ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂಸಿ ಗಣೇಶ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ

ಜಿಲ್ಲೆಯಲ್ಲೇ ಅತಿ ಹೆಚ್ಚು ಗಣೇಶ ಮೂರ್ತಿ ತಯಾರಾಗುವ ಊರು
ಫಾಲೋ ಮಾಡಿ
Comments

ಕುಂಸಿ: ಶಿವಮೊಗ್ಗ ಜಿಲ್ಲೆಯಲ್ಲೇ ಅತಿ ಹೆಚ್ಚು ಗಣೇಶ ಮೂರ್ತಿ ತಯಾರಾಗುವ ಕುಂಸಿಯಲ್ಲಿ ಈ ವರ್ಷವೂ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಜನರ ಬೇಡಿಕೆಗೆ ತಕ್ಕಂತೆ ಮೂರ್ತಿ ತಯಾರಿಸಲು ತಯಾರಕರು ಹಗಲು– ರಾತ್ರಿ ಎನ್ನದೆ ಶ್ರಮ ಪಡುತ್ತಿದ್ದಾರೆ.

ಕುಂಸಿಯಲ್ಲಿ ಈ ಬಾರಿ 4,000ದಿಂದ 5,000 ಗಣೇಶ ಮೂರ್ತಿಗಳು ತಯಾರಾಗುತ್ತಿವೆ.

ಏಕೆ ಬೇಡಿಕೆ: ಕುಂಸಿಯಲ್ಲಿ ಕುಂಬಾರಿಕೆ ಮಾಡುವವರ 13 ಮನೆಗಳಿವೆ. ಅವರೆಲ್ಲರೂ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುತ್ತಾರೆ. ಅಲ್ಲದೇ ಇಂದಿನ ಪಿಒಪಿ ಗಣೇಶ ಮೂರ್ತಿಗಳ ಯುಗದಲ್ಲೂ ಮಣ್ಣಿನಿಂದ ಮೂರ್ತಿಗಳನ್ನು ಮಾಡಿ ಅದಕ್ಕೆ ಅದ್ಭುತ ರೂಪ ಕೊಡುತ್ತಾರೆ. ಹೀಗಾಗಿ ಇಲ್ಲಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚು. ವಿಶೇಷವಾಗಿ ಮನೆಗಳಲ್ಲಿ ಇರಿಸುವ ಮತ್ತು ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಗ್ರಾಮದ ಕುಂಬಾರಿಕೆ ಕುಟುಂಬಗಳು ಸಿದ್ಧಪಡಿಸುತ್ತವೆ.

ತಯಾರು ಮಾಡುವ ಬಗೆ: ಇಲ್ಲಿನ ಕುಂಬಾರರು ಗಣೇಶ ಹಬ್ಬಕ್ಕೂ 8ರಿಂದ 9 ತಿಂಗಳು ಮುನ್ನವೇ ಅಂದರೆ ಡಿಸೆಂಬರ್, ಜನವರಿಯಲ್ಲಿ ಕಪ್ಪು ಮಿಶ್ರಿತ ಎರೆಮಣ್ಣನ್ನು ಕೆರೆಯಿಂದ ತಂದು ಅದನ್ನು 15 ದಿನ ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ಆ ಮಣ್ಣನ್ನು ನೀರಿನಲ್ಲಿ ನೆನೆಸಿ ಎರಡು ತಿಂಗಳು ಹಾಗೆ ಬಿಡುತ್ತಾರೆ. ಫೆಬ್ರುವರಿಯಲ್ಲಿ ಮೂರ್ತಿಗಳನ್ನು ತಯಾರಿಸಲು ಆರಂಭಿಸುತ್ತಾರೆ.

ಗಣೇಶ ಹಬ್ಬ ಒಂದು ತಿಂಗಳು ಇರುವಾಗ ಮೂರ್ತಿಗಳಿಗೆ ಅಂತಿಮ ರೂಪ ನೀಡುತ್ತಾರೆ. ಅರ್ಧ ಅಡಿಯಿಂದ ಎಂಟು ಅಡಿವರೆಗೂ ಮೂರ್ತಿಗಳನ್ನು ತಯಾರಿಸುತ್ತಾರೆ.

‘ಈ ಮಣ್ಣಿನ ಮೂರ್ತಿಗಳಿಗೆ ಬರಿ ತೆಂಗಿನ ನಾರನ್ನು ಮಾತ್ರ ಉಪಯೋಗಿಸಲಾಗುತ್ತದೆ. ಮಣ್ಣಿಗೆ ತೆಂಗಿನ ನಾರನ್ನು ಮಿಶ್ರಣ ಮಾಡುವುದರಿಂದ ಮೂರ್ತಿಗಳು ಗಟ್ಟಿ ಬರುವುದಲ್ಲದೇ, ಬಿರುಕು ಬಿಡುವುದಿಲ್ಲ’ ಎನ್ನುತ್ತಾರೆ ಮೂರ್ತಿ ತಯಾರಕರೊಬ್ಬರು.

ಮನೆಮಂದಿಯೆಲ್ಲ ಒಟ್ಟಿಗೆ ಸೇರಿ ಮೂರ್ತಿ ತಯಾರಿಸುವುದು ಇಲ್ಲಿನ ಮತ್ತೊಂದು ವಿಶೇಷ.

ಎಲ್ಲಿಂದ ಬೇಡಿಕೆ: ಇಲ್ಲಿ ತಯಾರಾಗುವ ಗಣೇಶ ಮೂರ್ತಿಗಳು ಶಿವಮೊಗ್ಗ ಸೇರಿ ಗದಗ, ಹಾವೇರಿ, ಬೆಳಗಾವಿ, ದಾವಣಗೆರೆ, ಉಡುಪಿ, ಮಂಗಳೂರು, ಬೆಂಗಳೂರು, ಚಿತ್ರದುರ್ಗ ಜಿಲ್ಲೆಗಳಿಗೆ ಹೋಗುತ್ತವೆ. ಅಲ್ಲದೇ ಹೊರರಾಜ್ಯಗಳಿಂದಲೂ ಬೇಡಿಕೆ ಬರುತ್ತಿದೆ.

ಉತ್ತಮ ಆದಾಯ: ಕುಂಸಿಯಲ್ಲಿ ಇರುವ ಕುಂಬಾರರೆಲ್ಲರೂ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಮೂರ್ತಿ ತಯಾರಿಕೆಯಿಂದಲೇ ₹ 6 ಲಕ್ಷದಿಂದ ₹ 8 ಲಕ್ಷ ಆದಾಯ ಗಳಿಸುವ ಅವರು ಉಳಿದ ಸಮಯದಲ್ಲಿ ಮಡಿಕೆ ಹಾಗೂ ಮಣ್ಣಿನಿಂದ ಕರಕುಶಲ ವಸ್ತುಗಳನ್ನು ತಯಾರಿಸಿ ಲಾಭ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT