ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಮ್ಯೂಸಿಕಲ್‌ ಚೇರ್‌ 

Published : 6 ಅಕ್ಟೋಬರ್ 2024, 23:30 IST
Last Updated : 6 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ಬೆಕ್ಕಣ್ಣ ಬಿಟ್ಟೂಬಿಡದೆ ದಸರಾ ಕುಸ್ತಿ ಪಂದ್ಯಾವಳಿಯನ್ನು ನೋಡುತ್ತಿತ್ತು.

‘ನಮ್ಮ ಮಂತ್ರಿ, ಶಾಸಕರಿಗೂ ದಸರಾ ಕುಸ್ತಿ ಪಂದ್ಯ ಇಡಬೇಕಿತ್ತು. ಬರೇ ಕುಸ್ತಿಪಟುಗಳೇ ಎದಕ್ಕ ಕುಸ್ತಿ ಆಡಬೇಕು?’ ಎಂದಿತು.‌

‘ಮಂತ್ರಿ, ಶಾಸಕರ ಅಖಾಡನೇ ಬೇರೆ. ಮೈಮಣ್ಣಾಗದೆ ಪ್ರತಿದಿನ ಕುಸ್ತಿ ಆಡೋ ಪಟುಗಳು ಅವರು’ ಎಂದೆ.

‘ಅದೂ ಖರೇ. ಯಾರು ಯಾವಾಗ ಯಾವ ಪಟ್ಟು ಹಾಕ್ತಾರಂತ ಆ ಚಾಮುಂಡೇಶ್ವರಿಗೂ ಗೊತ್ತಾಗಲ್ಲ’ ಎಂದು ನಕ್ಕಿತು.

‘ಆದ್ರೂ ಮಂತ್ರಿ, ಶಾಸಕರಿಗೆ ಏನರೆ ಒಂದು ದಸರಾ ಪಂದ್ಯ ಇಡಬಕು. ಅವರು ಜನಸಾಮಾನ್ಯರ ಪ್ರತಿನಿಧಿಗಳು. ಅವರು ದಸರಾ ಪಂದ್ಯದಲ್ಲಿ ಭಾಗವಹಿಸಿದರು ಅಂದ್ರೆ ಜನಸಾಮಾನ್ಯರೇ ಭಾಗವಹಿಸಿದಂಗೆ, ಹೌದಿಲ್ಲೋ’ ಎಂಬ ವಾದ ಮುಂದಿಟ್ಟಿತು.

‘ಮ್ಯೂಸಿಕಲ್‌ ಚೇರ್‌ ಸ್ಪರ್ಧೆ ಇಡಬೌದು. ಆದ್ರೆ ಕುರ್ಚಿ ಸ್ಪರ್ಧೆನೂ ಪ್ರತಿದಿನ ನಡೆದೈತಿ’.

‘ಹೌದೌದು... ಪಾಪ... ನಮ್‌ ಸಿದ್ದು ಅಂಕಲ್ಲು ರಾತ್ರಿನೂ ಒಂದೋ ಕುರ್ಚಿವಳಗೆ ಕುಂತೇ ನಿದ್ದಿ ಮಾಡಬಕು, ಇಲ್ಲಾ ಕುರ್ಚಿ ಕಾಲಿಗೆ ಹಗ್ಗ ಕಟ್ಟಿ, ಕೈಯಾಗೆ ಹಗ್ಗ ಹಿಡದು ಮಲಗಬಕು ಅನ್ನೂ ಹಂಗೆ ಆಗೈತಿ’ ಎಂದು ನಿಟ್ಟುಸಿರುಬಿಟ್ಟಿತು.

‘ಮುಖ್ಯಮಂತ್ರಿ ಕುರ್ಚಿ ಅಂದ್ರ ಅಂತಿಂಥಾ ಕುರ್ಚಿ ಅಲ್ಲಲೇ... ಅದೊಂಥರಾ ಮಾಯಾ ಕುರ್ಚಿ ಇದ್ದಂಗೆ. ಆ ಕುರ್ಚಿವಳಗೆ ಕೂರಬೇಕು ಅನ್ನೂದು ಎಲ್ಲ ಮಂತ್ರಿಗಳ ಕನಸುಮನಸಿನಾಗೆ ಇರತೈತಿ’ ಎಂದೆ.

‘ಅರಮನೆವಳಗೆ ಚಿನ್ನದ ಸಿಂಹಾಸನ ಐತಂತೆ,  ವರ್ಷಕ್ಕೊಂದು ಸಲ ಖಾಸಗಿ ದರ್ಬಾರು ಮಾಡತಾರಂತೆ. ಸದ್ಯ... ನಮ್ಮ ಮಂತ್ರಿಗಳು ಆ ಸಿಂಹಾಸನದ ಮ್ಯಾಗೆ ಕೂರೋ ಕನಸು ಕಾಣತಾ ಇಲ್ಲ!’

‘ಅದು ಒಡೆಯರ್‌ ಮನೆತನಕ್ಕೆ ಸೇರಿದ್ದು. ಹಿಂಗಾಗಿ ಆ ಸಿಂಹಾಸನದ ಕನಸು ಕಾಣೋ ಧೈರ್ಯ ಮಾಡಂಗಿಲ್ಲ’.

‘ಹಂಗಾದ್ರೆ ಅದು ಪ್ರಧಾನಿ ಕುರ್ಚಿ ಇದ್ದಂಗೆ. ಸದ್ಯಕ್ಕೆ ಮೋದಿಮಾಮ ಬಿಟ್ಟರೆ ಮತ್ತ್ಯಾರೂ ಕೂರಂಗಿಲ್ಲ! ಮ್ಯೂಸಿಕಲ್‌ ಚೇರ್‌ ಆಟಕ್ಕೆ ಮುಖ್ಯಮಂತ್ರಿ ಕುರ್ಚಿ ಇಡಬೌದು, ಪ್ರಧಾನಿ ಕುರ್ಚಿ ಇಡಂಗಿಲ್ಲ!’ ಎಂದು ಮುಸಿಮುಸಿ ನಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT