ತೆರೆದ ಪುಸ್ತಕದ ಪರೀಕ್ಷೆ ಇರಬೇಕೋ ಬೇಡವೋ, ಸಾಧ್ಯವೋ ಸಿಂಧುವೋ, ಅಗತ್ಯವೋ ಅನಗತ್ಯವೋ, ಸಮಸ್ಯೆಯೋ ಪರಿಹಾರವೋ ಎಂದು ಚರ್ಚೆ ನಡೆಯುತ್ತಿದೆ. ಆ ಚರ್ಚೆಗೆ ಪರಿಹಾರ ಹುಡುಕುವ ಮೊದಲು ನಾವೇ ಒಂದು ತೆರೆದ ಪುಸ್ತಕದ ಪರೀಕ್ಷೆ ತೆಗೆದುಕೊಂಡರೆ, ಅದರ ಸಾಧ್ಯಾಸಾಧ್ಯತೆಗಳೆಲ್ಲ ಸ್ವಲ್ಪ ತಿಳಿಯಾಗಿ ಕಾಣಿಸಬಹುದು. ಮ. ಸು. ಮನ್ನಾರ್ ಕೃಷ್ಣರಾವ್ ಅವರ ‘ಅದ್ವಿತೀಯ ಭಾರತೀಯ ಜಿ.ಡಿ. ಬಿರ್ಲಾ’ ಪುಸ್ತಕದಿಂದ ಒಂದು ಭಾಗ ಇಲ್ಲಿದೆ. ಇವತ್ತಿನ ಪರೀಕ್ಷೆಗೆ ಇದೇ ನಮ್ಮ ಪಠ್ಯ ಅಂತ ಇಟ್ಟುಕೊಳ್ಳಿ. ಇದನ್ನು ಓದಿ ಮುಂದಿನ ಪ್ರಶ್ನೆಗಳನ್ನು ಗಮನಿಸಿ.

ಬಿರ್ಲಾರವರು ತಮ್ಮ ಮತ್ತು ಗಾಂಧೀಜಿಯ ಸಂಬಂಧದ ಬಗೆಗೆ ತಮ್ಮ ‘ಮಹಾತ್ಮನ ನೆರಳಿನಲ್ಲಿ’ ಕೃತಿಯಲ್ಲಿ ಹೀಗೆ ಬರೆದಿದ್ದಾರೆ:

‘ನಾನು ಆ ದಿನಗಳ ಭಯೋತ್ಪಾದಕರ ಜೊತೆಯಲ್ಲಿ ಸೇರಿ ಒಮ್ಮೆ ತೀವ್ರ ತೊಂದರೆಗೆ ಸಿಕ್ಕಿಕೊಂಡಿದ್ದೆ ಮತ್ತು ಸುಮಾರು ಮೂರು ತಿಂಗಳ ಕಾಲ ಭೂಗತನಾಗಿರಬೇಕಾಯಿತು. ಕೆಲವು ದಯಾವಂತ ಸ್ನೇಹಿತರ ಮಧ್ಯ ಪ್ರವೇಶವು ನಾನು ಸೆರೆಮನೆಗೆ ಹೋಗುವುದನ್ನು ತಪ್ಪಿಸಿತು. ಆದರೂ ನನಗೆ ಭಯೋತ್ಪಾದನೆಯಲ್ಲಿ ಅಂತಹ ಅಭಿರುಚಿ ಇರಲಿಲ್ಲವೆಂದು ಹೇಳಲೇಬೇಕು ಮತ್ತು ಗಾಂಧೀಜಿಯೊಡನೆ ನನ್ನ ಸಂಪರ್ಕ ಆರಂಭವಾದ ಮೇಲೆ ಉಳಿದಿದ್ದ ಅಲ್ಪಸ್ವಲ್ಪ ಭಯೋತ್ಪಾದನೆಯ ಕುರುಹೂ ಸಂಪೂರ್ಣವಾಗಿ ನಾಶವಾಯಿತು.

ಈ ಹಿನ್ನೆಲೆಯಲ್ಲಿ ಗಾಂಧೀಜಿಯ ಕಡೆಗೆ ನಾನು ಸೆಳೆಯಲ್ಪಟ್ಟಿದ್ದು ಸಹಜವೆ. ನಾನು ಅವರ ಟೀಕಾಕಾರನಾಗಿ ಆರಂಭ ಮಾಡಿದೆ ಮತ್ತು ಅಂತಿಮದಲ್ಲಿ ಅವರ ಅವಿಚ್ಚಿನ್ನ ಭಕ್ತನಾದೆ. ಆದಾಗ್ಯೂ, ಎಲ್ಲಾ ವಿಷಯಗಳಲ್ಲೂ ನಾನು ಗಾಂಧೀಜಿಯನ್ನು ಒಪ್ಪಿದೆನೆಂದು ಹೇಳುವುದು ತಪ್ಪು. ನಿಜವಾಗಿ ಹೇಳುವುದಾದರೆ ಬಹಳಷ್ಟು ಸಮಸ್ಯೆಗಳ ಬಗ್ಗೆ ನಾನು ನನ್ನದೇ ಆದ ಸ್ವತಂತ್ರ ಅಭಿಪ್ರಾಯಗಳನ್ನು ಹೊಂದಿರುತ್ತಿದ್ದೆ.

ನಮ್ಮಿಬ್ಬರ ಜೀವನಕ್ರಮದ ಬಗ್ಗೆ ಹೇಳುವುದಾದರೆ, ನಮ್ಮಿಬ್ಬರಿಗೂ ಸಮಾನವಾದುದು ಹೆಚ್ಚೇನೂ ಇರಲಿಲ್ಲ. ಗಾಂಧೀಜಿಯವರು ಜೀವನದ ಎಲ್ಲಾ ಸೌಕರ್ಯ ಮತ್ತು ವೈಭೋಗಗಳನ್ನು ತ್ಯಜಿಸಿದ್ದ ಸಂತ. ಧರ್ಮ ಅವರ ಮುಖ್ಯ ಆಸಕ್ತಿಯಾಗಿತ್ತು ಮತ್ತು ಅವರ ಈ ಆಸಕ್ತಿ ನನ್ನನ್ನು ಅವರ ಕಡೆಗೆ ಎಳೆಯಿತು. ಆದಾಗ್ಯೂ ಆರ್ಥಿಕ ವಿಷಯಗಳ ಬಗೆಗ ಅವರ ದೃಷ್ಟಿ ಭಿನ್ನವಾಗಿತ್ತು. ಅವರು ಸಣ್ಣ ಪ್ರಮಾಣದ ಕೈಗಾರಿಕೆ, ಚರಕ ಇತ್ಯಾದಿಗಳಲ್ಲಿ ನಂಬಿಕೆ ಇಟ್ಟಿದ್ದರು. ನಾನು, ಅದಕ್ಕೆ ವಿರುದ್ಧವಾಗಿ ಬೃಹತ್ ಕೈಗಾರಿಕೆಗಳ ಮೂಲಕ ದೇಶದಲ್ಲಿ ಕೈಗಾರಿಕೀಕರಣವನ್ನು ಸಾಧಿಸಬೇಕೆಂದು ನಂಬಿದ್ದೆ ಮತ್ತು ಸಾಕಷ್ಟು ಅನುಕೂಲಕರವಾದ ಜೀವನವನ್ನು ನಡೆಸುತ್ತಿದ್ದೆ. ಹಾಗಾದ ಮೇಲೆ ಅದು ಹೇಗೆ ನಾವು ಅಂತಹ ಆತ್ಮೀಯ ಸಂಬಂಧ ಬೆಳೆಸಿಕೊಂಡೆವು? ಅದು ಹೇಗೆ ನಾನು ಅವರ ನಂಬಿಕೆ ಮತ್ತು ಪ್ರೀತಿಯನ್ನು ಗಳಿಸುತ್ತಲೇ ಹೋದೆ?’

ಈಗ ಒಂದಷ್ಟು ಪ್ರಶ್ನೆಗಳು. ಇದನ್ನು ಉತ್ತರಿಸುವುದು ಮುಖ್ಯವಲ್ಲ. ಈ ಪ್ರಶ್ನೆಗಳಲ್ಲಿ ಯಾವ ಯಾವ ಪ್ರಶ್ನೆಗಳು ವಿದ್ಯಾರ್ಥಿಗಳಿಗೆ ಪ್ರಸ್ತುತವಾಗಿರುತ್ತವೆ ಮತ್ತು ಯಾವುದು ಅಪ್ರಸ್ತುತವಾಗಬಹುದು ಎಂದು ಗಮನಿಸಿ. (ಸುಮಾರು ಮಿಡ್ಲ್ ಸ್ಕೂಲು ಮಟ್ಟದ ವಿದ್ಯಾರ್ಥಿಗಳು ಎಂದಿಟ್ಟುಕೊಳ್ಳಿ).

ಪ್ರಶ್ನೆ 1. ಬಿರ್ಲಾರವರು ಭಯೋತ್ಪಾದನೆಯಲ್ಲಿ ತೊಡಗಿದ್ದರು ಎಂದರೆ ಅರ್ಥ ಏನಿರಬಹುದು? ಊಹಿಸಿ.

ಪ್ರಶ್ನೆ 2. ಆರ್ಥಿಕ ವಿಚಾರಗಳಲ್ಲಿ ಗಾಂಧೀಜಿ ಮತ್ತು ಬಿರ್ಲಾರವರ ನಡುವೆ ಇದ್ದ ವ್ಯತ್ಯಾಸ ಏನು?

ಪ್ರಶ್ನೆ 3. ಕೈಗಾರಿಕೆಗಳು ಮತ್ತು ಅಭಿವೃದ್ಧಿಯ ವಿಚಾರದಲ್ಲಿ ನೀವು ಗಾಂಧೀಜಿಯವರ ಪರವೋ ಅಥವಾ ಬಿರ್ಲಾರವರ ಪರವೋ? ಯಾಕೆ?

ಪ್ರಶ್ನೆ 4. ಬಿರ್ಲಾರವರು ಗಾಂಧೀಜಿಯವರನ್ನು ಮೊದಲು ಭೇಟಿ ಮಾಡಿದ್ದು ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೋ ಅಥವಾ ಅದಕ್ಕಿಂತಲೂ ಮೊದಲೋ?

ಪ್ರಶ್ನೆ 5. ಈ ಪಾಠದಲ್ಲಿರುವ ಬಿರ್ಲಾರವರು ಯಾರು? ಅವರ ಬಗ್ಗೆ ನಿಮಗೆ ಏನಾದರೂ ತಿಳಿದಿದೆಯೇ?

ಪ್ರಶ್ನೆ 6. ಬಿರ್ಲಾರವರು ಗಾಂಧೀಜಿಯ ಎಲ್ಲಾ ವಿಚಾರಗಳನ್ನೂ ಒಪ್ಪಿದ್ದವರೇ?

ಪ್ರಶ್ನೆ 7. ಬಿರ್ಲಾರವರು ಸೆರೆಮನೆಗೆ ಹೋಗಬೇಕಾಗಿ ಬಂದಾಗ ಅದನ್ನು ತಪ್ಪಿಸಿದ್ದು ಯಾರು?

ಪ್ರಶ್ನೆ 8. ಬಿರ್ಲಾರಂತಹ ಕೈಗಾರಿಕೋದ್ಯಮಿಗಳಿಂದ ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಕುರಿತು ಬರೆಯಿರಿ.

ಈ ಪ್ರಶ್ನೆಗಳನ್ನು ಈಗ ಒಂದೊಂದಾಗಿಯೇ ಗಮನಿಸಿ.

ಪ್ರಶ್ನೆ 1ಕ್ಕೆ ನೇರವಾದ ಉತ್ತರ ಪಠ್ಯದಲ್ಲಿಲ್ಲ. ಆದರೆ, ಸುಮಾರಾಗಿ ಸರಿಯಾದ ಉತ್ತರವನ್ನು ಊಹಿಸಲು ಸಾಧ್ಯವಿದೆ. ಜೊತೆಗೇ, ಯಾವುದಾದರೂ ಜಾಣ ವಿದ್ಯಾರ್ಥಿ, ಈ ಸಂದರ್ಭದಲ್ಲಿ ಭಯೋತ್ಪಾದನೆ ಎಂದರೆ ಬ್ರಿಟಿಷ್ ಸಾಮ್ರಾಜ್ಯವನ್ನು ವಿರೋಧಿಸಲು ನಡೆಸುತ್ತಿದ್ದ ಒಂದು ರೀತಿಯ ಚಳವಳಿಯ ಕ್ರಮ ಎಂದೇನಾದರೂ ಬರೆದರೆ, ಆ ವಿದ್ಯಾರ್ಥಿ ಬಹಳ ಸೂಕ್ಷ್ಮಮತಿ ಎಂದು ಸುಲಭಕ್ಕೆ ತಿಳಿಯುತ್ತದೆ. ಅಂದರೆ, ಪದದ ಅರ್ಥ ಸುಮಾರಾಗಿ ಗ್ರಹಿಸಿದರೆ, ಒಂದು ಅಂಕ. ಅದರ ಸಂದರ್ಭದ ಸಮೇತ ಗ್ರಹಿಸಿದರೆ ಎರಡು ಅಂಕ. ಆದರೆ ಕೆಲವರ ಪ್ರಕಾರ ಇಲ್ಲೊಂದು ಸಮಸ್ಯೆ ಇದೆ. ಬ್ರಿಟಿಷ್ ಸಾಮ್ರಾಜ್ಯದ ಸಂದರ್ಭವನ್ನು ಕುರಿತು ಈ ಪಾಠ ಏನನ್ನೂ ಹೇಳುತ್ತಿಲ್ಲ. ಅಂದಮೇಲೆ, ಅದರ ಕುರಿತು ವಿದ್ಯಾರ್ಥಿಗಳು ತಿಳಿದುಕೊಂಡಿರಬೇಕು ಎನ್ನುವುದು ಎಷ್ಟು ಸರಿ?

ಪ್ರಶ್ನೆ 2ಕ್ಕೆ ಪಾಠದಲ್ಲಿ ನೇರವಾದ ಉತ್ತರ ಇದೆ. ವಾಕ್ಯಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳುವುದನ್ನು ಮೇಷ್ಟ್ರು ಕಲಿಸಿದ್ದರೆ, ವಿದ್ಯಾರ್ಥಿಗಳು ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ಪ್ರಶ್ನೆ 3ಕ್ಕೆ ಪಠ್ಯದಲ್ಲಿ ಉತ್ತರವಿಲ್ಲ. ಮತ್ತು ಈ ಪ್ರಶ್ನೆಗೆ ಉತ್ತರ ಹೇಳುವುದೂ ಈ ಪಾಠದ ಉದ್ದೇಶವಲ್ಲ. ಅಷ್ಟೇ ಅಲ್ಲದೇ, ಎಲ್ಲಿಯೂ ಈ ಪ್ರಶ್ನೆಗೆ ಸರಿಯಾದ ಒಂದು ಉತ್ತರ ಎನ್ನುವುದು ಇಲ್ಲ. ಅಂದಮೇಲೆ, ಇಂತಹ ಪ್ರಶ್ನೆ ಕೇಳುವುದು ಸರಿಯಲ್ಲ. ಆದರೆ, ಇನ್ನೊಂದು ರೀತಿಯಿಂದ ನೋಡಿ: ಇದಕ್ಕೆ ವಿದ್ಯಾರ್ಥಿಗಳು ಯಾವ ಉತ್ತರ ಬರೆದರೂ ಅದು ಸರಿಯೇ. ಒಂದೇ ಷರತ್ತು ಏನೆಂದರೆ, ಅವರು ಕನಿಷ್ಠ ಒಂದು ಸಾಲಿನ ಸಮರ್ಥನೆಯನ್ನಾದರೂ ನೀಡಬೇಕು. ಆ ಸಮರ್ಥನೆಯೂ ಸರಿಯಾಗಿರಬೇಕಿಲ್ಲ. ಅಪ್ರಸ್ತುತವಾಗಿ ಇರದಿದ್ದರೆ ಸಾಕು. ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವ ಶಕ್ತಿ ಮತ್ತು ವಾದಿಸುವ ಶಕ್ತಿ ಇದರಿಂದ ಬೆಳೆಯಬಹುದು.

ಪ್ರಶ್ನೆ 4 ಒಂದು ರೀತಿಯ ಕಣ್ಕಟ್ಟಿನ ಪ್ರಶ್ನೆ. ನೇರವಾದ ಉತ್ತರ ಪಾಠದಲ್ಲಿ ಇಲ್ಲದಿದ್ದರೂ, ಸುಮಾರು ಮಿಡ್ಲ್ ಸ್ಕೂಲಿಗೆ ಹೋದ ವಿದ್ಯಾರ್ಥಿಗಳು ಇದಕ್ಕೆ ಊಹೆಯಿಂದ ಸರಿಯಾದ ಉತ್ತರ ಬರೆಯಲು ಶಕ್ತರಾಗಿರಬಹುದು. ಇಂಥ ಪ್ರಶ್ನೆಗಳು ವಿದ್ಯಾರ್ಥಿಗಳ ಕಾಮನ್ ಸೆನ್ಸ್ ಅನ್ನು ಪರೀಕ್ಷಿಸುತ್ತವೆ.

ಪ್ರಶ್ನೆ 5 ಓದಿದ್ದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಅಸಕ್ತಿ ಇದೆಯೇ, ಪಾಠದ ಆಚೆಗೆ ಏನಾದರೂ ತಿಳಿದುಕೊಂಡಿ ದ್ದಾರೆಯೇ ಎಂದು ಪರೀಕ್ಷಿಸಲು ಉಪಯೋಗವಾಗುವಂಥ ಪ್ರಶ್ನೆ. ಅಷ್ಟೇ ಅಲ್ಲ. ಈ ಪಾಠವನ್ನು ಕಲಿಸಿದ ಉಪಾಧ್ಯಾಯರನ್ನೂ ಪರೀಕ್ಷಿಸಲು ಬಳಸಬಹುದು. ಒಂದು ತರಗತಿಯಲ್ಲಿ ಎಲ್ಲೋ ಒಂದಿಬ್ಬರು ವಿದ್ಯಾರ್ಥಿಗಳು ಬಿಟ್ಟು ಯಾರೂ ಇದಕ್ಕೆ ಸಮರ್ಪಕವಾದ ಉತ್ತರ ಬರೆದಿಲ್ಲವೆಂದರೆ, ಆ ಮೇಷ್ಟ್ರು ಒಳ್ಳೆಯ ಮೇಷ್ಟ್ರರಲ್ಲ ಎಂದು ಖಾತರಿ. ಅದೇ, ಒಂದಿಬ್ಬರು ವಿದ್ಯಾರ್ಥಿಗಳನ್ನು ಬಿಟ್ಟು ಮಿಕ್ಕ ಹಲವಾರು ವಿದ್ಯಾರ್ಥಿಗಳು ಈ ಪ್ರಶ್ನೆಗೆ ಉತ್ತರ ಬರೆದಿದ್ದಾರೆ ಎಂದರೆ, ಆ ತರಗತಿಯ ಮೇಷ್ಟ್ರು ಸ್ವಲ್ಪ ಜವಾಬ್ದಾರಿಯ ಜನ ಎಂದು ಲೆಕ್ಕ.

ಪ್ರಶ್ನೆ 6 ಬಹಳ ಸರಳವಾದ, ಬಹುಶಃ ಒಂದೇ ಪದದಲ್ಲಿ ಉತ್ತರಿಸಬಹುದಾದ ಪ್ರಶ್ನೆ. ಇದನ್ನು ತಪ್ಪಾಗಿ ಬರೆಯುವ ಮಕ್ಕಳಿಗೆ ನಿಜಕ್ಕೂ ವಿಶೇಷ ತರಬೇತಿ ಮತ್ತು ವೈಯಕ್ತಿಕ ಕಾಳಜಿಯ ಅಗತ್ಯವಿದೆ.

ಪ್ರಶ್ನೆ 7 ಓದುವಾಗ ವಾಕ್ಯಗಳು ಮತ್ತು ಪದಗಳ ಮಟ್ಟದ ಗಮನ ಇದೆಯೇ ಎಂದು ಪರೀಕ್ಷಿಸಲು ಉಪಯುಕ್ತವಾಗುವ ಪ್ರಶ್ನೆ. ಇಂಥವು ಒಂದೆರಡು ಇರಬೇಕಾದರೂ, ಅದಕ್ಕಿಂತ ಜಾಸ್ತಿ ಇದ್ದರೆ, ಪರೀಕ್ಷೆಯ ನಿಜವಾದ ಉದ್ದೇಶ ಸಫಲವಾಗುವುದಿಲ್ಲ.

ಪ್ರಶ್ನೆ 8 ನೇರವಾಗಿ ಬ್ರೇನ್‍ವಾಶ್ ಮಾದರಿಯ ಪ್ರಶ್ನೆ. ಇಂಥವನ್ನು ಕೇಳದಿರುವುದೇ ಲೇಸು. ಕೈಗಾರಿಕೆಗಳು ಮತ್ತು ಪರಿಸರದ ಬಗ್ಗೆ ಪ್ರಶ್ನೆ ಕೇಳಬೇಕೆಂದರೆ, ಅದರ ಕುರಿತೇ ನೇರವಾದ ಪಾಠವನ್ನು ಸೂಚಿಸಿ, ಆಗ ಕೇಳುವುದು ಉತ್ತಮ.

ಈಗ ಒಂದು ಮುಖ್ಯ ಅಂಶ. ಈ ಪಾಠವನ್ನೇ ವಿದ್ಯಾರ್ಥಿಗಳು ತರಗತಿಯಲ್ಲಿ ಓದಿದ್ದರೆ ಮತ್ತು ಈ ಪ್ರಶ್ನೆಗಳಿಗೇ ಉಪಾಧ್ಯಾಯರು ಉತ್ತರ ಬರೆಸಿದ್ದರೆ, ಮತ್ತೆ ಉರುಹೊಡೆದು ಬರೆಯುವ ಚಾಳಿಯೇ ಬೆಳೆಯುತ್ತದೆ. ಇಂತಹುದೇ ಪಾಠಗಳನ್ನು (ಆದರೆ ಇದೇ ಪಾಠವನ್ನಲ್ಲ) ತರಗತಿಯಲ್ಲಿ ಅಭ್ಯಾಸ ಮಾಡಿ, ಅದಕ್ಕಿಂತಲೂ ಸರಳವಾದ ಒಂದು ಪಾಠವನ್ನು ಪರೀಕ್ಷೆಯಲ್ಲಿ ಕೊಡುವ ಪರಿಪಾಠವೂ ಸಾಧ್ಯವಿದೆ. ಅಷ್ಟೇ ಅಲ್ಲದೇ, ಸರಳ ಪ್ರಶ್ನೆಗಳು ಸುಮಾರು ಶೇ 75ರಷ್ಟು ಮತ್ತು ಸ್ವಲ್ಪ ಕಷ್ಟದ ಪ್ರಶ್ನೆಗಳು ಸುಮಾರು ಶೇ 25ರಷ್ಟು ಎಂದು ವಿಭಾಗ ಮಾಡಿಕೊಳ್ಳಬೇಕಾಗಬಹುದು. ಬೇರೆಬೇರೆ ಕಲಿಕೆಯ ಮಟ್ಟದ ಎಲ್ಲ ವಿದ್ಯಾರ್ಥಿಗಳಿಗೂ ಇದರಿಂದ ಅನುಕೂಲವಾಗುತ್ತದೆ. ಇದು ಒಂದು ಉದಾಹರಣೆ. ಹೀಗೆ ಬೇರೆ ಬೇರೆ ವಿಷಯಗಳಲ್ಲಿ ಬೇರೆಬೇರೆ ಉದಾಹರಣೆಗಳನ್ನು ನಾವೇ ರೂಪಿಸಿಕೊಂಡು ಇದರಲ್ಲಿ ಯಾವುದು ಸಾಧ್ಯ ಯಾವುದು ಸಾಧು ಎನ್ನುವುದನ್ನೂ ಗಮನಿಸಬೇಕು. ವಿದ್ಯಾರ್ಥಿಗಳು ಮಾತ್ರವಲ್ಲ, ಮೇಷ್ಟ್ರ ದೃಷ್ಟಿಯಿಂದಲೂ ಯಾವುದು ಸಾಧ್ಯ ಎಂದು ಗಮನಿಸಬೇಕು.

ಈ ರೀತಿಯ ಮಾದರಿಗಳಿಲ್ಲದೇ ಕೇವಲ ಪರ-ವಿರೋಧದ ನೆಲೆಯಲ್ಲಿ ಚರ್ಚಿಸುತ್ತಿದ್ದರೆ, ತೆರೆದ ಪುಸ್ತಕದ ಪರ ಇರುವವರು ಅದನ್ನು ಒಂದು ಸರ್ವರೋಗ ಪರಿಹಾರಕವಾದ ದಿವ್ಯೌಷಧ ಎಂತಲೂ, ಅದನ್ನು ವಿರೋಧಿಸುವವರು, ಇದರಿಂದ ಆಗಬಾರದ ಅನಾಹುತ ಆಗಿಬಿಡುತ್ತದೆ ಎಂದೂ ಅತಿಯಾದ ವಾದ ಮಾಡುವ ಸಂಭವವೇ ಹೆಚ್ಚು. ಎಂದಿನಂತೆ, ಪರಿಹಾರ ಈ ಅತಿಗಳ ನಡುವೆ ಎಲ್ಲೋ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.