ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲಿ ಮಠ ಮತ್ತು ನೆರೆಯ ಜಿಲ್ಲೆಯ ಉಡುಪಿಯ ಪೇಜಾವರ ಮಠಗಳ ನಡುವೆ ಸಂಬಂಧ ಬೆಸೆದಿದ್ದು ಭಗವದ್ಗೀತೆ. ಸ್ವರ್ಣವಲ್ಲಿ ಶ್ರೀಗಳ ಭಗವದ್ಗೀತಾ ಅಭಿಯಾನಕ್ಕೆ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಬಹುದೊಡ್ಡ ಶಕ್ತಿಯಾಗಿದ್ದರು.

ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ವೇದಿಕೆಯಲ್ಲಿ ಇವೆರಡೂ ಶ್ರೀಗಳನ್ನು ಒಟ್ಟಿಗೆ ನೋಡುವ ಭಾಗ್ಯ ಭಕ್ತರಿಗೆ ಸಿಗುತ್ತಿತ್ತು. 12 ವರ್ಷಗಳ ಹಿಂದೆ ಸ್ವರ್ಣವಲ್ಲಿ ಮಠ ಪ್ರಾರಂಭಿಸಿರುವ ಗೀತಾ ಅಭಿಯಾನದ ಮಹಾಸಮರ್ಪಣೆ ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ನಡೆಯುತ್ತದೆ. ‘ಬಹುತೇಕ ಎಲ್ಲ ವರ್ಷಗಳ ಮಹಾಸಮರ್ಪಣೆಯಲ್ಲೂ ಪೇಜಾವರ ಶ್ರೀಗಳು ಭಾಗವಹಿಸಿದ್ದರು. ಈ ವರ್ಷ ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲವೆಂದು ಪೇಜಾವರರು, ಮರುದಿನ ನಡೆದ ಗೀತೆಯ 18 ಅಧ್ಯಾಯಗಳ ಪಾರಾಯಣಕ್ಕೆ ಹಾಜರಾಗಿದ್ದರು’ ಎಂದು ಸ್ಮರಿಸಿಕೊಂಡರು ಅಭಿಯಾನದ ಪ್ರಮುಖ ಪ್ರೊ. ಕೆ.ವಿ.ಭಟ್ಟ.

ಶಿರಸಿಯ ರಾಘವೇಂದ್ರ ಮಠದ ವಿಶೇಷ ಕೊಠಡಿ ಬರಿದಾದ ಭಾವ ಅನುಭವಿಸುತ್ತಿದೆ. ‘ಶಿರಸಿಯ ಮಾರ್ಗವಾಗಿ ಎಲ್ಲಿಯೇ ಮುಂದೆ ಸಾಗುವುದಿದ್ದರೂ ಪೇಜಾವರರು ತಂಗುತ್ತಿದ್ದುದು ರಾಘವೇಂದ್ರ ಮಠದ ವಿಶೇಷ ಕೊಠಡಿಯಲ್ಲಿಯೇ ಆಗಿತ್ತು. ರಾತ್ರಿ 12ಕ್ಕೆ ಬಂದರೂ, ಬಾವಿಯಿಂದ ನೀರು ಸೇದಿಕೊಂಡು, ತಣ್ಣೀರು ಸ್ನಾನ ಮಾಡಿ ಅನುಷ್ಠಾನ ನಡೆಸುತ್ತಿದ್ದರು. ಮರುದಿನ ಹೊರಡುವ ಮುಂಚೆ ರಾಘವೇಂದ್ರ ಸ್ವಾಮಿಗೆ ಆರತಿ ಬೆಳಗುತ್ತಿದ್ದರು’ ಎಂದು ಕೆ.ವಿ.ಭಟ್ಟ, ಪೇಜಾವರರ ರಾಘವೇಂದ್ರ ಸ್ವಾಮಿ ಮೇಲಿದ್ದ ಪ್ರೀತಿಯನ್ನು ನೆನಪಿಸಿದರು.

‘ಸ್ವರ್ಣವಲ್ಲಿ ಶ್ರೀಗಳು ಮುಂಬೈ ಹೋದಾಗ ಪೇಜಾವರ ಶಾಖಾ ಮಠದಲ್ಲಿ ತಂಗಿದ್ದರು. ಒಂದು ದಿನ ತಡರಾತ್ರಿ ಬಂದಿದ್ದ ವಿಶ್ವೇಶತೀರ್ಥ ಸ್ವಾಮೀಜಿ. ‘ಈ ಗುರುಗಳು ತುಂಬ ಅನುಷ್ಠಾನಿಕರು. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ ಎಂದು ಶಿಷ್ಯರ ಬಳಿ ಹೇಳಿ, ಮರುದಿನ ಮತ್ತೆ ಪ್ರಯಾಣ ಬೆಳೆಸಿದ್ದರು’ ಎಂದು ಅವರು ಎರಡು ಮಠಗಳ ನಡುವಿನ ಸಂಬಂಧ ತಿಳಿಸಿದರು.

‘2014ರಲ್ಲಿ ಇಲ್ಲಿ ನಡೆದ ಕೆರೆ ಸಮ್ಮೇಳನದಲ್ಲಿ ಪೇಜಾವರ ಶ್ರೀಗಳು ಭಾಗವಹಿಸಿದ್ದರು. ಸ್ವರ್ಣವಲ್ಲಿ ಶ್ರೀಗಳ ವಿನಯಪೂರ್ವಕ ಒತ್ತಾಯಕ್ಕೆ ಮಣಿದು ಅವರು ಇಲ್ಲಿಗೆ ಬಂದಿದ್ದರು. 2018ರಲ್ಲಿ ಪಶ್ಚಿಮಘಟ್ಟ ಉಳಿಸಿ ಸಮಾವೇಶದಲ್ಲಿ ಪಾಲ್ಗೊಂಡಾಗ, ಶ್ರೀಗಳನ್ನು ಸನ್ಮಾನಿಸಲಾಗಿತ್ತು. ಪರಿಸರ ಹೋರಾಟಕ್ಕೆ ಯಾವತ್ತೂ ಬೆಂಬಲವಿದೆ ಎನ್ನುತ್ತಿದ್ದರು’ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಹೇಳಿದರು.

‘ಶಾಸ್ತ್ರದಲ್ಲಿ ಆಳ ಜ್ಞಾನ’

‘ಪೇಜಾವರ ಶ್ರೀಗಳಿಗೆ ಶಾಸ್ತ್ರದಲ್ಲಿ ಆಳವಾದ ಜ್ಞಾನವಿತ್ತು. ಶಾಸ್ತ್ರದ ಕುರಿತು ತರ್ಕಗಳು ನಡೆಯುತ್ತಿದ್ದವು. ಎಲ್ಲವನ್ನೂ ಸುಮ್ಮನೆ ಕುಳಿತು ಆಲಿಸುತ್ತಿದ್ದ ಶ್ರೀಗಳು, ಯಾರಿಗೂ ನಿರ್ಣಯಕ್ಕೆ ಬರಲು ಆಗದಿದ್ದಾಗ, ಮಧ್ಯಪ್ರವೇಶಿಸಿ ಉತ್ತರಿಸುತ್ತಿದ್ದರು. ಅವರು ಕೊಟ್ಟ ಉತ್ತರ ಎಲ್ಲರಿಗೂ ಸಮ್ಮತವಾಗುತ್ತಿತ್ತು’ ಎಂದು ನೆನಪಿಸಿಕೊಂಡರು ವಿದ್ವಾನ್ ನೀಲಕಂಠ ಯಾಜಿ ಬೈಲೂರು.

‘ಉಡುಪಿಯ ಎಸ್‌ಎಂಎಸ್‌ಟಿ ಸಂಸ್ಕೃತ ಮಹಾವಿದ್ಯಾಲಯದ ಜ್ಯೋತಿಷ್ಯ ಶಾಸ್ತ್ರದ ವಿದ್ಯಾರ್ಥಿಯಾಗಿ ನಾನು ಸೇರುವಾಗ, ಪೇಜಾವರ ಮಠದ ಪರ್ಯಾಯವಿತ್ತು. ನಾವು ವಿದ್ಯಾರ್ಥಿಗಳು ಮಠಕ್ಕೆ ಹೋದರೆ, ಕುರ್ಚಿಯಲ್ಲಿ ಕುಳಿತಿದ್ದವರು ಎದ್ದು ಬರುತ್ತಿದ್ದರು. ‘ಏನು ಬೇಕಾಗಿತ್ತು? ಯಾರನ್ನು ಕಾಣಲು ಬಂದಿರಿ?’ ಎಂದು ಪ್ರಶ್ನಿಸುತ್ತಿದ್ದರು. ಅಧ್ಯಯನಕ್ಕೆ ಬೆಲೆ ಕೊಡುತ್ತಿದ್ದ ಅವರು, ತುಂಬ ಓದಬೇಕು ಎನ್ನುತ್ತಿದ್ದರು. ಅಡಿಗೆಯವರನ್ನು ಕರೆದು ಅವರಿಗೆ ತಿಂಡಿ ಕೊಡಿ ಎಂದು ಸೂಚಿಸಿಯೇ, ಮತ್ತೆ ಅಧ್ಯಯನ ನಿರತರಾಗುತ್ತಿದ್ದರು’ ಎಂದು 1986ರ ಅನುಭವವನ್ನು ಅವರು ಹಂಚಿಕೊಂಡರು.

‘ಉಪನ್ಯಾಸಕ್ಕೆ ಬಂದರೂ ಮಾತು ತೀರಾ ಅಚ್ಚುಕಟ್ಟು. ಹೆಚ್ಚೆಂದರೆ 15 ನಿಮಿಷದ ಉಪನ್ಯಾಸ. ಕಥೆ, ಉದಾಹರಣೆಗಳ ಮೂಲಕ ಪರಿಣಾಮಕಾರಿಯಾಗಿ ಮಾತನಾಡುತ್ತಿದ್ದರು. ಅತ್ಯಂತ ಸರಳ ವ್ಯಕ್ತಿತ್ವದ ಶ್ರೀಗಳಿಗೆ ಆತಿಥ್ಯ ಬಲುಪ್ರಿಯವಾಗಿತ್ತು. ಅಡುಗೆ ಸಿದ್ಧವಾಗಿದ್ದರೆ, ಮಕ್ಕಳ ಕೈ ಮೇಲೆ ಕೊಂಚ ಸಾಂಬಾರನ್ನು ಹಾಕಿ ಹೇಗಾಗಿದೆ ಎಂದು ಕೇಳುತ್ತಿದ್ದರು. ರುಚಿಯಾಗಿದೆ ಎಂದರೆ, ಖುಷಿಯಾಗುತ್ತಿದ್ದ ಶ್ರೀಗಳು, ಅವರೇ ಕೆಲವರಿಗೆ ಬಡಿಸುತ್ತಿದ್ದರು’ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.