ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಲೇಕೇರಿ: ಅದಿರು ರಾಶಿಯ ಅಲ್ಪ ಭಾಗ ತೆರವಿಗೆ ಸಿದ್ಧತೆ

ಹೈಕೋರ್ಟ್ ಸೂಚನೆ ಆಧರಿಸಿ ಜಂಟಿ ಮೌಲ್ಯಮಾಪನ
Published : 10 ಸೆಪ್ಟೆಂಬರ್ 2024, 13:55 IST
Last Updated : 10 ಸೆಪ್ಟೆಂಬರ್ 2024, 13:55 IST
ಫಾಲೋ ಮಾಡಿ
Comments

ಕಾರವಾರ: ಅಂಕೋಲಾ ತಾಲ್ಲೂಕಿನ ಬೇಲೇಕೇರಿ ಬಂದರು ಪ್ರದೇಶದ ಸುತ್ತಮುತ್ತ ದಶಕದಿಂದ ದಾಸ್ತಾನು ಆಗಿರುವ ಕಬ್ಬಿಣದ ಅದಿರಿನ ಪೈಕಿ ಅಲ್ಪಪಾಲನ್ನು ತೆರವುಗೊಳಿಸಲು ಸಂಬಂಧಿಸಿದ ಕಂಪನಿಗಳಿಗೆ ಹೈಕೋರ್ಟ್ ಅನುಮತಿಸಿದೆ. ಇದರ ಹಿನ್ನೆಲೆಯಲ್ಲಿ ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅದಿರು ರಾಶಿಯ ಜಂಟಿ ಮೌಲ್ಯಮಾಪನ ನಡೆದಿದೆ.

‘2009–10ರ ಅವಧಿಯಲ್ಲಿ ದಾಸ್ತಾನು ಮಾಡಲಾದ 2.72 ಲಕ್ಷ ಟನ್ ಅದಿರು ಇರಬಹುದಾದ 56 ರಾಶಿಗಳ ಪೈಕಿ, ಸದ್ಯ ಐದು ರಾಶಿಗಳ ತೆರವಿಗೆ ಷರತ್ತುಬದ್ಧ ಅನುಮತಿ ಸಿಕ್ಕಿದೆ. 30 ರಿಂದ 35 ಸಾವಿರ ಟನ್ ಅದಿರು ರಾಶಿ ತೆರವು ಆಗಬಹುದು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ತೆರವುಗೊಳಿಸುವ ಅದಿರಿಗೆ ಸಂಬಂಧಿಸಿ ಸೂಕ್ತ ರಾಜಧನ ಪಾವತಿಸುವ ಜತೆಗೆ ಸೂಕ್ತ ಆರ್ಥಿಕ ಭದ್ರತೆ ಒದಗಿಸಬೇಕು. ಪರಿಸರಕ್ಕೆ ಹಾನಿ ಆಗದಂತೆ ಅದಿರು ವಿಲೇವಾರಿ ಮಾಡಬೇಕು ಎಂಬುದು ಸೇರಿ ಹಲವು ಷರತ್ತುಗಳನ್ನು ಕಂಪನಿಗಳಿಗೆ ವಿಧಿಸಲಾಗಿದೆ. ಅವು ಪಾಲಿಸಿದರಷ್ಟೆ ಅದಿರು ವಿಲೇವಾರಿ ಸಾಧ್ಯವಾಗಲಿದೆ’ ಎಂದು ಅವರು ತಿಳಿಸಿದರು.

‘ರಾಜಮಹಲ್ ಸಿಲ್ಕ್, ವೇದಾಂತ, ಜೆಮ್‍ಟೆಕ್ ಮತ್ತು ಸೆಸಾ ಗೋವಾ ಕಂಪನಿಗಳಿಗೆ ಅದಿರು ತೆರವಿಗೆ ಅನುಮತಿ ಸಿಕ್ಕಿದೆ. ಹೈಕೋರ್ಟ್ ಸೂಚನೆ ಆಧರಿಸಿ ಅದಿರಿನ ಮೌಲ್ಯಮಾಪನ ಕಾರ್ಯ ನಡೆದಿದೆ’ ಎಂದು ಅಂಕೋಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಕೆ.ಸಿ.ಜಯೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಲವು ವರ್ಷಗಳಿಂದ ಮಳೆ, ಗಾಳಿ, ಬಿಸಿಲಿಗೆ ಅದಿರು ರಾಶಿಯ ಗುಣಮಟ್ಟ ಕುಸಿದಿದೆ. ಈಗಾಗಲೇ ಕೆಲ ಮಾದರಿ ಪ್ರಯೋಗಾಲಯ ವರದಿ ಬಂದಿದ್ದು, ಇನ್ನಷ್ಟು ವರದಿ ಬರಬೇಕಿದೆ. ಅದನ್ನು ಆಧರಿಸಿ ಅದಿರು ವಿಲೇವಾರಿ ಪ್ರಕ್ರಿಯೆ ನಡೆಯಲಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಜಿ.ಎಸ್.ಆಶಾ ವಿವರಿಸಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT