ರಾಮನಗರ: ಸಪ್ತ ಋಷಿಗಳ ತಾಣವಾದ ರಾಮದೇವರ ಬೆಟ್ಟದಲ್ಲಿ ಸದ್ಯ ಶ್ರಾವಣ ಮಾಸದ ಚಟುವಟಿಕೆಗಳು ಗರಿಗದರಿವೆ.

ರಣಹದ್ದುಗಳ ಸಂರಕ್ಷಣಾ ತಾಣವಾದ ಈ ಬೆಟ್ಟ ಧಾರ್ಮಿಕ ಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಚಿತ್ರಕೂಟ ಎಂದು ಖ್ಯಾತಿಯಾದ ರಾಮಗಿರಿಯಲ್ಲಿ ಶ್ರಾವಣ ಮಾಸದಲ್ಲಿ ಪ್ರತಿ ಶನಿವಾರದಂದು ರಾಮಗಿರಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 7ರಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಅದರಲ್ಲೂ ಕಡೆಯ ಎರಡು ವಾರಗಳಲ್ಲಿ ಇಲ್ಲಿ ಭಕ್ತರ ದಂಡೇ ನೆರೆಯಲಿದೆ. ರಾಮಗಿರಿ, ರಾಮತೀರ್ಥ ಎಂದೆಲ್ಲ ಕರೆಯಲ್ಪಡುವ ಈ ಬೆಟ್ಟಕ್ಕೆ ಶ್ರಾವಣ ಮಾಸದಲ್ಲಿ ದೂರದೂರುಗಳಿಂದಲೂ ಸಾವಿರಾರು ಭಕ್ತರು ಭೇಟಿ ಕೊಡುತ್ತಾ ಬಂದಿದ್ದಾರೆ. ಮಕ್ಕಳಾದವರು ದೇವರಲ್ಲಿ ಹರಕೆ ಹೊತ್ತು ಬೇಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಸಪ್ತ ಋಷಿ ಮಂಡಲ: ಪಟ್ಟಾಭಿರಾಮ ದೇಗುಲದ ಎದುರಿನಲ್ಲಿ ಏಳು ಬೃಹತ್ ಕಲ್ಲುಗಳನ್ನು ಒಳಗೊಂಡ ದೊಡ್ಡದಾದ ಬಂಡೆ ಇದೆ. ಈ ಏಳು ಕಲ್ಲುಗಳೂ ಸಪ್ತ ಋಷಿಗಳ ಸಂಕೇತ ಎಂದು ನಂಬಲಾಗಿದೆ. ವಶಿಷ್ಠ, ಕಶ್ಯಪ, ಅತ್ರಿ, ಭಾರಧ್ವಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮುನಿಗಳು ಇಲ್ಲಿ ಕೊಳದಲ್ಲಿ ಮಿಂದು ತಪಸ್ಸಿಗೆ ಕುಳಿತು ಇಲ್ಲಿಯೇ ಕಲ್ಲಾದರು. ಆ ಕಲ್ಲುಗಳೇ ಈ ಸಪ್ತ ಋಷಿ ಮಂಡಲ ಎಂದು ಹೇಳಲಾಗುತ್ತದೆ.

ಹೀಗೊಂದು ಐತಿಹ್ಯ: ಪಟ್ಟಾಭಿರಾಮ ದೇಗುಲದಲ್ಲಿ ಏಕಶಿಲೆಯಲ್ಲಿ ಕೆತ್ತಲಾಗಿರುವ, ಶ್ರೀರಾಮ ಆಸೀನರಾಗಿರುವ ಮೂರ್ತಿ ಇದೆ. ರಾಮನ ಎಡದಲ್ಲಿ ಅವನ ತೊಡೆಯ ಮೇಲೆ ಸೀತೆ ಕುಳಿತಿದ್ದು, ಬಲಭಾಗದಲ್ಲಿ ಲಕ್ಷ್ಮಣ ನಿಂತಿದ್ದರೆ, ಕೆಳಗೆ ವಿಧೇಯನಾದ ಆಂಜನೇಯ ಕುಳಿತಿರುವ ಚಿತ್ರಣವನ್ನು ಈ ಕಪ್ಪುಶಿಲೆಯ ಸುಂದರ ಮೂರ್ತಿ ಒಳಗೊಂಡಿದೆ.

‘ಈ ಮೂರ್ತಿಯ ಹಿಂದೆಯೂ ಒಂದು ಐತಿಹ್ಯವಿದೆ. ರಾಮನ ಪಟ್ಟಾಭಿಷೇಕದ ತರುವಾಯ ರಾಮ ವಿಗ್ರಹವನ್ನು ಕಿಷ್ಕಿಂದೆಯಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ ಸುಗ್ರೀವ ಕೊಂಡೊಯ್ಯುತ್ತಿದ್ದ ಸಂದರ್ಭ ರಾಮದೇವರ ಬೆಟ್ಟದಲ್ಲಿ ಸೂಕರಾಸುರ ಎಂಬ ರಾಕ್ಷಸ ತಡೆದು ನಿಲ್ಲಿಸಿದನಂತೆ. ಆಗ ಸುಗ್ರೀವ ಮೂರ್ತಿಯನ್ನು ಕೆಳಗಿಟ್ಟು, ಯುದ್ಧ ಆರಂಭಿಸಿ ರಾಕ್ಷಸ ಸಂಹಾರ ಮಾಡಿದರಂತೆ. ಬಳಿಕ ಮೂರ್ತಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದಾಗ ಅದು ಮೇಲೇಳಲಿಲ್ಲ. ಆಗ ಅಶರೀರ ವಾಣಿಯು ಕೇಳಿಸಿ, ಇಲ್ಲಿಯೇ ಮೂರ್ತಿ ಪ್ರತಿಷ್ಠಾಪಿಸುವಂತೆ ಆಜ್ಞಾಪಿಸಿತಂತೆ. ಅದರಂತೆ ಸುಗ್ರೀವ ಈ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಿದರು’ ಎಂದು ಇಲ್ಲಿನ ಅರ್ಚಕ ನಾಗರಾಜ ಭಟ್ ವಿವರಣೆ ನೀಡುತ್ತಾರೆ.

ಕೆಂಪೇಗೌಡರ ಕುರುಹು: ರಾಮದೇವರ ಬೆಟ್ಟವು ಹಲವು ಶತಮಾನಗಳಿಂದಲೂ ಹಲವು ರಾಜರ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿದೆ. ಆದರೆ ಇಲ್ಲಿನ ದೇಗುಲಗಳು ನಾಡಪ್ರಭು ಕೆಂಪೇಗೌಡರು ಹಾಗೂ ಅವರ ವಂಶಸ್ಥರ ಕಾಲದಲ್ಲಿ ಹೆಚ್ಚು ಅಭಿವೃದ್ಧಿಗೊಂಡವು ಎಂದು ಹೇಳಲಾಗುತ್ತದೆ.

ಬೆಟ್ಟದಲ್ಲಿ ಪಟ್ಟಾಭಿರಾಮ ದೇಗುಲದ ಜೊತೆಗೆ ರಾಮೇಶ್ವರ, ಗಣಪತಿ, ಆಂಜನೇಯ, ವೇಣುಗೋಪಾಲಸ್ವಾಮಿ ಮೊದಲಾದ ದೇವರ ಸನ್ನಿಧಿಗಳಿವೆ. ಅಂತೆಯೇ ಅಷ್ಟತೀರ್ಥಗಳು ಇಲ್ಲಿವೆ.

ಇಲ್ಲಿನ ಹೊನ್ನಕುಂಬಿ ಅಥವಾ ಧನಕುಂಬಿ ಪರ್ವತದಲ್ಲಿ ಕೆಂಪೇಗೌಡರಿಗೆ ಏಳು ಕೊಪ್ಪರಿಗೆಯಷ್ಟು ಧನ–ಆಭರಣ ಸಿಕ್ಕಿದಂತೆ. ಅದರಿಂದಲೇ ಅವರು ಈ ದೇಗುಲಗಳನ್ನು ಅಭಿವೃದ್ಧಿಪಡಿಸಿದರು. ಉಳಿದ ಹಣದಿಂದ ಬೆಂಗಳೂರು ನಗರವನ್ನು ಕಟ್ಟಿದರು ಎಂದು ಹೇಳಲಾಗುತ್ತದೆ.

ಪ್ರತಿ ಶ್ರಾವಣದಂದು ವಿಶೇಷ ಕಾರ್ಯಕ್ರಮಗಳ ಜೊತೆಗೆ ಕಾರ್ತೀಕ ಮಾಸದಲ್ಲಿ ಲಕ್ಷ ದೀಪೋತ್ಸವ ಹಾಗೂ ಪ್ರತಿ ಸೋಮವಾರ ವಿಶೇಷ ಪೂಜೆ ನಡೆಯುತ್ತದೆ. ಇದಲ್ಲದೆ ಶ್ರೀರಾಮನವಮಿ, ಶಿವರಾತ್ರಿ, ಹನುಮ ಜಯಂತಿ, ರಾಮಾನುಜಾಚಾರ್ಯರ ಜಯಂತಿ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ.

ಕಾಗೆ ಕಾಣದ ಬೆಟ್ಟ
ರಾಮದೇವರ ಬೆಟ್ಟದಲ್ಲಿ ಹುಡುಕಿದರೂ ಒಂದು ಕಾಗೆ ಕಾಣದು. ಇದರ ಹಿಂದೆಯೂ ಒಂದು ಕಥೆ ಇದೆ. ರಾಮ–ಸೀತೆಯರು ಇಲ್ಲಿ ವನವಾಸದಲ್ಲಿದ್ದ ಸಂದರ್ಭ ಇಲ್ಲಿನ ಕೊಳದಲ್ಲಿ ಸ್ನಾನ ಮಾಡುತ್ತಿದ್ದರಂತೆ. ಆ ಸಂದರ್ಭ ಇಂದ್ರನ ಮಗ ಜಯಂತ ಕಾಕಾಸುರನ ರೂಪದಲ್ಲಿ ಬಂದು ಸೀತೆಯ ಎದೆ ಕುಕ್ಕಿದನಂತೆ. ಇದರಿಂದ ಕುಪಿತನಾದ ರಾಮ ಕೊಳದಲ್ಲಿನ ದರ್ಬೆಯನ್ನೇ ಬಾಣವನ್ನಾಗಿ ಮಾರ್ಪಡಿಸಿ ಬಿಟ್ಟನಂತೆ. ಅದು ಕಾಕಾಸುರನ ಬೆನ್ನು ಹತ್ತಲು ಆತ ಭಯಭೀತನಾಗಿ ಕಡೆಗೆ ಶ್ರೀರಾಮನೆಡೆಗೆ ಓಡಿಬಂದು ಜೀವಭಿಕ್ಷೆ ಬೇಡಿದನಂತೆ. ಆಗ ರಾಮ ಆತನ ಕಣ್ಣನ್ನು ಮಾತ್ರ ಕಿತ್ತು ಕಳುಹಿಸಿದನಂತೆ. ಅಂದಿನಿಂದ ಇಲ್ಲಿ ಕಾಗೆಗಳ ಸುಳಿವಿಲ್ಲ ಎಂದು ಹಿರಿಯರು ಹೇಳುತ್ತಾರೆ.

ಎಂದೂ ಬತ್ತದ ರಾಮತೀರ್ಥ
ದೇಗುಲಕ್ಕೆ ಅಂಟಿಕೊಂಡಂತೆಯೇ ಸುಂದರವಾದ ಕಲ್ಯಾಣಿ ಇದೆ. ರಾಮತೀರ್ಥ ಎಂದೇ ಕರೆಯುವ ಈ ಕಲ್ಯಾಣಿಯಲ್ಲಿ ಬೆಟ್ಟಗುಡ್ಡಗಳಿಂದ ಇಳಿದುಬಂದ ನೀರು ಸಂಗ್ರಹಗೊಳ್ಳುತ್ತಿದೆ. ಇದು ಬತ್ತಿದ್ದನ್ನು ಎಂದೂ ಕಂಡಿಲ್ಲ, ಅಂತೆಯೇ ಇದರ ಆಳವನ್ನು ಅರಿತವರು ಇಲ್ಲ ಎನ್ನುತ್ತಾರೆ ಸ್ಥಳೀಯರು.

ಕಲ್ಯಾಣಿ ನಿರ್ಮಾಣದ ಹಿಂದೆಯೂ ಒಂದು ಕಥೆ ಇದೆ. ರಾಮ ಮತ್ತು ಸೀತೆಯರು ತಮ್ಮ ವನವಾಸದ ಸಂದರ್ಭದಲ್ಲಿ ಈ ಕಾಡಿನಲ್ಲಿ ಓಡಾಡಿದ್ದರಂತೆ. ಒಮ್ಮೆ ಸೀತೆಗೆ ನೀರಿನ ಅಗತ್ಯ ಬಿದ್ದು, ಎಲ್ಲಿಯೂ ನೀರು ಸಿಗಲಿಲ್ಲ. ಆಗ ರಾಮ ನೆಲಕ್ಕೆ ಬಾಣ ಬಿಟ್ಟು ಈ ಕಲ್ಯಾಣಿಯನ್ನು ಸೃಜಿಸಿದ ಎಂದು ಹೇಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.