ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದಿ ಭಾರತಕ್ಕಿಂತ ಭಾವ ಭಾರತ ಸ್ವಚ್ಛವಾಗಲಿ: ಬರಗೂರು ರಾಮಚಂದ್ರಪ್ಪ

ದಲಿತ ಸಂಘರ್ಷ ಸಮಿತಿ ಮಹಾ ಅಧಿವೇಶನದಲ್ಲಿ ಬರಗೂರು ಆಶಯ
Published : 6 ಅಕ್ಟೋಬರ್ 2024, 4:42 IST
Last Updated : 6 ಅಕ್ಟೋಬರ್ 2024, 4:42 IST
ಫಾಲೋ ಮಾಡಿ
Comments

ತುಮಕೂರು: ಪ್ರಸ್ತುತ ಸಮಾಜದಲ್ಲಿ ಸಮೂಹ ಪ್ರಜ್ಞೆಯ ಜಾಗವನ್ನು ವ್ಯಕ್ತಿ ಪ್ರಜ್ಞೆ ಆವರಿಸಿಕೊಂಡಿದ್ದು, ಸಂಘಟನೆ ಸ್ಥಾನದಲ್ಲಿ ವಿಘಟನೆ ಕೂತಿದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.

70ರ ದಶಕದ ನಂತರ ನಡೆದ ಆರ್ಥಿಕ, ಸಾಮಾಜಿಕ ಸ್ಥಿತ್ಯಂತರ ಅರ್ಥ ಮಾಡಿಕೊಂಡು ಚಳವಳಿ ಕಟ್ಟಬೇಕಿದೆ. ಆಗ ಸಾಮಾಜಿಕ ವಿವೇಕದ ಬಗ್ಗೆ ಚರ್ಚೆ ನಡೆಯುತ್ತಿತ್ತು. 20ನೇ ಶತಮಾನದ ಕೊನೆಯ ದಶಕದಿಂದ ಈಚೆಗೆ ಸಾಮಾಜಿಕ ವಿವೇಕದ ಜಾಗವನ್ನು ಆರ್ಥಿಕ ಅವಿವೇಕ ಆಕ್ರಮಿಸಿಕೊಂಡಿದೆ. ಬಂಡವಾಳ ಶಾಹಿಗಳು ದೇಶವನ್ನಾಳಲು ಆರಂಭಿಸಿವೆ. ಶೇ 54ರಷ್ಟು ಸಂಪತ್ತನ್ನು ಶೇ 1ರಷ್ಟು ಜನ ಅನುಭವಿಸುತ್ತಿದ್ದಾರೆ ಎಂದರು.

ಪ್ರಜಾಪ್ರಭುತ್ವದ ಪರಿಭಾಷೆಯ ಜಾಗವನ್ನು ಊಳಿಗಮಾನ್ಯ ಪರಿಭಾಷೆ ಆವರಿಸಿಕೊಂಡಿದೆ. ಮಾನವೀಯತೆಯನ್ನು ಮತೀಯತೆ, ಧಾರ್ಮಿಕ ಸೌಹಾರ್ದವನ್ನು ಧರ್ಮ ಧರ್ಮಗಳ ನಡುವಿನ ಸಂಘರ್ಷ ನುಂಗಿ ಹಾಕುತ್ತಿದೆ. ಜಾತಿ ವಿನಾಶದ ಬದಲಾಗಿ ಜಾತಿವಾದವೇ ಆದ್ಯತೆಯಾಗಿದೆ ಎಂದು ವಿಷಾದಿಸಿದರು.

ಸ್ವಚ್ಛ ಭಾರತ ತುಂಬಾ ಒಳ್ಳೆಯ ಕಾರ್ಯಕ್ರಮ. ಆದರೆ, ಕೇವಲ ಬೀದಿ ಭಾರತವಷ್ಟೇ ಸ್ವಚ್ಛವಾದರೆ ಸಾಲದು, ಭಾವ ಭಾರತ ಸ್ವಚ್ಛವಾಗಬೇಕು. ಭಾವ ಭಾರತ ಸ್ವಚ್ಛವಾದರೆ ಸಮಾಜದಲ್ಲಿನ ಜಾತಿ ವ್ಯವಸ್ಥೆ, ತಾರತಮ್ಯ, ದೌರ್ಜನ್ಯದ ವಿರುದ್ಧ ಮಾತನಾಡುತ್ತೇವೆ. ಹಾಗಾಗಿ ಭಾವ ಭಾರತದ ಸ್ವಚ್ಛತೆಗೆ ಸಾಮಾಜಿಕ ಪ್ರಜ್ಞೆ ಬರಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಧರ್ಮ, ಜಾತಿಗಳ ಮಧ್ಯೆ ಘರ್ಷಣೆ ನಡೆಯುತ್ತಿದೆ. ಶೋಷಿತರಲ್ಲಿಯೂ ಪರಸ್ಪರ ಅಸಹನೆಯ ವಾತಾವರಣ ಇದೆ. ಅಸಹನೆ ಕೊನೆಗಾಣಿಸಿ, ಸೌಹಾರ್ದ ಬೆಳೆಸಬೇಕು. ಶೋಷಿತರು ಸಮಾನತೆಯ ಕಡೆಗೆ ಸಾಗಬೇಕು ಎಂದರು.

ಮಹಾಸಭೆಯಲ್ಲಿ ಸಮಿತಿ ನಡೆದು ಬಂದ ಹಾದಿ, ವರ್ತಮಾನದ ಸವಾಲು, ಅವುಗಳನ್ನು ಎದುರಿಸಿದ ಬಗೆ, ಮುಂದಿನ ನಡೆ ಹಾಗೂ ಹೋರಾಟದ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು. ಶೋಷಣೆಯ ವಿರುದ್ಧ ನಿಲುವು ಕೈಗೊಳ್ಳಬೇಕು ಎಂದು ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ಮುಖ್ಯಸ್ಥೆ ಇಂದಿರಾ ಕೃಷ್ಣಪ್ಪ ಹೇಳಿದರು.

ಚಿಂತಕ ಕೆ.ದೊರೈರಾಜ್, ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ, ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್, ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ, ವೈದ್ಯ ಬಸವರಾಜು, ಎಚ್.ಶಿವಕುಮಾರ್, ವಿರೂಪಾಕ್ಷ ಡ್ಯಾಗೇರಹಳ್ಳಿ, ನಾಗಣ್ಣ ಬಡಿಗೇರ, ಅರ್ಜುನ್ ಗಬ್ಬುರ್, ನಿರ್ಮಲಾ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು
ದಲಿತ ಪ್ರಜ್ಞೆಯ ಮರು ನಿರೂಪಣೆಯ ಕೆಲಸ ಆಗಬೇಕು. ದಲಿತರ ಹೋರಾಟಗಳು ದಲಿತೇತರರ ಒಟ್ಟಿಗೆ ಕೈಜೋಡಿಸಬೇಕು. ಪ್ರಗತಿಪರರು ಚಳವಳಿಗಾರರು ಒಂದಾಗಿ ಸಾಗಿದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ
ಪ್ರೊ.ಬರಗೂರು ರಾಮಚಂದ್ರಪ್ಪ ಸಾಹಿತಿ

ದೌರ್ಜನ್ಯ: ಶೇ 13.2ರಷ್ಟು ಹೆಚ್ಚಳ ಕೇಂದ್ರದ ಎನ್‌ಸಿಆರ್‌ಬಿಯ 2021ರ ವರದಿ ಪ್ರಕಾರ ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಶೇ 13.2ರಷ್ಟು ಹೆಚ್ಚಾಗಿವೆ. ದಿನಕ್ಕೆ 78 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದು ಇದರಲ್ಲಿ ಕನಿಷ್ಠ 10 ಜನ ದಲಿತರು ಇದ್ದಾರೆ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

ದೇಶದಲ್ಲಿ ಮನುವಾದ ವಿಜೃಂಭಿಸುತ್ತಿದೆ ಪ್ರಸ್ತುತ ಸಮಾಜವಾದ ಹಿಂದಕ್ಕೆ ಸರಿದು ಮನುವಾದ ಮುಂದಕ್ಕೆ ಬಂದಿದೆ. ಜಾತಿ ಸಮಸ್ಯೆಯ ಜತೆಗೆ ವರ್ಗ ಸಮಸ್ಯೆ ದೇಶವನ್ನು ಕಾಡುತ್ತಿದೆ. ಆರ್ಥಿಕ ಸುಧಾರಣೆ ಹೆಸರಿನಲ್ಲಿ ಕೋಟ್ಯಧಿಪತಿಗಳು ಬೆಳೆಯುತ್ತಿದ್ದಾರೆ. ಇಂತಹ ಸಮಕಾಲೀನ ಸವಾಲುಗಳನ್ನು ಎದುರಿಸುವುದು ಹೇಗೆ ಎಂಬುವುದನ್ನು ಚಳವಳಿಗಾರರು ಯೋಚಿಸಬೇಕು ಎಂದು ಬರಗೂರು ಸಲಹೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT