ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ಗಂಗಾವಳಿ ನದಿಯಲ್ಲಿ ಗುಡ್ಡ ಕುಸಿತದಿಂದ ಕಾಣೆಯಾದ ಜನರು ಮತ್ತು ಲಾರಿಗಾಗಿ ಮಂಗಳವಾರ ಶೋಧ ನಡೆಯಿತು
8ಕ್ಕೆ ಏರಿದ ಸಾವಿನ ಸಂಖ್ಯೆ
ಗಂಗಾವಳಿ ನದಿಯ ಅಳಿವೆ ಪ್ರದೇಶವಾದ ಗೋಕರ್ಣ ಸಮೀಪದ ಗಂಗೆಕೊಳ್ಳದಲ್ಲಿ ಮಂಗಳವಾರ ನಸುಕಿನ ಜಾವ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಉಂಟಾದ ಪ್ರವಾಹದಿಂದ ಕಾಣೆಯಾಗಿದ್ದ ಉಳುವರೆ ಗ್ರಾಮದ ಸಣ್ಣಿ ಹನುಮಂತಗೌಡ ಅವರ ಮೃತದೇಹ ಎಂದು ಗುರುತಿಸಲಾಗಿದೆ. ‘ಬಳೆ ಗುರುತು ಆಧರಿಸಿ ಸಣ್ಣಿ ಅವರದ್ದೇ ಮೃತದೇಹ ಎಂದು ಗುರುತಿಸಲಾಗಿದೆ. ಇದರೊಂದಿಗೆ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರವಾಹ ಭೀತಿ: ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ಬಿರುಸಿನ ಮಳೆಯಾಗಿದ್ದು ಹೊನ್ನಾವರ ತಾಲ್ಲೂಕಿನ ಗುಂಡಬಾಳ ನದಿ ದಂಡೆ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕರಾವಳಿ ಪ್ರದೇಶದಲ್ಲಿ ಆಗಾಗ ಬಿರುಸಿನ ಮಳೆಯಾದರೂ ಘಟ್ಟದ ಮೇಲಿನ ಭಾಗದಲ್ಲಿ ವ್ಯಾಪಕ ಮಳೆ ಸುರಿದಿದ್ದರಿಂದ ಅಘನಾಶಿನಿ ಗಂಗಾವಳಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಜೊಯಿಡಾದಲ್ಲಿ ಗಾಳಿ ಸಹಿತ ಅಬ್ಬರದ ಮಳೆ ಸುರಿದಿದ್ದು ಗ್ರಾಮೀಣ ಭಾಗದ ಕೆಲವೆಡೆ ರಸ್ತೆ ಸಂಪರ್ಕ ಕಡಿತವಾಗಿದೆ.