ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಡ್ಡ ಕುಸಿತಕ್ಕೆ ನೀರಿನ ಒತ್ತಡ ಕಾರಣ?

ಅವೈಜ್ಞಾನಿಕ ಕ್ರಮದಲ್ಲಿ ಮಣ್ಣು ತೆರವು, ಅರಣ್ಯ ನಾಶದ ಶಂಕೆ
Published 20 ಜುಲೈ 2024, 5:38 IST
Last Updated 20 ಜುಲೈ 2024, 5:38 IST
ಅಕ್ಷರ ಗಾತ್ರ

ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಗುಡ್ಡ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಯ ಅವೈಜ್ಞಾನಿಕವಾಗಿ ಗುಡ್ಡ ಕೊರೆದಿರುವುದು ಒಂದು ಕಾರಣವಾದರೆ, ಗುಡ್ಡದ ಮೇಲಿನ ಪ್ರದೇಶದಿಂದ ವ್ಯಾಪಕ ಪ್ರಮಾಣದಲ್ಲಿ ನೀರು ಇಂಗಿ ಗುಡ್ಡದಿಂದ ಒಸರುತ್ತಿರುವುದು ಮತ್ತೊಂದು ಕಾರಣ ಆಗಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಗುಡ್ಡದ ಮೇಲೆ ಅರಣ್ಯ ಪ್ರದೇಶವಿದ್ದರೂ ನೀರು ಇಂಗಲು ಬಯಲು ಸೃಷ್ಟಿಯಾದಂತಿದೆ. ಅರಣ್ಯ ನಾಶ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಮೀಕ್ಷೆ ನಡೆಸುವುದು ಸೂಕ್ತ’ ಎಂದು ಪರಿಸರ ತಜ್ಞರು ತಿಳಿಸಿದ್ದಾರೆ.

‘ಹೆದ್ದಾರಿ ವಿಸ್ತರಣೆಗೆ ಗುಡ್ಡವನ್ನು ಲಂಬಕೋನದಲ್ಲಿ ಕತ್ತರಿಸಿದ್ದು ಅವಘಡಕ್ಕೆ ಕಾರಣವಾಗಬಹುದು ಎಂದು ಕೆಲ ತಿಂಗಳ ಹಿಂದೆ ಎಚ್ಚರಿಸಲಾಗಿತ್ತು. ಹೆದ್ದಾರಿ ನಿರ್ಮಾಣಕ್ಕೆ ಯಂತ್ರೋಪಕರಣಗಳ ನಿರಂತರ ಬಳಕೆಯಿಂದ ಗುಡ್ಡಗಳಿಗೆ ಹಾನಿ ಆಗಿರಬಹುದು. ಡ್ರಿಲ್ಲಿಂಗ್, ಬ್ಲಾಸ್ಟಿಂಗ್ ಸೇರಿ ಮಿತಿಮೀರಿ ಕಾಮಗಾರಿ ನಡೆದಿದೆ. ಈಗ ಎಲ್ಲವೂ ಕಂಪಿಸಿ, ಮಳೆಗಾಲದಲ್ಲಿ ಅಡ್ಡ ಪರಿಣಾಮ ಬೀರಿದೆ’ ಎಂದು ಪರಿಸರ ತಜ್ಞ ವಿ.ಎನ್.ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುಡ್ಡಗಳ ಮೇಲಿನ ದೊಡ್ಡ ಪ್ರಮಾಣದ ಮರಗಳ ಟೊಂಗೆಗಳನ್ನು ಕತ್ತರಿಸಿದ್ದರೆ ನೆಲದ ಮೇಲಿನ ಒತ್ತಡ ಕಡಿಮೆ ಆಗುತ್ತಿತ್ತು. ಅವುಗಳ ಭಾರ ಹೆಚ್ಚಾಗಿಯೂ ಕುಸಿತ ಉಂಟಾಗಿರುವ ಸಾಧ್ಯತೆ ಇರಬಹುದು’ ಎಂದರು.

‘ಶಿರೂರು ಸೇರಿ ಕರಾವಳಿ ಭಾಗದಲ್ಲಿನ ಹೆದ್ದಾರಿಯಂಚಿನ ಗುಡ್ಡಗಳಿಂದ ನೀರು ಒಸರುವ ಪ್ರಮಾಣ ಈಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಗುಡ್ಡದ ಮೇಲ್ಭಾಗದಲ್ಲಿ ನೀರು ಇಂಗಲು ಪೂರಕ ವಾತಾವರಣ ಸೃಷ್ಟಿಯಾಗಿರುವ ಶಂಕೆ ಇದೆ. ನೀರು ಸರಾಗ ಹರಿದು ಹೋಗಲು ವ್ಯವಸ್ಥೆಯಾದರೆ ಅಥವಾ ಮಣ್ಣನ್ನು ಗಟ್ಟಿಯಾಗಿ ಹಿಡಿದಿಡುವ ಮರಗಳಿದ್ದರೆ, ಗುಡ್ಡ ಕುಸಿತ ತಡೆಯಬಹುದು’ ಎಂದು ಪರಿಸರ ತಜ್ಞ ಕೇಶವ ಕೊರ್ಸೆ ಪ್ರತಿಕ್ರಿಯಿಸಿದರು.

ಗುಡ್ಡಗಳ ಸ್ಥಿತಿಗತಿ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಭಾರತ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಂಟಿ ಸರ್ವೆ ನಡೆಸಲು ಸೂಚಿಸಲಗುವುದು.
ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ

ಲೋಹ ಪರಿಶೋಧಕ ಬಳಸಿ ಲಾರಿಗೆ ಹುಡುಕಾಟ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಾಣೆಯಾಗಿರುವ ನಾಟಾ ತುಂಬಿದ ಲಾರಿ ಮಣ್ಣಿನಡಿ ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಲೋಹ ಪರಿಶೋಧಕ ಯಂತ್ರ ಬಳಸಿ ಪೊಲೀಸರು ಹುಡುಕಾಟ ನಡೆಸಿದರು. ಲಾರಿಯಲ್ಲಿ ಸಿಲುಕಿರುವ ಚಾಲಕ ಅರ್ಜುನ್ ಅವರ ಮೊಬೈಲ್‍ಗೆ ಜುಲೈ 18 ಮತ್ತು 19 ರಂದು ಕರೆ ಮಾಡಿದಾಗ ರಿಂಗಣಿಸಿದೆ. ಬೇಗನೇ ಮಣ್ಣು ತೆರವುಗೊಳಿಸಿ ಲಾರಿ ಹುಡುಕಿಕೊಡಿ ಎಂದು ಲಾರಿ ಮಾಲೀಕ ಮುನಾಫ್ ಒತ್ತಾಯಿಸಿದರು. ಗಂಗಾವಳಿ ನದಿಯಲ್ಲಿ ಬಿದ್ದ ಮಣ್ಣಿನ ರಾಶಿಯ ಸಮೀಪವೂ ನೌಕಾದಳದ ಮುಳುಗು ತಜ್ಞರ ತಂಡವು ಶೋಧ ಕಾರ್ಯ ಕೈಗೊಂಡಿತು. ನದಿ ರಭಸವಾಗಿದ್ದ ಕಾರಣ ಅಡ್ಡಿಯಾಯಿತು. ಹೆದ್ದಾರಿ ಮೇಲೆ ಬಿದ್ದಿದ್ದ ಮಣ್ಣಿನ ರಾಶಿ ತೆರವು ಕಾರ್ಯ ಶೇ 70ರಷ್ಟು ಪೂರ್ಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT