ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಆಹಾರ ಸುರಕ್ಷತೆಗೆ ಇಲ್ಲ ಕಿಮ್ಮತ್ತು; ದಾಳಿಗೆ ಸೀಮಿತವಾದ ಎಫ್‌ಎಸ್‌ಎಸ್‌ಐ

Published : 5 ಅಕ್ಟೋಬರ್ 2024, 6:35 IST
Last Updated : 5 ಅಕ್ಟೋಬರ್ 2024, 6:35 IST
ಫಾಲೋ ಮಾಡಿ
Comments

ಯಾದಗಿರಿ: ನಗರದ ಪ್ರದೇಶದ ಪ್ರಮುಖ ವೃತ್ತ, ಬಸ್‌ ನಿಲ್ದಾಣ, ರಸ್ತೆ ಬದಿ ಹೀಗೆ ಹಲವೆಡೆ ಉಪಾಹಾರ ಕೇಂದ್ರಗಳು ತಲೆ ಎತ್ತಿದ್ದು, ಆಹಾರ ಸುರಕ್ಷತೆ ನಿಯಮಗಳೇ ಇಲ್ಲಿ ಅನ್ವಯವಾಗುವುದಿಲ್ಲ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಯಮಗಳು ಇಲ್ಲಿ ನಗಣ್ಯವಾಗಿದೆ.

ಹೊಟೇಲ್‌ನಲ್ಲಿ ತಿಂಡಿ ತಿನಿಸುಗಳು ದುಬಾರಿಯಾಗಿವೆ. ರಸ್ತೆ ಬದಿಯಲ್ಲಿ ಕಡಿಮೆ ದರದಲ್ಲಿ ಉಪಾಹಾರ ಸಿಗುತ್ತದೆ. ಆಹಾರ ಸುರಕ್ಷತೆ ನಂತರದ ಮಾತು ಹೊಟ್ಟೆ ತುಂಬಿದರೆ ಸಾಕಪ್ಪ ಎಂದು ನಿಟ್ಟುಸಿರು ಬಿಡುತ್ತಾರೆ ಬಡ ಕೂಲಿಕಾರ್ಮಿಕರು. ಒಂದು ಸಮಾಧಾನದ ಸಂಗತಿ ಎಂದರೆ ಕ್ಯಾನಿನಲ್ಲಿ ತುಂಬಿದ ಫಿಲ್ಟರ್ ನೀರು ಎಂದು ಕುಡಿಯುತ್ತೇವೆ. ಸ್ವಚ್ಛತೆ ಎಂಬುವುದು ಇರುವುದಿಲ್ಲ. ತಿಂದ ಪ್ಲೇಟ್‌ಗಳನ್ನು ಒಂದು ಡಬ್ಬದಲ್ಲಿ ಹಾಕುತ್ತಾರೆ. ಚರಂಡಿ ವಾಸನೆ ಜತೆಯಲ್ಲಿ ನೋಣಗಳ ಹಾವಳಿಯು ಇರುತ್ತದೆ. ಸುರಕ್ಷತೆಯೂ ಇಲ್ಲ.

ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ಗುರುಮಠಕಲ್‌, ವಡಗೇರಾ, ಕೆಂಭಾವಿ, ಕಕ್ಕೇರಾ ಹೀಗೆ ನಗರದ ಪ್ರಮುಖ ಜನನಿಬಿಡ ಸ್ಥಳಗಳಾದ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಮಹನೀಯರ ಹೆಸರಿನ ವೃತ್ತ ಸೇರಿದಂತೆ ಹಲವು ಪ್ರದೇಶದಲ್ಲಿ ಬಯಲು ಜಾಗದಲ್ಲಿ ತಳ್ಳು ಬಂಡಿಯಲ್ಲಿ ಉಪ್ಪಿಟ್ಟು, ದೋಸೆ, ಪಲಾವ್, ಇಡ್ಲಿ, ಮಿರ್ಚಿ ಭಜಿ ಕಡಿಮೆ ಬೆಲೆಗೆ ಸಿಗುತ್ತದೆ. ಆದರೆ, ಗುಣಮಟ್ಟ ಇರುವುದಿಲ್ಲ.

‘ಪ್ಲಾಸ್ಟಿಕ್ ಹಾಳೆ ಅಥವಾ ಪ್ಲೇಟ್‌ನಲ್ಲಿ ಆಹಾರ ವಸ್ತುಗಳು ಸರಬರಾಜು ಮಾಡುತ್ತಾರೆ. ರಸ್ತೆಯ ಮೇಲೆ ನಿಂತು ಆಹಾರ ಸೇವನೆ ಮಾಡಬೇಕು. ಅದೇ ಆಹಾರ ಹೊಟೇಲ್‌ಗಳಲ್ಲಿ ಬೆಲೆ ದುಪ್ಪಟ್ಟಾಗಿರತ್ತದೆ. ಆಹಾರ ಸುರಕ್ಷತೆ ಇಲ್ಲ ಎಂಬುವುದು ಅನಿವಾರ್ಯ. ಆರ್ಥಿಕ ನಷ್ಟ ಇದೆಯಲ್ಲ’ ಎಂದು ಮರು ಪ್ರಶ್ನಿಸುತ್ತಾರೆ ಕೂಲಿ ಕಾರ್ಮಿಕರೊಬ್ಬರು.

ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮ ಪಾಲನೆಯಾಗುತ್ತಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ತಲೆಗೆ, ಕೈಗೆ ಗ್ಲೌಸ್ ಹಾಕಿಕೊಳ್ಳುವುದಿಲ್ಲ. ಗಲೀಜು ಕೈಯಿಂದಲೇ ಹಿಟ್ಟು ಮಿಶ್ರಣ ಮಾಡಿ ಬಜಿ ಮಾಡುತ್ತಾರೆ. ಗೋಬಿ ಮಂಚೂರಿ, ಕಬಾಬ್‌ಗಳಲ್ಲಿ ನಿಷೇಧಿತ ರಸಾಯನಿಕ ಬಳಸುವುದು ನಿಂತಿಲ್ಲ.

ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಇಲಾಖೆ ಸಿಬ್ಬಂದಿಯಿಂದ ಪರಿಶೀಲನೆ ಮಾಡಲು ತಿಳಿಸುತ್ತೇನೆ. ಈ ಹಿಂದಿನ ಪ್ರಯೋಗಾಲಯಗಳ ಸ್ಥಿತಿಗತಿ ಪರಿಶೀಲಿಸುವೆ.
ಡಾ.ರತ್ನಾಕರ್‌ ತೋರಣ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಭಾರ ಜಿಲ್ಲಾ ಅಂಕಿತ ಅಧಿಕಾರಿ

ಹೊಟೆಲ್‌ಗಳಲ್ಲಿ ಬೇಸನ್‌ ಹಿಟ್ಟು, ರವೆ, ಗೋಧಿ ಹಿಟ್ಟು, ಮೈದಾ, ತರಕಾರಿ ಸ್ವಚ್ಛಗೊಳಿಸದೇ ಬಳಸುತ್ತಾರೆ. ಗ್ರಾಹಕರು ತಿಂಡಿ, ಊಟ ಮಾಡಿ ಬಿಟ್ಟ ಪ್ಲೇಟ್‌ಗಳನ್ನು ಸರಿಯಾಗಿ ತೊಳೆಯುವುದಿಲ್ಲ. ಹೀಗಾಗಿ ಗ್ರಾಹಕರು ಫುಡ್ ಪಾಯಿಸನ್, ವಾಂತಿಭೇದಿ ಇತರ ರೋಗಗಳಿಂದ ಬಳಲುವುದು ಸಾಮಾನ್ಯವಾಗಿದೆ. ಈ ಬಗ್ಗೆ ಗ್ರಾಹಕರು ಯಾವುದೇ ಚಕಾರ ಎತ್ತದಿರುವುದು ಆಶ್ಚರ್ಯ. ತೆರೆದ ಪದಾರ್ಥಗಳ ಖರೀದಿ, ಹೋಟೆಲ್‌ಗಳಲ್ಲಿ ಶುಚಿ ಇರದ ತಿಂಡಿ ತಿನ್ನುವುದು, ಪೇಪರ್‌ಗಳಲ್ಲೇ ತಿಂಡಿ ಕಟ್ಟಿಸಿಕೊಂಡು ಹೋಗುವುದು ಮಾಡುವುದರಿಂದ ವ್ಯಾಪಾರಿಗಳಿಗೆ ಹೆದರಿಕೆ ಇಲ್ಲದಂತಾಗಿದೆ.

ಆಹಾರ ಇಲಾಖೆ ಕೇವಲ ಪಡಿತರ ವಿತರಣೆಗೆ ಮಾತ್ರ ಸೀಮಿತವಾಗಿದೆ. ನಗರಸಭೆ ಇದಕ್ಕೆ ತನಗೆ ಸಂಬಂಧವಿಲ್ಲವೆಂದು ಕೈಕಟ್ಟಿ ಕುಳಿತಿದೆ ಎನ್ನುವುದು ನಾಗರಿಕರ ಆರೋಪ. ಫಾಸ್ಟ್‌ ಫುಡ್‌ಗಳ ರುಚಿಯನ್ನು ಹೆಚ್ಚಲು ಅಜಿನಮೋಟೋ (ಟೆಸ್ಟಿಂಗ್‌ ಪೌಡರ್‌) ವ್ಯಾಪಕವಾಗಿ ಬಳಸಲಾಗುತ್ತಿದೆ. ಆಹಾರಗಳನ್ನು ರಸ್ತೆಯ ದೂಳಿನಿಂದ ಸಂರಕ್ಷಿಸಲು ಯಾವುದೇ ಸುರಕ್ಷತೆ ಕೈಗೊಂಡಿಲ್ಲ. ತಯಾರಕರು ಯಾವುದೇ ಸ್ವಚ್ಛತೆ ಕಾಪಾಡುವುದಿಲ್ಲ. ನಗರದಲ್ಲಿ ಬೇಕರಿ, ಚಿಕನ್‌ ಅಂಗಡಿಗಳ ಸಮೀಪ ತೆರಳಿದರೆ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಸಾರ್ವಜನಿಕರು ಈ ಬಗ್ಗೆ ದೂರು ನೀಡಿದಾಗ ಮಾತ್ರ ತೆರಳುವ ಅಧಿಕಾರಿಗಳು, ಅಲ್ಲಿಗೆ ಹೋಗಿ ಬಂದ ನಂತರ ಸುಮ್ಮನಾಗುತ್ತಾರೆ ಎನ್ನುವ ಆರೋಪಗಳಿವೆ.

ಆಹಾರ ಉತ್ಪಾದಿಸುವ ಸ್ಥಳಗಳಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡಬೇಕು. ಎಫ್‌ಎಸ್‌ಎಸ್‌ಎಐ ಮಾರ್ಗ ಸೂಚಿಗಳನ್ನು ಪಾಲಿಸಬೇಕು. ಆಹಾರ ಕಲಬೆರಕೆ ಮತ್ತು ಗುಣಮಟ್ಟಕ್ಕೆ ಪ್ರಮುಖ್ಯತೆ ನೀಡಬೇಕು. ಆದರೆ, ಜಿಲ್ಲೆಯಲ್ಲಿ ಎಲ್ಲಿಯೂ ಈ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎನ್ನುವ ಆರೋಪಗಳಿವೆ.

‘ತಳ್ಳು ಬಂಡಿ ವ್ಯಾಪಾರಸ್ಥರಿಗೆ ಆಹಾರ ಸುರಕ್ಷತೆ ಬಗ್ಗೆ ಕಾಳಜಿವಹಿಸಬೇಕು ಎಂದು ಸೂಚಿಸಿದ್ದೇವೆ’ ಎನ್ನುತ್ತಾರೆ ನಗರಸಭೆಯ ಆಹಾರ ಇಲಾಖೆಯ ಅಧಿಕಾರಿ ಒಬ್ಬರು.

‘ನೋಡ್ರಿ ಬಡ ವ್ಯಾಪಾರಸ್ಥರು ಬೆಳಿಗ್ಗೆ 6ಗಂಟೆಯಿಂದ 10ಗಂಟೆಯವರೆಗೆ ವ್ಯಾಪಾರ ಮಾಡುತ್ತೇವೆ. ಅಷ್ಟರಲ್ಲಿ ನಮ್ಮ ಕೂಲಿ ಹಾಗೂ ಸಂಸಾರಕ್ಕೆ ಬೇಕಾಗುವಷ್ಟು ಹಣ ಸಂದಾಯವಾಗುತ್ತದೆ. ಆಹಾರ ಸುರಕ್ಷತೆ ಗುಣಮಟ್ಟ ಹೀಗೆ ಹಲವಾರು ಕಾನೂನು ಹೇಳಿ ನಮ್ಮ ಹೊಟ್ಟೆಮ್ಯಾಲ್ ಹೊಡೆಬ್ಯಾಡಿರಿ. ಸಾಧ್ಯವಾದಷ್ಟು ಹೆಚ್ಚಿನ ಕಾಳಜಿಯನ್ನು ಆಹಾರ ಸುರಕ್ಷತೆಗೆ ತೆಗೆದುಕೊಳ್ಳುತ್ತೇವೆ’ ಎನ್ನುತ್ತಾರೆ ತಳ್ಳು ಬಂಡಿ ವ್ಯಾಪಾರಸ್ಥರು.

ಆಹಾರ ಸುರಕ್ಷತೆ ದಾಳಿ ಮಾತ್ರ

ದಸರಾ, ದೀಪಾವಳಿ ಸಂದರ್ಭದಲ್ಲಿ ಮಾತ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಚ್ಚರ ಸ್ಥಿತಿಯಲ್ಲಿದ್ದು, ಬೇಕರಿ ಸೇರಿದಂತೆ ಸಿಹಿ ತಿನಿಸು ತಯಾರಿಕಾ ಅಂಗಡಿಗಳ ಮೇಲೆ ದಾಳಿ ಮಾಡಿ ಆಹಾರ ವಶಪಡಿಸಿಕೊಳ್ಳುತ್ತದೆ. ನಂತರ ಪ್ರಯೋಗಾಲಯ ವರದಿ ಏನು ಬಂತು. ಆ ಸಿಹಿ ಪದಾರ್ಥ ಸೇವನೆ ಮಾಡಬೇಕಾ ಇಲ್ಲ ಎನ್ನುವ ಮಾಹಿತಿ ಇರುವುದಿಲ್ಲ ಎಂದು ಸಾರ್ವಜನಿಕರ ಆರೋಪ.

‘ಮಾವಿನ ಹಣ್ಣು ಸಿಸನ್‌ ಮತ್ತು ದೊಡ್ಡ ಹಬ್ಬಗಳ ಸಂದರ್ಭಗಳಲ್ಲಿ ಮಾತ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು ದಾಳಿ ಮಾಡುತ್ತಾರೆ. ಅದು ಮಾತ್ರ ಪತ್ರಿಕೆಗಳಲ್ಲಿ ಪ್ರಸಾರ ಆಗುವಂತೆ ನೋಡಿಕೊಳ್ಳುತ್ತಾರೆ. ಆ ನಂತರ ಯಾವುದೇ ವರದಿ ಬರುವುದಿಲ್ಲ. ಇದರಿಂದ ಇವರು ವರ್ಷಕ್ಕೊಮ್ಮೆ ಮಾತ್ರ ದಾಳಿ ಮಾಡುತ್ತಾರೆ’ ಎನ್ನುತ್ತಾರೆ ನಗರ ನಿವಾಸಿ ದೀಪಕ್‌ ಕುಮಾರ.

ಬಯಲಲ್ಲೇ ತೆರೆದ ಮಾರಾಟ

ಸುರಪುರ: ನಗರದ ವಲ್ಲಭಭಾಯಿ ಪಟೇಲ್‌ ವೃತ್ತ, ಬಸ್‌ನಿಲ್ದಾಣ, ಮಾರುಕಟ್ಟೆ, ನಾಲ್ವಡಿ ರಾಜಾ ವೆಂಕಟಪ್ಪನಾಯಕ ವೃತ್ತ, ಗಾಂಧಿವೃತ್ತ, ಕುಂಬಾರಪೇಟೆ ವೃತ್ತ, ರಂಗಂಪೇಟೆಯ ಸಂತೆ, ಸ್ಥಳ ಇತರೆಡೆ ಮಿಠಾಯಿ, ಬಜಿ, ಮಂಡಕ್ಕಿ, ಪೂರಿ ಇತರ ಆಹಾರಗಳನ್ನು ತೆರೆದೇ ಮಾರಾಟ ಮಾಡಲಾಗುತ್ತದೆ.

ಸಂಬಂಧಿಸಿದ ಅಧಿಕಾರಿಗಳು ನೋಡಿದರೂ ನೋಡದಂತೆ ಹೋಗುತ್ತಿರುವುದು ವಿಪರ್ಯಾಸ. ತಾಲ್ಲೂಕು ಆರೋಗ್ಯ ಇಲಾಖೆಯಲ್ಲಿ ಇದ್ದ ಆಹಾರ ನಿರೀಕ್ಷಕರ ಹುದ್ದೆ ರದ್ದು ಪಡಿಸಲಾಗಿದೆ. ನಗರಸಭೆಯವರು ಈ ಬಗ್ಗೆ ಜಾಗೃತಿ ವಹಿಸಬೇಕು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯವರು ಇದು ತಮ್ಮ ಇಲಾಖಾ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಮಜಾಯಿಸಿ ನೀಡುತ್ತಾರೆ.

ಆಹಾರ ಸುರಕ್ಷತೆ ಸಭೆಗಳೇ ಆಗಿಲ್ಲ

ಜಿಲ್ಲೆಯಾಗಿ 14 ವರ್ಷಗಳಾದರೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ಇಲ್ಲಿಯವರೆಗೆ ಸಭೆಗಳೆ ಆಗಿಲ್ಲ.

ಆಹಾರ ಸುರಕ್ಷತೆ ಕುರಿತು 2006 ಮತ್ತು 2011ರಲ್ಲಿ ಕಾಯ್ದೆ ರೂಪಿಸಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎನ್ನುವುದು ನಿಯಮವಿದೆ. ಆದರೆ, ಇದ್ಯಾವುದನ್ನು ಆಹಾರ ಸುರಕ್ಷತೆ ಪ್ರಾಧಿಕಾರ ಪಾಲಿಸಿಲ್ಲ.

ಕೆಲವರು ಈ ಇಲಾಖೆಯಲ್ಲಿ ಬೀಡುಬಿಟ್ಟಿದ್ದು, ಅವರು ಅಂಕಿತ ಅಧಿಕಾರಿಗಳನ್ನು ಬದಲಾವಣೆ ಮಾಡುವಷ್ಟು ಪ್ರಭಾವಿಗಳಾಗಿದ್ದಾರೆ. ಇಲ್ಲ ಸಲ್ಲದು ಹೇಳಿ ಖಡಕ್‌ ಅಧಿಕಾರಿಗಳನ್ನು ಜಿಲ್ಲೆ ಬಿಟ್ಟು ಹೋಗುವಂತೆ ಮಾಡಿ ಪ್ರಭಾರಿ ಅಧಿಕಾರಿಗಳು ಇರುವಂತೆ ಮಾಡಿಕೊಂಡು ತಾವೇ ಎಲ್ಲವನ್ನು ಹೊಂದಾಣಿಕೆ ಮಾಡುತ್ತಾರೆ ಎಂದು ಆ ಇಲಾಖೆಯ ಅಧಿಕಾರಿಗಳೇ ನೀಡುವ ಮಾಹಿತಿಯಾಗಿದೆ.

ಜಿಲ್ಲೆಯಲ್ಲಿ ಮೂರು ಹಳೆ ತಾಲ್ಲೂಕುಗಳಲ್ಲಿ ಮಾತ್ರ ಆಹಾರ ಸುರಕ್ಷತಾ ಅಧಿಕಾರಿಗಳಿದ್ದು, ಉಳಿದ ಮೂರು ಹೊಸ ತಾಲ್ಲೂಕುಗಳಲ್ಲಿ ಇಲ್ಲ. ಕೆಲವರು ಇದನ್ನೆ ಬಂಡವಾಳ ಮಾಡಿಕೊಂಡು ಬೇಕರಿ, ಹೋಟೆಲ್‌ಗಳಲ್ಲಿ ಹಣ ವಸೂಲಿ ಮಾಡುತ್ತಾರೆ ಎನ್ನುವ ಆರೋಪಗಳು ಇಲಾಖೆ ಮೇಲಿವೆ.

‌‘ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಲಿ’

ಹುಣಸಗಿ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಎಗ್ ರೈಸ್ ಹಾಗೂ ಪಾನಿಪುರಿ, ಕುರುಕಲು ತಿಂಡಿ ಸೇರಿದಂತೆ ಇತರ ತಳ್ಳುಗಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತುತ್ತಿದ್ದು, ಸುರಕ್ಷತೆಗೆ ಅಧಿಕಾರಿಗಳು ಆದ್ಯತೆ ನೀಡಬೇಕಿದೆ.

‘ಕೆಲವು ಹೊಟೇಲ್‌ಗಳಲ್ಲಿ ತಟ್ಟೆಗಳ ಮೇಲೆ ಪ್ಲಾಸ್ಟಿಕ್ ಹಾಕಿ ಬಿಸಿ ಉಪಾಹಾರ, ಸಾಂಬರ್ ನೀಡಲಾಗುತ್ತಿದ್ದು, ಇದು ಕೂಡಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಯಾವುದೇ ಅಧಿಕಾರಿಗಳು ಹಾಗೂ ಈ ಕುರಿತು ಜಾಗೃತಿ ಮೂಡಿಸಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಕಾಶಿನಾಥ ಹಾದಿಮನಿ ಅಸಮಾಧಾನ ವ್ಯಕ್ತಪಡಿಸಿದರು. ‘ಪಟ್ಟಣದಲ್ಲಿ ಫಾಸ್ಟ್ ಫುಡ್ ಹೆಸರಿನಲ್ಲಿ ಅಂಗಡಿಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳು ಬಳಸುವ ಪದಾರ್ಥಗಳ ಕುರಿತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಕಾಳಜಿ ವಹಿಸಲಿ’ ಎಂದು ರೈತ ಸಂಘದ ನಾಯಕಿ ಮಹಾದೇವಿ ಬೇವಿನಾಳಮಠ ಒತ್ತಾಯಿಸಿದರು.

‌ಪೂರಕ ವರದಿ: ಅಶೋಕ ಸಾಲವಾಡಗಿ, ಟಿ. ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ. ಚಪೆಟ್ಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT