ಶಿವಮೊಗ್ಗ: ಜಿಲ್ಲೆಯ ಮಲೆನಾಡು ಭಾಗದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಮೊಬೈಲ್ ಫೋನ್ ಸಂಪರ್ಕ ಸೇವೆಗೆ ನೂರೆಂಟು ವಿಘ್ನ. ಇದರಿಂದ ಅರಣ್ಯ, ಗುಡ್ಡಗಾಡು ಭಾಗದಲ್ಲಿ ವಾಸಿಸುವವರು, ಅರಣ್ಯದಂಚಿನಲ್ಲಿ ನೆಲೆಸಿರುವವರು ಹೊರಗಿನ ಪ್ರಪಂಚದ ಸಂಪರ್ಕದಿಂದ ವಂಚಿತರಾಗುತ್ತಿದ್ದಾರೆ.

ಸಂಪರ್ಕ ವಲಯದಲ್ಲಿನ ಮಹಾಕ್ರಾಂತಿಯಿಂದ ಜಗತ್ತು ಇಂದು ‘ಜಾಗತಿಕ ಗ್ರಾಮ’ದ ಪರಿಕಲ್ಪನೆಗೆ ಬಂದಿದ್ದರೂ ಮಲೆನಾಡಿನ ಹಳ್ಳಿಗಳು ಮಾತ್ರ ನೆಟ್ವರ್ಕ್ ಸಮಸ್ಯೆಯಿಂದಾಗಿ ಅಂಗೈನಲ್ಲಿ ವಿಶ್ವವನ್ನು ಕಾಣುವ ಅವಕಾಶದಿಂದ ಹೊರಗುಳಿದಿವೆ. ‘ವರ್ಕ್ ಫ್ರಂ ಹೋಂ’ ಎಂದು ನೆಲದ ನಂಟಿನಲ್ಲಿಯೇ ಅನ್ನ ಹುಡುಕಿಕೊಳ್ಳುವ ಮಲೆನಾಡಿನ ಹೈಕಳ ಉತ್ಸಾಹವನ್ನು ಈ ನೆಟ್ವರ್ಕ್ ಸಮಸ್ಯೆ ಕುಂದಿಸಿದೆ.

ಬಿಎಸ್ಎನ್ಎಲ್ ನೆಟ್ವರ್ಕ್ ಇದ್ದರೂ ಅದು ಸರಿಯಾಗಿ ಬರುತ್ತಿಲ್ಲ. ಕೆಲವು ಕಡೆ ಯಾವುದೇ ನೆಟ್ವರ್ಕ್ ಇಲ್ಲ. ಹತ್ತಾರು ತಾಂತ್ರಿಕ ಸಮಸ್ಯೆಗಳು, ನಿರ್ವಹಣೆ ಕೊರತೆ ಹೀಗೆ ಮೊಬೈಲ್ ಫೋನ್ ನೆಟ್ವರ್ಕ್ ವಿಚಾರದಲ್ಲಿ ಮಲೆನಾಡಿನ ಗ್ರಾಮೀಣರ ಗೋಳು, ಅದಕ್ಕೆ ಸಂಬಂಧಿಸಿದವರ ಸ್ಪಂದನೆಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಈ ವಾರದ ‘ನಮ್ಮ ಜನ ನಮ್ಮ ಧ್ವನಿ’ ಅಂಕಣ ಮಾಡಿದೆ.

ವಾಸ್ತವಕ್ಕೆ ಕನ್ನಡಿ ಹಿಡಿಯುವ ತಮಾಷೆ!

ಸಾಗರ: ಇಲ್ಲಿನ ಕೆಲವು ಸಂಘಟನೆಗಳು 15 ವರ್ಷಗಳ ಹಿಂದೆ ‘ಗಂಡ ಹೆಂಡತಿ ನಡುವೆ ಜಗಳ ಹಚ್ಚುವ ಬಿಎಸ್ಎನ್ಎಲ್’ ಎಂಬ ಫಲಕ ಹಿಡಿದು ಬಿಎಸ್ಎನ್ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದವು.

ಗಂಡ ನಗರದ ಮಧ್ಯೆ ಇದ್ದರೂ ಹೆಂಡತಿ ಪೋನ್ ಮಾಡಿದರೆ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂಬ ಉತ್ತರ ಬರುತ್ತಿದೆ. ಇದು ಪತಿ, ಪತ್ನಿ ನಡುವಿನ ಜಗಳಕ್ಕೆ ಬಿಎಸ್ಎನ್ಎಲ್ ದಾರಿ ಮಾಡಿಕೊಟ್ಟಂತಾಗಿದೆ ಎಂದು ಅಂದು ಪ್ರತಿಭಟನಕಾರರು ಆರೋಪಿಸಿದ್ದರು.

ಮೇಲ್ನೋಟಕ್ಕೆ ಈ ಆರೋಪ ತಮಾಷೆಯಂತೆ ಕಂಡರೂ ಅದು ವಾಸ್ತವಕ್ಕೆ ಕನ್ನಡಿ ಹಿಡಿದಿತ್ತು. 15 ವರ್ಷಗಳ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆ ಏರಿಕೆಯಾದ ಪ್ರಮಾಣದಲ್ಲಿ ನೆಟ್ವರ್ಕ್ ಸುಧಾರಣೆಯತ್ತ ಗಮನಹರಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಈ ಕಾರಣಕ್ಕೆ ಅನಿವಾರ್ಯವಾಗಿ ಅನೇಕ ಗ್ರಾಹಕರು ಖಾಸಗಿ ಮೊಬೈಲ್ಫೋನ್ ಕಂಪನಿಗಳ ಮೊರೆ ಹೋಗುತ್ತಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ‘ವರ್ಕ್ ಫ್ರಂ ಹೋಂ’ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ನಗರಗಳಿಂದ ತಮ್ಮ ಮೂಲ ಸ್ಥಾನಕ್ಕೆ ಮರಳಿದವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿದ್ಯಾರ್ಥಿಗಳು ನೆಟ್ವರ್ಕ್ಗಾಗಿ ಗುಡ್ಡ ಏರುವಂತಾಗಿತ್ತು.

ತಾಲ್ಲೂಕಿನ ಕರೂರು, ಬಾರಂಗಿ ಹೋಬಳಿಯಲ್ಲಿ ನೆಟ್ವರ್ಕ್ ಸಮಸ್ಯೆ ಹಿನ್ನೆಲೆಯಲ್ಲಿ ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮತದಾನದ ಬಹಿಷ್ಕಾರದ ಕೂಗು ಕೇಳಿ ಬಂದಿತ್ತು.

ಎರಡು ವರ್ಷಗಳ ಹಿಂದೆ ಫೈಬರ್ ಕೇಬಲ್ ಜಾಲದ ಮೂಲಕ ನೆಟ್ವರ್ಕ್ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಂಕ್ಷೆಯ ಯೋಜನೆಯಿಂದ ಈ ಭಾಗಕ್ಕೆ ಹೆಚ್ಚಿನ ಪ್ರಯೋಜನ ದೊರಕಲಿದೆ ಎಂಬ ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಕೂಡ ಹುಸಿಯಾಗಿದೆ.

ಹಲೋ.. ಟುಯ್.. ಟುಯ್.. ಟುಸ್...

ತೀರ್ಥಹಳ್ಳಿ: ಹಲೋ ಹಲೋ ಕೇಳ್ತಾ ಇದ್ಯಾ… ನೀವ್ ಹೇಳ್ತಾ ಇರೋದು ಕೇಳಿಸುತ್ತಿಲ್ಲ. ನಿಮ್ಮ ಮಾತು ಕೇಳಿಸುತ್ತಿದೆ. ಇಲ್ಲಿ ಬೇರೆ ಯಾರೋ ಮಾತಾಡ್ತ ಇದ್ದಾರೆ. ನಿಮ್ಮ ನೆಟ್ವರ್ಕ್ ಸರಿಯಾಗಿಲ್ಲ. ಟುಯ್ ಟುಯ್..ಟುಸ್...

ಹೀಗೆ, ಬಿಎಸ್ಎನ್ಎಲ್ ಬಳಕೆ ಮಾಡುವ ಬಹುತೇಕ ಗ್ರಾಹಕರ ಕರೆಗಳು ಅಂತ್ಯಗೊಳ್ಳುತ್ತಿವೆ. ಸಂಪರ್ಕ ಸಾಧಿಸಲು ಆಗದೆ ದಿನವಿಡೀ ಸಂಪರ್ಕ ಸೇವೆ ಒದಗಿಸುವ ಸಂಸ್ಥೆಗೆ ಶಾಪ ಹಾಕುವಂತಾಗಿದೆ.

ದೂರ ಸಂಪರ್ಕ ಕ್ಷೇತ್ರದಲ್ಲಿ ವಿಶಾಲವಾದ, ಬೃಹತ್ ಸಂಪರ್ಕ ಹೊಂದಿರುವ ಭಾರತ್ ಸಂಚಾರ ನಿಗಮ ಹಳ್ಳಿಗಳನ್ನು ವ್ಯಾಪಿಸಿದ್ದರೂ ಸೇವೆಯಲ್ಲಿನ ವ್ಯತ್ಯಯದಿಂದ ಇಂದಿಗೂ ಕುಗ್ರಾಮಗಳು ಸಂಪರ್ಕದಿಂದ ಹೊರಗುಳಿದಿದೆ.

3ಜಿ ವೇಗಕ್ಕೆ ಸರಿಯೆಂಬಂತೆ ಬಿಎಸ್ಎನ್ಎಲ್ ಟವರ್ ಜೋಡಣೆ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ತಾಲ್ಲೂಕಿನಲ್ಲಿ 37 ಮೊಬೈಲ್ಫೋನ್ ಟವರ್ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಗುಣಮಟ್ಟದ ಸೇವೆ ಸಿಗುತ್ತಿಲ್ಲ. ಗ್ರಾಹಕರ ಸಮಸ್ಯೆ ಆಲಿಸಲು ಯಾವುದೇ ಅದಾಲತ್ ನಡೆಸುತ್ತಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮಸಭೆ, ವಾರ್ಡ್ ಸಭೆ, ಕೆಡಿಪಿ ಸಭೆಗಳಿಗೆ ಸಂಸ್ಥೆಯ ತಾಂತ್ರಿಕ ಅಧಿಕಾರಿಗಳು ಗೈರಾಗುತ್ತಿದ್ದಾರೆ.

ಬಿಎಸ್ಎನ್ಎಲ್ ಟವರ್ ನಿರ್ವಹಣೆ ಜವಾಬ್ದಾರಿ ಜಿಲ್ಲಾವಾರು ಹೊರಗುತ್ತಿಗೆ ನೀಡಲಾಗುತ್ತಿದೆ. ಬೆಂಗಳೂರಿನ ಎಸ್ಎಲ್ ಪವರ್ ಸಿಸ್ಟಂ ಎಂಬ ಹೊರಗುತ್ತಿಗೆ ಸಂಸ್ಥೆ ಟವರ್ ನಿರ್ವಹಣೆ ಮಾಡುತ್ತಿದೆ. ಸಂಪರ್ಕ ಜಾಲ, ಸಿಗ್ನಲ್, ಇತರೆ ತಾಂತ್ರಿಕ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದೆ. ಗ್ರಾಹಕರು ಅಧಿಕಾರಿಗಳನ್ನು ಪ್ರಶ್ನಿಸಿದರೆ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಪೂರಕ ಮಾಹಿತಿ: ಎಂ.ರಾಘವೇಂದ್ರ, ನಿರಂಜನ ವಿ., ರಿ.ರಾ. ರವಿಶಂಕರ್

ಆಡಳಿತಾತ್ಮಕವಾಗಿ ನಾವು ತೀರ್ಥಹಳ್ಳಿ-ಹೊಸನಗರ ತಾಲ್ಲೂಕಿಗೂ ಸಲ್ಲದವರು. ಕೊರನಕೋಟೆ ಗ್ರಾಮದಲ್ಲಿ ದೂರ ಸಂಪರ್ಕ ವ್ಯವಸ್ಥೆ ಕೂಡ ಇಲ್ಲ

–ಎಂ.ಎನ್.ಮಂಜಪ್ಪಗೌಡ ಮಲ್ಲಕ್ಕಿ ಹೊಸನಗರ

ಗ್ರಾಮೀಣ ಭಾಗ ಸೇರಿದಂತೆ ಜಿಲ್ಲೆಯಲ್ಲಿ ಬಿಎಸ್ಎನ್ಎಲ್ ಈಗ ಹೊಸದಾಗಿ 141 ಕಡೆ ಟವರ್ ಅಳವಡಿಸುತ್ತಿದೆ. ಅದರಲ್ಲಿ 138 ಕಾಮಗಾರಿ ಪ್ರಗತಿಯಲ್ಲಿವೆ. ಅರಣ್ಯ ಪ್ರದೇಶದಲ್ಲಿ 63 ಟವರ್ ಪೈಕಿ 15ರ ನಿರ್ಮಾಣ ಪೂರ್ಣಗೊಂಡಿದೆ. ಕಂದಾಯ ಭೂಮಿಗೆ ಸಂಬಂಧಿಸಿದ 55 ರಲ್ಲಿ 47 ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿವೆ.

–ವೆಂಕಟೇಶ್ ಬಿಎಸ್ಎನ್ಎಲ್ ಅಧಿಕಾರಿ ಶಿವಮೊಗ್ಗ

ಜಾಲ ವಿಸ್ತರಣೆಗೆ ಖಾಸಗಿಯವರಿಗೂ ಸೂಚನೆ: ಡಿ.ಸಿ ‘ಗ್ರಾಹಕರ ಸಂಖ್ಯೆ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ನಗರ ಪ್ರದೇಶಗಳತ್ತ ಗಮನಹರಿಸದೇ ಮೊಬೈಲ್ ಫೋನ್ ಸಂಪರ್ಕ (ನೆಟ್ವರ್ಕ್) ಜಾಲವನ್ನು ಜಿಲ್ಲೆಯ ಮಲೆನಾಡು ಭಾಗದ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಲು ಜಿಲ್ಲೆಯಲ್ಲಿ ಸೇವೆ ನೀಡುತ್ತಿರುವ ಖಾಸಗಿ ಟೆಲಿಕಾಂ ಕಂಪನಿಗಳ ಮುಖ್ಯಸ್ಥರೊಂದಿಗೆ ಈಚೆಗೆ ಸಭೆ ನಡೆಸಿ ಸೂಚನೆ ನೀಡಿದ್ದೇನೆ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. ಬಿಎಸ್ಎನ್ಎಲ್ ಹೊಸದಾಗಿ ಹಾಕಲು ಉದ್ದೇಶಿಸಿರುವ ಟವರ್ಗಳ ಹೊರತಾಗಿ ಖಾಸಗಿ ಟೆಲಿಕಾಂ ಕಂಪನಿಗಳು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಟವರ್ ನಿರ್ಮಿಸುವುದಿದ್ದರೆ ಜಿಲ್ಲಾಡಳಿತದ ಗಮನಕ್ಕೆ ತಂದರೆ ಅಗತ್ಯವಿರುವ ಭೂಮಿ ವಿದ್ಯುತ್ ಮತ್ತಿತರ ಸೌಲಭ್ಯ ಒದಗಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಂಪರ್ಕಕ್ಕೆ ಮರವೇ ಗತಿ!

ರಿಪ್ಪನ್ಪೇಟೆ: ಈ ಭಾಗದ ಹುಂಚ ಮತ್ತು ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬಿಎಸ್ಎನ್ಎಲ್ ದೂರ ಸಂಪರ್ಕ ಸೇವೆ ಗ್ರಾಹಕರಿಗೆ ಮರೀಚಿಕೆಯಾಗಿದೆ. ಬಿಎಸ್ಎನ್ಎಲ್ ದೂರವಾಣಿ ಟವರ್ ಇದ್ದರೂ ವಿದ್ಯುತ್ ಸರಬರಾಜು ವ್ಯತ್ಯಯದಿಂದ ಅನೇಕ ಬಾರಿ ಸಂಪರ್ಕ ಕಡಿತವಾಗುವುದು ಮಾಮೂಲಿಯಾಗಿದೆ. ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳ ವ್ಯಥೆಯೇ ಭಿನ್ನವಾಗಿದೆ. ಮಸ್ಕಾನಿ ಗ್ರಾಮದ ಅಕ್ಕಪಕ್ಕದ ನಿವಾಸಿಗಳು ತಮ್ಮ ಬಂಧು-ಬಳಗ ಹೊರ ಊರಿನಲ್ಲಿ ಓದುತ್ತಿರುವ ವೃತ್ತಿಯಲ್ಲಿರುವ ಮಕ್ಕಳನ್ನು ಸಂಪರ್ಕಿಸಲು ಬೆಳ್ಳೂರು-ಬುಕ್ಕೀವರೆ ರಸ್ತೆಯಂಚಲ್ಲಿರುವ ಬೃಹದಾಕಾರದ ಮರದ ಸಮೀಪಕ್ಕೆ ಬಂದು ಮೊಬೈಲ್ ಫೋನ್ ಸಂಪರ್ಕಕ್ಕಾಗಿ ತಡಕಾಡುವ ಪರಿಸ್ಥಿತಿ ಇದೆ. ರಿಪ್ಪನ್ಪೇಟೆಯ ಒಂದು ಮೈಲಿ ಆಚೀಚೆಗೂ ಮೊಬೈಲ್ ಸಂಪರ್ಕ ಕೊರತೆಗೆ ಸಂಬಂಧಿಸಿದ ದೂರುಗಳು ವಿದ್ಯಾರ್ಥಿಗಳು ಹಾಗೂ ವರ್ಕ್ ಫ್ರಂ ಹೋಮ್ನಲ್ಲಿರುವವರಿಂದ ಕೇಳಿ ಬರುತ್ತಿವೆ.

ಜಿಲ್ಲೆಗೆ 180 ಟವರ್ಗಳು ಮಂಜೂರು: ಬಿವೈಆರ್

‘ಒಂದು ವರ್ಷದಲ್ಲಿ ಬಿಎಸ್ಎನ್ಎಲ್ನ 180 ಟವರ್ಗಳನ್ನು ಜಿಲ್ಲೆಗೆ ಮಂಜೂರು ಮಾಡಿಸಿದ್ದೇನೆ. ಅವುಗಳ ಅಳವಡಿಕೆಗೆ ಕಂದಾಯ ಅರಣ್ಯ ಇಲಾಖೆ ಅಧಿಕಾರಗಳು ಸಹಕಾರ ಕೊಟ್ಟು ಭೂಮಿ ಗುರುತಿಸಿ ಕೊಟ್ಟಿದ್ದಾರೆ. ಕೆಲವು ಕಡೆ ಅರಣ್ಯ ಇಲಾಖೆಯ ಅನುಮತಿ ಬೇಕಿತ್ತು. ಅದನ್ನೂ ಪಡೆಯಲಾಗಿದೆ. ಶೀಘ್ರ ಹಂತ ಹಂತವಾಗಿ ಟವರ್ಗಳ ಅಳವಡಿಕೆ ಕಾರ್ಯ ಪೂರ್ಣಗೊಳಿಸಲಿದ್ದೇವೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಕೋವಿಡ್ ನಂತರ ಡಿಜಿಟಲೈಸೇಷನ್ ಮೊಬೈಲ್ ಫೋನ್ ನೆಟ್ವರ್ಕ್ ವರ್ಕ್ ಫ್ರಂ ಹೋಂ ಹೆಚ್ಚಾಗಿದೆ. ಈಚೆಗೆ ಖಾಸಗಿ ಕಂಪನಿಗಳ ಪ್ರಭಾವ ತಗ್ಗುತ್ತಿದೆ. ಬಿಎಸ್ಎನ್ಎಲ್ ಉಳಿಸಿ ಬೆಳೆಸಲು ಕೇಂದ್ರ ಸರ್ಕಾರ ಹೆಚ್ಚು ಹೂಡಿಕೆಗೆ ಮುಂದಾಗಿದೆ. ಹೀಗಾಗಿ ಇನ್ನೊಂದು ವರ್ಷದಲ್ಲಿ ದೇಶದಾದ್ಯಂತ ‘5ಜಿ’ ಸೇವೆಯೊಂದಿಗೆ ಸಂಸ್ಥೆಯ ಬಲ ಹೆಚ್ಚಿಸುವ ಕೆಲಸ ಆಗಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.