ಶೇ 17 ಪಾವತಿ ಹೊರೆ; ಪತ್ರ ಬರೆಯಲು ಸೂಚನೆ
‘ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಸರ್ಕಾರ ಕಾಯಂ ನೌಕರರಿಗೆ ಶೇ 17ರಷ್ಟು ವೇತನ ಹೆಚ್ಚಳ ಮಾಡಿದೆ. ಈ ಮೊತ್ತವನ್ನು ನಗರಸಭೆಯೇ ತನ್ನ ಸ್ವಂತ ಸಂಪನ್ಮೂಲದಿಂದ ನೌಕರರಿಗೆ ಭರಿಸಬೇಕು ಎಂಬ ಅಧಿಸೂಚನೆಯನ್ನು ಇಲಾಖೆ ಹೊರಡಿಸಿದೆ’ ಎಂಬ ವಿಷಯವನ್ನು ಅಧೀಕ್ಷಕ ಶಿವಣ್ಣ ಅವರು ಸಭೆಯ ಗಮನಕ್ಕೆ ತಂದರು. ಅದಕ್ಕೆ ಶೇಷಾದ್ರಿ ಅವರು ‘ನಗರಸಭೆ ಆರ್ಥಿಕವಾಗಿ ಅಷ್ಟೊಂದು ಶಕ್ತವಾಗಿಲ್ಲ. ಅಷ್ಟು ಮೊತ್ತ ಪಾವತಿಸಬೇಕಾದರೆ ತಿಂಗಳಿಗೆ ಸುಮಾರು ₹7 ಲಕ್ಷದಿಂದ ₹8 ಲಕ್ಷದಂತೆ ವರ್ಷಕ್ಕೆ ಅಂದಾಜು ₹1 ಕೋಟಿ ಬೇಕಾಗಬಹುದು. ಈ ಕುರಿತು ಸಂಬಂಧಪಟ್ಟವರಿಗೆ ಪತ್ರ ಬರೆದು ಇಲ್ಲಿನ ಆರ್ಥಿಕ ಸ್ಥಿತಿಯನ್ನು ಮನವರಿಕೆ ಮಾಡಿಕೊಡಿ’ ಎಂದು ಸಲಹೆ ನೀಡಿದರು. ‘ನಗರಸಭೆಯ ವಾರ್ಷಿಕ ಆದಾಯ ₹5.5 ಕೋಟಿಯಾಗಿದ್ದರೆ ನಿರ್ವಹಣಾ ವೆಚ್ಚವೇ ವರ್ಷಕ್ಕೆ ₹6 ಕೋಟಿ ಇದೆ. ಹೀಗಿರುವಾಗ ಶೇ 17ರಷ್ಟು ಪಾವತಿ ಹೊರೆಯನ್ನು ನಗರಸಭೆ ಭರಿಸುವ ಸ್ಥಿತಿಯಲ್ಲಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.