ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾಪ್ರಭುತ್ವ ದಿನ | ಮಾನವ ಸರಪಳಿ; ಲಕ್ಷಕ್ಕೂ ಹೆಚ್ಚು ಜನ ಭಾಗಿ: ಜಿಲ್ಲಾಧಿಕಾರಿ

ಕಾರ್ಯಕ್ರಮ ಯಶಸ್ವಿಗೆ ಹೆಚ್ಚುವರಿ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ
Published : 11 ಸೆಪ್ಟೆಂಬರ್ 2024, 15:14 IST
Last Updated : 11 ಸೆಪ್ಟೆಂಬರ್ 2024, 15:14 IST
ಫಾಲೋ ಮಾಡಿ
Comments

ಉಡುಪಿ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಇದೇ 15ರಂದು ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ವಿವಿಧ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಶಾಲಾ –ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದು ವಿವರಿಸಿದರು.

ಕಾರ್ಯಕ್ರಮವು ರಾಜ್ಯದಾದ್ಯಂತ ಬೆಳಿಗ್ಗೆ 9.30ರಿಂದ 10.30ರ ವರೆಗೆ ನಡೆಯಲಿದ್ದು, ಜಿಲ್ಲೆಯಲ್ಲಿ ಬೈಂದೂರು ಶಿರೂರು ಗೇಟ್‌ನಿಂದ ಕಾಪು ಹೆಜಮಾಡಿ ಸೇತುವೆಯ ವರೆಗೆ 107 ಕಿ.ಮೀ. ವರೆಗೆ ಮಾನವ ಸರಪಳಿ ರಚಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಮಟ್ಟದ ಕಾರ್ಯಕ್ರಮವು ಕಿನ್ನಿಮುಲ್ಕಿ ಸ್ವಾಗತ ಗೋಪುರ ಬಳಿ ಆಯೋಜಿಸಿದ್ದು, ಜಿಲ್ಲಾ ಕೇಂದ್ರದಲ್ಲಿ ಸಮಾರು 500 ಮೀಟರ್‌ ಉದ್ದದ ಹಾಗೂ 3 ಮೀಟರ್‌ ಅಗಲದ ರಾಷ್ಟ್ರ ಹಾಗೂ ಕರ್ನಾಟಕದ ಧ್ವಜಗಳನ್ನು ಪ್ರದರ್ಶನ ಮಾಡಲಾಗುವುದು. ಕಾರ್ಯಕ್ರಮದ ವೇಳೆ ಒಂದು ಗಂಟೆಗಳ ಕಾಲ ವಾಹನಗಳಿಗೆ ಒಂದೇ ಬದಿಯಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗುವುದು ಎಂದರು.

ಮರವಂತೆ, ಕುಂದಾಪುರ ನಗರ, ಕಿನ್ನಿಮುಲ್ಕಿ, ಉಚ್ಚಿಲದಲ್ಲಿ ಕಾರ್ಯಕ್ರಮದ ಡ್ರೋನ್ ಫೋಟೊ ಶೂಟ್‌ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸಂವಿಧಾನದ ಪೀಠಿಕಾ ಭಾಗವನ್ನು ಓದಲಿದ್ದಾರೆ ಎಂದು ಹೇಳಿದರು.

ಮಾನವ ಸರಪಳಿ ಕುರಿತು ಪ್ರಚಾರ ಮಾಡಲು ಇದೇ 13ರಂದು ಬೆಳಿಗ್ಗೆ 7 ಗಂಟೆಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡು ಕುಂಜಾರುಗಿರಿಯಲ್ಲಿ ಟ್ರಕ್ಕಿಂಗ್ ಏರ್ಪಡಿಸಲಾಗಿದೆ ಎಂದೂ ವಿವರಿಸಿದರು.

ಕಾರ್ಯಕ್ರಮದಂದು ರಾಷ್ಟ್ರೀಯ ಹೆದ್ದಾರಿಯಲ್ಲಿ–66ರಲ್ಲಿ ಪ್ರತಿ 10.ಕೀ.ಮೀ.ಗಳಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಲು ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದೂ ಹೇಳಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಜಾನಪದ ಕಲಾ ತಂಡಗಳ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಮಾನವ ಸರಪಳಿಯಲ್ಲಿ ಎಲ್ಲರಿಗೂ ಭಾಗವಹಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ನೋಂದಾಯಿಸುವವರಿಗೆ ಪ್ರಮಾಣ ಪತ್ರ ಲಭಿಸಲಿದೆ ಎಂದರು.

https://democracydaykarnataka.in/registration ಈ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಬಹುದಾಗಿದೆ.

ಶೇ 85 ರಷ್ಟು ಬಿ.ಪಿ.ಎಲ್‌. ಕಾರ್ಡುದಾರರು

ಜಿಲ್ಲೆಯಲ್ಲಿ ಒಟ್ಟು ಪಡಿತರ ಚೀಟಿ ಹೊಂದಿರುವವರಲ್ಲಿ ಶೇ 85 ರಷ್ಟು ಬಿ.ಪಿ.ಎಲ್‌ ಕಾರ್ಡುದಾರರಿದ್ದಾರೆ. ಅನರ್ಹರು ಬಿಪಿಎಲ್‌ ಪಡಿತರ ಕಾರ್ಡ್‌ ಹೊಂದಿದ್ದರೆ ಸ್ವಯಂ ಪ್ರೇರಣೆಯಿಂದ ಒಪ್ಪಿಸಬೇಕು. ಅವರಿಗೆ ಎಪಿಎಲ್‌ ಪಡಿತರ ಚೀಟಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆರು ತಿಂಗಳ ವರೆಗೆ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳದವರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದರು.

ಸ್ವಚ್ಚತಾ ಅಭಿಯಾನ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ಇದೇ 14ರಿಂದ ಅಕ್ಟೋಬರ್‌ 2 ವರೆಗೆ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದು ಮಾನವ ಸರಪಳಿ ಕಾರ್ಯಕ್ರಮದಲ್ಲೂ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ‌‘ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ’ ಈ ಬಾರಿಯ ಧ್ಯೇಯ ವಾಕ್ಯವಾಗಿದ್ದು ಅಭಿಯಾನದ ಅಂಗವಾಗಿ ಜಿಲ್ಲೆಯ 98 ಕಿ.ಮೀ. ವ್ಯಾಪ್ತಿಯ ಕಡಲ ತೀರ ಸೇರಿದಂತೆ ವಿವಿಧೆಡೆ ಸ್ವಚ್ಛತೆ ನಡೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT