ದೇಸಿ ಉದ್ಯಮ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಪಕ್ಷಿಕೆರೆಯ ಪೇಪರ್ ಸೀಡ್ ಟ್ರಸ್ಟ್ ‘ಮಂಗಳೂರು ಗೊಂಬೆ’ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹಳ್ಳಿಯ ಗೃಹಿಣಿಯರು, ಬುಡಕಟ್ಟು ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸಿದ ಈ ಗೃಹ ಆಧಾರಿತ ಚಟುವಟಿಕೆ ಸದೃಢಗೊಳ್ಳಲು ಈಗ ಬೇಕಾಗಿರುವ ಟಾನಿಕ್ ಎಂದರೆ ಗ್ರಾಹಕರ ಬೆಂಬಲ.

ಮಂಗಳೂರಿನಿಂದ ಸುಮಾರು 25 ಕಿ.ಮೀ ದೂರದ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿ ಪಕ್ಷಿಕೆರೆ. ಇಲ್ಲಿ ಗುಡಿ ಕೈಗಾರಿಕೆ ನಡೆಸಿ, ದೇಸಿ ಸೊಗಡಿನ ಉತ್ಪನ್ನ ತಯಾರಿಸಬೇಕು ಜತೆಗೆ ಊರಿನಲ್ಲೇ ಒಂದಿಷ್ಟು ಉದ್ಯೋಗಾವಕಾಶ ಸೃಷ್ಟಿಸಿ, ಕಡುಬಡ ಕುಟುಂಬಗಳಿಗೆ ನೆರವಾಗಬೇಕು ಎಂಬ ಕನಸು ಹೊತ್ತ ಉತ್ಸಾಹಿ ನಿತಿನ್ ವಾಸ್ ಅವರು ಪೇಪರ್ ಸೀಡ್ ಸಂಸ್ಥೆ ಹುಟ್ಟು ಹಾಕಿದರು. ಕಸದ ರಾಶಿ ಸೇರುವ ಪೇಪರ್‌ಗಳು, ಬಳಸಿ ಬಿಟ್ಟಿರುವ ನೋಟ್‌ಬುಕ್‌ಗಳು, ರದ್ದಿ ಪತ್ರಿಕೆಗಳನ್ನು ಬಳಸಿ, ಪ್ಲಾಸ್ಟಿಕ್‌ಗೆ ಪರ್ಯಾಯ ಉತ್ಪನ್ನ ತಯಾರಿಸುವುದು ಅವರ ಉದ್ದೇಶವಾಗಿತ್ತು. ಊರಿನಲ್ಲಿದ್ದ ಕೆಲವು ಪರಿಶಿಷ್ಟ ಪಂಗಡದ ಕುಟುಂಬದವರಿಗೆ ತರಬೇತಿ ನೀಡಿದರು. ಪೇಪರ್ ಪಲ್ಪ್‌ನಿಂದ ಪೆನ್ನು, ಪೆನ್ಸಿಲ್ ಮೊದಲಾದ ಉತ್ಪನ್ನಗಳು ಸಿದ್ಧವಾದವು.

ಈ ಸೃಜನಶೀಲ ಉತ್ಪನ್ನಗಳು ಇನ್ನಷ್ಟು ಹೊಸ ಹೊಳಹು ಮೂಡಲು ಕಾರಣವಾದವು. ಆಗಸ್ಟ್ 15, ಸ್ವಾತಂತ್ರ್ಯೋತ್ಸವದ ವೇಳೆ ಪೇಪರ್ ಪಲ್ಪ್, ತರಕಾರಿ–ಹೂ ಬೀಜಗಳನ್ನು ಬಳಸಿ, ಪರಿಸರಸ್ನೇಹಿ ಧ್ವಜಗಳನ್ನು ತಯಾರಿಸಲಾಯಿತು. ಭಾರತದ ಧ್ವಜ ಹೂಗುಚ್ಛದಂತೆ ಅರಳಿತು. ಚಿಗುರಾಗಿ, ಗಿಡವಾಗಿ, ಕವಲೊಡೆದು ಮನೆಯಂಗಳವನ್ನು ಬೆಳಗಿತು. ಈ ಉತ್ಪನ್ನ ಸಂಸ್ಥೆಗೆ ದೊಡ್ಡ ಹೆಸರು ತಂದುಕೊಟ್ಟಿತು. ಇದರಿಂದ ಪ್ರೇರಿತರಾದ ನಿತಿನ್, ಹಾಳಾದ ಹೂಗಳನ್ನು ಸಂಸ್ಕರಿಸಿ, ಅಗರಬತ್ತಿ ತಯಾರಿಸುವ ಕಲೆಯನ್ನು ಹಳ್ಳಿ ಮಹಿಳೆಯರಿಗೆ ಕಲಿಸಿದರು. ರಕ್ಷಾಬಂಧನದ ವೇಳೆ ತರಕಾರಿ, ಹೂ ಬೀಜಗಳ ರಾಖಿ ಸಹೋದರರ ಕೈಯೇರಿದವು. ಈ ರಾಖಿ ಮುಂದೆ ತರಕಾರಿ ಗಿಡಗಳಾಗಿ ಫಲಕೊಟ್ಟಿತು. ಇಂತಹ ವಿಭಿನ್ನ ಕಲ್ಪನೆಯ ಉತ್ಪನ್ನಗಳು ಗ್ರಾಹಕರ ಮನಸೂರೆಗೊಂಡವು.

‘ನಮ್ಮೂರಿನ ಜನರಿಗೆ ತರಬೇತಿ ನೀಡಿ, ಸ್ವ ಉದ್ಯೋಗದ ಕಲ್ಪನೆ ಮೂಡಿಸಬೇಕು. ಪಕ್ಷಿಕೆರೆಯಲ್ಲಿ ‘ಪೇಪರ್ ಸೀಡ್ ವಿಲೇಜ್’ ರೂಪಿಸಬೇಕು ಎಂಬ ಯೋಚನೆಯಲ್ಲಿರುವಾಗಲೇ ಕೋವಿಡ್–19 ದಾಂಗುಡಿಯಿಟ್ಟಿತು. ಲಾಕ್‌ಡೌನ್ ವೇಳೆ ಇಡೀ ಉದ್ಯಮ ಅಕ್ಷರಶಃ ನೆಲ ಕಚ್ಚಿತು. ಸಂಸ್ಥೆಯಲ್ಲಿ ತಯಾರಾದ ಉತ್ಪನ್ನಗಳು ದೂಳು ಹಿಡಿದವು. ವಾರಕ್ಕೆ ಸರಾಸರಿ ₹ 1000ದಷ್ಟು ಆದಾಯ ಗಳಿಸುತ್ತಿದ್ದ 30ಕ್ಕೂ ಹೆಚ್ಚು ಮಹಿಳೆಯರಿಗೆ ಕೆಲಸ ಇಲ್ಲದಂತಾಯಿತು. ನದಿಯಲ್ಲಿ ತೇಲಿ ಬರುವ ಮರದ ತುಂಡು, ಕಟ್ಟಿಗೆಗಳಿಂದ ಕಲಾಕೃತಿ ತಯಾರಿಸುವ ಪ್ರಯತ್ನಗಳು ನಡೆದವು. ಪ್ರವಾಸೋದ್ಯಮ ಚೇತರಿಕೆ ಕಾಣದ ಕಾರಣ ಇವು ಜನರನ್ನು ತಲುಪಲೇ ಇಲ್ಲ. ತೆಂಗಿನ ಚಿಪ್ಪಿನ ಆಭರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವಾದರೂ, ಇದರಿಂದ ಲಾಭಗಳಿಕೆ ಸಾಧ್ಯವಾಗಲಿಲ್ಲ’ ಎಂದು ನಿತಿನ್, ಉದ್ಯಮದ ಏಳುಬೀಳುಗಳನ್ನು ವಿವರಿಸಿದರು.

ಈಗ ಮಾರುಕಟ್ಟೆ ನಿಧಾನವಾಗಿ ಚೇತರಿಸತೊಡಗಿದೆ. ನಿತಿನ್ ಅವರ ಕನಸಿನ ಬೀಜ ಮತ್ತೆ ಮೊಳೆತಿದೆ. ಸಂಸ್ಥೆಯನ್ನು ಉಳಿಸಲು ಪಣತೊಟ್ಟಿರುವ ಅವರು, ಮತ್ತೊಂದು ಹೊಸ ಉತ್ಪನ್ನ ಸಿದ್ಧಪಡಿಸಿದ್ದಾರೆ. ‘ಮಂಗಳೂರು ಗೊಂಬೆ’ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

‘ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವು ಗೊಂಬೆ ತಯಾರಿಕೆ ಉದ್ಯಮಕ್ಕೆ ವಿಶೇಷ ಒತ್ತು ನೀಡಿತ್ತು. ಆಗ, ನಾವೂ ಕೂಡ ಯಾಕೆ ಗೊಂಬೆಗಳನ್ನು ತಯಾರಿಸಬಾರದು ಎಂಬ ಯೋಚನೆ ಹೊಳೆಯಿತು. ತಂಜಾವೂರು ಗೊಂಬೆ, ಚನ್ನಪಟ್ಟಣದ ಗೊಂಬೆಗಳಂತೆ ‘ಮಂಗಳೂರು ಗೊಂಬೆ’ಗಳು ಕರಾವಳಿಯ ಗರಿಮೆ ಹೆಚ್ಚಿಸಬೇಕು, ಇದರಿಂದ ಸ್ವ ಉದ್ಯೋಗಗಳು, ಗುಡಿ ಕೈಗಾರಿಕೆಗಳು ಬೆಳೆಯಬೇಕು ಎಂಬ ಆಶಯ ನನ್ನದು. ಇವು ಆಟಿಕೆಯ ಗೊಂಬೆಗಳಲ್ಲ. ಬದಲಾಗಿ ಮನೆಯನ್ನು ಅಲಂಕರಿಸಿ ಶೋಭೆ ಹೆಚ್ಚಿಸುವ ಸುಂದರಿಯರು’ ಎನ್ನುತ್ತಾರೆ ನಿತಿನ್.

ಪೇಪರ್ ಪಲ್ಪ್, ಗ್ಲೂ, ಬಣ್ಣ ಬಳಸಿ ತಯಾರಿಸುವ ವಿಭಿನ್ನ ಶೈಲಿಯ ಗೊಂಬೆಗಳು ನೋಡಲು ಆಕರ್ಷಕವಾಗಿವೆ. ಉದ್ದುದ್ದ ದೇಹದ ಆನೆ, ಜಿರಾಫೆ, ಜಿಂಕೆ, ದನ, ನಾಯಿ ಇನ್ನೂ ಅನೇಕ ಪ್ರಾಣಿಗಳು ಮೈದಳೆದಿವೆ. ಮೂರು ತಿಂಗಳ ಶ್ರಮ ಬಣ್ಣ ಬಣ್ಣದ ಗೊಂಬೆಗಳ, ಗೊಂಬೆಗಳ ಜ್ಯುವೆಲ್ಲರಿ ಬಾಕ್ಸ್‌ಗಳ ರೂಪದಲ್ಲಿ ಸಾಕಾರಗೊಂಡಿದೆ.

‘ಆರ್ಥಿಕ ಹೊಡೆತಕ್ಕೆ ಸಂಸ್ಥೆ ನಲುಗಿದೆ. ಸಂಸ್ಥೆ ಮತ್ತೆ ಮೈದಡವಿ ಮೇಲೇಳಲು ಗೊಂಬೆಗಳು ಆಧಾರವಾಗುತ್ತವೆಂಬ ಭರವಸೆಯಿದೆ. ಮತ್ತೆ ಪೇಪರ್ ಸೀಡ್ ಹಳ್ಳಿ ಕಟ್ಟಿ, ಸುತ್ತಲಿನ ಜನರಿಗೆ ಗಳಿಕೆ ಮಾರ್ಗ ತೋರುವ, ಆ ಮೂಲಕ ಕಾರ್ಮಿಕರ ವಲಸೆ ತಡೆಯುವ ಯೋಚನೆಗೆ ಗ್ರಾಹಕರು ಬೆನ್ನೆಲುಬಾಗುತ್ತಾರೆಂಬ ಆಶಾವಾದ ನನ್ನದು. ₹ 50 ಬೆಲೆಬಾಳುವ ಪುಟ್ಟ ಕಾರುಗಳಿಂದ ₹ 10 ಸಾವಿರ ಮೌಲ್ಯದ ಸೂಕ್ಷ್ಮ ಕುಸುರಿಯ ಗೊಂಬೆಗಳನ್ನು ಮಹಿಳೆಯರು ಸಿದ್ಧಪಡಿಸಿದ್ದಾರೆ. ಮಾಲ್‌ಗಳ ರ್‍ಯಾಕ್ ಏರಲು ಇವು ಹೊರಟು ನಿಂತಿವೆ’ ಎನ್ನುವ ನಿತಿನ್ ವಾಸ್ ನಿರೀಕ್ಷೆಯ ಮೂಟೆ ಹೊತ್ತು ನಿಂತಿದ್ದಾರೆ. ಅವರ ಸಂಪರ್ಕ ಸಂಖ್ಯೆ: 9108754870.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.