ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ₹1.22 ಕೋಟಿ ತರಕಾರಿ ಮಾರುಕಟ್ಟೆ: ಯಾರಿಗೆ ಲಾಭ?

ರಸ್ತೆಬದಿ ಮುಂದುವರೆದ ವ್ಯಾಪಾರ * ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ
ಸುಧೀಂದ್ರ ಸಿ.ಕೆ.
Published 17 ಜುಲೈ 2024, 6:36 IST
Last Updated 17 ಜುಲೈ 2024, 6:36 IST
ಅಕ್ಷರ ಗಾತ್ರ

ಮಾಗಡಿ: ಮಾಗಡಿ ಯೋಜನಾ ಪ್ರಾಧಿಕಾರ 2017ರಲ್ಲಿ ಇಲ್ಲಿಯ ಪೊಲೀಸ್ ಠಾಣಾ ಮುಂಭಾಗದ ಖಾಲಿ ಜಾಗದಲ್ಲಿ ₹1.22 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರಿಗೆ ಅನುಕೂಲಕ್ಕೆ ಬರುತ್ತಿಲ್ಲ.

ಮೊದಲಿನಂತೆ ರಸ್ತೆ ಬದಿಯಲ್ಲಿಯೇ ನಿರಾತಂಕವಾಗಿ ತರಕಾರಿ ವ್ಯಾಪಾರ ಮುಂದುವರೆದಿದೆ. ಇದರಿಂದ ಸಾರ್ವಜನಿಕರು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

ಮಾರುಕಟ್ಟೆಯಲ್ಲಿ 35 ವ್ಯಾಪಾರಸ್ಥರಿಗೆ ಮಾತ್ರ ಅಂಗಡಿ ಇಟ್ಟುಕೊಳ್ಳಲು ಅವಕಾಶವಿದೆ. ಪುರಸಭೆ ಅಂದಾಜಿನ ಪ್ರಕಾರ 300ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಸ್ಥರಿದ್ದಾರೆ. ಹಾಗಾಗಿ ಈ ಮಾರುಕಟ್ಟೆಯಲ್ಲಿ ಯಾರಿಗೆ ಜಾಗ ನೀಡಬೇಕು ಎಂಬುದನ್ನು ಪುರಸಭೆ ನಿಗದಿ ಮಾಡದ ಕಾರಣ ಮಾರುಕಟ್ಟೆ ವ್ಯಾಪಾರಸ್ಥರಿಗೆ ಬಳಕೆಗೆ ಬಾರದಂತಾಗಿದೆ.

ರಾಜಕೀಯ ನಂಟು: ಪುರಸಭೆ ಹಿಂಭಾಗದ ರಸ್ತೆಯಲ್ಲಿ ಈ ಹಿಂದೆ ನಡೆಯುತ್ತಿದ್ದ ತರಕಾರಿ ವ್ಯಾಪಾರದಿಂದ ಪುರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ ಪೊಲೀಸ್ ಠಾಣಾ ಮುಂಭಾಗದ ಖಾಲಿ ಜಾಗದಲ್ಲಿ ವ್ಯಾಪಾರ ಮಾಡುವಂತೆ ತಿಳಿಸಲಾಗಿತ್ತು. ಆಗ ಸ್ಥಳಾಂತರಕ್ಕೆ ಶಾಸಕ ಎಚ್‌.ಸಿ. ಬಾಲಕೃಷ್ಣ ಒಪ್ಪಿಗೆ ಸೂಚಿಸಿದ್ದರು.

ಸೌಲಭ್ಯವಿಲ್ಲದೆ ಸ್ಥಳಾಂತರ ಬೇಡ ಎಂದು ಮಾಜಿ ಶಾಸಕ ಎ.ಮಂಜುನಾಥ್ ವಿರೋಧಿಸಿದ್ದರು. ಈ ಸಂಬಂಧ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಿತ್ತಾಟ ನಡೆದಿತ್ತು. ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದ ಅಧಿಕಾರಿಗಳು ಪೊಲೀಸ್ ಠಾಣಾ ಮುಂಭಾಗದಲ್ಲೇ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದರು.

ಎ.ಮಂಜುನಾಥ್ ಶಾಸಕರಾಗಿದ್ದ ಅವಧಿಯಲ್ಲಿ ಮಾಗಡಿ ಯೋಜನಾ ಪ್ರಾಧಿಕಾರದಿಂದ ಮಾರುಕಟ್ಟೆ ನಿರ್ಮಾಣ ಆಯಿತು. ಜಾಗದ ಕೊರತೆಯಿಂದ 35 ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಹಾಗಾಗಿ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಹಿಂಜರಿದ ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ವ್ಯಾಪಾರ ಮುಂದುವರೆಸುತ್ತಿದ್ದಾರೆ. 

ಈಗ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಮಳೆ ಹಾಗೂ ಬೇಸಿಗೆಯಲ್ಲಿ ಸಮಸ್ಯೆಯಾಗುತ್ತಿದೆ. ಹೊಸ ಮಾರುಕಟ್ಟೆಯಿಂದ ಯಾರಿಗೂ ಪ್ರಯೋಜನ ಇಲ್ಲದಂತಾಗಿದೆ. ಮುಂದೆ ಹೊಸದಾಗಿ ಮಾರುಕಟ್ಟೆ ನಿರ್ಮಾಣ ಮಾಡಿದರೆ ಒಂದೇ ಸೂರಿನಡಿ ಎಲ್ಲಾ ವ್ಯಾಪಾರಿಗಳಿಗೂ ಅವಕಾಶ ಕಲ್ಪಿಸಬೇಕು. ಗ್ರಾಹಕರಿಗೆ ಒಂದೆಡೆ ಹೂವು, ಹಣ್ಣು, ತರಕಾರಿ, ಸೊಪ್ಪು ಸಿಕ್ಕರೆ ಅನುಕೂಲವಾಗುತ್ತದೆ ಎಂಬುದು ವ್ಯಾಪಾರಸ್ಥರ ಬೇಡಿಕೆ.

ವ್ಯಾಪಾರಸ್ಥರಿಲ್ಲದೆ ಖಾಲಿಯಿರುವ ಮಾರುಕಟ್ಟೆ 
ವ್ಯಾಪಾರಸ್ಥರಿಲ್ಲದೆ ಖಾಲಿಯಿರುವ ಮಾರುಕಟ್ಟೆ 
ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಹೂವಿನ ವ್ಯಾಪಾರಸ್ಥರು 
ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಹೂವಿನ ವ್ಯಾಪಾರಸ್ಥರು 
ರಸ್ತೆ ಬದಿಯಲ್ಲಿ ಸೊಪ್ಪು ಮಾರಾಟ 
ರಸ್ತೆ ಬದಿಯಲ್ಲಿ ಸೊಪ್ಪು ಮಾರಾಟ 
ಈಗ ನಿರ್ಮಾಣವಾಗಿರುವ ಮಾರುಕಟ್ಟೆ ಜಾಗ ಚಿಕ್ಕದಾಗಿದ್ದು ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ವ್ಯಾಪಾರಸ್ಥರು ಮಾರುಕಟ್ಟೆಗೆ ಬರಲು ಒಪ್ಪದೆ ಬೀದಿಬದಿಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ.
–ಶಿವರುದ್ರಯ್ಯ, ಪುರಸಭೆ ಮುಖ್ಯಾಧಿಕಾರಿ
ಮಾರುಕಟ್ಟೆಯಿಂದ ಪ್ರಯೋಜನವಿಲ್ಲ ಮಾಜಿ ಶಾಸಕ ಎ.ಮಂಜುನಾಥ ಅವರ ಅವಧಿಯಲ್ಲಿ ಯಾವುದೇ ಯೋಜನೆ ಇಲ್ಲದೆ ಮಾರುಕಟ್ಟೆ ನಿರ್ಮಾಣ ಮಾಡಿದ ಪರಿಣಾಮ ಅನುಕೂಲಕ್ಕೆ ಬಾರದಂತಾಗಿದೆ. ಪುರಸಭೆ ಐಡಿಎಸ್ಎಂಟಿ ಬಡಾವಣೆ ಹರಾಜಿನಲ್ಲಿ ಬರುವ ಹಣ ಹಾಗೂ ಸರ್ಕಾರದ ಶೇ 50 ರಷ್ಟು ಅನುದಾನ ಬಳಸಿಕೊಂಡು ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡುವ ಗುರಿ ಇದೆ.
–ಎಚ್.ಸಿ.ಬಾಲಕೃಷ್ಣ, ಶಾಸಕ 
ಕನಕಪುರ ಮಾರುಕಟ್ಟೆ ಮಾದರಿಯಲ್ಲಿ ನಿರ್ಮಾಣ ಮಾಜಿ ಸಂಸದ ಡಿ.ಕೆ.ಸುರೇಶ್ ಮಾರ್ಗದರ್ಶನದಲ್ಲೇ ಕನಕಪುರದ ಮಾರುಕಟ್ಟೆ ಮಾದರಿಯಲ್ಲಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಗಡಿ ಯೋಜನಾ ಪ್ರಾಧಿಕಾರ ಮಾರುಕಟ್ಟೆ ನಿರ್ಮಾಣ ಮಾಡಿದೆ. ಆದರೆ ಈ ವಿಚಾರವನ್ನು ರಾಜಕೀಯಕ್ಕೆ ತಿರುಚಿ ವ್ಯಾಪಾರಸ್ಥರು ಇಲ್ಲಿಗೆ ಬರದಂತೆ ತಡೆದಿದ್ದಾರೆ.
–ಎ.ಮಂಜುನಾಥ್, ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT