ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತ್ಯಾಚಾರ ಪ್ರಕರಣ: BJP ಶಾಸಕ ಮುನಿರತ್ನರನ್ನು ಮತ್ತೆ ಬಂಧಿಸಲು ಸಜ್ಜಾದ ಪೊಲೀಸರು

Published : 19 ಸೆಪ್ಟೆಂಬರ್ 2024, 19:41 IST
Last Updated : 19 ಸೆಪ್ಟೆಂಬರ್ 2024, 19:41 IST
ಫಾಲೋ ಮಾಡಿ
Comments

ರಾಮನಗರ: ಜಾತಿನಿಂದನೆ ಮತ್ತು ಜೀವ ಬೆದರಿಕೆ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಜಾಮೀನು ಮಂಜೂರಾದ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ಬಂಧಿಸಲು ಕಗ್ಗಲಿಪುರ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಬಳಿ ಸಜ್ಜಾಗಿ ನಿಂತಿದ್ದಾರೆ.

ಮುನಿರತ್ನ ಸೇರಿದಂತೆ ಏಳು ಮಂದಿ ವಿರುದ್ಧ ಕಗ್ಗಲಿಪುರ ಪೊಲೀಸ್‌ ಠಾಣೆಯಲ್ಲಿ ಬುಧವಾರ ತಡರಾತ್ರಿ ಬಿಜೆಪಿಯ ಕಾರ್ಯಕರ್ತೆಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದಾರೆ. ಜಾತಿನಿಂದನೆ ಪ್ರಕರಣದಲ್ಲಿಗುರುವಾರ ಸಂಜೆ ಮುನಿರತ್ನ ಅವರಿಗೆ ಜಾಮೀನು ಸಿಕ್ಕಿರುವುದರಿಂದ ಜೈಲಿನಿಂದ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಲು ತಡವಾಗುವ ಸಾಧ್ಯತೆ ಇದೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುತ್ತಲೇ ಮುನಿರತ್ನ ಅವರನ್ನು ಬಂಧಿಸಲು ಕಗ್ಗಲಿಪುರ ಪೊಲೀಸರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಮೊದಲ ಸಂತ್ರಸ್ತೆ ದೂರು ಕೊಟ್ಟ ಬೆನ್ನಲ್ಲೇ ಮತ್ತೊಬ್ಬ ಸಂತ್ರಸ್ತೆ ಸಹ ಠಾಣೆಗೆ ಬಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಹಾಗಾಗಿ, ಇಬ್ಬರನ್ನೂ ಪ್ರಕರಣದ ಸಂತ್ರಸ್ತೆಯರನ್ನಾಗಿ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.

ಈ ಇಬ್ಬರು ಸಂತ್ರಸ್ತೆಯರನ್ನೂ ಗುರುವಾರ ಸಂಜೆಯೇ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ಕಲಂ 164ರ ಅಡಿ ಸಂತ್ರಸ್ತರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೈದ್ಯಕೀಯ ಪರೀಕ್ಷೆ: ಪ್ರಕರಣದ ತನಿಖೆ ಚುರುಕುಗೊಳಿಸಿರುವ ಡಿವೈಎಸ್‌ಪಿ ದಿನಕರ ಶೆಟ್ಟಿ ನೇತೃತ್ವದ ತಂಡ ಸಂತ್ರಸ್ತೆಯರನ್ನು  ರಾಜರಾಜೇಶ್ವರಿ ನಗರ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದೆ. ಅತ್ಯಾಚಾರ ನಡೆದ ರೆಸಾರ್ಟ್‌ನಲ್ಲಿ ಸ್ಥಳ ಮಹಜರು ನಡೆಸಿದೆ ಎಂದು ಮೂಲಗಳು ಹೇಳಿವೆ.

ತನ್ನ ಮೇಲೆ ವಿವಿಧೆಡೆ ಅತ್ಯಾಚಾರ ನಡೆದಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಆ ಪೈಕಿ ಕಗ್ಗಲಿಪುರ ಠಾಣೆ ವ್ಯಾಪ್ತಿಯ ರೆಸಾರ್ಟ್‌ನಲ್ಲಿ ಸಹ ಅತ್ಯಾಚಾರ ನಡೆದಿದೆ. ಉಳಿದಂತೆ ಬೆಂಗಳೂರಿನ ವಿವಿಧೆಡೆ ಮತ್ತು ಚಿಕ್ಕಬಳ್ಳಾಪುರದಲ್ಲಿ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲೇ ಅತ್ಯಾಚಾರ ಕೃತ್ಯ ಹೆಚ್ಚು ಬಾರಿ ನಡೆದಿದೆ. ಹಾಗಾಗಿ ಕಗ್ಗಲಿಪುರ ಪ್ರಕರಣವನ್ನು ಬೆಂಗಳೂರಿನ ಠಾಣೆಗೆ ವರ್ಗಾಯಿಸುವ ಕುರಿತು ಮೇಲಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. 

12 ಕಲಂ ಅಡಿ ಪ್ರಕರಣ: ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿರುವ ಮತ್ತು ಬಿಜೆಪಿಯಲ್ಲಿ ಸಕ್ರಿಯರಾಗಿರುವ ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆಯು ಶಾಸಕ ಮುನಿರತ್ನ ಸೇರಿದಂತೆ ಏಳು ಮಂದಿ ವಿರುದ್ಧ ಅತ್ಯಾಚಾರ ಮತ್ತು ಹನಿಟ್ರ್ಯಾಪ್‌ಗೆ ತನ್ನನ್ನು ಬಳಸಿಕೊಳ್ಳಲಾಗಿದೆ ಎಂದು ದೂರು ನೀಡಿದ್ದರು.

ಪ್ರಕರಣದಲ್ಲಿ ಮುನಿರತ್ನ ಹೊರತುಪಡಿಸಿ ಅವರ ಗನ್‌ಮ್ಯಾನ್‌ ವಿಜಯಕುಮಾರ್, ಸುಧಾಕರ, ಕಿರಣ್‌ ಕುಮಾರ್‌, ಲೋಹಿತ್ ಗೌಡ, ಮಂಜುನಾಥ ಹಾಗೂ ಲೋಕಿ ಆರೋಪಿಗಳಾಗಿದ್ದಾರೆ. ಮುನಿರತ್ನ ಆಣತಿಯಂತೆ ಹನಿಟ್ರ್ಯಾಪ್‌ಗೆ ನೆರವಾಗುತ್ತಿದ್ದ ಆರೋಪಿಗಳು, ಕೆಲವರ ಮೇಲೆ ಅತ್ಯಾಚಾರ ಎಸಗಿರುವ ಆರೋಪವಿದೆ. ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ.

ಆರೋಪಿಗಳ ವಿರುದ್ಧ ಪೊಲೀಸರು 354(ಎ) (ಲೈಂಗಿಕ ದೌರ್ಜನ್ಯ), 354(ಸಿ) (ಆಕ್ಷೇಪಾರ್ಹ ಚಿತ್ರ ತೆಗೆಯುವುದು), 376(2) (ಮಹಿಳೆ ಮೇಲೆ ಬಲವಂತವಾಗಿ ನಿರಂತರ ಅತ್ಯಾಚಾರ), 308 (ಹತ್ಯೆ ಯತ್ನ), 406 (ನಂಬಿಕೆ ದ್ರೋಹ), 384 (ಸುಲಿಗೆ), 120 (ಬಿ) (ಕ್ರಿಮಿನಲ್ ಪಿತೂರಿ), 504 (ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು), 506 (ಜೀವ ಬೆದರಿಕೆ), 149 (ಅಕ್ರಮವಾಗಿ ಗುಂಪು ಸೇರುವುದು), ಐ.ಟಿ ಕಾಯ್ದೆ 66 (ಕಂಪ್ಯೂಟರ್ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ಸಾಧನ ಬಳಸಿಕೊಂಡು ಯಾವುದೇ ವ್ಯಕ್ತಿಗೆ ಆಕ್ಷೇಪಾರ್ಹ ಮಾಹಿತಿ ಕಳುಹಿಸುವುದು), 66 (ಇ) (ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೆ ಯಾವುದೇ ವ್ಯಕ್ತಿಯ ಖಾಸಗಿ ಚಿತ್ರವನ್ನು ಅವನ ಅಥವಾ ಅವಳ ಒಪ್ಪಿಗೆ ಇಲ್ಲದೆ ಸೆರೆ ಹಿಡಿಯುವುದು, ಪ್ರಕಟಿಸುವುದು ಅಥವಾ ರವಾನಿಸಿ ಆ ವ್ಯಕ್ತಿಯ ಗೌಪ್ಯತೆ ಉಲ್ಲಂಘಿಸುವುದು) ಸೇರಿದಂತೆ ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೊಂದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ರಾಮನಗರ ಡಿವೈಎಸ್‌ಪಿಗೆ ತನಿಖೆಯ ಹೊಣೆ ವಹಿಸಲಾಗಿದೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ
– ಕಾರ್ತಿಕ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗರ

ಒಂದೂವರೆ ವರ್ಷದ ಹಿಂದೆಯೇ ದೂರು ಕೊಟ್ಟಿದ್ದ ಮಹಿಳೆ

ಮುನಿರತ್ನ ವಿರುದ್ಧ ಒಂದೂವರೆ ವರ್ಷದ ಹಿಂದೆಯೇ ಸಂತ್ರಸ್ತ ಮಹಿಳೆ ಅತ್ಯಾಚಾರ ದೂರು ಕೊಟ್ಟಿದ್ದರು. ಆದರೆ ಜೀವಭಯದಿಂದಾಗಿ ವಿಚಾರಣೆಗೆ ಹಾಜರಾಗದೆ ಸುಮ್ಮನಾಗಿದ್ದರು ಎಂಬುದು ಗೊತ್ತಾಗಿದೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದ ಸಂತ್ರಸ್ತೆ ಕಗ್ಗಲಿಪುರ ಸಮೀಪದ ರೆಸಾರ್ಟ್‌ನಲ್ಲಿ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ದೂರನ್ನು ಅಲ್ಲಿನ ಸಿಬ್ಬಂದಿಗೆ ಕೊಟ್ಟು ಹೋಗಿದ್ದರು.

ದೂರು ಪರಿಶೀಲಿಸಿದ್ದ ಪೊಲೀಸರು ವಿಚಾರಣೆಗೆ ಬರುವಂತೆ ಸಂತ್ರಸ್ತೆಗೆ ನೋಟಿಸ್ ಕಳಿಸಿದ್ದರು. ವಿಷಯ ಗೊತ್ತಾಗುತ್ತಿದ್ದಂತೆಯೇ ಸಂತ್ರಸ್ತೆಗೆ ಕರೆ ಮಾಡಿದ್ದ ಮುನಿರತ್ನ ‘ಈ ವಿಷಯದಲ್ಲಿ ನೀನೇನಾದರೂ ಮುಂದುವರಿದರೆ ನಿನ್ನ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ನಿನ್ನ ಹಾಗೂ ಕುಟುಂಬದ ಮರ್ಯಾದೆ ತೆಗೆಯುತ್ತೇನೆ. ನಿನ್ನನ್ನು ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಸಿದ್ದರು. ಹಾಗಾಗಿ ಪೊಲೀಸರ ನೋಟಿಸ್ ಕೈ ಸೇರಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

‘ಬಂಧನದಲ್ಲಿರುವ ಮುನಿರತ್ನ ಮತ್ತೆ ಹೊರಗೆ ಬಂದರೆ ನನಗೆ ಮತ್ತು ಕುಟುಂಬಕ್ಕೆ ತೊಂದರೆ ಕೊಡುತ್ತಾರೆ. ಹಾಗಾಗಿ ನನ್ನ ಮೇಲೆ ವಿವಿಧೆಡೆ ನಡೆಸಿರುವ ಅತ್ಯಾಚಾರದ ಕುರಿತು ಠಾಣೆಗೆ ಬಂದು ದೂರು ಕೊಟ್ಟಿದ್ದೇನೆ. ನನಗಾಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವ ಜೊತೆಗೆ ರಕ್ಷಣೆ ಕೂಡ ಒದಗಿಸಬೇಕು’ ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ.

ವಿಡಿಯೊ ತೋರಿಸಿ ವಿಕೃತಿ: ತನ್ನ ತಂಡ ಹನಿಟ್ರ್ಯಾಪ್ ಮಾಡುವ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ನೇರವಾಗಿ ನೋಡಿಕೊಳ್ಳುವಂತೆ ಮುನಿರತ್ನ ವ್ಯವಸ್ಥೆ ಮಾಡಿದ್ದರು. ಕೆಲಸ ಮುಗಿದ ಬಳಿಕ ಕಚೇರಿಗೆ ನನ್ನನ್ನು ಕರೆಸಿ ಆ ದೃಶ್ಯಗಳನ್ನು ಟಿ.ವಿ.ಯಲ್ಲಿ ಹಾಕಿ ತೋರಿಸಿ ಸಂತೋಷಪಡುತ್ತಿದ್ದರು ಎಂದು ಮಹಿಳೆ ದೂರಿದ್ದಾರೆ.

‘ಹೊಯ್ಸಳ’ ಪೊಲೀಸರೇ ಬೆಂಗಾವಲು!

ತನ್ನ ಎದುರಾಳಿ ಮಹಿಳೆಯೊಬ್ಬರ ಮರ್ಯಾದೆ ತೆಗೆಯಬೇಕಿದೆ. ಅವರನ್ನ ಟ್ರ್ಯಾಪ್ ಮಾಡಬೇಕು ಎಂದು ಮುನಿರತ್ನ ಸಂತ್ರಸ್ತೆಗೆ ಸೂಚಿಸಿದ್ದರು. ಅದಕ್ಕಾಗಿ ಸಂತ್ರಸ್ತೆ ಸೇರಿದಂತೆ ಇತರ ಆರೋಪಿಗಳ ತಂಡ ರಚಿಸಿದ್ದರು. ಮಹಿಳೆಯನ್ನು ಪರಿಚಯಿಸಿಕೊಂಡಿದ್ದ ತಂಡ ನಂತರ ಅವರನ್ನು ಪಾರ್ಟಿ ನೆಪದಲ್ಲಿ ಬೆಂಗಳೂರಿನ ವಿವಿಧೆಡೆಗೆ ಕರೆದೊಯ್ದಿತ್ತು. ಚಿಕ್ಕಬಳ್ಳಾಪುರಕ್ಕೆ ಟ್ರಿಪ್ ನೆಪದಲ್ಲಿ ಕರೆದೊಯ್ದು ಆಕೆಗೆ ನಿದ್ರೆ ಮಾತ್ರ ಕೊಟ್ಟು ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡಿತ್ತು. ‘ಮುನಿರತ್ನ ಸೂಚನೆ ಮೇರೆಗೆ ಮಹಿಳೆ ಕೊಠಡಿಗೆ ಮಾದಕವಸ್ತು ತಂದಿಟ್ಟು ಆಕೆಯೊಂದಿಗೆ ಜಗಳವಾಡಿಕೊಂಡು ಸ್ಥಳದಿಂದ ಹೊರಟೆವು. ನಮ್ಮನ್ನು ಹೊಯ್ಸಳ ಪೊಲೀಸ್ ವಾಹನದಲ್ಲಿ ಎಸ್ಕಾರ್ಟ್ ಮಾಡಲಾಯಿತು. ನಂತರ  ಆರೋಪಿ ಲೋಕಿ ಮೂಲಕ ಮಹಿಳೆ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಡಿಸಿ ಬಂಧಿಸುವಂತೆ ಮಾಡಿದ್ದರು. ಬಳಿಕ ದೂರು ಹಿಂಪಡೆದಿದ್ದರು’ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT