ನಗರಾಭಿವೃದ್ಧಿಗೆ ಪತ್ರ ಬರೆದಿದ್ದ ಡಿಎಂಎ
2023–24ನೇ ಸಾಲಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಕೊರತೆಯಾಗಿರುವ ವೇತನಾನುದಾನ ಬಿಡುಗಡೆಗೆ ಕೋರಿ, ಪೌರಾಡಳಿತ ನಿರ್ದೇಶನಾಲಯವು (ಡಿಎಂಎ) ನಗರಾಭಿವೃದ್ಧಿ ಇಲಾಖೆಗೆ (ಯು.ಡಿ) ಪತ್ರ ಬರೆದಿತ್ತು. ಎಸ್‌ಎಫ್‌ಸಿ ಸಾಮಾನ್ಯ ಆವರ್ತನಿಧಿಯಲ್ಲಿ ಖಾಲಿ ಹುದ್ದೆಗಳಿಗೆ ಹಂಚಿಕೆಯಾಗಿರುವ ₹120 ಕೋಟಿಯಲ್ಲಿ, ಕೊರತೆಯಾಗಿರುವ ವೇತನಾನುದಾನ ₹11.76 ಕೋಟಿಯನ್ನು ಬಿಡುಗಡೆ ಮಾಡುವಂತೆ ಡಿಎಂಎ ನಗರಾಭಿವೃದ್ಧಿ ಇಲಾಖೆಗೆ ಮನವಿ ಮಾಡಿತ್ತು. ಯು.ಡಿ.ಯು ಆರ್ಥಿಕ ಇಲಾಖೆಗೆ ಪ್ರಸ್ತಾವ ಕಳಿಸಿತ್ತು. ಅದನ್ನು ಇಲಾಖೆ ತಿರಸ್ಕರಿಸಿತ್ತು. ರಾಜ್ಯ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಪೌರ ಕಾರ್ಮಿಕರ ಸಂಬಳಕ್ಕೆ ಸಂಬಂಧಿಸಿದಂತೆ ಸರ್ಕಾರದ ಎಸ್‌ಎಫ್‌ಸಿ ಮುಕ್ತಿನಿಧಿಯ ಪಾಲಿನ ಮಿತಿ ಮೀರಲಿದೆ. ಹಾಗಾಗಿ, ಸ್ಥಳೀಯ ಸಂಸ್ಥೆಗಳೇ ವೇತನದ ಹಣಕಾಸು ಭರಿಸಿಕೊಳ್ಳಬೇಕು ಎಂದು ಸೂಚಿಸಿತ್ತು. ಈ ಕುರಿತು, ನಗರಾಭಿವೃದ್ಧಿ ಇಲಾಖೆಯು ಪೌರಾಡಳಿತ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿತ್ತು. ಅದರ ಬೆನ್ನಲ್ಲೇ, ಈ ಸುತ್ತೋಲೆ ಹೊರಬಿದ್ದಿದೆ.