ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪರ್ಧಾ ವಾಣಿ | ಅಮೂರ್ತ ಸಾಂಸ್ಕೃತಿಕ ಪರಂಪರೆಯ ಮಾಹಿತಿ

Published : 2 ಅಕ್ಟೋಬರ್ 2024, 22:30 IST
Last Updated : 2 ಅಕ್ಟೋಬರ್ 2024, 22:30 IST
ಫಾಲೋ ಮಾಡಿ
Comments

ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಯುನೆಸ್ಕೊ ಪ್ರಕಾರ, ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ ಎಂದರೆ ಅದು ನಮ್ಮ ಪೀಳಿಗೆಯಿಂದ ಹರಿದು ಬಂದ ಸಂಪ್ರದಾಯಗಳು ಅಥವಾ ಜೀವಂತ ಪರಂಪರೆಯ ಅಭಿವ್ಯಕ್ತಿಗಳನ್ನು ಒಳಗೊಂಡಿದೆ. ಉದಾಹರಣೆಗೆ ಮೌಖಿಕ ಸಂಪ್ರದಾಯಗಳು, ಪ್ರದರ್ಶನ ಕಲೆಗಳು, ಸಾಮಾಜಿಕ ಪದ್ಧತಿಗಳು, ಆಚರಣೆಗಳು, ಹಬ್ಬಗಳು ಮತ್ತು ಆಚರಣೆಗಳು, ಅಭ್ಯಾಸಗಳು ಅಥವಾ ಪ್ರಕೃತಿಗೆ ಸಂಬಂಧಿಸಿದ ಜ್ಞಾನ, ಮತ್ತು ಸಾಂಪ್ರದಾಯಿಕ ಕರಕುಶಲ ಕೌಶಲಗಳನ್ನು ಈ ಪರಂಪರೆಯು ಒಳಗೊಂಡಿದೆ. ಇವುಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಯುನೆಸ್ಕೋದಿಂದ ‘ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿ’ಯನ್ನು ರಚಿಸಲಾಗಿದೆ.

ಹಿನ್ನೆಲೆ: 2001ರಲ್ಲಿ, ಯುನೆಸ್ಕೊ ಹಲವು ದೇಶಗಳು ಮತ್ತು ಎನ್‌ಜಿಒಗಳ ನಡುವೆ ಒಂದು ಸಮೀಕ್ಷೆಯನ್ನು ಮಾಡಿ ಆ ಸಲುವಾಗಿ ವ್ಯಾಖ್ಯಾನ ಮಾಡಲು ಪ್ರಯತ್ನಿಸಿತು. ಈ ತನಕ 145 ದೇಶಗಳ 730 ವಿಷಯಗಳನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆಗಳೆಂದು ಪಟ್ಟಿಯಲ್ಲಿ ಸೇರಿಸಲಾಗಿದೆ. ಭಾರತದ ಹದಿನಾಲ್ಕು ಪರಂಪರೆ ಈ ಪಟ್ಟಿಯಲ್ಲಿದೆ.

ಗುಜರಾತಿನ ಗರ್ಬಾ (2023): ಗರ್ಬಾ ನವರಾತ್ರಿಯ ಸಂದರ್ಭದಲ್ಲಿ ಸ್ತ್ರೀ ಚೈತನ್ಯ ಆಥವಾ ‘ಶಕ್ತಿ’ಯನ್ನು ಆರಾಧಿಸುವ ನೃತ್ಯಪ್ರಕಾರವಾಗಿದೆ. ಒಂದು ಮಣ್ಣಿನ ಮಡಿಕೆ ಅಥವಾ ದೇವತೆ ‘ಅಂಬಾ’ ಪ್ರತಿಮೆಯನ್ನು ಇರಿಸಿ ಅದರ ಸುತ್ತಲೂ ಸರಳ ಲಯಬದ್ಧ ಹೆಜ್ಜೆಗಳನ್ನು ಹಾಕುತ್ತಾ, ವೃತ್ತಾಕಾರದಲ್ಲಿ ಅಪ್ರದಕ್ಷಿಣವಾಗಿ ಚಲಿಸುತ್ತಾ ಈ ನೃತ್ಯ ಮಾಡಲಾಗುತ್ತದೆ. ಎಲ್ಲರೂ ಜೊತೆಯಾಗಿ ಹಾಡುತ್ತಾ, ಚಪ್ಪಾಳೆ ತಟ್ಟುತ್ತಾ ಇಲ್ಲವೇ ಕೋಲಾಟದ ಮಾದರಿಯಲ್ಲಿ ಕುಣಿಯುತ್ತಾರೆ. ಇದು ಜಾತಿ, ಧರ್ಮ, ವರ್ಗ, ಲಿಂಗಭೇದವಿಲ್ಲದೇ ಎಲ್ಲರನ್ನೂ ಒಳಗೊಳ್ಳುವಂಥ ಒಂದು ಸಂಪ್ರದಾಯ.

ಕೋಲ್ಕತ್ತದ ದುರ್ಗಾಪೂಜಾ (2021): ದುರ್ಗಾ ಪೂಜಾ ಮುಖ್ಯವಾಗಿ ಕೋಲ್ಕತ್ತದಲ್ಲಿ ವಾರ್ಷಿಕವಾಗಿ ದಸರಾ ಸಂದರ್ಭದಲ್ಲಿ ಹತ್ತು ದಿನಗಳ ಕಾಲ ನಡೆಯುವ ದುರ್ಗೆಯ ಆರಾಧನೆಯಾಗಿದೆ. ಕಲಾವಿದರು ಮತ್ತು ಶಿಲ್ಪಿಗಳು ನದಿಗಳಿಂದ ತಂದ ಆವೆ ಮಣ್ಣಿನಿಂದ ದುರ್ಗೆ ಮತ್ತಾಕೆಯ ಪರಿವಾರದ ವೈವಿಧ್ಯಮಯ ಪ್ರತಿಮೆಗಳನ್ನು ನಿರ್ಮಿಸಿ, ಮಹಾಲಯದ ಮೊದಲ ದಿನ ಅವುಗಳಿಗೆ ಕಣ್ಣುಗಳನ್ನು ಚಿತ್ರಿಸಿ ಜೀವ ನೀಡಲಾಗುತ್ತದೆ. ಕೊನೆಯಲ್ಲಿ ಮೂರ್ತಿಗಳನ್ನು ಗಂಗೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಪ್ರತಿಯೊಂದೂ ತನ್ನ ಮೂಲಕ್ಕೆ ಮರಳಬೇಕಾದುದನ್ನು ಇದು ಸಂಕೇತಿಸುತ್ತದೆ. (ಮಣ್ಣು ಮಣ್ಣಿಗೇ ಸೇರುವ ತತ್ವ)

ನೌರೋಜ್ ಅಥವಾ ನೌರುಜ್ (2016): ನೌರೋಜ್ ಅಥವಾ ನೌರುಜ್ ಎಂಬುದು ಅಫ್ಘಾನಿಸ್ತಾನ, ಆಜರ್‌ಬೈಜಾನ್, ಭಾರತ, ಇರಾನ್ ಮತ್ತು ಇತರ ಹಲವಾರು ದೇಶಗಳಲ್ಲಿ ಮಾರ್ಚ್ 21ರಂದು ಹೊಸವರ್ಷದ ಆರಂಭವನ್ನು ಸೂಚಿಸುವ ಹಬ್ಬವಾಗಿದೆ. ಭಾರತದಲ್ಲಿ ಇದನ್ನು ಮುಖ್ಯವಾಗಿ ಇರಾನಿ ಮತ್ತು ಪಾರ್ಸಿ ಸಮುದಾಯದವರು ಆಚರಿಸುತ್ತಾರೆ. ನವ-ರೋಜ್ ಅಂದರೆ, ಹೊಸದಿನ. ಸಾಂಸ್ಕೃತಿಕ ಕಾರ್ಯಕ್ರಮಗಳು ಎರಡು ವಾರಗಳಿಗೂ ಹೆಚ್ಚು ಕಾಲ ನಡೆಯುತ್ತವೆ. ಕುಟುಂಬಗಳು ಜತೆಯಾಗಿ ಅಲಂಕೃತ ಮೇಜಿನ ಸುತ್ತಲೂ ಸೇರಿ, ವಿಶೇಷ ಹಬ್ಬದೂಟ ಮಾಡುತ್ತವೆ. ಹೊಸಹೊಸ ಬಟ್ಟೆಗಳನ್ನು ಧರಿಸಿ, ಸಂಬಂಧಿಕರನ್ನು ಭೇಟಿ ಮಾಡಿ, ಕರಕುಶಲ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.

ಮಣಿಪುರದ ಸಂಕೀರ್ತನ, ವಿಧಿಯುಕ್ತ ಗಾಯನ, ಡೋಲು ಬಡಿತ ಮತ್ತು ನೃತ್ಯ (2013): ಮಣಿಪುರದ ವೈಷ್ಣವ ಸಮುದಾಯದಲ್ಲಿರುವ ಉಜ್ವಲ ಸಂಪ್ರದಾಯವಾಗಿರುವ ಸಂಕೀರ್ತನವು, ಕೃಷ್ಣನ ಜೀವನ ಕಥನದ ಹಾಡುಗಳು ಮತ್ತು ನೃತ್ಯಗಳನ್ನು ಹೊಂದಿದೆ. ಸಾಮಾನ್ಯವಾಗಿ ದೇವಾಲಯಗಳು ಮತ್ತು ಅಂಗಳಗಳಲ್ಲಿ ನಡೆಯುವ ಇದು ಆಳವಾದ ಭಕ್ತಿ ಮತ್ತು ಸೌಂದರ್ಯೋಪಾಸನೆಯ ಭಾವವನ್ನು ಮೂಡಿಸುತ್ತದೆ.

ಹಬ್ಬ, ಉತ್ಸವಗಳಲ್ಲಿ ಸಮುದಾಯದಲ್ಲಿ ಏಕತೆ ಮೂಡಿಸುವ ಇದು, ಜೀವನಚಕ್ರದ ಆಚರಣೆಗಳ ಮೂಲಕ ಸಾಮಾಜಿಕ ಬಂಧವನ್ನು ಬಲಪಡಿಸುತ್ತದೆ. ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಈ ಆಚರಣೆಯು ಜ್ಞಾನವನ್ನು ಮುಂದಿನ ಪೀಳಿಗೆಗೆ ದಾಟಿಸುವ ಗುರುಶಿಷ್ಯ ಪರಂಪರೆಯಿಂದ ಬೆಳೆದುಬಂದಿದೆ ಮತ್ತು ಜೊತೆಗೆ ನೈಸರ್ಗಿಕ ಪ್ರಪಂಚದೊಂದಿಗೆ ಸಾಮರಸ್ಯವನ್ನು ಪ್ರತಿಪಾದಿಸುತ್ತದೆ.

ಲಡಾಖ್‌ನ ಬೌದ್ಧ ಘೋಷಗಳು, ಪವಿತ್ರ ಬೌದ್ಧ ಗ್ರಂಥಗಳ ಪಠಣ (2012): ಹಿಮಾಲಯದ ತಪ್ಪಲಿನಲ್ಲಿ ಇರುವ ಲಡಾಖ್‌ನ ಬೌದ್ಧ ಲಾಮಾಗಳು, ಮಹಾಯಾನ ಮತ್ತು ವಜ್ರಯಾನ ಸಂಪ್ರದಾಯಗಳಲ್ಲಿ ನೆಲೆಹೊಂದಿರುವ ಪವಿತ್ರ ಘೋಷ ಅಥವಾ ಪಠಣವನ್ನು ಮಾಡುತ್ತಾರೆ. ನಿಂಗ್ಮಾ, ಕಗ್ಯುಡ್, ಶಾಖ್ಯ ಮತ್ತು ಗೆಲುಕ್ ಪಂಥಗಳಲ್ಲಿ ಇದನ್ನು ಆಚರಿಸಲಾಗುತ್ತದೆ.

ಈ ಘೋಷಗಳು ಜೀವನಚಕ್ರದ ಆಚರಣೆಗಳಲ್ಲಿ ಆಧ್ಯಾತ್ಮಿಕ ಮತ್ತು ನೈತಿಕ ಉದ್ದೇಶಗಳು ಹಾಗೂ ಬೌದ್ಧ ಮತ್ತು ಕೃಷಿ ಸಂಬಂಧಿತ ಘಟನೆಗಳನ್ನು ಸಾರುತ್ತವೆ. ಈ ಘೋಷಗಳ ಜೊತೆಗೆ ಸಾಂಕೇತಿಕ ಮುದ್ರೆಗಳೂ ಇರುತ್ತವೆ. ಸಾಂಪ್ರದಾಯಿಕ ಗಂಟೆಗಳು ಮತ್ತು ಡೋಲುಗಳ ವಾದನದ ಜೊತೆಗೆ ನಡೆಯುವ ಇವು ಕಠಿಣ ತರಬೇತಿಯಿಂದಾಗಿ ನೋಡುಗರನ್ನು ಮಂತ್ರಮುಗ್ಧಗೊಳಿಸುವಂತೆ ಇರುತ್ತವೆ.

ರಾಜಸ್ಥಾನದ ಕಲ್ಬೇಲಿಯಾ ಹಾಡುಗಳು ಮತ್ತು ನೃತ್ಯ (2010): ಕಲ್ಬೇಲಿಯಾ (Kalbelia) ಹಾಡು, ನೃತ್ಯಗಳನ್ನು ಹಿಂದೆ ಹಾವಾಡಿಗ ಸಮುದಾಯಗಳ ಜನರು ಮಾಡುತ್ತಿದ್ದು, ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಈ ಮೂಲಕ ಆಚರಿಸುತ್ತಿದ್ದರು. ಮಹಿಳೆಯರು ಕರಿಯ ಲಂಗ ಧರಿಸಿ ಹಾವಿನ ಮಾದರಿಯ ಬಳುಕಿನ ಚಲನೆಯನ್ನು ಅನುಕರಿಸಿದರೆ, ಪುರುಷರು ಖಂಜರಿ ಮತ್ತು ಪುಂಗಿಯಂತಹ ಸಾಂಪ್ರದಾಯಿಕ ವಾದ್ಯಗಳನ್ನು ನುಡಿಸುತ್ತಾರೆ.

ಈ ಪ್ರದರ್ಶನಗಳು ಪೌರಾಣಿಕ ಕಥಾನಕಗಳಿಂದ ಸಮೃದ್ಧವಾಗಿವೆ. ಜೊತೆಗೆ ಆಶು ಸಾಹಿತ್ಯಗಳೂ, ಹಾಡುಗಳೂ ಕಲ್ಬೇಲಿಯಾ ಕಲೆಯ ಅವಿಭಾಜ್ಯ ಅಂಗವಾಗಿವೆ. ಅದು ಸಾಮಾಜಿಕ ಬದಲಾವಣೆಗಳ ನಡುವೆಯೂ ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಹರಿದುಬಂದ ಕತೆಗಳು ಮತ್ತು ಸಂಪ್ರದಾಯಗಳನ್ನು ಬಿಂಬಿಸುತ್ತದೆ.

ಮುಡಿಯೆಟ್ಟು (Mudiyettu): ಮುಡಿಯೆಟ್ಟು ಎಂಬುದು ದೇವತೆ ಕಾಳಿ ಮತ್ತು ರಾಕ್ಷಸ ದಾರಿಕಾ ಎಂಬಾತನ ನಡುವೆ ನಡೆಯುವ ಕಾಳಗವನ್ನು ಚಿತ್ರಿಸುವ ಆಚರಣಾ ನೃತ್ಯನಾಟಕವಾಗಿದೆ. ಭಗವತಿ ಕಾವುಸ್ ದೇವಾಲಯಗಳಲ್ಲಿ ವಾರ್ಷಿಕವಾಗಿ ನಡೆಯುವ ಈ ಆಚರಣೆಯು ಇಡೀ ಗ್ರಾಮ ಸಮುದಾಯವನ್ನು ಒಳಗೊಳ್ಳುತ್ತದೆ. ದೇವರನ್ನು ಆವಾಹಿಸಿಕೊಳ್ಳುವ ಮೊದಲು ಪಾತ್ರಧಾರಿಗಳು ಉಪವಾಸ ಮತ್ತು ಪ್ರಾರ್ಥನೆಯ ಮೂಲಕ ತಮ್ಮನ್ನು ಶುದ್ಧೀಕರಿಸಿಕೊಳ್ಳುತ್ತಾರೆ.

ರಾಮ್ಮನ್ (Ramman): ಹಿಮಾಲಯದ ಘಡ್‌ವಾಲ್ ಭಾಗದ ಧಾರ್ಮಿಕ ಉತ್ಸವ (2009)

ರಾಮ್ಮನ್ ಎಂಬುದು ಸಾಲೂರ್-ದುಂಗ್ರಾ, ಉತ್ತರಾಖಂಡದಲ್ಲಿ ಎಪ್ರಿಲ್ ಕೊನೆಯ ಭಾಗದಲ್ಲಿ ನಡೆಯುವ ಭೂಮಿಯಾಲ್ ದೇವತೆಗೆ ಅರ್ಪಿತವಾದ ಒಂದು ವಾರ್ಷಿಕ ಉತ್ಸವ ಮತ್ತು ಆರಾಧನಾ ರಂಗಭೂಮಿಯಾಗಿದೆ. ಈ ಉತ್ಸವದಲ್ಲಿ ಸಂಕೀರ್ಣವಾದ ಆಚರಣೆಗಳು, ರಾಮನಿಗೆ ಸಂಬಂಧಿಸಿದ ಮಹಾಕಾವ್ಯ ಭಾಗಗಳ ವಾಚನ, ಹಾಡುಗಳು ಮತ್ತು ಮುಖವಾಡ ನೃತ್ಯಗಳು ಇರುತ್ತವೆ. ಪ್ರತಿಯೊಂದು ಜಾತಿ ಮತ್ತು ವೃತ್ತಿ ಗುಂಪುಗಳು ಒಂದು ನಿರ್ದಿಷ್ಟ ಪಾತ್ರ ವಹಿಸುತ್ತವೆ.

ಕುಟಿಯಾಟ್ಟಂ (Kutiyattam ಸಂಸ್ಕೃತ ರಂಗಭೂಮಿ (2008): ಕುಟಿಯಾಟ್ಟಂ ಎಂಬುದು ಭಾರತದ ಇನ್ನೂ ಜೀವಂತವಾಗಿರುವ ಅತ್ಯಂತ ಹಳೆಯ ರಂಗಭೂಮಿ ಸಂಪ್ರದಾಯಗಳಲ್ಲಿ ಒಂದು. ಇದು ಕೇರಳದಲ್ಲಿ 2000 ವರ್ಷಗಳ ಹಿಂದೆ ಆರಂಭವಾಯಿತು ಎನ್ನಲಾಗಿದೆ. ಇದರಲ್ಲಿ ಸೂಕ್ಷ್ಮವಾದ ಕಣ್ಣಿನ ಭಾವಗಳು, ಮುದ್ರೆಗಳು ಮತ್ತು ಸಂಜ್ಞೆಗಳು ಇದ್ದು ಪಾತ್ರಗಳ ಯೋಚನೆಗಳನ್ನು ಮತ್ತು ಭಾವನೆಗಳನ್ನು ಬಿಂಬಿಸುತ್ತವೆ. ಇದಕ್ಕಾಗಿ ನಟರು ತೀವ್ರವಾದ ತರಬೇತಿಯನ್ನು ಪಡೆಯಬೇಕಾಗಿದ್ದು, ಇದು ಹದಿನೈದು ವರ್ಷಗಳ ಅವಧಿಯ ತನಕವೂ ನಡೆಯುತ್ತದೆ.

ರಾಮಲೀಲಾ: ಸಾಂಪ್ರದಾಯಿಕ ರಾಮಾಯಣ ರಂಗಭೂಮಿ (2008): ರಾಮಾಯಣ ಮಹಾಕಾವ್ಯವನ್ನು ಬಿಂಬಿಸುವ ರಾಮಲೀಲಾ ಸಾಂಪ್ರದಾಯಿಕ ರಂಗಭೂಮಿಯು ಉತ್ತರ ಭಾರತದಾದ್ಯಂತ ದಸರಾ ಸಂದರ್ಭದಲ್ಲಿ ನಡೆಯುತ್ತದೆ. ತುಲಸೀದಾಸರ ರಾಮಚರಿತ ಮಾನಸದ ಮೇಲೆ ಆಧರಿತವಾದ ರಾಮಲೀಲಾ ನಾಟಕಗಳು ಹತ್ತರಿಂದ ಹನ್ನೆರಡು ದಿನಗಳ ಕಾಲ ನಡೆಯುತ್ತವೆ.

ಸಾಂಪ್ರದಾಯಿಕ ವೇದಘೋಷ (2008): ವೇದಗಳು ಸುಮಾರು 3,500 ವರ್ಷಗಳ ಹಿಂದೆ ರಚಿಸಲಾದವು ಎಂದು ಹೇಳಲಾಗುವ ಹಿಂದೂ ಧರ್ಮದ ಆಧಾರ ಗ್ರಂಥಗಳು. ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವವೇದ ಎಂಬ ನಾಲ್ಕು ಅಂಗಗಳಿರುವ ವೇದಗಳ ಘೋಷವನ್ನು ವೈದಿಕ ಸಮುದಾಯಗಳಲ್ಲಿ- ಆಚರಣೆಗಳ ಸಂದರ್ಭದಲ್ಲಿ ಅಥವಾ ಕೆಲವು ಕಡೆ ನಿತ್ಯವೂ ಮಾಡಲಾಗುತ್ತಿದೆ. ಇವು ಹಿಂದೂ ಧರ್ಮದ ಆರಂಭ ಕಾಲದ ಇತಿಹಾಸದ ಕುರಿತು ಒಳನೋಟಗಳನ್ನು ಒದಗಿಸುತ್ತವೆ.

ಕುಂಭಮೇಳ (2017)

ಕುಂಭಮೇಳವು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಯಾತ್ರಿಕರು ಸೇರುವ ಮೇಳವಾಗಿದ್ದು, ಗಂಗೆಯಂತಹ ನದಿಗಳ ಸಂಗಮದಲ್ಲಿ ಮಿಂದು ತಮ್ಮ ಪಾಪಗಳನ್ನು ಕಳೆದುಕೊಂಡು, ಆಧ್ಯಾತ್ಮಿಕ ಮುಕ್ತಿ ಪಡೆಯುವ ನಂಬಿಕೆಯಿಂದ ಲಕ್ಷಾಂತರ ಜನರು ಬಂದು ಸೇರುತ್ತಾರೆ.

ನಾಲ್ಕು ವರ್ಷಗಳಿಗೆ ಒಮ್ಮೆ ಅಲಹಾಬಾದ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್‌ಗಳಲ್ಲಿ ನಡೆಯುವ ಈ ಜನಜಾತ್ರೆಗಳು ಸಾಧು, ಸಂತರಿಂದ ಹಿಡಿದು ಜೀವನದ ಎಲ್ಲಾ ಜನವಿಭಾಗಗಳ ಯಾತ್ರಿಕರನ್ನು ಆಕರ್ಷಿಸುತ್ತವೆ.

ಕುಂಭಮೇಳವು ಪುರಾತನ ಗ್ರಂಥಗಳಲ್ಲಿ ಮತ್ತು ಮೌಖಿಕ ಪರಂಪರೆಗಳಲ್ಲಿ ಬಣ್ಣಿಸಲಾದ ಖಗೋಳಶಾಸ್ತ್ರ, ಜ್ಯೋತಿಷ್ಯ, ಆಧ್ಯಾತ್ಮಿಕತೆ, ಮತ್ತು ಸಮೃದ್ಧ ಸಾಂಸ್ಕೃತಿಕ ಸಂಪ್ರದಾಯಗಳ ಮೇಳವಾಗಿದೆ.

ಯೋಗ (2016)

ಯೋಗ ಪದ್ಧತಿಯು ಪುರಾತನ ಭಾರತೀಯ ಪರಂಪರೆಯಲ್ಲಿ ಬೇರುಗಳನ್ನು ಹೊಂದಿದ್ದು, ವಿವಿಧ ಆಸನಗಳು, ಧ್ಯಾನ, ನಿಯಂತ್ರಿತ ಉಸಿರಾಟ ಮತ್ತು ಉಚ್ಛಾರಗಳ ಮೂಲಕ ದೇಹ, ಮನಸ್ಸು ಮತ್ತು ಆತ್ಮಗಳನ್ನು ಏಕೀಕರಿಸುತ್ತದೆ ಮತ್ತು ಮಾನಸಿಕ, ಆಧ್ಯಾತ್ಮಿಕ ಮತ್ತು ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಇತ್ತೀಚೆಗೆ ಜಗತ್ತಿನಾದ್ಯಂತ ವಯಸ್ಸು, ಹಿನ್ನೆಲೆ, ಲಿಂಗ, ವರ್ಗ, ಧರ್ಮ ಭೇದವಿಲ್ಲದೆ ಜನರು ಯೋಗವನ್ನು ಅನುಸರಿಸುತ್ತಿದ್ದಾರೆ.

ಛೌ (Chhau) ನೃತ್ಯ (2010)

ಪೂರ್ವ ಭಾರತ ಮೂಲದ ಛೌ ನೃತ್ಯವು ಮಹಾಕಾವ್ಯಗಳು, ಜನಪದ ಮತ್ತು ಅಮೂರ್ತ ಕಥಾನಕಗಳನ್ನು ಒಳಗೊಂಡಿರುತ್ತದೆ. ಮುಖ್ಯವಾಗಿ ಇಲ್ಲಿ ನಿರ್ದಿಷ್ಟವಾಗಿ ಸೆರಾಯ್‌ಕೆಲ್ಲ, ಪುರೂಲಿಯಾ ಮತ್ತು ಮಯೂರ್‌ಭಂಜ್ ಶೈಲಿಗಳಿವೆ. ಇದರಲ್ಲಿ ಅಣಕು ಕಾದಾಟ, ಪ್ರಾಣಿ ಪಕ್ಷಿಗಳ ಚಲನವಲನ, ಹಳ್ಳಿಯ ಮನೆಗಳಲ್ಲಿ ಕಾಣಸಿಗುವ ಸಂಜ್ಞೆಗಳು ಇತ್ಯಾದಿ ಇರುತ್ತವೆ.

ಈ ನೃತ್ಯವನ್ನು ಪ್ರಾಥಮಿಕವಾಗಿ ಸಾಂಪ್ರದಾಯಿಕ ಕಲಾವಿದ ಕುಟುಂಬಗಳು ಮತ್ತು ಅಥವಾ ಸ್ಥಳೀಯ ಸಮುದಾಯಗಳ ಗಂಡು ನರ್ತಕರಿಗೆ ಮಾತ್ರವೇ ಕಲಿಸಲಾಗುತ್ತದೆ. ಸಾಂಪ್ರದಾಯಿಕ ಸಂಗೀತದೊಂದಿಗೆ ರಾತ್ರಿಯಲ್ಲಿ ನಡೆಯುವ ಛೌ ನೃತ್ಯವು ಸ್ಥಳೀಯ ಉತ್ಸವ, ಜಾತ್ರೆಗಳಲ್ಲಿ ಪ್ರಮುಖ ಪಾತ್ರ ಹೊಂದಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT