ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೀರ್ಥಹಳ್ಳಿ | ನಾಲ್ಕು ತಿಂಗಳಲ್ಲೇ ಗ್ರಾಮೀಣಾಭಿವೃದ್ಧಿ ಭವನ ಸೋರಿಕೆ!

ತೀರ್ಥಹಳ್ಳಿ: ₹13.5 ಕೋಟಿ ವೆಚ್ಚದ ಬಹುಮಹಡಿ ಕಟ್ಟಡ
Published 13 ಜುಲೈ 2024, 6:37 IST
Last Updated 13 ಜುಲೈ 2024, 6:37 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಪಟ್ಟಣದಲ್ಲಿ ಮಾರ್ಚ್‌ ಮೊದಲ ವಾರ ಉದ್ಘಾಟನೆಗೊಂಡಿದ್ದ ಐದು ಅಂತಸ್ತಿನ ಗ್ರಾಮೀಣಾಭಿವೃದ್ಧಿ ಭವನ ಮೊದಲ ಮಳೆಗೆ ಸೋರುತ್ತಿದೆ. ₹13.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಕಟ್ಟಡದ ಸೋರಿಕೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳ ಹುಟ್ಟುಹಾಕಿದೆ.

ಕಟ್ಟಡದ ಬಲ ಭಾಗದಲ್ಲಿ ಪೂರ್ಣ ಗೋಡೆಯಲ್ಲಿ ನೀರಿನ ಪಸೆ ಒಸರುತ್ತಿದೆ. ಮೇಲ್ಭಾಗದಲ್ಲಿ ಮಳೆ ನೀರು ಸೋರದಂತೆ ಕಬ್ಬಿಣದ ಶೀಟ್‌ ಹೊದಿಸಲಾಗಿದೆ. ಆದರೆ ಅಲ್ಲೂ ಕೂಡ ಚಾವಣಿಯಿಂದ ನೀರು ಜಿನುಗುತ್ತಿದೆ. ತಳಮಹಡಿಯಲ್ಲೂ ನೀರು ಶೇಖರಣೆಯಾಗುತ್ತಿದೆ. ಅಧಿಕಾರಿಗಳಿಗೆ ಭವನ ನಿರ್ವಹಣೆಯ ಸವಾಲು ಎದುರಾಗಿದೆ.

2023ರ ವಿಧಾನಸಭಾ ಚುನಾವಣೆ ಪೂರ್ವದಲ್ಲೇ ಗ್ರಾಮೀಣಾಭಿವೃದ್ಧಿ ಭವನ ಉದ್ಘಾಟಿಸುವ ಸಂಬಂಧ ಕಾಮಗಾರಿಗೆ ವೇಗ ನೀಡಲಾಗಿತ್ತು. ತುರ್ತಾಗಿ ಉದ್ಘಾಟನೆಯ ಧಾವಂತದಲ್ಲಿ ಸಿಮೆಂಟ್ ಗೋಡೆಗಳಿಗೆ ನೀರು ಕೂಡ ಸಿಂಪಡಣೆ (ಕ್ಯೂರಿಂಗ್) ಮಾಡಿಲ್ಲ. ಕಟ್ಟಡದ ಗುಣಮಟ್ಟ ಹಾಳಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ನೀತಿ ಸಂಹಿತೆ ಜಾರಿಯಿಂದ ಕಟ್ಟಡ ಉದ್ಘಾಟನೆ ನಡೆದಿರಲಿಲ್ಲ.

