ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಡುಬಿದ್ರಿ: ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ

ಸೋರುತಿದೆ ಮೌಲಾನಾ ಆಜಾದ್ ಶಾಲೆ: ಮಕ್ಕಳ ದಾಖಲಾತಿಗೆ ಹಿಂದೇಟು
Published : 7 ಜುಲೈ 2024, 7:48 IST
Last Updated : 7 ಜುಲೈ 2024, 7:48 IST
ಫಾಲೋ ಮಾಡಿ
Comments

ಕಾಪು (ಪಡುಬಿದ್ರಿ): 6 ವರ್ಷಗಳ ಹಿಂದೆ ಆರಂಭಗೊಂಡಿರುವ ತಾಲ್ಲೂಕಿನ ಮಲ್ಲಾರು ಗ್ರಾಮದ  ಮೌಲಾನಾ ಆಜಾದ್ ಸರ್ಕಾರಿ ಮಾದರಿ ಶಾಲೆಯು ಮಲ್ಲಾರು ಉರ್ದು ಶಾಲೆಯ ಶಿಥಿಲಾವಸ್ಥೆಯಲ್ಲಿರುವ ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.

ಶಾಲೆಯ ಕಿಟಕಿಗಳಿಗೆ ಬಾಗಿಲುಗಳಿಲ್ಲದೆ ಮಳೆ ನೀರು ತರಗತಿ ಯೊಳಗೆ ಬೀಸುತ್ತಿದೆ. ಚಾವಣಿಯ ಹೆಂಚುಗಳು ಒಡೆದು ಹೋಗಿದ್ದು, ನೀರು ಸೋರುತ್ತಿದೆ. ಪುಸ್ತಕ, ಬ್ಯಾಗ್ ಒದ್ದೆಯಾಗುವುದನ್ನು ತಪ್ಪಿಸಿ ಕುಳಿತುಕೊಳ್ಳಲು ವಿದ್ಯಾರ್ಥಿಗಳು ಡೆಸ್ಕ್, ಬೆಂಚ್‌ಗಳನ್ನು ಸರಿಸುವ ಪರಿಸ್ಥಿತಿ ಇದೆ. ವಿದ್ಯುತ್ ಸಂಪರ್ಕ ಇದ್ದರೂ ತರಗತಿ ಕೊಠಡಿಗಳಿಗೆ ಬಲ್ಬ್‌ಗಳಿಲ್ಲದೆ ಕತ್ತಲೆಯಲ್ಲಿ ಪಾಠ ಕೇಳಬೇಕಾಗಿದೆ. ಶಿಕ್ಷಕರ ಕಚೇರಿಯಲ್ಲಂತೂ ಕಿಟಕಿ ಬಾಗಿಲುಗಳಿಲ್ಲದೆ ಪುಸ್ತಕ ಸಹಿತ ವಿವಿಧ ವಸ್ತುಗಳು ಒದ್ದೆಯಾಗುತ್ತಿವೆ. ಕಾಂಕ್ರೀಟ್ ಚಾವಣಿಯ ಕಚೇರಿ ಕೊಠಡಿಯೂ ಸೋರುತ್ತಿದ್ದು, ಬಕೆಟ್ ಇಡಬೇಕಾಗಿದೆ.

2018–19ನೇ ಸಾಲಿನಲ್ಲಿ ಕಾರ್ಕಳ, ಕಾಪು ತಾಲ್ಲೂಕಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಮೌಲಾನಾ ಆಜಾದ್ ಸರ್ಕಾರಿ ಮಾದರಿ ಆಂಗ್ಲ ಮಾಧ್ಯಮ ಶಾಲೆ ಮಂಜೂರಾಗಿತ್ತು. ಈಗಾಗಲೇ 2 ಎಸ್ಸೆಸ್ಸೆಲ್ಸಿ ಬ್ಯಾಚ್‌ ಪೂರ್ಣಗೊಂಡಿದ್ದು, ಈ ಶೈಕ್ಷಣಿಕ ವರ್ಷದಲ್ಲಿ 3ನೇ ಬ್ಯಾಚ್‌ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. 2022–23ರಲ್ಲಿ 23 ವಿದ್ಯಾರ್ಥಿಗಳಿದ್ದ ಪ್ರಥಮ ಬ್ಯಾಚ್ ಶೇ 81 ಫಲಿತಾಂಶ ದಾಖಲಿಸಿತ್ತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೇವಲ 6 ವಿದ್ಯಾರ್ಥಿಗಳಿದ್ದು, ಶೇ 100 ಫಲಿತಾಂಶ ದಾಖಲಿಸಿದ್ದರು. ಪ್ರಸ್ತುತ 6ನೇ ತರಗತಿಯಲ್ಲಿ 7, 7ನೇ ತರಗತಿಯಲ್ಲಿ 6, 8 ರಲ್ಲಿ 7, 9 ರಲ್ಲಿ 21, 10ನೇ ತರಗತಿಯಲ್ಲಿ 20 ವಿದ್ಯಾರ್ಥಿಗಳಿದ್ದಾರೆ.

ಶೈಕ್ಷಣಿಕ ವರ್ಷದ ಮುಕ್ತಾಯದ ವೇಳೆ ಶಾಲಾ ವ್ಯಾಪ್ತಿಯ ಮನೆಗಳಿಗೆ ತೆರಳಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಶಿಕ್ಷಕರು ಪೋಷಕರನ್ನು ಪ್ರೇರೆಪಿಸಿದ್ದಾರೆ. 6ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಗುಣಮಟ್ಟದ ಆಂಗ್ಲಮಾಧ್ಯಮ ಶಿಕ್ಷಣವಿದ್ದರೂ, ಶಿಥಿಲ ಕಟ್ಟಡದಿಂದಾಗಿ ಮಕ್ಕಳ ದಾಖಲಾತಿಗೆ ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

ಪ್ರಭಾರ ಮುಖ್ಯಶಿಕ್ಷಕರೊಬ್ಬರು ಕಾರ್ಕಳ, ಮಲ್ಲಾರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 6 ಗೌರವ ಶಿಕ್ಷಕಿಯರು, ಇಲಾಖೆಯಿಂದ ವೇತನ ಪಡೆಯುವ 6 ಜನ ಗೌರವ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಾರಿ ಪೂರ್ಣಕಾಲಿಕ ಶಿಕ್ಷಕರ ನೇಮಕಾತಿ ಬಗ್ಗೆ ಇಲಾಖೆ ನಿರೀಕ್ಷೆಯಲ್ಲಿದೆ.

3 ಶಾಲೆಗಳು: 1 ಎಕ್ರೆಗೂ ಅಧಿಕ ಇರುವ ಈ ಜಾಗದಲ್ಲಿ ಉರ್ದು ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಹಳೆ ಕಟ್ಟಡದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ಕಾರ್ಯಾಚರಿಸುತ್ತಿದೆ.

ಸುತ್ತಲೂ ಆವರಣ ಗೋಡೆ ಇದ್ದರೂ ಶಾಲಾ ಕೊಠಡಿಗಳ ಹೆಂಚುಗಳು ಹಾನಿಗೊಂಡಿವೆ. ಕಿಟಕಿಗಳಿಗೆ ಅಳವಡಿಸುವ ಪ್ಲಾಸ್ಟಿಕ್ ಶೀಟ್‌ಗಳು ಹರಿದು ಹಾಕಲಾಗಿದೆ. ಕಿಟಕಿ ಬಾಗಿಲು, ಬಾಗಿಲು ತೆರೆದು ಡೆಸ್ಕ್ ಬೆಂಚ್‌ಗಳನ್ನು ದೂಡಿ ಹಾಕಿ ಕಿಡಿಗೇಡಿಗಳು ಹಾನಿಗೊಳಿಸುತ್ತಿದ್ದಾರೆ ಎಂಬ ದೂರುಗಳೂ ಕೇಳಿ ಬಂದಿವೆ.

‘ಅನುದಾನ ಬಿಡುಗಡೆಯಾಗಬೇಕು’
ಬೆಳಪುವಿನಲ್ಲಿ 1 ಎಕ್ರೆ ಜಮೀನು ಮಂಜೂರಾಗಿದ್ದು, ಮೌಲಾನಾ ಆಜಾದ್ ಮಾದರಿ ಶಾಲೆ ಹೆಸರಿನಲ್ಲಿ ಪಹಣಿಯೂ ಆಗಿದೆ. ಕಟ್ಟಡ ನಿರ್ಮಾಣಕ್ಕೆ ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆ ಇನ್ನು ಆಗಬೇಕು. ಪ್ರತಿ ವರ್ಷ ಇಲಾಖೆಯಿಂದ ಈಗಿರುವ ಕಟ್ಟಡದ ಸಣ್ಣಪುಟ್ಟ ದುರಸ್ತಿ ಮಾಡಲಾಗುತ್ತಿದೆ. ಹೊಸ ಕಟ್ಟಡ ನಿರ್ಮಾಣವಾದಲ್ಲಿ ಮಕ್ಕಳನ್ನು ಕಳುಹಿಸುವುದಾಗಿ ಪೋಷಕರು ಭರವಸೆ ನೀಡಿದ್ದಾರೆ ಎಂದು ಉಡುಪಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪೂರ್ಣಿಮಾ ಬಿ.ಚೂರಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT