ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಎರಡಂಕಿ ದಾಟುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಅದರ ಸನಿಹ ಬಂದು ನಿಂತ ಸಮಾಧಾನ. ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯನ್ನು ಎದುರಿಸಿದಂತೆ, ಹೆಗಲಿಗೆ ಹೆಗಲು ಕೊಟ್ಟು ‘ಲೋಕಾ’ ಸಮರ ಎದುರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಗೆದ್ದರೂ ಸೋತ ಅನುಭವ. ಸರ್ಕಾರ ಬೀಳಿಸುವ ಉಮೇದಿನಲ್ಲಿದ್ದ ವಿರೋಧ ಪಕ್ಷದವರಿಗೆ ಈ ಫಲಿತಾಂಶ ನಿರಾಶೆ ತಂದಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಭದ್ರತೆಯ ಅನುಭವವನ್ನೂ ನೀಡಿದೆ.

‘ಗ್ಯಾರಂಟಿ’ಗಳ ಅನುಷ್ಠಾನ– ವಾಗ್ದಾನ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ, ಜೆಡಿಎಸ್ನಿಂದ ಅವಕಾಶವಾದಿ ರಾಜಕಾರಣ ಹೀಗೆ ಟೀಕಿಸುತ್ತಲೇ ಕಾಂಗ್ರೆಸ್ ಚುನಾವಣೆ ಎದುರಿಸಿತ್ತು. ಆದರೆ, ಅವು ನಿರೀಕ್ಷಿತ ಪ್ರಮಾಣದಲ್ಲಿ ‘ಕೈ’ ಹಿಡಿದಿಲ್ಲ. ಅದಕ್ಕೂ ಮಿಗಿಲಾಗಿ ‘ಜಾತಿ’ ರಾಜಕಾರಣ ಕೆಲಸ ಮಾಡಿದೆ. ಅಲ್ಪಸಂಖ್ಯಾತರು, ಪರಿಶಿಷ್ಟರು, ಹಿಂದುಳಿದ ವರ್ಗದ ಮತಗಳು, 10 ವರ್ಷಗಳ ಬಳಿಕ ಕಾಂಗ್ರೆಸ್ಗೆ ತೃಪ್ತಿದಾಯಕ ಫಲಿತಾಂಶ ತಂದುಕೊಟ್ಟಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಡಿತ ಸಾಧಿಸುವಂತೆ ಮಾಡಿದೆ.

ಆದರೆ, ಬಿಜೆಪಿ–ಜೆಡಿಎಸ್ ಪರವಾದ ‘ಒಕ್ಕಲಿಗ– ಲಿಂಗಾಯತ’ ಸಮೀಕರಣ ಕಾಂಗ್ರೆಸ್ಗೆ ಮುಳುವಾಗಿದೆ. ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳ ಪೈಕಿ, ಹಾಸನ ಕ್ಷೇತ್ರವನ್ನು ಹೊರತುಪಡಿಸಿದರೆ ಉಳಿದ ಕಡೆಗಳಲ್ಲಿನ ಸೋಲು ಒಕ್ಕಲಿಗರ ನಾಯಕನೆಂದು ಬಿಂಬಿಸಲು ಹೊರಟಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಹಿನ್ನಡೆ ತಂದಿದೆ. ಅದರಲ್ಲೂ, 2019ರಲ್ಲಿ ಏಕೈಕ ಕಾಂಗ್ರೆಸ್ ಸಂಸದರಾಗಿದ್ದ ಸಹೋದರ ಡಿ.ಕೆ. ಸುರೇಶ್ ಅವರ ಹೀನಾಯ ಸೋಲನ್ನು ಅವರಿಗೆ ಅರಗಿಸಿಕೊಳ್ಳುವುದೇ ಕಷ್ಟವಾಗಿದೆ. ಆ ಮೂಲಕ, ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಭಾರಿ ಸೋಲಾಗಿರುವುದು ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಕೊಡುವ ಅವರ ಬಯಕೆಗೂ ತಿರುಗುಬಾಣವಾಗಿದೆ.

ಸಚಿವರ ಮಕ್ಕಳಿಗೆ ಆರು (ಮೃಣಾಲ್ ಹೆಬ್ಬಾಳಕರ, ಪ್ರಿಯಾಂಕಾ ಜಾರಕಿಹೊಳಿ, ಸಂಯುಕ್ತಾ ಪಾಟೀಲ, ಸಾಗರ್ ಖಂಡ್ರೆ, ಸುನೀಲ್ ಬೋಸ್, ಸೌಮ್ಯಾರೆಡ್ಡಿ), ಪತ್ನಿಗೆ ಒಂದು (ಪ್ರಭಾ ಮಲ್ಲಿಕಾರ್ಜುನ್), ಸಹೋದರಿಗೆ ಒಂದು (ಗೀತಾ ಶಿವರಾಜ್ಕುಮಾರ್), ಸಹೋದರನಿಗೆ ಒಂದು ( ಡಿ.ಕೆ. ಸುರೇಶ್) ಹೀಗೆ ‘ಪರಿವಾರ’ದವರಿಗೆ ಟಿಕೆಟ್ ಹಂಚು ಮೂಲಕ, ಆ ಸಚಿವರಿಗೇ ಗೆಲ್ಲಿಸುವ ಹೊಣೆಯನ್ನೂ ಕಾಂಗ್ರೆಸ್ ಹೈಕಮಾಂಡ್ ನೀಡಿತ್ತು. ಆ ಪೈಕಿ, ಪ್ರಿಯಾಂಕಾ ಜಾರಕಿಹೊಳಿ, ಸಾಗರ್ ಖಂಡ್ರೆ, ಸುನೀಲ್ ಬೋಸ್, ಪ್ರಭಾ ಮಲ್ಲಿಕಾರ್ಜುನ್ ಗೆಲುವಿನ ದಡ ಸೇರುವ ಮೂಲಕ ಈ ‘ತಂತ್ರ’ಗಾರಿಕೆ ಭಾಗಶಃ ಫಲ ಕೊಟ್ಟಿದೆ.

ತಮ್ಮ ಕಾರ್ಯಕೇತ್ರದ ಜಿಲ್ಲೆ ಮೈಸೂರನ್ನು ಗೆಲ್ಲಿಸಿಕೊಳ್ಳಲು ಸಿದ್ದರಾಮಯ್ಯ ವಿಫಲರಾದರೂ, ಹಿಂದುಳಿದವರು, ಮುಸ್ಲಿಮರು ಹಾಗೂ ಪರಿಶಿಷ್ಟ ಸಮುದಾಯಗಳ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತ ಸೆಳೆಯುವಲ್ಲಿ ಸಫಲರಾಗಿದ್ದಾರೆ. ಜೊತೆಗೆ, ದಲಿತ ಮತಗಳೂ ಕೈಹಿಡಿದಿವೆ. ಆ ಕಾರಣದಿಂದಲೇ ಬಳ್ಳಾರಿ, ಕಲಬುರಗಿ, ಕೊಪ್ಪಳ, ರಾಯಚೂರು, ಚಿಕ್ಕೋಡಿ, ಬೀದರ್, ಚಾಮರಾಜನಗರ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಇನ್ನು ದಾವಣಗೆರೆಯಲ್ಲಿ ತಮ್ಮ ಸಮುದಾಯದ ವಿನಯ್ ಕುಮಾರ್ ಬಂಡುಕೋರ ಅಭ್ಯರ್ಥಿಯಾಗಿ ಕಣದಲ್ಲಿದ್ದರೂ ಕುರುಬರು ತಮ್ಮ ನಾಯಕ ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿರುವುದು ಸ್ಪಷ್ಟ. ಅಲ್ಲದೆ, ಹಾಲಿ ಬಿಜೆಪಿ ಸಂಸದ ಸಿದ್ಧೇಶ್ವರ ವಿರುದ್ಧದ ಸ್ವಪಕ್ಷೀಯರ ಅಸಮಾಧಾನ ಲಿಂಗಾಯತರಾದ ಕಾಂಗ್ರೆಸ್ನ ಪ್ರಭಾ ಮಲ್ಲಿಕಾರ್ಜುನ್ ಗೆಲುವಿನ ನಗೆ ಬೀರಲು ಕಾರಣವಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧದ ಜನಾಕ್ರೋಶ ಹಾಸನದಲ್ಲಿ ಕಾಂಗ್ರೆಸ್ನ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿದೆ.

ಭಾರಿ ಬಹುಮತ ಪಡೆದು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಗದ್ದುಗೆ ಏರಿದರೆ, ರಾಜ್ಯ ಸರ್ಕಾರವನ್ನು ಪತನಗೊಳಿಸುವ ಷಡ್ಯಂತ್ರ ರೂಪಿಸಬಹುದೆಂಬ ಆತಂಕ ಕೆಲವು ಕಾಂಗ್ರೆಸ್ ನಾಯಕರಲ್ಲಿಯೇ ಇತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಎನ್ಡಿಎಯಲ್ಲಿರುವ ಪಕ್ಷಗಳನ್ನು ವಿಶ್ವಾಸದಲ್ಲಿ ಜೊತೆಯಲ್ಲಿ ಇಟ್ಟುಕೊಳ್ಳುವುದೇ ಬಿಜೆಪಿಗೆ ಸವಾಲಾಗಲಿದೆ. ಹೀಗಾಗಿ, ರಾಜ್ಯ ಕಾಂಗ್ರೆಸ್ ಮತ್ತಷ್ಟು ಸ್ಥಿರ ಆಡಳಿತ ನೀಡಲು ಸಾಧ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.