‌ನಾಗರಿಕರ ಸೇವೆಗಾಗಿ ಐದು ಅಂತಸ್ತಿನ ಕಟ್ಟಡದಲ್ಲಿ ಸಮಾಜಕಲ್ಯಾಣ, ತಾಲ್ಲೂಕು ವೈದ್ಯಾಧಿಕಾರಿ, ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆ, ಅಕ್ಷರ ದಾಸೋಹ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಚೇರಿ, ಶಾಸಕರ ಕಾರ್ಯಾಲಯ, ಸಭಾಂಗಣ, ವಿಡಿಯೋ ಕಾನ್ಫರೆನ್ಸ್‌ ಹಾಲ್ ಇದೆ. ಇಲ್ಲಿ ಇನ್ನಷ್ಟು ಇಲಾಖೆಗಳು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಕಟ್ಟಡದಲ್ಲಿ ಮಹಡಿ ಏರಲು ಅಳವಡಿಸಿದ್ದ ಲಿಫ್ಟ್ ಉದ್ಘಾಟನೆಗೊಂಡ ಎರಡು ತಿಂಗಳಲ್ಲೇ ಕೆಟ್ಟು ನಿಂತಿದೆ. ಗ್ರಾಮೀಣ ಭವನಕ್ಕೆ ಸೌಲಭ್ಯ ಅರಸಿ ಬರುವ ಅಂಗವಿಕಲರು, ಗರ್ಭಿಣಿಯರು, ಮಹಿಳೆಯರು, ಹಿರಿಯ ನಾಗರಿಕರು ಮೆಟ್ಟಿಲು ಏರಲು ಪರದಾಡುತ್ತಿದ್ದಾರೆ.

ಅಂಗವಿಕಲರ ಪರದಾಟ: 

ಗ್ರಾಮೀಣಾಭಿವೃದ್ಧಿ ಭವನದಲ್ಲಿ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯನ್ನು ಕೆಳಮಹಡಿಯ ವಾಹನ ನಿಲುಗಡೆ ಜಾಗದಲ್ಲಿ ನಿರ್ಮಿಸಲಾಗಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕಚೇರಿಗೆ ಅಗತ್ಯ ಮೂಲ ಸೌಕರ್ಯ ಇಲ್ಲ. ಅಂಗವಿಕಲರ ಸ್ನೇಹಿ ಶೌಚಾಲಯ ಇಲ್ಲ. ಕಚೇರಿ ಕೆಲಕ್ಕೆ ಬರುವವರು ಮೊದಲ ಮಹಡಿ ಅವಲಂಬಿಸಬೇಕಿದೆ ಎಂದು ಸ್ಥಳೀಯರಾದ ಭರತ್‌ ಹೂಗಾರ್‌ ದೂರುತ್ತಾರೆ.

ಪೊಲೀಸ್ ಠಾಣೆ ಕಟ್ಟಡವೂ ಸೋರಿಕೆ..

ಗೃಹಸಚಿವ ಜಿ.ಪರಮೇಶ್ವರ ಜೂನ್ 13ರಂದು ಉದ್ಘಾಟಿಸಲಿರುವ ರಥಬೀದಿಯ ನೂತನ ಪೊಲೀಸ್‌ ಠಾಣೆ ಕಟ್ಟಡ ಕೂಡ ಮಳೆಗೆ ಸೋರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ₹3 ಕೋಟಿ ವೆಚ್ಚದ ಈ ಕಾಮಗಾರಿ ಸೋರಿಕೆ ಬಗ್ಗೆ ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಸಂಘರ್ಷದ ನಂತರ ಡ್ಯಾಮ್‌ ಫ್ರೂಫ್‌ ಸೋರಿಕೆ ತಡೆಗಟ್ಟಲು ವಿವಿಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಎರಡು ವರ್ಷದಲ್ಲಿ ಮುಗಿಸಬೇಕಿದ್ದ ಗ್ರಾಮೀಣಾಭಿವೃದ್ಧಿ ಭವನದ ಕಾಮಗಾರಿಯನ್ನು 3 ವರ್ಷ ಮಾಡಿಲಾಗಿದೆ. ಗೃಹಮಂತ್ರಿಗಳು ಪೊಲೀಸ್‌ ಠಾಣೆ ಕಟ್ಟಡ ಕಾಮಗಾರಿಯನ್ನು ತನಿಖೆಗೆ ಒಳಪಡಿಸಬೇಕು.
ಆದರ್ಶ ಹುಂಚದಕಟ್ಟೆ, ಯುವ ಕಾಂಗ್ರೆಸ್‌ ವಕ್ತಾರ
ಮಲೆನಾಡು ಭಾಗವಾಗಿದ್ದರಿಂದ ಪೊಲೀಸ್‌ ಕಟ್ಟಡದ ಮೇಲ್ಭಾಗದಲ್ಲಿ ಶೀಟ್‌ ರೂಫಿಂಗ್‌ ಮಾಡಲಾಗಿದೆ. ಸೋರಿಕೆ ಪ್ರಶ್ನೆ ಉದ್ಭವಿಸುವುದಿಲ್ಲ.
ನಾಗಪ್ಪ ಬೆನ್ನೂರು, ಎಇಇ, ಕೆಎಸ್‌ಪಿಎಚ್‌ಸಿ
ಗ್ರಾಮೀಣಾಭಿವೃದ್ಧಿ ಭವನ ಅವ್ಯವಸ್ಥೆಯ ಆಗರವಾಗಿದೆ. ಉದ್ಘಾಟನೆಗೊಂಡು 4 ತಿಂಗಳಲ್ಲೇ ಸೋರುತ್ತಿದೆ. ಕಳಪೆ ಕಾಮಗಾರಿ ಕುರಿತು ತನಿಖೆ ನಡೆಯಬೇಕು.
ಕೀಗಡಿ ಕೃಷ್ಣಮೂರ್ತಿ, ಡಿಎಸ್‌ಎಸ್‌ ತಾಲ್ಲೂಕು ಸಂಚಾಲಕ
ಲಿಫ್ಟ್ ಹಾಳಾಗಿದ್ದರಿಂದ ಅಂಗವಿಕಲರು ಅನಿವಾರ್ಯವಾಗಿ ಮೆಟ್ಟಿಲು ಏರುತ್ತಿರುವುದು
ಲಿಫ್ಟ್ ಹಾಳಾಗಿದ್ದರಿಂದ ಅಂಗವಿಕಲರು ಅನಿವಾರ್ಯವಾಗಿ ಮೆಟ್ಟಿಲು ಏರುತ್ತಿರುವುದು
ಚಾವಣಿಯಲ್ಲಿ ನೀರು ಶೇಖರಣೆಗೊಂಡಿರುವುದು
ಚಾವಣಿಯಲ್ಲಿ ನೀರು ಶೇಖರಣೆಗೊಂಡಿರುವುದು
ಗ್ರಾಮೀಣಾಭಿವೃದ್ಧಿ ಕಟ್ಟದ ಕಿಟಕಿಯಿಂದ ನೀರು ಒಸರುತ್ತಿರುವುದು
ಗ್ರಾಮೀಣಾಭಿವೃದ್ಧಿ ಕಟ್ಟದ ಕಿಟಕಿಯಿಂದ ನೀರು ಒಸರುತ್ತಿರುವುದು
2024ರ ಮಾರ್ಚ್‌ ತಿಂಗಳಿನಲ್ಲಿ ಉದ್ಘಾಟನೆಗೊಂಡ ಗ್ರಾಮೀಣಾಭಿವೃದ್ಧಿ ಭವನ
2024ರ ಮಾರ್ಚ್‌ ತಿಂಗಳಿನಲ್ಲಿ ಉದ್ಘಾಟನೆಗೊಂಡ ಗ್ರಾಮೀಣಾಭಿವೃದ್ಧಿ ಭವನ
ಉದ್ಘಾಟನೆಗೆ ಸಿದ್ಧಗೊಂಡಿರುವ ನೂತನ ಪೊಲೀಸ್‌ ಠಾಣೆ
ಉದ್ಘಾಟನೆಗೆ ಸಿದ್ಧಗೊಂಡಿರುವ ನೂತನ ಪೊಲೀಸ್‌ ಠಾಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT