ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಕ್ರಮಣಕಾರಿ ಧೋರಣೆ: ಬೆಂಗಳೂರು ಗಣೇಶ, ಮಣಿಕಂಠನಿಗೆ ಗಡಿಪಾರು ಶಿಕ್ಷೆ !

ಸಕ್ರೆಬೈಲು ಆನೆ ಕ್ಯಾಂಪ್‌: ಆಕ್ರಮಣಕಾರಿ ಧೋರಣೆ, ಮಾತು ಕೇಳದ ಸ್ವಭಾವ
Published : 19 ಸೆಪ್ಟೆಂಬರ್ 2024, 5:46 IST
Last Updated : 19 ಸೆಪ್ಟೆಂಬರ್ 2024, 5:46 IST
ಫಾಲೋ ಮಾಡಿ
Comments

ಶಿವಮೊಗ್ಗ: ಮಾವುತ, ಕಾವಾಡಿಯ ಮಾತು ಕೇಳದೇ ಸದಾ ಆಕ್ರಮಣಕಾರಿ ಧೋರಣೆ ತೋರುತ್ತಿದ್ದ ಇಲ್ಲಿನ ಸಕ್ರೆಬೈಲು ಕ್ಯಾಂಪಿನ ಆನೆಗಳಾದ ಬೆಂಗಳೂರು ಗಣೇಶ ಹಾಗೂ ಮಣಿಕಂಠ ಗಡಿಪಾರು ಶಿಕ್ಷೆಗೆ ಒಳಗಾಗಿವೆ.

ಈ ಎರಡೂ ಆನೆಗಳನ್ನು ಕ್ಯಾಂಪಿನಿಂದ ದೂರದಲ್ಲಿ ಕಾಡಿನಲ್ಲಿ ಒಂಟಿಯಾಗಿ ಕಟ್ಟಿ ಹಾಕಲಾಗುತ್ತಿದೆ. ನಿತ್ಯ ಅಲ್ಲಿಗೇ ಆಹಾರ ಒಯ್ದು ಕೊಡಲಾಗುತ್ತಿದೆ. ಬೆಂಗಳೂರು ಗಣೇಶ ಕಳೆದ 10 ವರ್ಷಗಳಿಗೂ ಹೆಚ್ಚು ಅವಧಿಯಿಂದ ಈ ರೀತಿ ಒಂಟಿ ಜೀವನದ ಶಿಕ್ಷೆಗೆ ಒಳಗಾಗಿದ್ದಾನೆ. ಮಣಿಕಂಠ ಎರಡು ತಿಂಗಳಿನಿಂದ ಕಾಡು ಪಾಲಾಗಿದ್ದಾನೆ.

ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿದ್ದ ಗಣೇಶನನ್ನು (48) ಅಲ್ಲಿ ಪುಂಡಾಟದ ಕಾರಣಕ್ಕೆ 15 ವರ್ಷಗಳ ಹಿಂದೆ ಸಕ್ರೆಬೈಲಿಗೆ ತರಲಾಗಿದೆ. ಬೆಂಗಳೂರು ಗಣೇಶನನ್ನು ಐದನೇ ಮೈಲಿಕಲ್‌ ಬಳಿಯ ಕಾಡಿನಲ್ಲಿ ಉದ್ದನೆಯ ಸರಪಳಿಯಲ್ಲಿ ಬಿಗಿದು ಮರಕ್ಕೆ ಕಟ್ಟಿ ಹಾಕಲಾಗುತ್ತಿದೆ. ಮಾವುತ–ಕಾವಾಡಿ ದೂರದಿಂದಲೇ ಆಹಾರ ಕೊಡುತ್ತಾರೆ. 46 ವರ್ಷದ ಮಣಿಕಂಠನನ್ನು ಚಿಕ್ಕಮಗಳೂರು ಬಳಿಯ ಕಾಡಿನಲ್ಲಿ ಸೆರೆ ಹಿಡಿದು ತರಲಾಗಿದೆ. ಅವನನ್ನು ಅಲ್ಲಿಯೇ ಸಮೀಪದ ಕಾಡಿನಲ್ಲಿ ಕಟ್ಟಿಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ತರಬೇತಿ ಸರಿಯಾಗಿ ಆಗಿಲ್ಲ:

ಈ ಎರಡೂ ಆನೆಗಳು ಮಾವುತ, ಕಾವಾಡಿಯ ಮಾತು ಕೇಳುವುದಿಲ್ಲ. ಮಣಿಕಂಠ ಈಚೆಗೆ ಸಕ್ರೆಬೈಲು ಕ್ಯಾಂಪ್‌ ಬಳಿ ಕಾವಾಡಿಯನ್ನೇ ಅಟ್ಟಿಸಿಕೊಂಡು ಹೋಗಿದ್ದ. ಸಕ್ರೆಬೈಲಿನ ತುಂಗಾ ಹಿನ್ನೀರಿನಲ್ಲಿ ಸ್ನಾನ ಮಾಡಿಸುವಾಗ ಮತ್ತೊಂದು ಆನೆಯ ಜೊತೆ ಹೊಡೆದಾಟಕ್ಕಿಳಿದು ಅದನ್ನು ಆಳ ನೀರಿಗೆ ತಳ್ಳಿಕೊಂಡು ಹೋಗಿದ್ದ. ಬೆಂಗಳೂರು ಗಣೇಶ ಕೂಡ ಆಕ್ರಮಣಕಾರಿ ಪ್ರವೃತ್ತಿಯವ. ಖೆಡ್ಡಾದಲ್ಲಿ (ಕ್ರಾಲ್‌) ಸರಿಯಾಗಿ ತರಬೇತಿ ಆಗದ ಕಾರಣ ಅವುಗಳಲ್ಲಿ ಇನ್ನೂ ಕಾಡಿನ ಆಕ್ರಮಣಕಾರಿ ಗುಣ ಹೋಗಿಲ್ಲ. ಕ್ಯಾಂಪಿಗೆ ಪ್ರವಾಸಿಗರು ಬರುವುದರಿಂದ ಅವರ ಮೇಲೆ ದಾಳಿ ಮಾಡಿದರೆ ಸಮಸ್ಯೆ ಆಗಲಿದೆ ಎಂದೂ, ಬೇರೆ ಆನೆಗಳು ಹಾಗೂ ಸಿಬ್ಬಂದಿಯ ಹಿತದೃಷ್ಟಿಯಿಂದ ಅವುಗಳನ್ನು ಕ್ಯಾಂಪ್‌ನಿಂದ ಹೊರಗೆ ಕಾಡಿನಲ್ಲಿ ಇಡಲಾಗಿದೆ ಎಂದು ಸಕ್ರೆಬೈಲು ಆನೆ ಕ್ಯಾಂಪಿನ ಅಧಿಕಾರಿಯೊಬ್ಬರು ಹೇಳುತ್ತಾರೆ.

ಒಂಟಿಯಾಗಿ ಇಡುವುದು ಅಮಾನವೀಯ:

‘ಆನೆಯು ಷಡ್ಯೂಲ್– 1 ಪ್ರಾಣಿ. ಅದು ಸಂಘ ಜೀವಿ. ಪಳಗಿದ ಮೇಲೆ ಹೆಣ್ಣಾನೆ ಸೇರಿದಂತೆ ಬೇರೆ ಆನೆಗಳು ಹಾಗೂ ಜನರ ನಡುವೆಯೇ ಅದು ಇರಬೇಕು. ಕಾಡಿನಲ್ಲಿ ಆ ರೀತಿ ಒಂಟಿಯಾಗಿ ಕಟ್ಟಿ ಹಾಕುವುದು ಕ್ರೌರ್ಯ. ಉದ್ದನೆಯ ಚೈನ್‌ನಿಂದ  ಯಾವುದೋ ಮರಕ್ಕೆ ಕಟ್ಟಿ ಬರಲಾಗುತ್ತಿದೆ. ಅದು ಕೋಪಕ್ಕೆ ಸುತ್ತಲಿನ ಮರಗಳನ್ನು ಕೆಡವುತ್ತದೆ. ಇದರಿಂದ ಅರಣ್ಯಕ್ಕೂ ಹಾನಿ. ಗಾಯಗೊಂಡರೆ ಚಿಕಿತ್ಸೆ ಕೊಡುವುದು ಕಷ್ಟ. ಅದರ ಬದಲಿಗೆ ಅವುಗಳ ವರ್ತನೆ ಸರಿಪಡಿಸುವ ಕೆಲಸ ಆಗಬೇಕು. ಕಾಡಿನಲ್ಲಿ ಒಂಟಿ ಆಗಿ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಇರುವಾಗ ಬೇರೆ ಕಾಡಾನೆಗಳು ದಾಳಿ ಮಾಡಿದರೆ ಜೀವಕ್ಕೆ ಅಪಾಯ ಆಗಲಿದೆ. ಗಾಯಗೊಂಡರೆ ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ. ಆ ಎರಡೂ ಆನೆಗಳನ್ನು ಮತ್ತೆ ಸಕ್ರೆಬೈಲು ಕ್ಯಾಂಪಿಗೆ ಕರೆತರಲು ಅರಣ್ಯ ಇಲಾಖೆ ಮುಂದಾಗಲಿ’ ಎಂದು ಶಿವಮೊಗ್ಗ ಪ್ರಾಣಿ ದಯಾ ಸಂಘದ ಪದಾಧಿಕಾರಿಯೊಬ್ಬರು ಒತ್ತಾಯಿಸುತ್ತಾರೆ.

ಬೆಂಗಳೂರು ಗಣೇಶನನ್ನು ಈಗ ಕ್ಯಾಂಪಿಗೆ ಕರೆತಂದು ಮತ್ತೆ ಪಳಗಿಸಿ ಜನಸ್ನೇಹಿಯಾಗಿಸುವುದು ಕಷ್ಟ. ಆದರೆ ಮಣಿಕಂಠನನ್ನು ತಿಂಗಳ ಒಳಗಾಗಿ ವಾಪಸ್ ಕ್ಯಾಂಪಿಗೆ ಕರೆತಂದು ಬೇರೆ ಆನೆಗಳೊಂದಿಗೆ ಇರಿಸಲು ಮಾವುತ–ಕಾವಾಡಿಗೆ ಸೂಚಿಸಲಾಗಿದೆ.
ವಿನಯ್ ಆರ್‌ಎಫ್‌ಒ ಸಕ್ರೆಬೈಲು ಆನೆ ಕ್ಯಾಂಪ್
ಆಂಧ್ರಪ್ರದೇಶಕ್ಕೆ ಸಕ್ರೆಬೈಲು ಆನೆ?
ಆಂಧ್ರಪ್ರದೇಶದಲ್ಲಿ ಆನೆಗಳು ಹಾಗೂ ಮಾನವರ ನಡುವಿನ ಸಂಘರ್ಷ ಹೆಚ್ಚಿದೆ. ಆನೆ ದಾಳಿಯಿಂದ ಒಂದು ವರ್ಷದ ಅವಧಿಯಲ್ಲಿ 26 ಮಂದಿ ಸಾವಿಗೀಡಾಗಿದ್ದಾರೆ. ಈ ಸಂಘರ್ಷ ತಪ್ಪಿಸಿ ಕಾಡಾನೆಗಳ ಸೆರೆ ಹಿಡಿಯಲು ಆಂಧ್ರಪ್ರದೇಶ ಸರ್ಕಾರ ಕರ್ನಾಟಕದ ಕುಮ್ಮಿ (ತರಬೇತಿ ಪಡೆದ) ಆನೆಗಳ ನೆರವು ಪಡೆಯಲು ಮುಂದಾಗಿದೆ. ಮೊದಲ ಹಂತದಲ್ಲಿ ಕಳೆದ ಆಗಸ್ಟ್‌ನಲ್ಲಿ ಎಂಟು ಆನೆಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿತ್ತು. ಈಗ ಎರಡನೇ ಹಂತದಲ್ಲಿ ನಾಲ್ಕು ಆನೆಗಳಿಗೆ ಆಂಧ್ರ ಸರ್ಕಾರ ಬೇಡಿಕೆ ಸಲ್ಲಿಸಿದೆ. ಹೀಗಾಗಿ ಸಕ್ರೆಬೈಲು ಆನೆ ಕ್ಯಾಂಪಿನಿಂದಲೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಮಾಹಿತಿ ಕೇಳಿದ್ದಾರೆ. ‘ನಮಗೆ ಪಿಸಿಸಿಎಫ್‌ ಪತ್ರ ಬಂದಿದೆ. ಕ್ಯಾಂಪ್‌ನಿಂದ ಕೊಂಡೊಯ್ಯಲು ಆನೆ ಆಯ್ಕೆ ಮಾಡಲು ಆಂಧ್ರಪ್ರದೇಶದಿಂದಲೇ ಅಧಿಕಾರಿಗಳ ತಂಡ ಬಂದು ಪರಿಶೀಲಿಸಬೇಕಿದೆ. ನಂತರ ಆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಕ್ರೆಬೈಲು ಆನೆ ಕ್ಯಾಂಪ್‌ನ ಆರ್‌ಎಫ್‌ಒ ವಿನಯ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಈ ಬಾರಿ ಇಲ್ಲ ಆನೆ ಮೇಲೆ ಅಂಬಾರಿ!

‘ಹೆಣ್ಣಾನೆಗಳು ಲಭ್ಯವಿಲ್ಲದ ಕಾರಣ ಈ ಬಾರಿಯ ಶಿವಮೊಗ್ಗ ದಸರಾ ಉತ್ಸವದಲ್ಲಿ  ಆನೆ ಮೇಲೆ ಅಂಬಾರಿ ಮೆರವಣಿಗೆ ಇಲ್ಲ. ಕಳೆದ ವರ್ಷದಂತೆ ಈ ಬಾರಿಯೂ ವಾಹನದಲ್ಲಿ ಚಾಮುಂಡೇಶ್ವರಿ ದೇವಿಯ ಪುತ್ಥಳಿ ಇಟ್ಟು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿದೆ. ಆದರೆ ಸಾಗರ ಸೇರಿದಂತೆ ಮೂರು ಗಂಡಾನೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿವೆ. ಈ ಬಗ್ಗೆ ಮಹಾನಗರ ಪಾಲಿಕೆ ಆಡಳಿತಕ್ಕೂ ಮೌಖಿಕವಾಗಿ ಮಾಹಿತಿ ನೀಡಲಾಗಿದೆ’ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಆಯುಕ್ತೆ ಡಾ.ಕವಿತಾ ಯೋಗಪ್ಪನವರ್  ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT