ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸಗಿ: ಆದರ್ಶ ಶಾಲೆಗೆ ಶಿಕ್ಷಕರ ಕೊರತೆ; ಮಕ್ಕಳ ಶಿಕ್ಷಣ ಕುಂಠಿತ

ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿರುವ ಆದರ್ಶ ಆಂಗ್ಲ ಮಾಧ್ಯಮ ಶಾಲೆ
ಭೀಮಶೇನರಾವ್ ಕುಲಕರ್ಣಿ
Published : 29 ಆಗಸ್ಟ್ 2024, 6:34 IST
Last Updated : 29 ಆಗಸ್ಟ್ 2024, 6:34 IST
ಫಾಲೋ ಮಾಡಿ
Comments

ಹುಣಸಗಿ: ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ಆದರ್ಶ ಶಾಲೆ ಆರಂಭಿಸಲಾಗಿದೆ. ಆದರೆ ಮೂಲಸೌಕರ್ಯದಲ್ಲಿ ಯಾವುದೂ ಆದರ್ಶವಾಗಿಲ್ಲ. ಮುಖ್ಯವಾಗಿ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ನಿತ್ಯವೂ ಪಾಠ ಬೋಧನೆಗೆ ವಿಳಂಬವಾಗುತ್ತಿದೆ.

2010-11ನೇ ಸಾಲಿನಲ್ಲಿ ಆರ್.ಎಂ.ಎಸ್.ಎ ಅಡಿಯಲ್ಲಿ ಆದರ್ಶ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲಾಯಿತು. ಅದರಂತೆ 6 ತರಗತಿಗೆ ಪ್ರವೇಶ ಪರೀಕ್ಷೆ ನಡೆಸಿ ಮಕ್ಕಳನ್ನು ಈ ಶಾಲೆಗೆ ಪ್ರವೇಶ ಪಡೆಯಲಾಗುತ್ತದೆ. 6ರಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡುವ ಮೂಲಕ ಮುಂದಿನ ವ್ಯಾಸಂಗಕ್ಕೆ ಮಕ್ಕಳಿಗೆ ಅನುಕೂವಾಗಲಿ ಎಂಬ ಮಹಾತ್ವಾಕಾಂಕ್ಷೆಯೊಂದಿಗೆ ಈ ಶಾಲೆ ಆರಂಭಿಸಲಾಯಿತು.

ಗ್ರಾಮದ ಪ್ರಮುಖರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಸುಮಾರು 36 ಕೋಣೆಗಳ ಮೂರು ಅಂತಸ್ತಿನ ಸುಸಜ್ಜಿತ ಕಟ್ಟಡ 2015-16ರಲ್ಲಿ ನಿರ್ಮಿಸಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೂ ಈ ಶಾಲೆಗೆ ಮುಖ್ಯಶಿಕ್ಷಕರು ಸೇರಿದಂತೆ ನುರಿತ ಶಿಕ್ಷಕರಿಲ್ಲದೇ ಮಕ್ಕಳ ಶಿಕ್ಷಣ ಸೊರಗುತ್ತಿದೆ. ನಿತ್ಯವೂ ಹಲವಾರು ಪಾಲಕರು ಈ ಕುರಿತು ದೂರಿದರೂ ಶಿಕ್ಷಣ ಇಲಾಖೆ ಮಾತ್ರ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಎಲ್ಲ ಶಿಕ್ಷಕರ ಕೊರತೆ: ಪ್ರತಿಯೊಂದು ಶಾಲೆ ಎಂದ ಮೇಲೆ ಮಕ್ಕಳಿಗೆ ಬೋಧಕ ವರ್ಗದ ಅಗತ್ಯವಾಗಿ ಬೇಕು. ಆದರೆ ಈ ಆದರ್ಶ ಶಾಲೆಯಲ್ಲಿ ಎಲ್ಲ ಶಿಕ್ಷಕರ ಕೊರತೆ ಇದೆ. ಮುಖ್ಯ ಶಿಕ್ಷಕರು ಸೇರಿದಂತೆ ಒಟ್ಟು 16 ಶಿಕ್ಷಕರು ಬೇಕಾಗಿದ್ದು, ಸದ್ಯ 5 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರತೆಯ ಮಧ್ಯೆಯೂ ಕಳೆದ ಸಾಲಿನಲ್ಲಿ ಎಸ್ಎಸ್ಎಲ್‌ಸಿ ಫಲಿತಾಂಶ ಶೇ 94ರಷ್ಟು ಬಂದಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಎಸ್.ಎಸ್.ಬಾಕಲಿ ಮಾಹಿತಿ ನೀಡಿದರು.

ಇಂಗ್ಲಿಷ್‌ ಶಿಕ್ಷಕರೇ ಇಲ್ಲ: ಈ ಆಂಗ್ಲ ಮಾಧ್ಯಮ ಶಾಲೆಗೆ ಮುಖ್ಯವಾಗಿ 2 ಕನ್ನಡ, 2 ಇಂಗ್ಲಿಷ್‌, 2 ವಿಜ್ಞಾನ, 2 ಗಣಿತ, 2 ಸಮಾಜ ಶಿಕ್ಷಕರ ಅಗತ್ಯವಿದ್ದು, ಈ ಎಲ್ಲ ವಿಷಯಗಳ ಶಿಕ್ಷಕರು ಇಲ್ಲ ಎಂದು ಮಾಹಿತಿ ಲಭ್ಯವಾಗಿದೆ.

ಬಸ್ ಕೊರತೆ: ಶಾಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ಸುರಪುರ, ರಂಗಂಪೇಟ, ಕೆಂಭಾವಿ, ಯಡಹಳ್ಳಿ, ಕಕ್ಕೇರಾ, ರಾಜನಕೋಳೂರು, ಕೊಡೇಕಲ್ಲ ಸೇರಿದಂತೆ ಇತರ ಭಾಗಗಳಿಂದ ಮಕ್ಕಳು ಶಾಲೆಗೆ ಬರಬೇಕಾದರೆ ಬಸ್ ವ್ಯವ್ಯಸ್ಥೆ ಇಲ್ಲ. ಇದರಿಂದಾಗಿ ನಿತ್ಯವಾಗಿ ತಡವಾಗಿ ನಮ್ಮ ಗ್ರಾಮಕ್ಕೆ ಹೋಗುವ ಅನಿವಾರ್ಯತೆ ಇದೆ ಎಂದು ವಿದ್ಯಾರ್ಥಿಗಳಾದ ಕಿರಣಕುಮಾರ, ಶ್ರೇಯಸ್ ಸುರಪುರ, ಪ್ರಭು ಪೂಜಾರಿ ಕೊಡೇಕಲ್ಲ, ಸರಸ್ವತಿ ಕೆಂಭಾವಿ ಹಾಗೂ ಇತರರು ಹೇಳಿದರು.‌

ಈ ಎಲ್ಲ ಕೊರತೆಯಿಂದಾಗಿ ಅನಿವಾರ್ಯವಾಗಿ ಪ್ರಸಕ್ತ ಸಾಲಿನಲ್ಲಿ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಬೇರೆ ಶಾಲೆಗೆ ವರ್ಗಾವಣೆ ಪಡೆದಿದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಮಧೋಳ ಅಸಮಾಧಾನ ವ್ಯಕ್ತಪಡಿಸಿದರು.

ಹಾಸ್ಟೆಲ್ ಆರಂಭಿಸಲಿ: ರಾಜ್ಯದಲ್ಲಿ ಆದರ್ಶ ಶಾಲೆ ಆರಂಭಿಸುವ ಸಂದರ್ಭದಲ್ಲಿ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂಬ ಮಾತಗಳು ಕೇಳಿಬಂದಿದ್ದವು. ಆದರೆ ಬದಲಾದ ದಿನಮಾನಲ್ಲಿ ಕೇವಲ ಶಾಲೆ ಮಾತ್ರ ಆರಂಭಿಸಲಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ನಿತ್ಯ ಬಂದು ಹೋಗಲು ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿದ್ದರಿಂದಾಗಿ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಅನೂಕುವಾಗುವಂತೆ ವಜ್ಜಲ ಗ್ರಾಮದಲ್ಲಿ ಹಾಸ್ಟೆಲ್ ಆರಂಭಿಸಬೇಕು. ಇಲ್ಲವೇ ಸದ್ಯ ಇರುವ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡುವಂತೆ ಕಾಶಿಂ ಸಾಬ ಗೋಡ್ರಾಳ, ಬಾಬಣ್ಣ ಜಕಾತಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT