ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಣ್ಣೆತ್ತಿನ ಅಮವಾಸ್ಯೆಗೂ ಬಂತು ಪಿಒಪಿ ಹಾವಳಿ: ಕುಸಿದ ಮಣ್ಣಿನ ಮೂರ್ತಿಗಳ ಬೇಡಿಕೆ

ಮಹಾಂತೇಶ ವೀ. ನೂಲಿನವರ
Published 4 ಜುಲೈ 2024, 5:20 IST
Last Updated 4 ಜುಲೈ 2024, 5:20 IST
ಅಕ್ಷರ ಗಾತ್ರ

ನಾಲತವಾಡ: ರೈತನ ಬದುಕಿನ ಎರಡು ಕಣ್ಣುಗಳಾದ ಮಣ್ಣು ಮತ್ತು ಎತ್ತು ಎರಡನ್ನೂ ಪೂಜಿಸುವ ಪರಿಪಾಠ ಹಿಂದಿನಿಂದಲೂ ಬೆಳೆದು ಬಂದಿದೆ. ಹೀಗಾಗಿ ಮಣ್ಣೆತ್ತಿನ ಅಮವಾಸ್ಯೆ ಆಚರಣೆ ಗ್ರಾಮೀಣ ಭಾಗದಲ್ಲಿ ಮಹತ್ವ ಪಡೆದಿದೆ.

ರೈತರು ಮಣ್ಣೆತ್ತಿನ ಅಮವಾಸ್ಯೆಯ ದಿನ ಕುಂಬಾರರು ಮಣ್ಣಿನಿಂದ ತಯಾರಿಸಿದ ಜೋಡಿ ಎತ್ತುಗಳನ್ನು ತಂದು  ಪೂಜಿಸುವ ಮೂಲಕ ಧನ್ಯತಾಭಾವ ಮೆರೆಯುತ್ತಾರೆ. ಹೋಳಿಗೆ, ಸಿಹಿ ಕಡಬು ಇಟ್ಟು ನೈವೇದ್ಯ ಮಾಡುತ್ತಾರೆ.

ಈಚೆಗೆ ಕಪ್ಪು ಎರೆ ಮಣ್ಣಿನಿಂದ ತಯಾರಿಸಿದ ಮಣ್ಣೆತ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿ, ಕುಂಬಾರರ ಬದುಕು ಕಷ್ಟಕರವಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್, ವೈಟ್ ಸಿಮೆಂಟ್‌ನ ಬಣ್ಣ ಬಣ್ಣದ ವಿವಿಧ ನಮೂನೆಗಳ ಚಿತ್ತಾಕರ್ಷಕ ಎತ್ತುಗಳ ಬೊಂಬೆಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೀಗಾಗಿ ಪರಿಸರ ಸ್ನೇಹಿ ಮಣ್ಣಿನ ಎತ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ.

ದಶಕದ ಹಿಂದೆ ಮಣ್ಣಿತ್ತಿನ ಅಮಾವಾಸ್ಯೆ ಬಂತೆಂದರೆ ಸಾಕು ಕುಂಬಾರರಿಗೆ ಕೈ ತುಂಬ ಕೆಲಸವಿರುತ್ತಿತ್ತು. ಮಣ್ಣೆತ್ತಿನ ಅಮವಾಸ್ಯೆಯ ಮಣ್ಣಿನ ಎತ್ತುಗಳು, ನಾಗರ ಪಂಚಮಿಯ ಮಣ್ಣಿನ ನಾಗ, ಯುಗಾದಿಯ ಬೇವಿನ ಮಡಕೆ, ದೀಪಾವಳಿ ಹಬ್ಬದ ಮಣ್ಣಿನ ಹಣತೆಗಳು ಅವರ ಬದುಕು ಕಟ್ಟಿ ಕೊಡುತ್ತಿದ್ದವು. ಮಣ್ಣೆತ್ತಿನ ಅಮಾವಾಸ್ಯೆಯ ಎರಡು ತಿಂಗಳ ಮುಂಚೆಯೇ ಜೇಡಿ ಮಣ್ಣು, ಕಪ್ಪು ಎರೆ ಮಣ್ಣು ತಂದು, ಹದ ಮಾಡಿ ಮನೆಯ ಎಲ್ಲ ಸದಸ್ಯರು ಸೇರಿ ಸಾವಿರಾರು ಮಣ್ಣಿನ ಎತ್ತುಗಳನ್ನು ತಯಾರಿಸಿ ಮನೆಯೊಳಗೆ, ಅಂಗಳ, ಖಾಲಿ ಜಾಗದಲ್ಲಿ ಆರಲು ಇಡುತ್ತಿದ್ದರು. ಗ್ರಾಹಕರು ಮುಗಿಬಿದ್ದು ಮಣ್ಣಿನ ಎತ್ತುಗಳನ್ನು ಒಯ್ಯುತ್ತಿದ್ದರು. ಆದರೆ, ಈಗ ಆ ದೃಶ್ಯ ಅಪರೂಪ ಎನಿಸಿದೆ.

ವಿಸರ್ಜನೆ ವೇಳೆಯಲ್ಲಿ ನೀರಲ್ಲಿ ಸುಲಭವಾಗಿ ಕರಗಬಲ್ಲ ಮಣ್ಣಿನ ಎತ್ತುಗಳೇ ಶ್ರೇಷ್ಠವಾದರೂ ಜನರು ಮಾತ್ರ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಮೂರ್ತಿಗಳ ಕಡೆ ವಾಲುತ್ತಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್, ವೈಟ್ ಸಿಮೆಂಟ್‌ನ ಎತ್ತುಗಳ ನೀರಲ್ಲಿ ಕರಗುವುದಿಲ್ಲ. ಬೆಲೆಯೂ ದುಬಾರಿ. ಜೊಡೆತ್ತುಗಳ ಗೊಂಬೆಗಳಿಗೆ ಕನಿಷ್ಠ ₹ 100, ಗರಿಷ್ಠ ₹ 1000ದವರೆಗೆ ಬೆಲೆ ಇದೆ. ಮಣ್ಣಿನಿಂದ ಮಾಡಿದ ಎತ್ತುಗಳ ಜೋಡಿಗೆ ಕೇವಲ ₹ 50 ರಿಂದ ₹ 75 ರಷ್ಟು ಬೆಲೆಯಿದೆ. ಆದರೂ ಮಣ್ಣಿನ ಎತ್ತುಗಳನ್ನು ಕೊಂಡುಕೊಳ್ಳಲು ಹಿಂಜರಿಯುತ್ತಿರುವುದು ವಿಪರ್ಯಾಸ.

ನಾಲತವಾಡದ ಮಾರುಕಟ್ಟೆಗೆ ಲಗ್ಗೆ ಇಟ್ಟ ಪ್ಲಾಸ್ಟರ್ ಆಫ್ ಪ್ಯಾರಿಸ್‌ ಎತ್ತಿನ ಬೊಂಬೆಗಳು
ನಾಲತವಾಡದ ಮಾರುಕಟ್ಟೆಗೆ ಲಗ್ಗೆ ಇಟ್ಟ ಪ್ಲಾಸ್ಟರ್ ಆಫ್ ಪ್ಯಾರಿಸ್‌ ಎತ್ತಿನ ಬೊಂಬೆಗಳು
ಸರ್ಕಾರದ ಪ್ರೋತ್ಸಾಹವಿಲ್ಲ
ಹಲವು ವರ್ಷಗಳಿಂದ ಕಂಬಾರಿಕೆ ವೃತ್ತಿ ಮಾಡುತ್ತಿದ್ದು ಈಚಿನ ವರ್ಷಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ವೈಟ್ ಸಿಮೆಂಟ್ ಹಾವಳಿಯಿಂದಾಗಿ ಮಣ್ಣಿನ ಎತ್ತುಗಳಿಗೆ ಪಣತಿಗಳಿಗೆ ಬೆಲೆ ಇಲ್ಲದಾಗಿದೆ. ಸರ್ಕಾರ ನಮಗೆ ಪ್ರೋತ್ಸಾಹ ನೀಡುವ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ. ಇದರಿಂದಾಗಿ ಕುಂಬಾರರ ಜೀವನ ಮಣ್ಣು ತಿಂದು ಮಣ್ಣು ಕಕ್ಕುವಂತಾಗಿದೆ ಎಂದು ಬೇಸರ ವ್ಯಕ್ತ ಪಡಿಸುತ್ತಾರೆ ಶಿವು ಕುಂಬಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT