ಶುಕ್ರವಾರ, 5 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರೋಹಳ್ಳಿ | ಉದುರಿ ಬೀಳುವ ಗಾರೆ: ಭಯದಲ್ಲಿ ಮಕ್ಕಳು

ಗೋವಿಂದರಾಜು ವಿ. 
Published 3 ಜುಲೈ 2024, 5:00 IST
Last Updated 3 ಜುಲೈ 2024, 5:00 IST
ಅಕ್ಷರ ಗಾತ್ರ

ಹಾರೋಹಳ್ಳಿ: ಬಿರುಕು ಬಿಟ್ಟ ಕಟ್ಟಡ, ಮಳೆಗಾಲದಲ್ಲಿ ಸೋರುವ ಚಾವಣಿ. ಆಗೊಮ್ಮೆ ಈಗೊಮ್ಮೆ ಉದುರಿ ಬೀಳುವ ಚಾವಣಿಯ ಗಾರೆ. ಇದು ಸರ್ಕಾರಿ ಪ್ರೌಢಶಾಲೆಯ ಶೋಚನೀಯ ಸ್ಥಿತಿಯಾಗಿದೆ.

ಹಾರೋಹಳ್ಳಿ ತಾಲ್ಲೂಕಿನ ದೊಡ್ದ ಮರಳವಾಡಿ ಸರ್ಕಾರಿ ಪ್ರೌಢಶಾಲೆ ಕೊಠಡಿಗಳು ಶಿಥಿಲಗೊಂಡಿದ್ದು, ಅಲ್ಲಲ್ಲಿ ಕಟ್ಟಡ ಬಿರುಕು ಬಿಟ್ಟಿದೆ. ಜತೆಗೆ ಕಟ್ಟಡದ ಚಾವಣಿಯ ಗಾರೆ ಆಗೊಮ್ಮೆ, ಈಗೊಮ್ಮೆ ಕುಸಿದು ಬೀಳುತ್ತಿರುವುದು ಮಾಮೂಲಾಗಿದೆ. ಕೊಠಡಿಗಳು ಅಪಾಯ ಆಹ್ವಾನಿಸುತ್ತಿವೆ. ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕೆಂದು ಶಾಲೆಗಳಿಗೆ ಹತ್ತು-ಹಲವಾರು ಸೌಲಭ್ಯಗಳನ್ನು ಸರ್ಕಾರ ಒದಗಿಸಿಕೊಡುತ್ತಿದ್ದರೂ ಕೊಠಡಿಗಳ ನಿರ್ಮಾಣಕ್ಕೆ ಗಮನಹರಿಸಿದಂತೆ ಕಾಣುತ್ತಿಲ್ಲ.

ದುರಸ್ತಿ ಕಾಣದ ಶಾಲಾ ಕೊಠಡಿಗಳು: ಪ್ರತಿ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಈ ಶಾಲೆ ಉತ್ತಮ ಫಲಿತಾಂಶ ಪಡೆಯುತ್ತಿದೆ. ಶಾಲೆಯಲ್ಲಿ 135 ಮಕ್ಕಳಿದ್ದು 11 ಕೊಠಡಿಗಳಿವೆ. ಇವುಗಳನ್ನು 1991ರಲ್ಲಿ ನಿರ್ಮಾಣ ಮಾಡಿದ್ದು ಸುಮಾರು 33 ವರ್ಷ ಆಗಿದೆ. ಕಟ್ಟಡಗಳು ಶಿಥಿಲಗೊಂಡಿವೆ.

ಬಿರುಕು ಬಿಟ್ಟ ಗೋಡೆ ಚಾವಡಿ: ದೊಡ್ದ ಮರಳವಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿ ಕೊಠಡಿಗಳ ಗೋಡೆ ಹಾಗೂ ಚಾವಡಿಗಳು ಬಿರುಕು ಬಿಟ್ಟಿವೆ. ಮಳೆ ಬಂದರೆ ಸಾಕು ಈ ಶಾಲೆಯ ಸ್ಥಿತಿ ಹೇಳತೀರದು.

ಮಳೆಗಾಲದಲ್ಲಿ ತೊಂದರೆ: ಮಳೆಗಾಲದಲ್ಲಿ ಮೇಲ್ಬಾಗದ ಚಾವಡಿಗಳಿಂದ ಸುರಿಯುವ ಮಳೆಯಿಂದ ಶಾಲೆಯ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದಾಗಿ ಮಕ್ಕಳು ಕುಳಿತುಕೊಳ್ಳಲು ಭಯಪಡುವಂತಾಗಿದೆ.

ಹೆಚ್ಚುವರಿ ಕೊಠಡಿ ಬೇಕು: ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚುವರಿ 4 ಕೊಠಡಿಗಳು ಬೇಕಾಗಿದೆ. ದೈಹಿಕ, ಅಡುಗೆ, ಪುಸ್ತಕ ಇತರೆ ಆಟೋಪಕರಣ ಹಾಗೂ ಪೀಠೋಪಕರಣ ವಸ್ತುಗಳು ಹಾಗೂ ಕಂಪ್ಯೂಟರ್ ತರಗತಿಗೆ, ಸಿಬ್ಬಂದಿಗೆ ಹೆಚ್ಚುವರಿ ಕೊಠಡಿಗಳ ಅವಶ್ಯಕತೆಯಿದ್ದು ಸರ್ಕಾರಿ ಶಾಲೆಗಳ ಕಡೆಗೆ ಹೆಚ್ಚಿನ ಗಮನಹರಿಸಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಬೇಕು.

ಅರ್ಧಕ್ಕೆ ನಿಂತ ಕಾಮಗಾರಿ: ಸರ್ಕಾರಿ ಪ್ರೌಢಶಾಲೆ ಬಾಲಕ ಹಾಗೂ ಬಾಲಕಿಯ ಶೌಚಾಲಯ ಹಳೆಯದಾಗಿದ್ದು ಈಗ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಶೌಚಾಲಯದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ.

ಸರ್ಕಾರಿ ಪ್ರೌಢಶಾಲೆಯ ಶಿಥಿಲ ಕೊಠಡಿಗಳ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೆ ತಂದಿದ್ದು ಮುಂದಿನ ದಿನಗಳಲ್ಲಿ ಅನುದಾನ ನೀಡಿ ಪ್ರೌಢಶಾಲೆಯ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ

ರಾಮಕೃಷ್ಣ, ಎಸ್‌ಡಿಎಂಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT