ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೊಪ್ಪಗನಹಳ್ಳಿ: ಕೆರೆ ಒತ್ತುವರಿ ಜಾಗ ತೆರವು

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತೆರವುಗೊಳಿಸಿದ ಕಂದಾಯ ಇಲಾಖೆ
Published 16 ಜುಲೈ 2024, 5:20 IST
Last Updated 16 ಜುಲೈ 2024, 5:20 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಕಸಬಾ ಹೋಬಳಿಯ ತೊಪ್ಪಗನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಕೆರೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಒತ್ತಾಯದ ಮೇರೆಗೆ ಸೋಮವಾರ ಸರ್ವೇ ನಡೆಸಿ ಒತ್ತುವರಿ ತೆರವು ಮಾಡಿದರು. ಗ್ರಾಮದ ರಾಯಸಂದ್ರ 196 ಸರ್ವೇ ನಂಬರ್‌ನ ಕೆರೆಯ 36 ಗುಂಟೆ ಒತ್ತುವರಿ ಜಾಗವನ್ನು ಕಂದಾಯ ಅಧಿಕಾರಿ ತಂಗರಾಜು ಸರ್ವೇ ಮಾಡಿಸಿ ಒತ್ತುವರಿ ಗುರುತಿಸಿದರು.

ಗ್ರಾಮದ ಉಪಯೋಗಕ್ಕೆ ಬಿಟ್ಟಿದ್ದ ಕಟ್ಟೆಯ ಜಾಗವನ್ನು ಗ್ರಾಮದ ಭೈರಹನುಮಯ್ಯ ಕುಟುಂಬದವರು ಒತ್ತುವರಿ ಮಾಡಿಕೊಂಡಿದ್ದದ್ದರು. ಅದನ್ನು ತೆರವುಗೊಳಿಸಿ ಕೆರೆ ಪ್ರದೇಶದ ಸರ್ವೇ ಮಾಡಿ ಬಂದೋಬಸ್ತ್ ಮಾಡಿಸಬೇಕು ಎಂದು ಗ್ರಾಮಸ್ಥರು ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆ ಮೇರೆಗೆ ಹಿಂದೆ ಸರ್ವೇ ಇಲಾಖೆ ಗ್ರಾಮಸ್ಥರ ಸಮಕ್ಷಮದಲ್ಲಿ ಒತ್ತುವರಿ ಜಾಗದ ಗಡಿ ಗುರುತಿಸಿತ್ತು.

ಆದರೆ, ಜಾಗವನ್ನು ಕಂದಾಯ ಅಧಿಕಾರಿಗಳು ವಶಕ್ಕೆ ಪಡೆದು ಹದ್ದುಬಸ್ತು ಮಾಡಿರಲಿಲ್ಲ. ಹಾಗಾಗಿ, ಒತ್ತುವರಿದಾರರು ಅದೇ ಜಾಗದಲ್ಲಿ ಉಳುಮೆ ಮಾಡುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮದ ಮುಖಂಡರಾದ ರಾಮಚಂದ್ರ, ಕಾಂತರಾಜು, ಪುಟ್ಟರಾಮು, ರಾಜು, ದೊಡ್ಡರಾಜು ಮೊದಲಾದವರು ತಹಶೀಲ್ದಾರ್‌ ಭೇಟಿ ಮಾಡಿ, ಒತ್ತುವರಿಯಾಗಿ ಗಡಿ ಗುರುತಿಸಿದ್ದ ಜಾಗ ರಕ್ಷಣೆ ಮಾಡುವಂತೆ ಒತ್ತಾಯಿಸಿದ್ದರು.

ಆದರೆ, ತಹಶೀಲ್ದಾರ್ ಸ್ಪಂದಿಸದೆ ನಿರ್ಲಕ್ಷ್ಯ ಮಾಡಿದ್ದರು. ಆಗ ಗ್ರಾಮಸ್ಥರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು. ಕೂಡಲೇ ಕೆರೆ ಜಾಗ ರಕ್ಷಿಸುವಂತೆ ಡಿ.ಸಿ ತಹಶೀಲ್ದಾರ್‌ಗೆ ಸೂಚಿಸಿದ್ದರು. ಅದ ಬೆನ್ನಲ್ಲೇ ಕಂದಾಯ ಅಧಿಕಾರಿಗಳು, ಸರ್ವೇ ಇಲಾಖೆ, ಪೊಲೀಸ್ ಹಾಗೂ ಪಂಚಾಯತಿ ಅಧಿಕಾರಿಗಳ ಸಮಮ್ಮುಖದಲ್ಲಿ ಒತ್ತುವರಿ ತೆರವು ಕಾರ್ಯಚರಣೆ ನಡೆಸಿದರು.

ಒತ್ತುವರಿಯಾಗಿದ್ದ 36 ಗುಂಟೆ ಜಾಗವನ್ನು ದಾಖಲೀಕಕರಿಸಿ, ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಗ್ರಾಮ ಪಂಚಾಯಿತಿಯವರಿಗೆ ಹಸ್ತಾಂತರಿಸಿ  ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದರು.

‘ಸಾರ್ವಜನಿಕವಾಗಿ ಬಳಕೆಯಾಗುತ್ತಿದ್ದ ಕೆರೆಯ ಜಾಗವನ್ನು ಗ್ರಾಮದ ಭೈರ ಹನುಮಯ್ಯ ಕುಟುಂಬದವರು ಮುಚ್ಚಿ ಒತ್ತುವರಿ ಮಾಡಿಕೊಂಡಿದ್ದರು. ರಕ್ಷಣೆ ಮಾಡುವಂತೆ ತಹಶೀಲ್ದಾರ್ ಗಮನಕ್ಕೆ ತಂದಾಗ ಅವರು ಸ್ಪಂದಿಸಲಿಲ್ಲ. ಹಾಗಾಗಿ, ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೆವು. ತಕ್ಷಣ ಸ್ಪಂದಿಸಿದ ಅವರು,  ಒತ್ತುವರಿ ತೆರವಿಗೆ ಸೂಚನೆ ನೀಡಿದರರು. ಅದರಂತೆ ಇಂದು ತೆರವು ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದೆ’ ಎಂದು ಗ್ರಾಮದ ರಾಮಚಂದ್ರ ಸಂತಸ ವ್ಯಕ್ತಪಡಿಸಿದರು.

‘ಒತ್ತುವರಿ ಮಾಡಿದರೆ ಪ್ರಕರಣ’

‘ಕೆರೆ ಒತ್ತುವರಿಯಾಗಿರುವ ಜಾಗವನ್ನು ರಕ್ಷಣೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಅದರಂತೆ ಸರ್ವೇ ಇಲಾಖೆ ಅಧಿಕಾರಿಗಳು ಪೊಲೀಸರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಮಕ್ಷಮದಲ್ಲಿ ಇಂದು ತೆರವು ಮಾಡಿದ್ದೇವೆ. ಜಾಗವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ.  ಜಾಗವನ್ನು ಮುಂದೆ ಯಾರಾದರೂ ಒತ್ತುವರಿ ಮಾಡಲು ಪ್ರಯತ್ನಿಸಿದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಕಂದಾಯ ನಿರೀಕ್ಷಕ ತಂಗರಾಜು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT