ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರೂರು ಗುಡ್ಡ: ಹೂಳೆತ್ತಲು ಬಂತು ಬಾರ್ಜ್

Published : 19 ಸೆಪ್ಟೆಂಬರ್ 2024, 0:00 IST
Last Updated : 19 ಸೆಪ್ಟೆಂಬರ್ 2024, 0:00 IST
ಫಾಲೋ ಮಾಡಿ
Comments

ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರಿನ ಗಂಗಾವಳಿ ನದಿಯಲ್ಲಿ ಸಂಗ್ರಹಗೊಂಡ ಮಣ್ಣಿನ ದಿಬ್ಬ ತೆರವುಗೊಳಿಸಿ, ಹೂಳೆತ್ತುವ ಕಾರ್ಯಾಚರಣೆಗೆ ಗೋವಾದಿಂದ ಬಾರ್ಜ್ ಮತ್ತು ಬೋಟ್ ಬುಧವಾರ ಇಲ್ಲಿನ ವಾಣಿಜ್ಯ ಬಂದರಿಗೆ ಬಂದಿದೆ. ಅಲ್ಲಿಂದ ಇಲ್ಲಿಗೆ ಬರಲು 12 ಗಂಟೆ ಸಮಯ ತಗುಲಿದೆ.

ಗೋವಾದ ಡೀಪ್ ಡ್ರೆಡ್ಜ್ ಎಂಬ ಖಾಸಗಿ ಕಂಪನಿಗೆ ಸೇರಿದ ಕ್ರೇನ್ ಮತ್ತು ಬ್ಯಾಕ್ ಹೋ (ಹೂಳು ತೆರವುಗೊಳಿಸುವ ಜೆಸಿಬಿ ಮಾದರಿ ಯಂತ್ರ) ಒಳಗೊಂಡ ಬಾರ್ಜ್‍ನ್ನು ಅದೇ ಕಂಪನಿಯ ಟಗ್ ಬೋಟ್ ಎಳೆದು ತಂದಿದೆ. ಬಾರ್ಜ್‌ ಸಮುದ್ರ ಮತ್ತು ನದಿ ಮೂಲಕ ಶಿರೂರಿಗೆ ಸಾಗಬೇಕಿದ್ದು, ಹಲವು ಸವಾಲಿನಿಂದ ಕೂಡಿದೆ.

‘ಸಮುದ್ರದಿಂದ ಗಂಗಾವಳಿ ನದಿ ಸೇರಲು ಮಂಜಗುಣಿ ಮತ್ತು ಗಂಗೆಕೊಳ್ಳದ ಅಳಿವೆ ಪ್ರದೇಶದಲ್ಲಿ ಸಾಗಬೇಕು. ಸಮುದ್ರ ಉಬ್ಬರ ಇದ್ದಾಗ ಮಾತ್ರ ಅಳಿವೆ ದಾಟಿ, ನದಿ ಸೇರಬೇಕು. ಅಲ್ಲಿಂದ ಸ್ವಲ್ಪ ದೂರದಲ್ಲೇ ಎದುರಾಗುವ ಗಂಗಾವಳಿ–ಮಂಜಗುಣಿ ಸೇತುವೆ ಮತ್ತು ಶಿರೂರು ಸಮೀಪದ ರೈಲ್ವೆ ಸೇತುವೆ ದಾಟಲು ಸಮುದ್ರ ಇಳಿತ ಇರಬೇಕು. ಪ್ರತಿ ಹಂತದಲ್ಲೂ ವಾತಾವರಣದ ಅನುಕೂಲ ಮತ್ತು ನೀರಿನ ಹರಿವನ್ನು ಗಮನಿಸುತ್ತ ಸಾಗಬೇಕು’ ಎಂದು ಟಗ್ ಬೋಟ್‍ನ ಕ್ಯಾಪ್ಟನ್ ಚಂದ್ರಕಾಂತ ‘ಪ್ರಜಾವಾಣಿ’ಗೆ ತಿಳಿಸಿದರು.

ಜುಲೈ16 ರಂದು ಶಿರೂರಿನಲ್ಲಿ ಗುಡ್ಡ ಕುಸಿತ ದುರಂತ ಸಂಭವಿಸಿ, ಅಪಾರ ಪ್ರಮಾಣದ ಮಣ್ಣು, ಕಲ್ಲಿನ ರಾಶಿ ನದಿಗೆ ಬಿದ್ದು ಕೃತಕ ದಿಬ್ಬ ಸೃಷ್ಟಿಯಾಗಿದೆ. ಅದರಡಿ ಕೇರಳದ ಲಾರಿ ಸಿಲುಕಿದೆ. ಮಣ್ಣಿನ ದಿಬ್ಬ ತೆರವುಗೊಳಿಸುವ ಹೊಣೆ ಕಾರವಾರದ ಅಭಿಷೇನಿಯಾ ಓಶನ್ ಸರ್ವಿಸಸ್ ಎಂಬ ಕಂಪನಿಗೆ ವಹಿಸಿಕೊಂಡಿದ್ದು, ಅದೇ ಸಂಸ್ಥೆಯು ಗೋವಾದಿಂದ ಹೂಳೆತ್ತುವ ಬಾರ್ಜ್ ತರಿಸಿದೆ. ಸಂಪೂರ್ಣ ದಿಬ್ಬ ತೆರವುಗೊಳಿಸಲು ಕನಿಷ್ಠ 10 ದಿನ ಕಾರ್ಯಾಚರಣೆ ನಡೆಸಬೇಕಾಗಬಹುದು ಎಂದು ಕಂಪನಿಯು ಅಂದಾಜಿಸಿದೆ.   

ಹೂಳೆತ್ತುವ ಬಾರ್ಜ್‌ನ ಅಡಿಪಾಯ ನೀರಿನಿಂದ ಒಂದು ಮೀಟರ್ ಆಳದವರೆಗೆ ಇರಲಿದೆ. ಸಮುದ್ರದಂತೆ ನದಿಯಲ್ಲಿ ಸಾಗುವುದು ಸವಾಲು. ಪ್ರತಿ ಹಂತದಲ್ಲಿ ಸುರಕ್ಷತೆ ಮೇಲೆ ನಿಗಾ ಇರಿಸಿ ಚಲಿಸಬೇಕು.
ಕ್ಯಾಪ್ಟನ್ ಸಿ.ಸ್ವಾಮಿ ನಿರ್ದೇಶಕ ಬಂದರು ಜಲಸಾರಿಗೆ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT