ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸಿಎ ಮಾಡುವುದು ಹೇಗೆ?

Published : 24 ನವೆಂಬರ್ 2024, 23:30 IST
Last Updated : 24 ನವೆಂಬರ್ 2024, 23:30 IST
ಫಾಲೋ ಮಾಡಿ
Comments
ಪ್ರ

ನಾನು ಬಿ.ಕಾಂ ಮಾಡುತ್ತಿದ್ದು, ಮುಂದೆ ಸಿಎ ಮಾಡಬೇಕೆಂದುಕೊಂಡಿದ್ದೇನೆ. ಮಾರ್ಗದರ್ಶನ ನೀಡಿ.
ಹೆಸರು, ಊರು ತಿಳಿಸಿಲ್ಲ.

ಸಿಎ ಮಾಡಲು ಎರಡು ಆಯ್ಕೆಗಳಿರುತ್ತವೆ. ಪಿಯು ಕೋರ್ಸ್‌ನಲ್ಲಿ ಶೇ 50 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಸಿಎ ಫೌಂಡೇಷನ್ ಕೋರ್ಸ್ ಮಾಡಿದರೆ, ನಂತರ ಇಂಟರ್‌ಮೀಡಿಯಟ್ ಕೋರ್ಸಿಗೆ ಅರ್ಹತೆ ಸಿಗುತ್ತದೆ. ಬಿಕಾಂ ಪದವೀಧರರು ಫೌಂಡೇಷನ್ ಕೋರ್ಸ್ ಮಾಡುವ ಅಗತ್ಯವಿಲ್ಲ. ಬಿಕಾಂ ಪದವಿಯಲ್ಲಿ ಕನಿಷ್ಠ ಶೇ 55 ಅಂಕಗಳನ್ನು ಗಳಿಸಿ ನೇರವಾಗಿ ಸಿಎ ಇಂಟರ್‌ಮೀಡಿಯಟ್ ಕೋರ್ಸ್ ಮಾಡಬಹುದು. ಹಾಗಾಗಿ, ಈಗಲೇ ಫೌಂಡೇಷನ್ ಕೋರ್ಸ್ ಮಾಡುವುದು ಅಥವಾ ಬಿಕಾಂ ನಂತರ ನೇರವಾಗಿ ಇಂಟರ್‌ಮೀಡಿಯಟ್ ಕೋರ್ಸ್ ಮಾಡುವುದು, ನಿಮ್ಮ ಆಯ್ಕೆ. 3 ವರ್ಷದ ಆರ್ಟಿಕಲ್ಡ್ ತರಬೇತಿ ಪಡೆಯಲು, ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳನ್ನು ಸೇರಬೇಕು. ಇಂಟರ್‌ಮೀಡಿಯೆಟ್ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಪರಿಶ್ರಮ, ಬದ್ಧತೆ, ಆತ್ಮವಿಶ್ವಾಸ ಮತ್ತು ಸಮಯದ ನಿರ್ವಹಣೆಯಿಂದ ಸಿಎ ಕೋರ್ಸ್ ಮಾಡಬಹುದು; ಕೋಚಿಂಗ್ ಕಡ್ಡಾಯವಲ್ಲ. ಮೇಲಾಗಿ, ಚಾರ್ಟರ್ಡ್ ಅಕೌಂಟೆಂಟ್ ಇನ್‌ಸ್ಟಿಟ್ಯೂಟ್ ವತಿಯಿಂದ ನೀಡುವ ಕೋಚಿಂಗ್ ಮತ್ತು ಮಾರ್ಗದರ್ಶನದ ಸೌಲಭ್ಯವನ್ನು ನೀವು ಉಪಯೋಗಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:  https://www.youtube.com/watch?v=fuTaa5UjZCo

ADVERTISEMENT
ಪ್ರ

ಬಿ.ಟೆಕ್ ಮಾಡಿದೆ. ಕ್ಯಾಂಪಸ್ ನೇಮಕಾತಿಯಾಗಲಿಲ್ಲ. ಈಗಲೂ ಸರಿಯಾದ ಕೆಲಸ ಸಿಕ್ಕಿಲ್ಲ.
ಹೆಸರು, ಊರು ತಿಳಿಸಿಲ್ಲ.

ಬಿಟೆಕ್ ಮಾಡಿದ ನಂತರವೂ ಉತ್ತಮ ಉದ್ಯೋಗ ಸಿಗದಿರಲು ಕಾರಣಗಳೇನು ಎಂದು ಸ್ವಯಂ-ಮೌಲ್ಯಮಾಪನ ಮಾಡಬೇಕು. ಸಾಮಾನ್ಯವಾಗಿ, ಉದ್ಯೋಗದಲ್ಲಿ ಯಶಸ್ವಿಯಾಗಲು ಎಂಜಿನಿಯರಿಂಗ್ ಜ್ಞಾನದ ಜೊತೆಗೆ ಪ್ರಾಥಮಿಕ ಮತ್ತು ವೃತ್ತಿ ಸಂಬಂಧಿತ ಕೌಶಲಗಳ ಅಗತ್ಯವಿರುತ್ತದೆ. ಉದ್ಯೋಗದ ಸಂದರ್ಶನಗಳಲ್ಲಿ, ಇವುಗಳು ಅಭ್ಯರ್ಥಿಗಳಲ್ಲಿವೆಯೇ ಎಂದು ಪರೀಕ್ಷಿಸಲಾಗುತ್ತದೆ. ಉದಾಹರಣೆಗೆ, ಪ್ರಾಥಮಿಕ ಕೌಶಲಗಳಾದ ಸಮಯದ ನಿರ್ವಹಣೆ, ಸಂವಹನ ಕೌಶಲ, ಅಂತರ್-ವೈಯಕ್ತಿಕ ಕೌಶಲ ಮತ್ತು ನಾಯಕತ್ವದ ಕೌಶಲಗಳು ಯಾವುದೇ ವೃತ್ತಿಯಲ್ಲಿ ಮುಖ್ಯವಾಗುತ್ತದೆ. ಹಾಗೂ, ವೃತ್ತಿ ಸಂಬಂಧಿತ ಕೌಶಲಗಳಾದ ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿಶ್ಲೇಷಾತ್ಮಕ ಕೌಶಲ, ಇತ್ಯಾದಿ ಕೌಶಲಗಳೂ ಎಂಜಿನಿಯರಿಂಗ್ ಉದ್ಯೋಗದ ಆಕಾಂಕ್ಷಿಗಳಲ್ಲಿರಬೇಕು. ನಿಮ್ಮ ಶಕ್ತಿ, ಸಾಮರ್ಥ್ಯ, ಕುಂದು ಕೊರತೆಗಳನ್ನರಿತು, ಪ್ರಾಮಾಣಿಕ ಪ್ರಯತ್ನಗಳಿಂದ ಈ ಕೌಶಲಗಳನ್ನು ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಳ್ಳಬೇಕು. ವ್ಯಕ್ತಿತ್ವ ಮತ್ತು ವೃತ್ತಿಗೆ ಸಂಬಂಧಿಸಿದ ಕೌಶಲಗಳನ್ನು ಕಲಿಯಲು ಇಂದು ವಿಭಿನ್ನವಾದ ಮತ್ತು ವಿಸ್ತಾರವಾದ ಅವಕಾಶಗಳಿವೆ.
ಅಚ್ಚುಕಟ್ಟಾದ ಬಯೋಡೇಟ ಬರೆಯುವುದರ ಬಗ್ಗೆ ಮತ್ತು ಸಂದರ್ಶನಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=faQz_iLCWEk

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT