಾರಿಗಳಿಗೆ ನೋಟೀಸ್ ನೀಡಿ’ ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರುವಿಹಾಳ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು ಸಭೆಗೆ ಬಂದಿಲ್ಲ, ಇಲಾಖೆಯ ಪ್ರಮುಖ ಅಧಿಕಾರಿಗಳೆ ಸಭೆಗೆ ಗೈರು ಹಾಜರಾದರೆ ಸಭೆ ಯಾಕೆ ಮಾಡಬೇಕು. ಸಭೆ ರದ್ದು ಮಾಡಿ ಮತ್ತೊಂದು ಸಭೆ ಕರೆದರಾಯಿತು’ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.

‘ಜನರಿಗೆ ಭರವಸೆ ಮೂಡಿಸುವ ಕೆಲಸ ವೈದ್ಯಾಧಿಕಾರಿಗಳು ಮಾಡಬೇಕು. ವೈದ್ಯರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸಮಾಡಬೇಕು’ ಎಂದರು.

‘ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ45 ರಷ್ಟು ಹೆಚ್ಚು ಮಳೆಯಾಗಿದೆ.‌ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಹತ್ತಿಗೆ ನೀರಿನಾಂಶ ಜಾಸ್ತಿಯಾಗಿದೆ, ಮುಂಗಾರಿನಲ್ಲಿ ಶೇ99.87 ಬಿತ್ತನೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ’ ಎಂದು ಕೃಷಿ ಅಧಿಕಾರಿಗಳು ಸಭೆಗೆ ತಿಳಿಸಿದರು. ‘ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆ ಕ್ರಮ ಕೈಗೊಳ್ಳಿ’ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಕಸ್ತೂರಿ ಬಾ ಶಾಲೆಯ ಕಟ್ಟಡ ಉದ್ಘಾಟನೆಯಾಗಿ ತಿಂಗಳುಗಳ ಮೇಲಾಗಿದೆ. ಇದುವರೆಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸದೆ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಸುತ್ತಿದ್ದೀರಿ ಯಾಕೆ ಎಂದು ಮಾನ್ವಿ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕೂಡಲೇ ವಿದ್ಯಾರ್ಥಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ ವರದಿ ಕೊಡಿ ಎಂದರು.

ಖಾಸಗಿ ಶಾಲೆಗಳ ವಾಹನಗಳ ಪರಿಸ್ಥಿತಿಯನ್ನು ತಿಳಿಯಿರಿ. ಸಾರಿಗೆ ಅಧಿಕಾರಿಗಳಿಂದ ತಪಾಸಣೆ ಮಾಡಿಸಿ, ಶಿಕ್ಷಣ ಸಂಸ್ಥೆಗಳೊಂದಿಗೆ ಸಭೆ ಮಾಡಿ ಅಪಘಾತಗಳು ಆಗದಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿಸಿ ಎಂದು ಸೂಚಿಸಿದರು.

ಕಾಮಗಾರಿ ವಿಳಂಬ ಮಾಡುತ್ತಿರುವ ಪಂಚಾಯತ್ ರಾಜ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ, ತಹಶೀಲ್ದಾರ್ ಮಲ್ಲಪ್ಪ ಯರಗೋಳ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮೈಬುಸಾಬ ಮುದ್ದಾಪೂರ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾ.ಪಂ ಅನುಮತಿ ಕಡ್ಡಾಯ: ಮಸ್ಕಿಗೆ ಮೂರು ತಾಲ್ಲೂಕಿನ ಅಧಿಕಾರಿಗಳು ಬರುತ್ತಿದ್ದಾರೆ, ಮೂರು ತಾಲ್ಲೂಕಿನ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಮಸ್ಕಿ ತಾಲ್ಲೂಕಿನ ಒಂದೇ ಬುಕ್‌ಲೆಟ್ ಕೊಡಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಅಧಿಕಾರಿಗಳಿಗೆ ಆದೇಶಿಸಿದರು.

ಪ್ರಮುಖ ಅಧಿಕಾರಿಗಳು ಬೇರೆ ಕೆಲಸ ಇದ್ದರೆ ತಾಲ್ಲೂಕು ಪಂಚಾಯಿತಿ ಅನುಮತಿ ಪಡೆದು ಸಭೆಗೆ ಗೈರಾಗಬೇಕು. ಒಂದು ವೇಳೆ ಅನಧಿಕೃತ ಗೈರಾದರೆ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT