ಐಎಎಸ್ ಪರೀಕ್ಷೆಗೆ ಮುನ್ನ ಹಿಂಜರಿಕೆ ಗೆಲ್ಲಿ...

2018ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 17ನೇ ರ‍್ಯಾಂಕ್ ಪಡೆದಿರುವ ಹುಬ್ಬಳ್ಳಿಯ ರಾಹುಲ್ ಸಂಕನೂರ ಸತತ ಶ್ರಮದಿಂದ ಯಶಸ್ಸಿನ ಗುರಿ ಮುಟ್ಟಿದವರು. ‘ಹಳ್ಳಿಯಲ್ಲಿದ್ದುಕೊಂಡೇ ಯುಪಿಎಸ್‌ಸಿ ಪರೀಕ್ಷೆ ಮುಗಿಸಬಹುದು’ ಎನ್ನುವ ಅವರು – ಐಎಎಸ್ ಅಧಿಕಾರಿ ಆಗಬೇಕೆನ್ನುವ ಆಕಾಂಕ್ಷಿಗಳು ಹೊಂದಿರಬೇಕಾದ ಸ್ಪಷ್ಟ ಗುರಿ, ಭಾಷಾ ಪ್ರಭುತ್ವ, ಸತತ ಪ್ರಯತ್ನ ಮತ್ತು ಯಾವುದನ್ನು ಓದಬೇಕು ಎನ್ನುವ ಸಾಮಾನ್ಯ ಜ್ಞಾನದ ಕುರಿತು ‘ಸುಧಾ’ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.

*ಯುಪಿಎಸ್‌ಸಿ ಪರೀಕ್ಷೆ ಎದುರಿಸಬೇಕು ಎನ್ನುವವರು ಮೊದಲು ಏನು ಮಾಡಬೇಕು?

ಮೊದಲು ಗುರಿ ನಿಚ್ಚಳವಾಗಿರಬೇಕು. ಪ್ರತಿದಿನ ಪತ್ರಿಕೆಗಳನ್ನು, ನಿಯತಕಾಲಿಕೆಗಳನ್ನು ಓದಬೇಕು. ಕನ್ನಡದಲ್ಲಿ ‘ಪ್ರಜಾವಾಣಿ’ ಓದಬೇಕು. ರಾಷ್ಟ್ರೀಯ ವಿದ್ಯಮಾನಗಳ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಎನ್‌ಸಿಇಆರ್‌ಟಿ ಪಠ್ಯ, ಸಾಮಾನ್ಯ ಅರ್ಥಶಾಸ್ತ್ರ, ನಮ್ಮ ಸಂವಿಧಾನ ಪುಸ್ತಕಗಳನ್ನು ಓದಿದರೆ ಪರೀಕ್ಷೆಯ ಬಗ್ಗೆ ಪ್ರಾಥಮಿಕ ಜ್ಞಾನ ಬರುತ್ತದೆ. ಹೈಸ್ಕೂಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೇಳಿಕೊಡುವ ವಿಷಯಗಳನ್ನೇ ಗಂಭೀರವಾಗಿ ಓದಬೇಕು. ಸಮಾಜ ವಿಜ್ಞಾನ, ವಿಜ್ಞಾನದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು.

*ಪತ್ರಿಕೆಗಳ ಯಾವ ವಿಷಯಗಳು ಪರೀಕ್ಷೆಗೆ ಅನುಕೂಲ?

ಸರ್ಕಾರದ ಸಮೀಕ್ಷಾ ವರದಿಗಳು, ಶಬರಿಮಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳು, ದೇಶದ ಅರ್ಥ ವ್ಯವಸ್ಥೆ, ಕೃಷಿ, ದೇಶದ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಇರುವ ಮಾಹಿತಿ ಅನುಕೂಲ. ಒಂದು ರಾಜ್ಯದ ವಿಷಯ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೆ ಅದರ ಮೇಲೆ ನಿಗಾ ಇಡಬೇಕು. ಇದು ನೇರವಾಗಿ ಪರೀಕ್ಷೆಗೆ ಅನುಕೂಲವಾಗದೇ ಇದ್ದರೂ, ವಿಷಯದ ಮೂಲದ ಬಗ್ಗೆ ಸ್ಪಷ್ಟತೆ ಇಲ್ಲದೇ ಹೋದರೆ ನಿಖರ ಉತ್ತರ ಬರೆಯಲು ಸಾಧ್ಯವಾಗುವುದಿಲ್ಲ.

*ಪತ್ರಿಕೆಗಳ ಜೊತೆಗೆ ಬೇರೆ ಏನನ್ನು ಓದಬೇಕು?

ಅಂತರ್ಜಾಲ ಬಂದ ಬಳಿಕ ಅಂಗೈಯಲ್ಲಿಯೇ ಸಾಕಷ್ಟು ಮಾಹಿತಿ ಸಿಗುತ್ತಿದೆ. ಐಎಎಸ್ ಅಧಿಕಾರಿಗಳು, ತರಬೇತಿ ಕೇಂದ್ರದ ಸಿಬ್ಬಂದಿ ಮತ್ತು ಅನುಭವಿಗಳು ಬರೆದಿರುವ ಲೇಖನಗಳು ಅಂತರ್ಜಾಲದಲ್ಲಿ ಲಭ್ಯ ಇವೆ. ‘ಕರ್ಮಯೋಗ’, ‘ಐ ಟು ಹರ್ಡ್ ಡ್ರೀಮ್’, ಶಿವಶಂಕರ ಮೆನನ್ ಅವರ ಪುಸ್ತಕಗಳು, ರಾಮಚಂದ್ರ ಗುಹಾ ಅವರ ‘ಇಂಡಿಯಾ ಆಫ್ಟರ್ ಗಾಂಧಿ’ – ಈ ರೀತಿಯ ಪುಸ್ತಕಗಳನ್ನು ಓದಬೇಕು. ಸಾಹಿತ್ಯದ ಪುಸ್ತಕಗಳನ್ನು ಓದುವ ಆಸಕ್ತಿಯಿದ್ದರೆ ಇನ್ನೂ ಒಳ್ಳೆಯದು.

*ಪರೀಕ್ಷೆ ಎದುರಿಸಲು ಯಾವಾಗಿನಿಂದ ಯೋಜನೆ ಇದ್ದರೆ ಒಳ್ಳೆಯದು?

ಪಿಯುಸಿಯಲ್ಲಿದ್ದಾಗಿನಿಂದಲೇ ನನಗೆ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎನ್ನುವ ಆಸೆಯಿತ್ತು. ಪದವಿ ಹಂತಕ್ಕೆ ಬಂದಾಗ ಯುಪಿಎಸ್‌ಸಿ ಪರೀಕ್ಷೆ ಬಗ್ಗೆ ಸ್ಪಷ್ಟತೆ ಬಂತು. ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ನಾವು ಗುರಿ–ನಿರ್ಧಾರ ಸ್ಪಷ್ಟಪಡಿಸಿಕೊಳ್ಳುವಲ್ಲಿ ಬಹಳಷ್ಟು ಹಿಂದಿದ್ದೇವೆ. ಆ ರಾಜ್ಯಗಳಲ್ಲಿ ಹೈಸ್ಕೂಲಿನಲ್ಲಿ ಓದುವಾಗಲೇ ವಿದ್ಯಾರ್ಥಿಗಳು ಸ್ಪಷ್ಟ ಗುರಿ ಇಟ್ಟುಕೊಂಡಿರುತ್ತಾರೆ.

*ಮುಖ್ಯ ಪರೀಕ್ಷೆಯ ವಿಷಯ ಆಯ್ಕೆ ಬಗ್ಗೆ ಪ್ರಾಥಮಿಕ ಪರೀಕ್ಷೆಗೂ ಮೊದಲೇ ಯೋಜನೆ ಇರಬೇಕೇ?

ಇದ್ದರೆ ಉತ್ತಮ. ಪದವಿಯಲ್ಲಿ ನಾವು ಓದಿದ ವಿಷಯಕ್ಕೆ ವಿರುದ್ಧವಾದ ವಿಷಯಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಲು ನನಗೆ ಆಸಕ್ತಿಯಿತ್ತು. ತಾಂತ್ರಿಕತೆಗೆ ಸಂಬಂಧಿಸಿದ ವಿಷಯಗಳನ್ನು ಪದವಿಯಲ್ಲಿ ಓದಿದ್ದೆ. ಆದ್ದರಿಂದ ಮುಖ್ಯ ಪರೀಕ್ಷೆಯಲ್ಲಿ ಮಾನವಶಾಸ್ತ್ರ ಆಯ್ಕೆ ಮಾಡಿಕೊಂಡೆ. ಹೊಸ ವಿಷಯ ಆಯ್ದುಕೊಂಡಾಗ ಆಸಕ್ತಿ ಹೆಚ್ಚಾಗುತ್ತದೆ. ಪ್ರಾಥಮಿಕ ಪರೀಕ್ಷೆಗೂ ಮೊದಲೇ ಮುಖ್ಯ ಪರೀಕ್ಷೆಯ ವಿಷಯದ ಬಗ್ಗೆ ಒಂದು ಬಾರಿ ಓದಿಕೊಂಡಿರಬೇಕು.

*ಮಾನವಶಾಸ್ತ್ರ ವಿಷಯದ ಆಯ್ಕೆಗೆ ಕಾರಣ ಏನು?

ಮನೋವಿಜ್ಞಾನ, ಮಾನವಶಾಸ್ತ್ರದ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿತ್ತು. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಈ ಎಲ್ಲವೂ ಮಾನವಶಾಸ್ತ್ರದಲ್ಲಿದೆ.

*ಎಷ್ಟೇ ಓದಿದರೂ ನೆನಪಿನಲ್ಲಿ ಉಳಿಯುವುದಿಲ್ಲ ಎನ್ನುವ ದೂರು ಸಾಮಾನ್ಯವಾಗಿದೆಯಲ್ಲ?

ನಮ್ಮವರ ದೊಡ್ಡ ಸಮಸ್ಯೆಯೆಂದರೆ ತಮ್ಮ ಸಾಮರ್ಥ್ಯಕ್ಕಿಂತ ಅವರು ಸಣ್ಣ ಗುರಿ ಇಟ್ಟುಕೊಂಡಿರುತ್ತಾರೆ. ಉತ್ತರ ಭಾರತದ ರಾಜ್ಯಗಳಲ್ಲಿ ಹಾಗಿಲ್ಲ. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಓದುವ ವಿದ್ಯಾರ್ಥಿಗಳಲ್ಲೂ ‘ನಾವು ಕಷ್ಟಪಟ್ಟು ಓದಿದರೆ ಪರೀಕ್ಷೆಯಲ್ಲಿ ಪಾಸಾಗುತ್ತೇವೆ. ಯುಪಿಎಸ್‌ಸಿ ಪರೀಕ್ಷೆ ಕಷ್ಟವಲ್ಲ’ ಎನ್ನುವ ಆತ್ಮವಿಶ್ವಾಸ ಇರುತ್ತದೆ. ಅದರಲ್ಲೂ, ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತದೆ. ಆದ್ದರಿಂದ ಬಹಳಷ್ಟು ಜನ ಈ ಪರೀಕ್ಷೆಯ ಸನಿಹವೇ ಬರುವುದಿಲ್ಲ. ಓದಿನ ಬಗ್ಗೆ ಆಸಕ್ತಿ ಬೆಳೆಸಿಕೊಂಡರೆ ತಾನಾಗಿಯೇ ನೆನಪಿನಲ್ಲಿ ಉಳಿಯುತ್ತದೆ. ಹಳ್ಳಿಯಲ್ಲಿದ್ದುಕೊಂಡು ಓದುವವನಿಗೂ ಪರೀಕ್ಷೆ ಪಾಸ್ ಮಾಡಲು ಸಾಧ್ಯವಿದೆ.

*ಅಂತರ್ಜಾಲದಲ್ಲಿ ಸಿಗುವ ಎಲ್ಲ ಮಾಹಿತಿಯನ್ನೂ ಓದಬೇಕೇ?

ಸಿಕ್ಕ ಎಲ್ಲವನ್ನೂ ಓದುವುದು ಸರಿಯಲ್ಲ. ಪ್ರಚಲಿತ ವಿದ್ಯಮಾನಗಳ ಬಗ್ಗೆ ನಿರಂತರ ಅಭ್ಯಾಸ ಇರಬೇಕು. ತರಬೇತಿ ಅಕಾಡೆಮಿಗಳು ನೀಡುವ ಬೇಸಿಕ್ ವಿಷಯಗಳನ್ನು ತಿಳಿದುಕೊಂಡಿರಬೇಕು. ಬೇಕಿದ್ದು, ಬೇಡವಾಗಿದ್ದು ಎಲ್ಲವೂ ಅಂತರ್ಜಾಲದಲ್ಲಿ ಇರುತ್ತದೆ. ಅಭ್ಯಾಸ ಆರಂಭಿಸಿದ ಮೊದಲ ಒಂದು ವರ್ಷ ತುಂಬಾ ಎಚ್ಚರಿಕೆಯಿಂದ ಸರಕು ಆಯ್ಕೆ ಮಾಡಿಕೊಳ್ಳಬೇಕು. ಒಂದು ವರ್ಷದ ಬಳಿಕ ಯಾವುದನ್ನು ಓದಬೇಕು ಎನ್ನುವ ಸ್ಪಷ್ಟತೆ ಬರುತ್ತದೆ.

ಓದಲು ಬೇಸರವಾದರೆ ಆನ್‌ಲೈನ್‌ನಲ್ಲಿ ವಿಡಿಯೊ ಕೂಡ ಸಿಗುತ್ತವೆ. ಯುಪಿಎಸ್‌ಸಿ ಪರೀಕ್ಷೆ ಎದುರಿಸುವವರಿಗೆ ಕರ್ನಾಟಕ ಸರ್ಕಾರ ಮತ್ತು ಸಾಕಷ್ಟು ಖಾಸಗಿ ಸಂಸ್ಥೆಗಳು ಪ್ರೋತ್ಸಾಹ ವೇತನ ಕೊಡುತ್ತಿವೆ.

*ಯುಪಿಎಸ್‌ಸಿ ಪರೀಕ್ಷೆ ಬರೆಯಲು ಪ್ರೇರಣೆಯಾದ ಅಂಶಗಳೇನು?

ಖಾನಾಪುರದಲ್ಲಿ ಸರ್ವೋದಯ ಶಾಲೆ ಮತ್ತು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಓದುವಾಗ ನಾನು ಕಂಡ ವಾತಾವರಣ ತುಂಬಾ ಸಹಕಾರಿಯಾಯಿತು. ಹಳ್ಳಿಗಳಲ್ಲಿ ಜನ ಅನುಭವಿಸುವ ಕಷ್ಟಗಳು, ಸರ್ಕಾರ ಸೌಲಭ್ಯ ಕೊಟ್ಟರೂ ಅದನ್ನು ಪಡೆದುಕೊಳ್ಳಲಾಗದ ಅಸಹಾಯಕತೆಯನ್ನು ನೋಡಿದ್ದೇನೆ. ಖಾನಾಪುರದಲ್ಲಿದ್ದಾಗ ಹಿಂದಿ, ಕೊಂಕಣಿ, ಮರಾಠಿ, ಉರ್ದು ಮಾತನಾಡುವ ಬಹುಸಂಸ್ಕೃತಿಯ ಜನರನ್ನು ನೋಡಿ ಪ್ರಭಾವಿತಗೊಂಡಿದ್ದೇನೆ. ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಕಲಿತ ಶಿಸ್ತು, ಪರೋಪಕಾರಿ ಮನೋಭಾವ, ಬಡವರಿಗೆ ಏನಾದರೂ ಮಾಡಬೇಕು ಎನ್ನುವ ತುಡಿತ ಪರೀಕ್ಷೆ ಎದುರಿಸಲು ಪ್ರೇರಣೆಯಾದವು.

*ದಿನಕ್ಕೆ ಎಷ್ಟು ಗಂಟೆ ಓದಬೇಕು?

ಯುಪಿಎಸ್‌ಸಿ ಪರೀಕ್ಷೆ ಎಂಬುದು ಒಂದೇ ದಿನ 100 ಮೀಟರ್ ಓಡಿ ಸುಮ್ಮನಾಗುವುದಲ್ಲ. ಅದು ಮ್ಯಾರಥಾನ್ ಇದ್ದಂತೆ, ಗುರಿ ಮುಟ್ಟುವ ತನಕ ನಿರಂತರವಾಗಿ ಓದುತ್ತಲೇ ಇರಬೇಕು. ದಿನಕ್ಕೆ ಇಂತಿಷ್ಟೇ ಗಂಟೆ ಓದಬೇಕು ಎನ್ನುವ ಸಿದ್ಧಸೂತ್ರ ಸರಿಯಲ್ಲ. ದಿನಕ್ಕೆ ಕನಿಷ್ಠ 10–12 ಗಂಟೆ ಓದಲೇಬೇಕು. ಪ್ರತಿ ಎರಡು ಗಂಟೆಗೊಮ್ಮೆ ಹತ್ತು ನಿಮಿಷ ಬಿಡುವು, ಮಧ್ಯಾಹ್ನ ಕಿರು ನಿದ್ದೆ, ಗೆಳೆಯರ ಜೊತೆ ಹರಟೆ, ಸುತ್ತಾಟ ಎಲ್ಲವೂ ಇರಬೇಕು. ಗುರಿ (ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡುವ) ಮುಖ್ಯವಾಗಿಟ್ಟುಕೊಂಡೇ ಉಳಿದ ಕೆಲಸಗಳ ಯೋಜನೆ ರೂಪಿಸಬೇಕು.

*ಮಾನಸಿಕವಾಗಿ ತಯಾರಿ ಹೇಗಿರಬೇಕು?

ನಮ್ಮ ದೌರ್ಬಲ್ಯಗಳನ್ನು ಅರಿತುಕೊಂಡು ಅವುಗಳನ್ನು ಬೇಗನೆ ಸರಿಪಡಿಸಿಕೊಳ್ಳಲು ನಾವು ಮನಸ್ಸು ಮಾಡುವುದಿಲ್ಲ. ಮೊದಲ ಮೂರು ವರ್ಷ ನಾನು ಇದೇ ತಪ್ಪು ಮಾಡಿದೆ. ನನ್ನ ಕೈ ಬರಹ ಸುಂದರವಾಗಿಲ್ಲ, ವೇಗವಾಗಿಲ್ಲ ಎನ್ನುವುದು ಮನದಟ್ಟಾಯಿತು. ಆದ್ದರಿಂದ 27ನೇ ವಯಸ್ಸಿನಲ್ಲಿ ಇದರ ಬಗ್ಗೆ ತರಬೇತಿ ಪಡೆದುಕೊಂಡೆ, ಕೈಬರಹ ದುಂಡಾಗಿ ಬರೆಯಲು ಅಭ್ಯಾಸ ಮಾಡಿದೆ. ಇದು ಮನಸ್ಸಿನ ಶಕ್ತಿ ಹೆಚ್ಚಿಸಿತು.

ನಾನು ಐದನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದೇನೆ. ವೈಫಲ್ಯ ಎದುರಾದಾಗಲೆಲ್ಲ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದೂ ಇದೆ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಅವರ ಸಂಗೀತ, ಮಾರ್ಟಿನ್ ಲೂಥೂರ್ ಕಿಂಗ್, ಅಬ್ರಹಾಂ ಲಿಂಕನ್ ಅವರ ಭಾಷಣಗಳನ್ನು ಕೇಳುತ್ತಿದ್ದೆ. ಇದರಿಂದ ಏಳುಬೀಳುಗಳನ್ನು ಸಮರ್ಥವಾಗಿ ಎದುರಿಸಿ ಸ್ಥಿತಪ್ರಜ್ಞನಾಗಿರಲು ಸಾಧ್ಯವಾಗಿದೆ.

*ಮಾಧ್ಯಮ (ಮೀಡಿಯಮ್) ಆಯ್ಕೆ ಹೇಗಿರಬೇಕು?

ನಿಮಗೆ ಯಾವ ಭಾಷೆಯ ಮೇಲೆ ಹಿಡಿತ ಇದೆಯೋ ಅದರಲ್ಲೇ ಬರೆಯಿರಿ. ಕನ್ನಡದಲ್ಲಿ ಪರೀಕ್ಷೆ ಬರೆದರೂ ಯಶಸ್ಸು ಕಾಣಬಹುದು. ಕನ್ನಡದಲ್ಲಿಯೇ ಸಂದರ್ಶನ ನೀಡಬಹುದು.

*ಇಂಗ್ಲಿಷ್ ಬರೊಲ್ಲ ಎನ್ನುವವರು ಏನು ಮಾಡಬೇಕು?

ನಮಗೆ ಭಾಷೆಯ ಸಮಸ್ಯೆಗಿಂತ ಹೆಚ್ಚಾಗಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತದೆ. ಜೀವನದ ಆಧಾರಕ್ಕೆ ಯಾವುದಾದರೂ ನೌಕರಿ ಸಿಕ್ಕರೆ ಸಾಕು ಎನ್ನುವ ಸಣ್ಣ ಗುರಿ ಇಟ್ಟುಕೊಂಡು ಬಿಡುತ್ತೇವೆ. ‘Low Aim Is A Crime’ ಎನ್ನುವ ಮಾತು ನೆನಪಿನಲ್ಲಿ ಇದ್ದರೆ ಸಾಕು.

*ತರಬೇತಿ ಕೇಂದ್ರಗಳಿಗೆ ಹೋಗುವುದು ಅನಿವಾರ್ಯವಾ?

ತರಬೇತಿ ಕೇಂದ್ರಗಳಲ್ಲಿ ಬೇಸಿಕ್ ತಂತ್ರಗಳನ್ನು ಹೇಳಿಕೊಡುತ್ತಾರೆ. ಯಾವ ಹಾದಿಯಲ್ಲಿ ಹೋಗಬೇಕು, ಹೇಗೆ ಓದಬೇಕು ಎನ್ನುವುದನ್ನು ತಿಳಿಸಿಕೊಡುತ್ತಾರೆ. ಮೊದಲ ಬಾರಿಗೆ ಪರೀಕ್ಷೆ ಎದುರಿಸುವವರು ತರಬೇತಿ ಕೇಂದ್ರಗಳ ಮಾರ್ಗದರ್ಶನ ಅಥವಾ ಹಿರಿಯರ ಸಲಹೆ ಪಡೆದುಕೊಳ್ಳಬೇಕು. ಅಂಗೈಯಲ್ಲಿಯೇ ಎಲ್ಲವೂ ಸಿಗುವುದರಿಂದ ತರಬೇತಿ ಕೇಂದ್ರಗಳಿಗೆ ಹೋಗುವುದು ಅನಿವಾರ್ಯವೇನಲ್ಲ. ಹೋದರೆ ಬೇಗನೆ ಗುರಿಯ ಹಾದಿ ಸ್ಪಷ್ಟವಾಗುತ್ತದೆ.

*ಯಾವ ಕ್ಷೇತ್ರದಲ್ಲಿ ಕೆಲಸ ಮಾಡುವಾಸೆ ಇದೆ?

ಎಲ್ಲರಿಗೂ ಉತ್ತಮ ಮತ್ತು ಉನ್ನತ ಶಿಕ್ಷಣ ಸಿಕ್ಕರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ಪ್ರಾಥಮಿಕ, ಪ್ರೌಢಶಾಲೆ ಹಂತದಲ್ಲಿ ಸಿಗುವ ಶಿಕ್ಷಣವೇ ಭವಿಷ್ಯಕ್ಕೆ ಬುನಾದಿಯಾಗುತ್ತದೆ. ಆದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆಯಿದೆ.

ಚಿತ್ರಗಳು: ಈರಪ್ಪ ನಾಯ್ಕರ

ಕೃಪೆ: ಸುಧಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.