ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನೆ ದಾಳಿ: ಮೃತಪಟ್ಟ ಕುಟುಂಬಕ್ಕೆ ₹15 ಲಕ್ಷ ಚೆಕ್‌ ಪರಿಹಾರ ನೀಡಿದ ಸಚಿವ ಖಂಡ್ರೆ

ಆನೆ ದಾಳಿ
Published 9 ಜುಲೈ 2024, 4:58 IST
Last Updated 9 ಜುಲೈ 2024, 4:58 IST
ಅಕ್ಷರ ಗಾತ್ರ

ಕನಕಪುರ: ವನ್ಯಜೀವಿಗಳು ಮತ್ತು ಮನುಷ್ಯರ ನಡುವೆ ನಿರಂತರ ಸಂಘರ್ಷವಾಗುತ್ತಿದ್ದು ಕಾಡಾನೆಗಳು ಶಾಶ್ವತವಾಗಿ ಹೊರಬರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಜೀವಿ ಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿ ಮುತ್ತುರಾಯನದೊಡ್ಡಿ ಗ್ರಾಮದಲ್ಲಿ ಆನೆದಾಳಿಯಿಂದ ಮೃತಪಟ್ಟ ವೀರಭದ್ರ ಕುಟುಂಬಕ್ಕೆ $ 15 ಲಕ್ಷ ಪರಿಹಾರದ ಚೆಕ್‌ನ್ನು ಮೃತರ ಕುಟುಂಬಕ್ಕೆ ನೀಡಿ ಮಾತನಾಡಿದರು.

ರಾಮನಗರ ಜಿಲ್ಲೆ ಮತ್ತು ಕನಕಪುರ ತಾಲ್ಲೂಕು ಹೆಚ್ಚು ಕಾಡು ಪ್ರದೇಶದಿಂದ ಆವೃತವಾಗಿದ್ದು ಕಾಡಾನೆಗಳು ರೈತರ ಜಮೀನಿಗೆ ದಾಳಿ ನಡೆಸಿ ರೈತರ ಜೀವ ಮತ್ತು ಜೀವನಕ್ಕೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.

ಕಾಡು ಪ್ರಾಣಿಗಳ ತಡೆಗೆ ಸೋಲಾರ್‌ ಪೆನ್ಸಿಂಗ್‌ ಮತ್ತು ರೈಲ್ವೆ ಬ್ಯಾರಿಕೇಡ್‌ ಅಳವಡಿಸಲು ಕ್ರಮ ಕೈಗೊಳ್ಳಲು ಈಗಾಗಲೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದು ಶೀಘ್ರವಾಗಿ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

ಅರಣ್ಯದಿಂದ ಹೊರಬಂದು ದಾಂದಲೆ ಮಾಡುವ ಪುಂಡಾನೆಗಳನ್ನು ಗುರುತಿಸಿ ಅವುಗಳನ್ನು ಸೆರೆಹಿಡಿದು ಮತ್ತೆ ಅರಣ್ಯದೊಳಗೆ ಬಿಡಲು ತಂಡವನ್ನು ರಚಿಸಲಾಗಿದೆ. ಅದಲ್ಲದೆ ಕಾಡು ಪ್ರಾಣಿಗಳ ತಡೆಗೆ ಇನ್ನೂ ಅನೇಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆನೆ ದಾಳಿಯಿಂದ ಮೃತಪಟ್ಟಿರುವ ಸಂತ್ರಸ್ತ ಕುಟುಂಬಕ್ಕೆ ಪರಿಹಾರವನ್ನು ನೀಡಿದ್ದು ಮೃತರ ಪತ್ನಿ ಹೆಸರಲ್ಲಿ ಬ್ಯಾಂಕ್‌‌ ಖಾತೆ ಇಲ್ಲದಿರುವುದರಿಂದ ಚೆಕ್‌ ನೀಡಿದ್ದು ಶೀಘ್ರವಾಗಿ ಬ್ಯಾಂಕ್‌ ಅಕೌಂಟ್‌ ಮಾಡಿಸಿ ಹಣ ಪಡೆದುಕೊಳ್ಳುವಂತೆ ತಿಳಿಸಿ, ಇಲಾಖೆಯಿಂದ ದೊರೆಯುವ ಬೇರೆ ಸವಲತ್ತುಗಳನ್ನು ಕೊಡಿಸುವುದಾಗಿ ತಿಳಿಸಿದರು.

ಅರಣ್ಯ ಇಲಾಖೆಯಿಂದ ರೈತರಿಗೆ ನೀಡುವ ಸಸಿಗಳ ಬೆಲೆಯನ್ನು ಹೆಚ್ಚಿಸಿದ್ದು ಇದರಿಂದ ಅರಣ್ಯೀಕರಣಕ್ಕೆ ಹಿನ್ನಡೆಯಾಗುತ್ತಿದೆ ಎಂದು ಮಾದ್ಯಮದವರು ಕೇಳಿದಾಗ ಇಲಾಖೆಯಿಂದ ಎಲ್ಲೆಲ್ಲಿ ಸಸಿಗಳನ್ನು ಬೆಳಸಲಾಗುತ್ತಿದೆ ಎಂದು ಪರಿಶೀಲಿಸಿ ಅಧಿಕಾರಿಗಳ ಜತೆ ಮಾತನಾಡಿ ದರ ಕಡಿಮೆ ಮಾಡಲು ಯತ್ನಿಸುವುದಾಗಿ ಹೇಳಿದರು.

ಸಂಸದ ಡಿ.ಕೆ.ಸುರೇಶ್‌, ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವರು ಮೊದಲಿಗೆ ಕನಕಪುರದಲ್ಲಿರುವ ಸಂಸದರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿ ನಂತರ ಮುತ್ತರಾಯನದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಆನೆ ದಾಳಿಯಿಂದ ಮೃತಪಟ್ಟ ವೀರಭದ್ರಯ್ಯ ಅವರ ಕುಟುಂಬಕ್ಕೆ ಪರಿಹಾರ ನೀಡಿದರು.

ಸಚಿವರು ಸಂಸದ ಡಿ.ಕೆ.ಸುರೇಶ್‌ ಅವರೊಂದಿಗೆ ಮುತ್ತರಾಯನದೊಡ್ಡಿಯಿಂದ ಹೊಸ ಕಬ್ಬಾಳು ಗ್ರಾಮಕ್ಕೆ ತೆರಳಿ ಆನೆದಾಳಿಯಿಂದ ಮೃತಪಟ್ಟ ಕಾಳಯ್ಯ ಅವರ ಮನೆಗೆ ಭೇಟಿ ನೀಡಿ ಕಾಳಯ್ಯ ಅವರ ಪತ್ನಿ ಬರಗಮ್ಮ ಅವರಿಗೆ $ 15 ಲಕ್ಷ ಪರಿಹಾರದ ಚೆಕ್‌ ವಿತರಣೆ ಮಾಡಿ ಕುಟುಂಬಕ್ಕೆ ಶಾಂತ್ವಾನ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT