ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ಹಿಂದೆಯೂ ‘ಪೋಕ್ಸೊ’ದಡಿ ಬಂಧಿತನಾಗಿದ್ದ ಇರ್ಫಾನ್

4 ವರ್ಷದ ಮಗು ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧವನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿ
Published 25 ಜುಲೈ 2024, 5:51 IST
Last Updated 25 ಜುಲೈ 2024, 5:51 IST
ಅಕ್ಷರ ಗಾತ್ರ

ಮಾಗಡಿ: ‍ಪಟ್ಟಣದ 4 ವರ್ಷದ ಹೆಣ್ಣುಮಗುವನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪಿ ಇರ್ಫಾನ್ ಖಾನ್, ಹಿಂದೆಯೂ ಪೋಕ್ಸೊ ಕಾಯ್ದೆ ಪ್ರಕರಣದಡಿ ಬಂಧಿತನಾಗಿ ಜೈಲು ಸೇರಿದ್ದ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಿಡುಗಡೆಯಾಗಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗದೆ.

2014ರಲ್ಲಿ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಆಗಲೂ ಸಂಬಂಧಿಕರೊಬ್ಬರ 12 ವರ್ಷದ ಮಗಳ ಮೇಲೆ ಇರ್ಫಾನ್ ಅತ್ಯಾಚಾರ ಎಸಗಿದ್ದ. ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆತನನ್ನು ಬಂಧಿಸಿ, ಕೋರ್ಟ್‌ಗೆ ಆರೋಪಪಟ್ಟಿ ಸಹ ಸಲ್ಲಿಸಿದ್ದರು ಎಂದು ಮಾಗಡಿ ಮತ್ತು ಕುಂಬಳಗೋಡು ಠಾಣೆ ಪೊಲೀಸರು ತಿಳಿಸಿದರು.

2021ರಲ್ಲಿ ಖುಲಾಸೆ: 

ಕೋರ್ಟ್‌ನಲ್ಲಿ 2021ರವರೆಗೆ ಪ್ರಕರಣದ ವಿಚಾರಣೆ ನಡೆದಿತ್ತು. ಸಂತ್ರಸ್ತ ಬಾಲಕಿ ಕಡೆಯವರು ಸಾಕ್ಷಿ ಹೇಳಲು ಕೋರ್ಟ್‌ಗೆ ಗೈರು ಹಾಜರಾಗಿದ್ದರಿಂದ, ಆರೋಪಿ ಪ್ರಕರಣದಿಂದ ಖುಲಾಸೆಯಾಗಿದ್ದ. ಕಾಮುಕನಾಗಿರುವ ಆತನಿಗೆ ಮೊದಲ ಕೃತ್ಯ ಎಸಗಿದಾಗಲೇ ಶಿಕ್ಷೆಯಾಗಿದ್ದರೆ, ಮಾಗಡಿಯ 4 ವರ್ಷದ ಮಗುವಿನ ಜೀವ ಉಳಿಯುತ್ತಿತ್ತು ಎಂದು ಪೊಲೀಸರು ಹೇಳಿದರು.

‘ಕಳ್ಳತನ ಸೇರಿದಂತೆ ಸಣ್ಣಪುಟ್ಟ ಅಪರಾಧಗಳನ್ನು ಎಸಗುತ್ತಿದ್ದ ಆರೋಪಿಗೆ ಮದುವೆಯಾಗಿದ್ದು, ಮಕ್ಕಳು ಸಹ ಇವೆ ಎಂಬುದನ್ನು ವಿಚಾರಣೆಯಲ್ಲಿ ತಿಳಿಸಿದ್ದಾನೆ. ಈತನ ಅಪರಾಧ ಚಟುವಟಿಕೆಗಳನ್ನು ಗಮನಿಸಿದ ಬಳಿಕ ಕುಟುಂಬದವರು ಮನೆಯಿಂದ ಹೊರ ಹಾಕಿರುವ ಸಾಧ್ಯತೆ ಇದ್ದು, ಆತನ ಹಿನ್ನೆಲೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’ ಎಂದು ಮಾಗಡಿ ಉಪ ವಿಭಾಗದ ಡಿವೈಎಸ್ಪಿ ಕೆ.ಎಂ. ಪ್ರವೀಣ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗಲ್ಲು ಶಿಕ್ಷೆಗೆ ಆಗ್ರಹ: 

‘ಕೃತ್ಯದ ಕುರಿತು ಸ್ಥಳೀಯ ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು. ಮಕ್ಕಳ ಮೇಲೆ ಅಮಾನುಷ ಕೃತ್ಯ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಕುರಿತು ಕಾನೂನು ತರಬೇಕು. ಆ ಮೂಲಕ, ಸಮಾಜಕ್ಕೆ ಕಠಿಣ ಸಂದೇಶ ನೀಡಬೇಕು. ಆಗ ಮಾತ್ರ ಕಾಮುಕರಿಗೆ ಭಯ ಬರುತ್ತದೆ’ ಎಂದು ಪುರಸಭೆ ಸದಸ್ಯರೊಬ್ಬರು ಒತ್ತಾಯಿಸಿದರು.

ಮಡುಗಟ್ಟಿದ ದುಃಖ

ಮುದ್ದಿನ ಮಕ್ಕಳನ್ನು ಕಳೆದುಕೊಂಡಿರುವ ಬಡ ಕುಟುಂಬದಲ್ಲಿ ದುಃಖವು ಮಡುಗಟ್ಟಿದೆ. ಮೂವರು ಹೆಣ್ಣು ಮಕ್ಕಳ ಪೈಕಿ ಕೊಲೆಯಾಗಿರುವ ಮಗು ಅಂಗನವಾಡಿಗೆ ಹೋಗುತ್ತಿತ್ತು. ತಂದೆ ಚಾಲಕರಾಗಿ ಕೆಲಸ ಮಾಡುತ್ತಾ ಕುಟುಂಬವನ್ನು ಸಲಹುತ್ತಿದ್ದರು.  ಘಟನೆ ನಡೆದಾಗಿನಿಂದ ಇಬ್ಬರೂ ಊಟ ಬಿಟ್ಟು ಮಗುವಿನ ನೆನಪಿನಲ್ಲೇ ಕಣ್ಣೀರು ಹಾಕುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲೂ ನಮ್ಮ ಸಮಾಜದವರು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಅಲ್ಲಿಗೆ ಮಾಗಡಿಯಿಂದಲೂ ನಮ್ಮ ಸಮಾಜದವರು ಹೋಗಿ ಭಾಗವಹಿಸಿದ್ದಾರೆ. ಇಂತಹ ಹೀನ ಕೃತ್ಯ ಎಸಗಿದವನನ್ನು ಎನ್‌ಕೌಂಟರ್ ಮಾಡಬೇಕು. ಇಲ್ಲದಿದ್ದರೆ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT