ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ಜೀವಕ್ಕೆ ಆಪತ್ತು ತಂದ ಕಬ್ಬಿಣದ ರಾಡ್

ಮೂರು ಅಂತಸ್ತಿನ ಮನೆಯ ಮೊದಲ ಮಹಡಿಗೂ ವ್ಯಾಪಿಸಿದ್ದ ಬೆಂಕಿಯ ಜ್ವಾಲೆ
Published 16 ಜುಲೈ 2024, 4:34 IST
Last Updated 16 ಜುಲೈ 2024, 4:34 IST
ಅಕ್ಷರ ಗಾತ್ರ

ಉಡುಪಿ: ಅಂಬಲಪಾಡಿ ಗಾಂಧಿನಗರದ ರಮಾನಂದ ಶೆಟ್ಟಿ ಅವರ ಮನೆಯ ಮುಂಬಾಗಿಲು ಮತ್ತು ಹಿಂಬಾಗಿಲಿಗೆ ಚಿಲಕವಲ್ಲದೇ ಹೆಚ್ಚಿನ ಭದ್ರತೆಗಾಗಿ ಕಬ್ಬಿಣದ ರಾಡ್ ಅಳವಡಿಸಿ ಬೀಗ ಹಾಕಲಾಗಿತ್ತು. ಇದರಿಂದಾಗಿ ಬೆಂಕಿ ಅವಘಡದ ಸಂದರ್ಭದಲ್ಲಿ ಹೊರಗಿನವರಿಗೆ ಬಾಗಿಲು ಮುರಿಯಲು ಕಷ್ಟವಾಗಿತ್ತು.

ಬೊಬ್ಬೆ ಕೇಳಿ ಅಕ್ಕ ಪಕ್ಕದ ಮನೆಯವರು ಸ್ಥಳಕ್ಕೆ ತಲುಪಿ ಬಾಗಿಲು ಮುರಿಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಅಗ್ನಿಶಾಮಕ ದಳದವರು ಕಷ್ಟಪಟ್ಟು ಬಾಗಿಲು ಮುರಿದಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.

ಮೂರು ಅಂತಸ್ತಿನ ಮನೆಯ ಮೊದಲ ಮಹಡಿಗೂ ಬೆಂಕಿಯ ಜ್ವಾಲೆ ವ್ಯಾಪಿಸಿದ್ದು, ಮನೆಯೊಳಗಿನ ಸಾಮಗ್ರಿಗಳು ಪೀಠೋಪಕರಣಗಳು, ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳು, ಸೋಫಾ ಸೆಟ್‌ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ರಮಾನಂದ ಶೆಟ್ಟಿ ಅವರು ಹಿಂಬಾಗಿಲ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಬಹುಶಃ ಅವರು ಬಾಗಿಲು ತೆರೆಯುವ ಪ್ರಯತ್ನದಲ್ಲಿದ್ದಾಗ ಪ್ರಜ್ಞಾಹೀನರಾಗಿರಬಹುದು. ಅಶ್ವಿನಿ ಶೆಟ್ಟಿ ಅವರು ಬೆಡ್‌ ರೂಮ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂದು ಉಡುಪಿ ಡಿಎಫ್ಒ ವಿನಾಯಕ ಕಲ್ಗುಟ್ಕರ್ ತಿಳಿಸಿದರು.

ಮನೆಯ ಒಳಾಂಗಣ ವಿನ್ಯಾಸಕ್ಕೆ ಮರವನ್ನು ಬಳಕೆ ಮಾಡಿರುವುದು ಮತ್ತು ಸೀಲಿಂಗ್‌ಗೆ ಪಿ.ಒ.ಪಿ. ಬಳಕೆ ಮಾಡಿರುವುದರಿಂದ ಇವುಗಳಿಗೆ ಬೆಂಕಿ ಹಿಡಿದಾಗ ಮನೆಯೊಳಗೆ ದಟ್ಟ ಹೊಗೆ ಆವರಿಸಿತ್ತು. ಸೆಂಟ್ರೈಸ್ಡ್‌ ಎ.ಸಿ. ವ್ಯವಸ್ಥೆ ಇದ್ದುದರಿಂದ ಹೊಗೆ ಇನ್ನಷ್ಟು ಹಬ್ಬಿದೆ ಎಂದೂ ವಿವರಿಸಿದರು.

ಬೆಳಿಕ್ಕೆ 5.50ರ ಸುಮಾರಿಗೆ ನಮಗೆ ಕರೆ ಬಂದಿತ್ತು. ಐದು ನಿಮಿಷದಲ್ಲಿ ನಮ್ಮ ತಂಡ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ಆರಂಭಿಸಿತ್ತು. ಬೆಂಕಿ ನಂದಿಸಲು ಕುಂದಾಪುರದಿಂದಲೂ ಜಲವಾಹನವನ್ನು ಕರೆಸಲಾಗಿತ್ತು ಎಂದೂ ಅವರು ವಿವರಿಸಿದರು. ಅಗ್ನಿಶಾಮಕ ದಳದ ಮಂಗಳೂರಿನ ಸಿಎಫ್‌ಒ ತಿರುಮಲೇಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಕ್ಕಟ್ಟಾದ ರಸ್ತೆ: ಅಗ್ನಿ ಅವಘಡ ಸಂಭವಿಸಿರುವ ಮನೆ ಇರುವ ಬಡಾವಣೆಯಲ್ಲಿ ರಸ್ತೆ ಇಕ್ಕಟ್ಟಾಗಿದ್ದುದರಿಂದ ಅಗ್ನಿ ಶಾಮಕ ದಳದ ಜಲವಾಹನಕ್ಕೆ ಬರಲು ತೊಂದರೆಯಾಯಿತು. ಮನೆಯಿಂದ ಅಲ್ಪ ದೂರದಲ್ಲಿ ವಾಹನ ನಿಲ್ಲಿಸಬೇಕಾಯಿತು.

ವಿನಾಯಕ ಕಲ್ಮನಿ
ವಿನಾಯಕ ಕಲ್ಮನಿ
ಅಗ್ನಿ ಅನಾಹುತ ನಡೆದಿರುವ ಮನೆ
ಅಗ್ನಿ ಅನಾಹುತ ನಡೆದಿರುವ ಮನೆ
ಮನೆಯೊಳಗಿನ ಪೀಠೋಪಕರಣಗಳು ಸುಟ್ಟು ಕರಕಲಾಗಿರುವುದು
ಮನೆಯೊಳಗಿನ ಪೀಠೋಪಕರಣಗಳು ಸುಟ್ಟು ಕರಕಲಾಗಿರುವುದು
ಅಗ್ನಿಶಾಮಕ ದಳದ ಅಧಿಕಾರಿಗಳು ಪರಿಶೀಲಿಸಿದರು
ಅಗ್ನಿಶಾಮಕ ದಳದ ಅಧಿಕಾರಿಗಳು ಪರಿಶೀಲಿಸಿದರು

ಪ್ರಾಣ ಉಳಿಸಿದ ವಿನಾಯಕ ಕಲ್ಮನಿ

ಮನೆಯೊಳಗೆ ಬೆಂಕಿಯ ಜ್ವಾಲೆ ಹಾಗೂ ಹೊಗೆ ತುಂಬಿಕೊಂಡಾಗ ರಮಾನಂದ ಶೆಟ್ಟಿ ಅವರ ಮಗಳು ಮತ್ತು ಮಗ ಸ್ನಾನದ ಕೋಣೆಯೊಳಗೆ ಆಶ್ರಯ ಪಡೆದಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ ಕಲ್ಮನಿ ಅವರು ಉಸಿರಾಟದ ಸಲಕರಣೆ ಧರಿಸಿ ಹೊಗೆ ಮತ್ತು ಬೆಂಕಿಯ ಜ್ವಾಲೆಯ ನಡುವೆಯೇ ತೆರಳಿ ಅವರನ್ನು ರಕ್ಷಿಸಿದ್ದಾರೆ ಎಂದು ಡಿಎಫ್ಒ ತಿಳಿಸಿದರು. ವಿನಾಯಕ ಅವರಿಗೆ ಮತ್ತೊಬ್ಬ ಸಿಬ್ಬಂದಿ ರಾಘವೇಂದ್ರ ಆಚಾರ್ಯ ಅವರೂ ನೆರವು ನೀಡಿದ್ದರು. ಅಗ್ನಿಶಾಮಕ ದಳದ ತಂಡ ಕಾರ್ಯಾಚರಣೆ ನಡೆಸಿ ತ್ವರಿತವಾಗಿ ಬೆಂಕಿ ನಂದಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT