ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ಬೈಕ್‌ ಡಿಕ್ಕಿ: ಚಿರತೆಗೆ ಗಂಭೀರ ಗಾಯ, ಸವಾರನ ಕಾಲು ಮುರಿತ

ರಸ್ತೆ ದಾಟುತ್ತಿದ್ದ ಚಿರತೆಗೆ ಬೈಕ್ ಡಿಕ್ಕಿ, ಜೋಡುಗಟ್ಟೆ ಬಳಿ ಘಟನೆ
Published 27 ಜೂನ್ 2024, 15:43 IST
Last Updated 27 ಜೂನ್ 2024, 15:43 IST
ಅಕ್ಷರ ಗಾತ್ರ

ಮಾಗಡಿ (ರಾಮನಗರ): ರಸ್ತೆ ದಾಟುತ್ತಿದ್ದ ಚಿರತೆಗೆ ವೇಗವಾಗಿ ಬಂದ ಬೈಕ್‌ ಡಿಕ್ಕಿ ಹೊಡೆದಿದ್ದರಿಂದ ಚಿರತೆಯು ಗಂಭೀರವಾಗಿ ಗಾಯಗೊಂಡಿದ್ದು, ಬೈಕ್ ಸವಾರನ ಕಾಲು ಮುರಿದಿದೆ. ತಾಲ್ಲೂಕಿನ ಸಾವನದುರ್ಗ ಅರಣ್ಯ ಪ್ರದೇಶ ವ್ಯಾಪ್ತಿಯ ಜೋಡುಗಟ್ಟೆಯ ರಾಮನಗರ–ಮಾಗಡಿ ಮುಖ್ಯರಸ್ತೆಯಲ್ಲಿ ಗುರುವಾರ ಸಂಜೆ 7.30ರ ಸುಮಾರಿಗೆ ಘಟನೆ ನಡೆದಿದೆ.

ಕುದೂರಿನ ಕುಮಾರ್ ಅವರ ಕಾಲು ಮುರಿದಿದೆ. ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕುಮಾರ್ ಅವರು ಹೊಸದಾಗಿ ಖರೀದಿಸಿದ್ದ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ನಲ್ಲಿ ರಾಮನಗರದಿಂದ ತಮ್ಮೂರಿನತ್ತ ಹೊರಟ್ಟಿದ್ದರು. ಜೋಡುಗಟ್ಟೆ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಾಮನಗರ–ಮಾಗಡಿ ಮುಖ್ಯರಸ್ತೆಯಲ್ಲಿ ಹೋಗುವಾಗ, ಬಲಭಾಗದಿಂದ ಚಿರತೆ ರಸ್ತೆ ದಾಟಲು ಮುಂದಾಗಿದೆ. ಇದರಿಂದ ಗಾಬರಿಗೊಂಡ ಕುಮಾರ್‌ ಬೈಕ್ ನಿಯಂತ್ರಣ ಕಳೆದುಕೊಂಡಿದ್ದು, ಚಿರತೆಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರೂ ಒಂದೊಂದು ಕಡೆಗೆ ಬಿದ್ದಿದ್ದಾರೆ.

ಅದೇ ಮಾರ್ಗದಲ್ಲಿ ಆಟೊದಲ್ಲಿ ಹೋಗುತ್ತಿದ್ದ ಗುಡ್ಡಹಳ್ಳಿಯ ವೆಂಕಟೇಶ್ ಎಂಬುವರು, ರಸ್ತೆಯಲ್ಲಿ ಬಿದ್ದಿದ್ದ ಕುಮಾರ್ ಮತ್ತು ಚಿರತೆಯನ್ನು ಗಮನಿಸಿ ತಕ್ಷಣ ಆಂಬುಲೆನ್ಸ್‌, ಪೊಲೀಸ್ ಹಾಗೂ ಅರಣ್ಯ ಇಲಾಖೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಆಂಬುಲೆನ್ಸ್‌ನಲ್ಲಿ ಕುಮಾರ್‌ ಅವರನ್ನು ಮಾಗಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿರತೆಯು ಜೋರಾಗಿ ಉಸಿರು ಬಿಡುತ್ತಾ ನಿತ್ರಾಣ ಸ್ಥಿತಿಯಲ್ಲಿ ರಸ್ತೆಯಲ್ಲೇ ಬಿದ್ದಿತ್ತು ಎಂದು ವೆಂಕಟೇಶರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತೆವಳಿಕೊಂಡೇ ಅರಣ್ಯದೊಳಗೆ ಹೋದ ಚಿರತೆ

‘ಗಾಯಗೊಂಡು ರಸ್ತೆಯಲ್ಲೇ ಬಿದ್ದಿದ್ದ ಚಿರತೆಯ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಆದರೂ, ಕೆಲ ಹೊತ್ತಿನ ನಂತರ ತೆವಳಿಕೊಂಡೇ ಅರಣ್ಯದೊಳಕ್ಕೆ ಹೋಗಿದೆ. ಅದಕ್ಕೆ ಬಿದ್ದಿರುವ ಗಾಯಕ್ಕೆ ಹೆಚ್ಚೆಂದರೆ 300 ಮೀಟರ್ ಹೋಗಿರುವ ಸಾಧ್ಯತೆ ಇದೆ. ಸ್ಥಳಕ್ಕೆ ಅರಿವಳಿಕೆ ತಜ್ಞರನ್ನು ಕರೆಯಿಸಲಾಗಿದೆ. ಚಿರತೆಯನ್ನು ಹುಡುಕಿ ಅರಿವಳಿಕೆ ಚುಚ್ಚುಮದ್ದು ನೀಡಿ, ಚಿಕಿತ್ಸೆ ನೀಡಲಾಗುವುದು’ ಎಂದು ಆರ್‌ಎಫ್‌ಒ ಚೈತ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT