ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಕಿ ವೇತನ ಬಿಡುಗಡೆಗೆ ಆಗ್ರಹ: ಸ್ವಚ್ಛ ವಾಹಿನಿ ಚಾಲಕರು, ಸಹಾಯಕಿಯರಿಂದ ಪ್ರತಿಭಟನೆ

ಸ್ವಚ್ಛ ವಾಹಿನಿ ಚಾಲಕರು, ಸಹಾಯಕಿಯರಿಂದ ಪ್ರತಿಭಟನೆ
Published 26 ಜುಲೈ 2024, 17:11 IST
Last Updated 26 ಜುಲೈ 2024, 17:11 IST
ಅಕ್ಷರ ಗಾತ್ರ

ತುಮಕೂರು: ಬಾಕಿ ವೇತನ ಬಿಡುಗಡೆ, ಕನಿಷ್ಠ ವೇತನ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಸ್ವಚ್ಛ ವಾಹಿನಿ ಚಾಲಕರು, ಸಹಾಯಕಿಯರು ಸಿಐಟಿಯು ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಿಜಿಎಸ್‌ ವೃತ್ತದಿಂದ ಜಿಲ್ಲಾ ಪಂಚಾಯಿತಿ ಕಚೇರಿಯ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು.

ಸ್ವಚ್ಛ ವಾಹಿನಿ ಮಹಿಳಾ ಕಾರ್ಮಿಕರು ಕಸ ವಿಲೇವಾರಿ ಮಾಡುವುದರಲ್ಲಿ ಪ್ರಮುಖರಾಗಿದ್ದಾರೆ. ಕಸ ಬೇರ್ಪಡಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರಿಂದ ‘ಸ್ಚಚ್ಛ ಭಾರತ್‌ ಅಭಿಯಾನ’ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ, ಇವರಿಗೆ ಸರ್ಕಾರದ ಸೌಲಭ್ಯಗಳು ಮರೀಚಿಕೆಯಾಗಿವೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌ ಹೇಳಿದರು.

ರಾಜ್ಯ ಸರ್ಕಾರದಿಂದ ತರಬೇತಿ ಪಡೆದವರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಕೊಡುತ್ತಿಲ್ಲ. ಸ್ವಚ್ಛ ವಾಹಿನಿ ವಾಹನಕ್ಕೆ ವಿಮೆ ನವೀಕರಣ ಮಾಡಿಲ್ಲ. ‘ಬೇಟಿ ಬಚಾವೋ ಬೇಟಿ ಪಡಾವೋ’ ಎನ್ನುವ ಸರ್ಕಾರ ಸ್ವಚ್ಛ ವಾಹಿನಿ ಕಾರ್ಮಿಕರ ವೇತನ ಬಾಕಿ ಉಳಿಸಿಕೊಂಡಿದೆ. ಇವರಿಗೆ ಅಗತ್ಯ ರಕ್ಷಣಾ ಸಲಕರಣೆ ಒದಗಿಸಿಲ್ಲ. ನೌಕರರಿಗೆ ವರ್ಷ ಪೂರ್ತಿ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.

‘ಕನಿಷ್ಠ ವೇತನ ₹26 ಸಾವಿರ ನಿಗದಿಪಡಿಸಿ, ಸರ್ಕಾರದಿಂದ ತರಬೇತಿ ಪಡೆದವರಿಗೆ ಆಟೊ ನೀಡಬೇಕು. ಕೆಟ್ಟು ನಿಂತ ಆಟೊ ದುರಸ್ತಿಪಡಿಸಬೇಕು. ಕಾರ್ಮಿಕರ ಕುಂದು ಕೊರತೆ ಚರ್ಚಿಸಲು ರಚಿಸಿರುವ ಸಮಿತಿಯಿಂದ ಸಕಾಲಕ್ಕೆ ಸಭೆ ಕರೆಯಬೇಕು. ಸ್ವಚ್ಛ ವಾಹಿನಿ ಕಾರ್ಮಿಕರನ್ನು ಗ್ರಾಮ ಪಂಚಾಯಿತಿ ನೌಕರರೆಂದು ಪರಿಗಣಿಬೇಕು’ ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಸ್ವಚ್ಛ ವಾಹಿನಿ ಕಾರ್ಮಿಕರಾದ ಬಿ.ಆರ್‌.ಸುಜಾತಾ, ಕೆ.ಶಿವಮ್ಮ, ಕಲಾವತಿ, ಕೆ.ಆರ್‌.ಸೌಮ್ಯಾ, ಕೆ.ಆರ್‌.ಗೀತಾ, ಕಮಲಮ್ಮ ಇತರರು ಭಾಗವಹಿಸಿದ್ದರು. ಜಿ.ಪಂ ಉಪ ಕಾರ್ಯದರ್ಶಿ ಸಣ್ಣಮಸಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT