ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ‘ವಸೂಲಿ ಕೇಂದ್ರ’ವಾದ ಬಸ್ ನಿಲ್ದಾಣದ ಮೂತ್ರಾಲಯ

Published 15 ಜುಲೈ 2024, 6:42 IST
Last Updated 15 ಜುಲೈ 2024, 6:42 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಬಹುತೇಕ ಬಸ್ ನಿಲ್ದಾಣಗಳಲ್ಲಿನ ಶೌಚಾಲಯಗಳು ‘ವಸೂಲಿ ಕೇಂದ್ರ’ವಾಗಿ ಬದಲಾಗಿರುವುದು ಕಂಡುಬಂದಿದೆ. ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಶೌಚಾಲಗಳ ನಿರ್ವಹಣೆಯಲ್ಲೂ ಲೋಪಗಳಾಗುತ್ತಿವೆ.

ಬಸ್ ನಿಲ್ದಾಣಗಳಲ್ಲಿ ಜನರ ಓಡಾಟ ಹೆಚ್ಚಿರುವುದರಿಂದ ಮೂತ್ರಾಲಯ, ಶೌಚಾಲಯಗಳ ಬಳಕೆಯೂ ಹೆಚ್ಚಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಗುತ್ತಿಗೆದಾರರು ಮೂತ್ರಾಲಯ ಬಳಕೆ ಉಚಿತ ಎಂದು ಫಲಕ ಅಳವಡಿಸಿದ್ದರೂ ಜನರಿಂದ ₹3 ರಿಂದ ₹5ರ ವರೆಗೆ ವಸೂಲಿ ಮಾಡುತ್ತಿರುವುದು ಕಾರವಾರ, ಕುಮಟಾ, ಭಟ್ಕಳ ಸೇರಿದಂತೆ ಹಲವೆಡೆ ನಡೆಯುತ್ತಿದೆ.

ಶೌಚಾಲಯಗಳ ನಿರ್ವಹಣೆ ಗುತ್ತಿಗೆ ಪಡೆಯುವವರಲ್ಲಿ ಹೊರರಾಜ್ಯದವರೇ ಹೆಚ್ಚಿದ್ದಾರೆ. ಅಲ್ಲದೇ ಇಲ್ಲಿ ನಿರ್ವಹಣೆಗೂ ಹೊರರಾಜ್ಯದವರನ್ನೇ ಬಳಸಿಕೊಳ್ಳಲಾಗುತ್ತಿದೆ. ಈ ಕಾರ್ಮಿಕರು ಹಣ ನೀಡಲು ಒಪ್ಪದ ಜನರೊಂದಿಗೆ ವಾಗ್ವಾದ ನಡೆಸುವ ಜತೆಗೆ ಅವರ ಮೇಲೆ ಹಲ್ಲೆಗೆ ಮುಂದಾಗುತ್ತಿರುವ ದೂರುಗಳು ವ್ಯಾಪಕವಾಗಿವೆ.

‘ಕಾರವಾರ ನಗರದಲ್ಲಿ ನಗರಸಭೆಯಿಂದ ನಿರ್ವಹಿಸಲ್ಪಡುವ ಕೆಲ ಶೌಚಾಲಯಗಳಿಗೆ ದಿನದ ಬಹುತೇಕ ಅವಧಿಯಲ್ಲಿ ಬೀಗ ಬಿದ್ದಿರುತ್ತಿದೆ. ಹೆದ್ದಾರಿ ಅಂಚಿನ ಶೌಚಾಲಯ, ಕೋಡಿಬಾಗದಲ್ಲಿರುವ ಶೌಚಾಲಯಗಳು ಬಾಗಿಲು ಮುಚ್ಚಿಕೊಂಡಿರುವುದೇ ಹೆಚ್ಚು’ ಎನ್ನುತ್ತಾರೆ ರಾಹುಲ ನಾಯ್ಕ.

ಶಿರಸಿ ನಗರ ವ್ಯಾಪ್ತಿಯಲ್ಲಿ ಬಹುತೇಕ ಸಾರ್ವಜನಿಕ ಶೌಚಾಲಯಗಳು ಸ್ವಚ್ಛತೆಯಿಲ್ಲದ ಕಾರಣ ಜನರು ಬಳಕೆಗೆ ಹಿಂದೇಟು ಹಾಕುತ್ತಿದ್ದರೆ, ಹೊಸ ಶೌಚಾಲಯಗಳನ್ನು ನಿರ್ಮಿಸಿ ಬಾಗಿಲು ಹಾಕಿ ಇಡಲಾಗಿದೆ. ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಲಯಗಳು ನಿರ್ವಹಣೆ ಇಲ್ಲದೆ ಕಟ್ಟಡಗಳ ಸುತ್ತಮುತ್ತ ಕೊಳಚೆ, ತ್ಯಾಜ್ಯ ಸಂಗ್ರಹವಾಗುತ್ತಿದೆ. ಹಳೆ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲ.

ಭಟ್ಕಳ ಪಟ್ಟಣದ ಬಸ್ ನಿಲ್ದಾಣದ ಹೊಸದಾಗಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿದೆ. ಮಲ ವಿರ್ಸಜನೆಗೆ ₹5 ಹಾಗೂ ಮೂತ್ರ ವಿರ್ಸಜನೆಗೆ ಉಚಿತ ಎಂದು ಫಲಕ ಅಳವಡಿಸಿದ್ದಾರೆ. ಆದರೆ, ಮೂತ್ರ ವಿರ್ಸಜನೆಗೆ ₹5 ರೂಪಾಯಿ ಹಾಗೂ ಮಲ ವಿರ್ಸಜನೆಗೆ ₹10 ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವಿದೆ.

ಹಳಿಯಾಳ ಪಟ್ಟಣದಲ್ಲಿ 9 ಸಾರ್ವಜನಿಕ ಶೌಚಾಲಯಗಳಿದ್ದು, ದಿನಕ್ಕೆ ಎರಡು ಬಾರಿ ಸ್ವಚ್ಛಗೊಳಿಸಲಾಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಬಳಿ ಇರುವ ಶೌಚಾಲಯ ಸಂಪೂರ್ಣ ಹದಗೆಟ್ಟು, ದ್ವಿಚಕ್ರವಾಹನ ನಿಲುಗಡೆ ತಾಣವಾಗಿ ಬದಲಾಗಿದೆ. ಬಸ್ ಸಾರಿಗೆ ನಿಲ್ದಾಣ ಮತ್ತಿತರ ಭಾಗದಲ್ಲಿ ಇರುವ ಶೌಚಾಲಯಗಳ ನಿರ್ವಹಣೆ ಇಲ್ಲದೆ ಪಾಳು ಬೀಳುತ್ತಿವೆ.

‘ಪ್ರತಿನಿತ್ಯ ಮೂರು ಬಾರಿ ಶೌಚಾಲಯವನ್ನು ಸ್ವಚ್ಛಗೊಳಿಸುತ್ತೇವೆ. ಸ್ವಚ್ಛತೆಗೋಸ್ಕರ ಕೆಲ ಸಾಮಗ್ರಿಗಳನ್ನು ಕೊಂಡು ತರಬೇಕಾಗುತ್ತಿದೆ.  ಪುರಸಭೆಯಿಂದ ನಿಗದಿಪಡಿಸಿದ ಮೊತ್ತ ಸಾಲದು. ಹೀಗಾಗಿ, ಜನರಿಂದ ₹2 ರಿಂದ ₹5ರ ವರೆಗೆ ವಸೂಲಿ ಮಾಡುವುದು ಅನಿವಾರ್ಯ. ಕೆಲ ಜನರು ಹಣ ಪಾವತಿಸಿದರೆ, ಮತ್ತೆ ಕೆಲವರು ಹಣ ನೀಡದೆ ಬೈಗುಳ ನೀಡಿ ತೆರಳುತ್ತಾರೆ’ ಎನ್ನುತ್ತಾರೆ ಶೌಚಾಲಯ ನಿರ್ವಹಿಸುವ ಲಕ್ಷ್ಮಿ ಮೇತ್ರಿ ಮತ್ತು ಮಾರುತಿ ಮೇತ್ರಿ.

ಯಲ್ಲಾಪುರ ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯಗಳು ನಿರ್ವಹಣೆಯ ಕೊರತೆ ಎದುರಿಸುತ್ತಿವೆ. ಬಸ್ ನಿಲ್ದಾಣದಲ್ಲಿನ ಶೌಚಾಲಯದ ಬೇಸಿನ್ ಒಡೆದಿದ್ದು ಸರಿಪಡಿಸಲಾಗಿಲ್ಲ. ಪಟ್ಟಣ ಪಂಚಾಯಿತಿ ನಿರ್ವಹಣೆಯಲ್ಲಿರುವ ಬೆಲ್ ರಸ್ತೆ ಪಕ್ಕದ ಶೌಚಾಲಯದ ಮೆಟ್ಟಿಲು ಕಿತ್ತುಹೋಗಿದ್ದು ಹೆಚ್ಚಿನ ದಿನ ಬಾಗಿಲು ತೆರೆಯುವುದಿಲ್ಲ. ಐಬಿ ರಸ್ತೆಯಲ್ಲಿರುವ ಶೌಚಾಲಯಕ್ಕೂ ನಿರ್ವಹಣೆ ಸರಿಯಾಗಿಲ್ಲ. ತರಕಾರಿ ಮಾರುಕಟ್ಟೆಯ ಬಳಿ ಇರುವ ಶೌಚಾಲಯ ಮತ್ತು ತಾಲ್ಲೂಕು ಕ್ರೀಡಾಂಗಣದಲ್ಲಿರುವ ಶೌಚಾಲಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ.

ಮುಂಡಗೋಡ ಬಸ್‌ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಸ್ವಚ್ಛತೆಯ ಕೊರತೆ ಕಾಡುತ್ತಿದೆ. ಶೌಚಕ್ಕೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ದರವನ್ನು ಕೆಲವೊಮ್ಮೆ ವಸೂಲಿ ಮಾಡುತ್ತಾರೆ ಎಂಬ ಆರೋಪವಿದೆ. ಬಂಕಾಪುರ ರಸ್ತೆಯ ಪೊಲೀಸ್‌ ವಸತಿಗೃಹದ ಕಾಂಪೌಂಡ್‌ಗೆ ತಾಗಿ ಇರುವ ಸಾರ್ವಜನಿಕ ಶೌಚಾಲಯಕ್ಕೆ ಜನರು ಹೋಗಲು ಹಿಂದೇಟು ಹಾಕುವಂತ ಪರಿಸ್ಥಿತಿಯಿದೆ.

ಜೊಯಿಡಾ ಬಸ್ ನಿಲ್ದಾಣದಲ್ಲಿ ಸುಸಜ್ಜಿತ ಸಾರ್ವಜನಿಕ ಶೌಚಾಲಯ ನಿರ್ವಹಣೆ ಇಲ್ಲದೆ ಬಳಕೆಗೆ ಸಿಗದ ಸ್ಥಿತಿ ಇದೆ. ಅಂಗವಿಕಲ ವ್ಯಕ್ತಿಯೊಬ್ಬರು ಇಲ್ಲಿ ಶುಲ್ಕ ವಸೂಲಿ ಮಾಡುತ್ತಾರೆ. ಅವರಿಗೆ ಎರಡೂ ಕೈಗಳು ಇಲ್ಲದಿರುವುದರಿಂದ ಶೌಚಾಲಯ ನಿರ್ವಹಣೆ ಸಮಸ್ಯೆ ಎದುರಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಶಿವಾಜಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ವಹಿಸಲ್ಪಡುವ ಶೌಚಾಲಯದ ಗುತ್ತಿಗೆ ಯಾರು ಪಡೆಯದೇ ಇರುವುದರಿಂದ ಬಹುತೇಕ ಸಮಯದಲ್ಲಿ ಶೌಚಾಲಯದ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿ ಇರುತ್ತಿದೆ. ಬುಧವಾರ ಸಂತೆ ನಡೆಯುವುದರಿಂದ ಮಾರುಕಟ್ಟೆ ಮಧ್ಯದಲ್ಲಿರುವ ಈ ಶೌಚಾಲಯವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ ತರಕಾರಿ ವ್ಯಾಪಾರಿ ಮಹಿಳೆಯರು.

ಗೋಕರ್ಣ ಬಸ್ ನಿಲ್ದಾಣದಲ್ಲಂತೂ ಶೌಚಾಲಯದ ಸ್ಥಿತಿ ಹೇಳತೀರದಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿಯ ಮೇನ್ ಬೀಚ್‍ನಲ್ಲಿ ಕಟ್ಟಲ್ಪಟ್ಟ ಶೌಚಾಲಯದ ಬಳಕೆಗೆ ಉಪ್ಪು ನೀರೇ ಗತಿಯಾಗಿದೆ.

ಅಂಕೋಲಾ ಪಟ್ಟಣದ ಬಸ್ ನಿಲ್ದಾಣ ಹಾಗು ಪುರಸಭೆಯ ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆಯ ಕೊರತೆ ಕಾಣಿಸುತ್ತಿದೆ. ಶೌಚಾಲಯಗಳ ಮುಂದೆ ಕಸದ ರಾಶಿಗಳು ತುಂಬಿಕೊಂಡಿವೆ. ಬಸ್ ನಿಲ್ದಾಣದ ಶೌಚಾಲಯದಲ್ಲಿ ಸಾರ್ವನಿಕರಿಂದ ಶೌಚಾಲಯ ಉಪಯೋಗಿಸಲು ಅಗತ್ಯಕ್ಕಿಂತ ಹೆಚ್ಚು ಹಣ ಪಡೆಯುತ್ತಾರೆ ಎಂಬ ಆರೋಪವಿದೆ.

ಹೊನ್ನಾವರ ಪಟ್ಟಣದಲ್ಲಿನ ಸಾರ್ವಜನಿಕ ಶೌಚಾಲಯಗಳ ದುರವಸ್ಥೆಯ ಕುರಿತಂತೆ ಜನರಿಂದ ದೂರುಗಳು ಕೇಳಿ ಬರುತ್ತಿವೆ. ಮಹಿಳೆಯರ ಬಳಕೆಗೂ ಶೌಚಾಲಯ ನಿರ್ಮಿಸಲಾಗಿದ್ದರೂ ಅಗತ್ಯ ಸ್ವಚ್ಛತೆ ಇಲ್ಲದಿರುವುದರಿಂದ ಇವುಗಳ ಉಪಯೋಗ ತೀರ ಕಡಿಮೆ ಪ್ರಮಾಣದಲ್ಲಿದೆ.

ಸಿದ್ದಾಪುರ ಪಟ್ಟಣದ ಮಾರುಕಟ್ಟೆಯಲ್ಲಿರುವ ಶೌಚಾಲಯ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡಲಾಗಿದೆ. ಹೊರಗುತ್ತಿಗೆಗೆ ನೀಡಲಾದ ಶೌಚಾಲಯಲ್ಲಿ ಮೂತ್ರಾಲಯ ಉಚಿತವಾಗಿದ್ದರೂ ಹಣ ಪಡೆಯುತ್ತಿರುವ ದೂರುಗಳಿವೆ.

‘ತರಕಾರಿ ಮಾರುಕಟ್ಟೆಯ ಪಕ್ಕದಲ್ಲಿರುವ ಶೌಚಾಲಯದಲ್ಲಿ ಹಣ ಪಡೆಯುತ್ತಿದ್ದರೂ ಸ್ವಚ್ಛತೆಯ ಕೊರತೆ ಇದೆ’ ಎಂದು ಮಹಿಳಾ ವ್ಯಾಪಾರಿಯೊಬ್ಬರು ದೂರುತ್ತಾರೆ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ರವಿ ಸೂರಿ, ಎಂ.ಜಿ.ನಾಯ್ಕ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಜ್ಞಾನೇಶ್ವರ ದೇಸಾಯಿ, ಮೋಹನ ನಾಯ್ಕ, ಸುಜಯ ಭಟ್, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಹಳಿಯಾಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿರುವ ಸಾರ್ವಜನಿಕ ಶೌಚಾಲಯ ದ್ವಿಚಕ್ರ ವಾಹನ ನಿಲುಗಡೆ ತಾಣವಾಗಿದೆ.
ಹಳಿಯಾಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿರುವ ಸಾರ್ವಜನಿಕ ಶೌಚಾಲಯ ದ್ವಿಚಕ್ರ ವಾಹನ ನಿಲುಗಡೆ ತಾಣವಾಗಿದೆ.
ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯಲ್ಲಿರುವ ಶೌಚಾಲಯ ಸಾರ್ವಜನಿಕರಿಗೆ ತೀರ ಅಗತ್ಯವಿದ್ದು ಇದನ್ನು ಸದಾ ಸುಸ್ಥಿತಿಯಲ್ಲಿಡಬೇಕು.
ಹನುಮಂತಪ್ಪ ವಡ್ಡರ್ ತರಕಾರಿ ಮಾರಾಟಗಾರ
ಮುಂಡಗೋಡ ಬಸ್‌ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆಗೆ ಎರಡು ರೂಪಾಯಿ ತೆಗೆದುಕೊಳ್ಳುತ್ತಾರೆ. ಶೌಚಕ್ಕೆ ಹೋದರೆ ಹತ್ತು ರೂಪಾಯಿ ನೀಡಬೇಕು. ದುಡ್ಡು ಕೊಡುವ ವಿಚಾರಕ್ಕೆ ಪ್ರಯಾಣಿಕರು ಹಾಗೂ ಶೌಚಾಲಯ ನಿರ್ವಹಣೆಯ ಸಿಬ್ಬಂದಿ ಜತೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ.
ಬಸವರಾಜ ಲಮಾಣಿ ಪ್ರಯಾಣಿಕ
ಬಸ್ ನಿಲ್ದಾಣದ ಮೂತ್ರಾಲಯಗಳಲ್ಲಿ ಜನರು ಶುಲ್ಕ ಪಾವತಿಸುವ ಅಗತ್ಯವಿಲ್ಲ. ಮೂತ್ರಾಲಯ ಬಳಕೆಗೆ ಶುಲ್ಕ ಪಡೆದ ಬಗ್ಗೆ ದೂರು ಬಂದರೆ ಪ್ರತಿ ದೂರಿಗೆ ಅಂತಹ ಗುತ್ತಿಗೆದಾರರಿಗೆ ₹500 ದಂಡ ವಿಧಿಸಲಾಗುತ್ತದೆ.
ಪ್ರವೀಣ ಶೇಟ್ ಸಾರಿಗೆ ಸಂಸ್ಥೆಯ ಅಧಿಕಾರಿ
ಜನ ದಟ್ಟಣೆ ಹೆಚ್ಚಿದಂತೆ ದುರ್ನಾತ
ಕುಮಟಾ ಪಟ್ಟಣ ಮುಖ್ಯ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ನಿರ್ವಹಣೆಯನ್ನು ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಗುತ್ತಿಗೆ ಪಡೆದು ಅದನ್ನು ನಿರ್ವಹಿಸಲು ಬೇರೆಯವರಿಗೆ ಕೊಟ್ಟಿದ್ದಾರೆ. ‘ಬೆಳಗಿನ ಹೊತ್ತು ಮಾತ್ರ ಬಸ್ ನಿಲ್ದಾಣ ಶೌಚಾಲಯ ಸಾಧಾರಣ ಶುಚಿಯಾಗುತ್ತದೆ. ಜನ ದಟ್ಟಣೆ ಹೆಚ್ಚಿದಂತೆ ಶೌಚಾಲಯದಿಂದ ದುರ್ವಾಸನೆ ಬೀರುವುದು ಹೆಚ್ಚಾಗುತ್ತದೆ’ ಎಂದು ಪ್ರಯಾಣಿಕ ವಸಂತ ನಾಯ್ಕ ದೂರಿದರು. ‘ಬಸ್ ನಿಲ್ದಾಣದ ಶೌಚಾಲಯ ನಿರ್ವಹಿಸುವ ಗುತ್ತಿಗೆದಾರರು ಹಣ ಪಡೆದರೂ ಅದನ್ನು ಶುಚಿಯಾಗಿಡದಿರುವುದು ನಿಜವಾಗಿದೆ. ಗುತ್ತಿಗೆದಾರರಿಗೆ ಶುಚಿತ್ವ ಕಾಪಾಡುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಡೆಂಗಿ ಮುಂತಾದ ರೋಗ ಹರುಡವ ಸಾಧ್ಯತೆ ಇರುವುದರಿಂದ ಪ್ರತೀ ವಾರ ಅನಿರೀಕ್ಷಿತ ಭೇಟಿ ಶುಚಿತ್ವ ಪರೀಕ್ಷೆ ನಡೆಸುತ್ತೇನೆ’ ಎಂದು ಕುಮಟಾ ಸಾರಿಗೆ ಘಟಕ ವ್ಯವಸ್ಥಾಪಕ ಎಸ್.ಎಂ.ಕುರ್ತಕೋಟಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT