ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೊಮ್ಯಾಟೊ, ಬೆಳ್ಳುಳ್ಳಿ ದರ ಏರಿಕೆ ಬಿಸಿ

ಹಬ್ಬದ ಸಂಭ್ರಮದ ನಡುವೆ ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ
ನವೀನ್‌ ಕುಮಾರ್‌ ಜಿ.
Published : 4 ಅಕ್ಟೋಬರ್ 2024, 5:05 IST
Last Updated : 4 ಅಕ್ಟೋಬರ್ 2024, 5:05 IST
ಫಾಲೋ ಮಾಡಿ
Comments

ಉಡುಪಿ: ನವರಾತ್ರಿ ಹಬ್ಬ ಆರಂಭವಾಗುತ್ತಿದ್ದಂತೆ ತರಕಾರಿ, ಹೂವಿನ ದರ ಏರಿಕೆಯಾಗಿ‌ ಗ್ರಾಹಕರು ಬಸವಳಿಯುವಂತಾಗಿದೆ.

ಕೆ.ಜಿ. ಬೆಳ್ಳುಳ್ಳಿ ದರ ₹300ರ ಗಡಿ ದಾಟಿದರೆ, ಈರುಳ್ಳಿ ದರ ಕೆ.ಜಿ.ಗೆ ₹55 ಆಗಿದೆ. ಕೆ.ಜಿ. ಟೊಮ್ಯಾಟೊ ದರ ₹70ಕ್ಕೆ ಏರಿಕೆಯಾಗಿದೆ.

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಈ ಭಾಗದಲ್ಲಿ ಹೆಚ್ಚಿನವರು ಮಾಂಸಾಹಾರ ಸೇವನೆ ಮಾಡುವುದಿಲ್ಲ. ಈ ಕಾರಣಕ್ಕೆ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಕುದುರುತ್ತದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಆಗದಿದ್ದಾಗ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗುತ್ತದೆ ಎನ್ನುತ್ತಾರೆ ಮಾರಾಟಗಾರರು.

ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ಅತಿಯಾಗಿ ಮಳೆಯಾದ ಕಾರಣ ಬೆಳೆ ನಾಶವಾಗಿರುವುದರಿಂದಲೂ ತರಕಾರಿ ದರ ಏರಿಕೆಯಾಗಿದೆ ಎಂದು ಹೇಳುತ್ತಾರೆ.

ಹೋಟೆಲ್, ರೆಸ್ಟೋರೆಂಟ್‌ನವರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಖರೀದಿಸುತ್ತಾರೆ. ಬೆಲೆ ಸ್ವಲ್ಪ ಕಡಿಮೆಯಾದ ಕೂಡಲೇ ಖರೀದಿಸಿ ದಾಸ್ತಾನು ಇರಿಸುತ್ತಾರೆ ಎನ್ನುತ್ತಾರೆ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಬಳಿಯ ತರಕಾರಿ ಮಾರಾಟಗಾರ ಆನಂದ.

ಬೆಳ್ಳುಳ್ಳಿಗೆ ವಿಪರೀತ ದರ ಏರಿಕೆಯಾಗಿರುವುದರಿಂದ ಅದನ್ನು ಖರೀದಿಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಇದೀಗ ನಿಷೇಧಿತ ಚೀನಾ ಬೆಳ್ಳುಳ್ಳಿ ಕೂಡ ಮಾರುಕಟ್ಟೆ ಪ್ರವೇಶಿಸಿದೆ ಎಂಬ ಸುದ್ದಿ ಹರಡಿರುವುದರಿಂದ ಗ್ರಾಹಕರು ಬೆಳ್ಳುಳ್ಳಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.

ಉಡುಪಿಯ ಎಂಪಿಎಂಸಿಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ ಮಾಡಲಾಗುತ್ತದೆ ಎಂದ ದೂರುಗಳು ಕೇಳಿ ಬಂದ ಕಾರಣ ಈಚೆಗೆ ನಗರಸಭೆಯವರು ಬೆಳ್ಳುಳ್ಳಿ ಮೂಟೆಗಳನ್ನು ವಶಪಡಿಸಿಕೊಂಡು ಅದರ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದರು.

ತೆಂಗಿನ ಕಾಯಿಯ ಬೆಲೆ ಕೂಡ ಹಬ್ಬದ ಸಂದರ್ಭದಲ್ಲೇ ಗಗನಕ್ಕೇರಿರುವುದು ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಕಳೆದೊಂದು ವಾರದಿಂದ ತೆಂಗಿನ ಕಾಯಿ ಬೆಲೆ ಕೆ.ಜಿ.ಗೆ ₹50ರ ಆಸುಪಾಸಿನಲ್ಲಿದೆ. ಇಳುವರಿ ಕುಸಿತವಾಗಿರುವುದರಿಂದ ತೆಂಗಿನ ಕಾಯಿಯ ದರ ಏರಿಕೆಯಾಗಿದೆ. ಎಳನೀರಿನ ದರವೂ ₹50ರಿಂದ ₹60 ಇದೆ.

‘ಹತ್ತು ದಿನಗಳ ಹಿಂದೆ ಒಂದು ತೆಂಗಿನ ಕಾಯಿಯನ್ನು ₹25ಕ್ಕೆ ಮಾರಾಟ ಮಾಡುತ್ತಿದ್ದೆವು, ಇದೀಗ ಕೆ.ಜಿ.ಗೆ ₹50 ದಾಟಿರುವುದರಿಂದ ಒಂದು ತೆಂಗಿನ ಕಾಯಿಯನ್ನು ₹35ಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಗ್ರಾಹಕರು ಖರೀದಿಗೆ ಮುಂದಾಗುವುದಿಲ್ಲ’ ಎಂದು ಅಂಬಲಪಾಡಿಯಲ್ಲಿ ತರಕಾರಿ ಮಾರಾಟ ಮಾಡುವ ಸುನಿತಾ ಬಾಯಿ ಅಳಲು ತೋಡಿಕೊಳ್ಳುತ್ತಾರೆ.

ಹೂವು
ಹೂವು

ಹೂವಿನ ದರವೂ ಏರಿಕೆ

ಹಬ್ಬ ಆರಂಭವಾಗುತ್ತಿದ್ದಂತೆ ಹೂವಿನ ದರ ಏರಿಕೆಯಾಗಿದೆ. ಬುಧವಾರ ಅಟ್ಟೆಗೆ ₹1150 ಇದ್ದ ಮಲ್ಲಿಗೆ ದರವು ಗುರುವಾರ ಅಟ್ಟೆಗೆ ₹1300ಕ್ಕೆ ಏರಿಕೆಯಾಗಿದೆ. ಮಾರಿಗೆ ₹100 ಇದ್ದ ಸೇವಂತಿಗೆ ಕಾಕಡ ಚೆಂಡು ಹೂವುಗಳ ಬೆಲೆಯು ಮಾರಿಗೆ ₹120 ದಾಟಿದೆ. ಹೂವಿನ ದರ ಇನ್ನಷ್ಟು ಜಾಸ್ತಿಯಾಗಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಹೂವಿನ ದರ ಏರಿಕೆಯಾಗುತ್ತದೆ. ಉಡುಪಿಗೆ ಮೈಸೂರು ದಾವಣಗೆರೆ ಮತ್ತು ಚಿತ್ರದುರ್ಗ ಕಡೆಯಿಂದ ಹೂವುಗಳನ್ನು ತರಲಾಗುತ್ತದೆ. ಅಲ್ಲಿ ಮಳೆ ಬಂದು ಹೂವಿನ ಬೆಳೆ ಹಾನಿಯಾಗಿರುವುದರಿಂದಲೂ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಉಡುಪಿಯ ಹೂ ಮಾರಾಟಗಾರ ಗಿರೀಶ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT