ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಶ್ಚಾತ್ಯ ರಂಗಭೂಮಿ | ಒಳವ್ಯಕ್ತಿತ್ವಕ್ಕೆ ಮಹತ್ವ: ರಂಗ ನಿರ್ದೇಶಕ ಪ್ರಸನ್ನ ಅಭಿಮತ

Published 26 ಜುಲೈ 2024, 6:18 IST
Last Updated 26 ಜುಲೈ 2024, 6:18 IST
ಅಕ್ಷರ ಗಾತ್ರ

ಉಡುಪಿ: ಪಾಶ್ಚಾತ್ಯ ರಂಗಭೂಮಿಯ ಅಭಿನಯದಲ್ಲಿ ನಟರು ತಮ್ಮ ಒಳವ್ಯಕ್ತಿತ್ವವನ್ನು ಅಭಿವ್ಯಕ್ತಿಗೊಳಿಸಿ ಅಭಿನಯಿಸಲು ಯತ್ನಿಸಿದರೆ, ಭಾರತೀಯ ರಂಗ ಸಂಪ್ರದಾಯದಲ್ಲಿ ನಟರು ಪಾತ್ರದ ಗುಣಗಳನ್ನು ಕಲಿತು ಅಭಿನಯಿಸಲು ಯತ್ನಿಸುತ್ತಾರೆ ಎಂದು ರಂಗ ನಿರ್ದೇಶಕ ಪ್ರಸನ್ನ ಹೇಳಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸಯನ್ಸ್‌ಸ್ (ಜಿಸಿಪಿಎಎಸ್) ಮತ್ತು ರಂಗ ಭೂಮಿ ಉಡುಪಿ ಇವುಗಳ ಆಶ್ರಯದಲ್ಲಿ ಮಣಿಪಾಲದ ಸರ್ವೋದಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ತಮ್ಮ ಪರಿಷ್ಕೃತ ಪುಸ್ತಕ ‘ಇಂಡಿಯನ್‌ ಮೆಥಡ್‌ ಇನ್‌ ಆ್ಯಕ್ಟಿಂಗ್‌’ ಕುರಿತು ಮಾತನಾಡಿದರು.

ಈ ಪುಸ್ತಕದಲ್ಲಿ ಪಾಶ್ಚಿಮಾತ್ಯ ಮತ್ತು ಭಾರತೀಯ ರಂಗ ಸಂಪ್ರದಾಯಗಳ ಅಭಿನಯದ ಹೋಲಿಕೆ ಮತ್ತು ಭಿನ್ನತೆಗಳಿವೆ. ಪಾಶ್ಚಾತ್ಯರಲ್ಲಿ ಕೆಥಾರ್ಸಿಸ್ ಮೂಲಮಂತ್ರವಾದರೆ ಭಾರತದಲ್ಲಿ ರಸ ಸಿದ್ಧಾಂತ ಬೀಜ ಮಂತ್ರವಾಗಿದೆ. ಕೆಥಾರ್ಸಿಸ್ ಅಭಿವ್ಯಕ್ತಿಗೆ ಒತ್ತುಕೊಟ್ಟರೆ ರಸಸಿದ್ಧಾಂತವು ಸಾಧಾರಣೀಕರಣದ ಮೇಲೆ ಒತ್ತುಕೊಟ್ಟಿದೆ ಎಂದರು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆಧುನಿಕತೆ ಮತ್ತು ಜಾನಪದ ಸಂಪ್ರದಾಯಗಳ ನಡುವೆ ಸಿಕ್ಕು ಇಬ್ಬಂದಿತನವನ್ನು ಅನುಭವಿಸುತ್ತಿದ್ದ ಭಾರತೀಯ ರಂಗ ಭೂಮಿಗೆ ಬಾದಲ್ ಸರ್ಕಾರ್ ಅಂಥವರು ಸ್ವಂತಿಕೆಯ ಸ್ಪರ್ಶವನ್ನು ನೀಡಿದರು ಎಂದು ಅವರು ಅಭಿಪ್ರಾಯಪಟ್ಟರು.

ಶ್ರಮವನ್ನು ಒಂದು ಮೌಲ್ಯವಾಗಿ ತಿಳಿಯುವ ರಂಗ ಭೂಮಿಯ ಇಡೀ ಪ್ರಕ್ರಿಯೆಯೇ ಗಾಂಧೀಜಿಯ ತಾತ್ವಿಕತೆಯಾಗಿದೆ. ಈ ರಂಗ ಪರಂಪರೆಯು ಇಡೀ ಸಮುದಾಯವನ್ನು ಒಳಗೊಂಡಿರುವ ರಂಗ ಪರಂಪರೆ ಎಂದರು.

ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಲೇಖಕ ಫಣಿರಾಜ್, ಎಲ್ಲಾ ರಂಗ ವಿದ್ಯಾರ್ಥಿಗಳಿಗೆ ಈ ಪುಸ್ತಕ ಒಂದು ಮಾದರಿ ಕೈಪಿಡಿಯಾಗಿದೆ ಮತ್ತು ಚಿಂತನಾಶೀಲವು ಆಗಿದೆ ಎಂದು ಹೇಳಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಮಾತನಾಡಿ, ಪ್ರಸನ್ನ ಅವರ ರಂಗ ಸಿದ್ಧಾಂತವು ಅವರ ಅನುಭವದ ಮೂಲಕ ರೂಪುಗೊಂಡಿದೆ ಎಂದು ಅಭಿಪ್ರಾಯಪಟ್ಟರು.

ರಂಗ ಭೂಮಿ ತಂಡದ ಪ್ರದೀಪ್ ಚಂದ್ರ ಕುತ್ಪಾಡಿ ಮತ್ತು ರಂಗಾಸಕ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT