ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ: ವಾಣಿಜ್ಯ ಅಂಗಡಿಗಳ ಮರು ಹರಾಜಿಗೆ ಒತ್ತಾಯ

Published : 8 ಅಕ್ಟೋಬರ್ 2024, 4:33 IST
Last Updated : 8 ಅಕ್ಟೋಬರ್ 2024, 4:33 IST
ಫಾಲೋ ಮಾಡಿ
Comments

ಮಾಗಡಿ: ಪುರಸಭೆಯ ಬಾಕಿ ಇರುವ ವಾಣಿಜ್ಯ ಅಂಗಡಿಗಳನ್ನು ಕೂಡಲೇ ಮರು ಹರಾಜು ಮಾಡಬೇಕು. ಇದರಿಂದ ಪುರಸಭೆಗೆ ಆದಾಯ ಹೆಚ್ಚುತ್ತದೆ ಎಂದು ಪುರಸಭಾ ಸದಸ್ಯರು ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ಮನವಿ ಮಾಡಿದರು.

ಪಟ್ಟಣದ ಪುರಸಭೆಯ ಅಧ್ಯಕ್ಷ ರಮ್ಯಾ ನರಸಿಂಹಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ,  ಆರ್‌ಆರ್ ರಸ್ತೆಯಲ್ಲಿ ಹೊಸದಾಗಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲಾಗುವುದು. ಉಳಿಕೆ ಇರುವ 31 ಅಂಗಡಿಗಳನ್ನು ಮರು ಹರಾಜು ಮಾಡಲು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಪ್ರಕ್ರಿಯೆ ಆರಂಭಿಸಬೇಕು ಎಂದರು. ಮುಂದಿನ ತಿಂಗಳ ಒಳಗಾಗಿ ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಹರಾಜು ಪ್ರಕ್ರಿಯೆಗೆ ಒಳಪಡಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರಾವಸೂಲಿ ಮಾಡದಿದ್ದರೆ ಸಂಬಳ ಕಟ್: ಪುರಸಭೆ ನಿರ್ವಹಣೆ ಮಾಡಲು ಅಧಿಕಾರಿಗಳು ಕರಾವಸುಲಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಇಲ್ಲವಾದರೆ ಅಂತಹ ಅಧಿಕಾರಿಗಳ ಸಂಬಳವನ್ನು ಕಟ್ ಮಾಡಲಾಗುವುದು ಎಂದು ಬಾಲಕೃಷ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಘನ ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ: ಪಟ್ಟಣದ ತಿರುಮಲೆ ಹತ್ತಿರವಿರುವ ಘನತ್ಯಾಜ್ಯ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಇರುವ ಯಂತ್ರವನ್ನು ಇಲ್ಲಿಯವರೆಗೂ ಉಪಯೋಗಿಸಿಲ್ಲ. ಈಗ ಮತ್ತೆ ಹೊಸದಾಗಿ ಯಂತ್ರಗಳನ್ನು ತರಿಸುತ್ತೇವೆ ಎಂದು ತಿಳಿಸಿದ್ದಾರೆ. ಸರಿಯಾಗಿ ಘನತ್ಯಾಜ್ಯ ನಿರ್ವಹಣೆ ಮಾಡದಿದ್ದರೆ ಎಷ್ಟು ಲಕ್ಷ ಹಣ ಬಂದರೂ ಪ್ರಯೋಜನವಿಲ್ಲ. ಅಧಿಕಾರಿಗಳು ಈ ಬಗ್ಗೆ ಸರಿಯಾದ ಕ್ರಮವನ್ನು ವಹಿಸಬೇಕು ಎಂದು ಸದಸ್ಯರಾದ ಎಂ.ಎನ್. ಮಂಜುನಾಥ್, ಅಶ್ವಥ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪತ್ರಿಕಾ ಭವನ ಹಾಗೂ ಕನ್ನಡ ಭವನಕ್ಕೆ ನಿವೇಶನ ನೀಡಲು ತೀರ್ಮಾನ: ಪುರಸಭಾ ವ್ಯಾಪ್ತಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮತ್ತು ಕನ್ನಡ ಭವನಕ್ಕೆ ನಿವೇಶನ ನೀಡಲು ಸಭೆಯಲ್ಲಿ ಶಾಸಕ ಬಾಲಕೃಷ್ಣ ಒಪ್ಪಿಗೆ ಸೂಚಿದರು.  

ವಿದ್ಯುತ್ ಚಿತಗಾರಕ್ಕೆ ಚಿರಶಾಂತಿ ವಾಹನ ತರಲು ತೀರ್ಮಾನ ಮಾಡಲಾಗಿದೆ. ವಾಹನ ಮತ್ತು ಅಂತಿಮ ವಿಧಿವಿಧಾನಗಳನ್ನು ಮಾಡಲು ₹ 3 ಸಾವಿರ ಅಥವಾ ₹ 2‌ ಸಾವಿರ ನಿಗಧಿ ಮಾಡಬೇಕೆಂದು ಸದಸ್ಯರು ಮನವಿ ಮಾಡಿದರು. ಅಧಿಕಾರಿಗಳಿಗೆ ಕಂಪ್ಯೂಟರ್ ತರಬೇತಿ ನೀಡಬೇಕು. ಅಧಿಕಾರಿಗಲಿಗೆ ಖಟ್ಟಾಯವಾಗಿ ಕಂಪ್ಯೂಟರ್‌ ಬರಬೇಕು ಎಂದು ಶಾಸಕರು ತಿಳಿಸಿದರು.

ಹೊಂಬಾಳಮ್ಮನ ಪೇಟೆಯ ಅಂಗನವಾಡಿ ಕಟ್ಟಡ ದುರಸ್ತಿಗೆ ಬಂದಿದ್ದು, ಮಕ್ಕಳನ್ನು ಬಾಡಿಗೆ ಮನೆಯಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಸಭೆಯಲ್ಲಿ ಸದಸ್ಯ ರಾಮು ಮನವಿ ಮಾಡಿದರು. ವಿವಿಧ ವಿಷಯಗಳ ಬಗ್ಗೆ ಬೆಳಗ್ಗೆಯಿಂದ ಸಂಜೆವರೆಗೂ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಪುರಸಭಾ ಅಧ್ಯಕ್ಷ ರಮ್ಯಾ ನರಸಿಂಹ, ಉಪಾಧ್ಯಕ್ಷ ರಿಯಾಜ್ ಪುರಸಭೆ ಮುಖ್ಯ ಅಧಿಕಾರಿ ಶಿವರುದ್ರಯ್ಯ ಸೇರಿದಂತೆ ಪುರಸಭಾ ಸದಸ್ಯರುಗಳು ಹಾಗೂ ಅಧಿಕಾರಿ ವರ್ಗದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT