ಬೆಂಗಳೂರು: ಈ ಬಾರಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗಿ ನಿರಾಯಾಸವಾಗಿ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದು ಗದ್ದುಗೆ ಏರಬಹುದು ಎಂಬ ಕನಸು ಕಾಣುತ್ತಿದ್ದ ಜೆಡಿಎಸ್, ಕಾಂಗ್ರೆಸ್ ಪರ ಎದ್ದ ಅಲೆಯಲ್ಲಿ ತೀವ್ರ ಆಘಾತ ಅನುಭವಿಸಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಜೆಡಿಎಸ್ ಶಾಸಕರ ಸಂಖ್ಯೆ ಅರ್ಧದಷ್ಟು ಕುಸಿದಿದ್ದು, ಹಲವು ಜಿಲ್ಲೆಗಳಲ್ಲಿ ಪಕ್ಷ ನೆಲೆ ಕಳೆದುಕೊಂಡಿದೆ.

2013ರ ಚುನಾವಣೆಯಲ್ಲಿ ಜೆಡಿಎಸ್ 40 ಕ್ಷೇತ್ರಗಳಲ್ಲಿ ಗೆದ್ದಿತ್ತು. 2018ರ ಚುನಾವಣೆಗೂ ಮುನ್ನ ಏಳು ಮಂದಿ ಕಾಂಗ್ರೆಸ್ ಸೇರಿದ್ದರೆ, ಮೂವರು ಬಿಜೆಪಿಗೆ ಹೋಗಿದ್ದರು. ಒಬ್ಬರು ನಿಧನರಾಗಿದ್ದರು. ಆಗ ಜೆಡಿಎಸ್ನ ಬಲ 29ಕ್ಕೆ ಕುಸಿದಿತ್ತು. ಸಂಕಷ್ಟದ ಸ್ಥಿತಿಯಲ್ಲಿ ಚುನಾವಣೆ ಎದುರಿಸಿದ್ದ ಜೆಡಿಎಸ್, 2018ರಲ್ಲಿ 37 ಸ್ಥಾನಗಳೊಂದಿಗೆ ಮೇಲೆದ್ದು ಬಂದಿತ್ತು. ಕಾಂಗ್ರೆಸ್ ಜತೆಗೆ ಸಮ್ಮಿಶ್ರ ಸರ್ಕಾರ ರಚಿಸಿ ಮುಖ್ಯಮಂತ್ರಿ ಗಾದಿಯನ್ನೂ ಗಳಿಸಿತ್ತು.

ಈ ಬಾರಿಯೂ 40ರಿಂದ 50 ಸ್ಥಾನ ಗೆದ್ದರೆ ಅತಂತ್ರ ಸ್ಥಿತಿಯ ಲಾಭ ಪಡೆದು ಸುಲಭವಾಗಿ ಅಧಿಕಾರದ ಗದ್ದುಗೆ ಏರಬಹುದು ಎಂಬ ಲೆಕ್ಕಾಚಾರ ಜೆಡಿಎಸ್ನಲ್ಲಿತ್ತು. ಅದಕ್ಕಾಗಿ ವರ್ಷದ ಮೊದಲೇ ಚುನಾವಣಾ ತಯಾರಿ ಆರಂಭಿಸಿತ್ತು. ಜನತಾ ಜಲಧಾರೆ, ‘ಪಂಚರತ್ನ ಯೋಜನೆ’ ಹೆಸರಿನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಉದ್ದಗಲಕ್ಕೆ ಸಂಚರಿಸಿ ಪ್ರಚಾರ ಮಾಡಿದ್ದರು. ಬಹುತೇಕ ರೈತರನ್ನು ಕೇಂದ್ರೀಕರಿಸಿಯೇ ಭರವಸೆಗಳನ್ನು ಪ್ರಕಟಿಸುವ ಮೂಲಕ, ಕೃಷಿಕ ಸಮುದಾಯ ಹಿಂದಿಗಿಂತಲೂ ಹೆಚ್ಚು ಬೆಂಬಲ ನೀಡಬಹುದು ಎಂಬ ಭರವಸೆಯಲ್ಲಿದ್ದರು.

ಬಿಜೆಪಿ, ಕಾಂಗ್ರೆಸ್ ಚುನಾವಣಾ ತಯಾರಿ ಕುರಿತು ಯೋಚಿಸುತ್ತಿದ್ದಾಗಲೇ ಜೆಡಿಎಸ್ ಮುಂದಕ್ಕೆ ಸಾಗಿತ್ತು. ಚುನಾವಣಾ ವೇಳಾಪಟ್ಟಿ ಘೋಷಣೆಗೆ ಮೂರು ತಿಂಗಳ ಮೊದಲೇ 93 ಕ್ಷೇತ್ರಗಳ ಅಭ್ಯರ್ಥಿಗಳನ್ನೂ ಪ್ರಕಟಿಸಿತ್ತು. ಆದರೆ, ಎರಡನೇ ಹಂತದಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ಸೃಷ್ಟಿಯಾದ ಭಿನ್ನಮತ ಹಲವು ದಿನಗಳ ಕಾಲ ಪಕ್ಷವನ್ನು ಕಾಡಿತ್ತು.

ಕೊನೆಯ ಸುತ್ತಿನಲ್ಲಿ ವಿವಿಧ ಪಕ್ಷಗಳಿಂದ ವಲಸ ಬಂದವರಿಗೆ ಟಿಕೆಟ್ ನೀಡಿದ ಜೆಡಿಎಸ್, ಅದರಿಂದಲೂ ಸಾಕಷ್ಟು ಲಾಭವಾಗಬಹುದು ಎಂಬ ನಿರೀಕ್ಷೆ ಇರಿಸಿಕೊಂಡಿತ್ತು. ಒಕ್ಕಲಿಗರ ಬಾಹುಳ್ಯದ ಕ್ಷೇತ್ರಗಳಲ್ಲಿ ತಮ್ಮ ಬಲವನ್ನು ಕಸಿಯಲು ಯಾರಿಗೂ ಸಾಧ್ಯವಾಗಬಹುದು ಎಂಬ ಬಲವಾದ ವಿಶ್ವಾಸವೂ ದೇವೇಗೌಡರ ಕುಟುಂಬದಲ್ಲಿತ್ತು.

ಚುನಾವಣೆಯ ಫಲಿತಾಂಶ ಜೆಡಿಎಸ್ ನಾಯಕರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಜೆಡಿಎಸ್ನ ಭದ್ರ ಕೋಟೆಗಳಂತ್ತಿದ್ದ ಮಂಡ್ಯ, ರಾಮನಗರ, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಭಾರಿ ಹಿನ್ನಡೆಯಾಗಿದೆ. ಕುಮಾರಸ್ವಾಮಿ ಪ್ರತಿನಿಧಿಸುವ ರಾಮನಗರ ಜಿಲ್ಲೆಯಲ್ಲಿ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳುವುದಕ್ಕೂ ಸಾಧ್ಯವಾಗಿಲ್ಲ.

ದೇವೇಗೌಡರ ತವರು ಜಿಲ್ಲೆ ಹಾಸನದಲ್ಲೂ ಈ ಬಾರಿ ಜೆಡಿಎಸ್ನ ಹಿಡಿತ ಸಡಿಲವಾಗಿದೆ. ಅಲ್ಲಿಯೂ ಜೆಡಿಎಸ್ ನಿರಾಯಾಸವಾಗಿ ಯಾವ ಕ್ಷೇತ್ರವನ್ನೂ ಗೆದ್ದಿಲ್ಲ. ಮಂಡ್ಯದಲ್ಲಿ ಜೆಡಿಎಸ್ ಬಲ ತೀರಾ ಕುಗ್ಗಿದೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲೂ ಹಿಂದೆ ಇದ್ದ ಎಲ್ಲ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದಕ್ಕೆ ಜೆಡಿಎಸ್ಗೆ ಸಾಧ್ಯವಾಗಿಲ್ಲ. ಕೆಲವು ಜಿಲ್ಲೆಗಳಲ್ಲಷ್ಟೇ ಜೆಡಿಎಸ್ಗೆ ಪ್ರಾತಿನಿಧ್ಯ ದಕ್ಕಿದೆ.

‘ಜೆಡಿಎಸ್ 123 ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಅಧಿಕಾರ ಹಿಡಿಯಲಿದೆ’ ಎಂದೇ ಕುಮಾರಸ್ವಾಮಿ ಹೇಳುತ್ತಿದ್ದರು. ಆದರೆ, ಅವರ ಚುನಾವಣಾ ತಯಾರಿ ಮೈತ್ರಿ ಸರ್ಕಾರ ರಚನೆಗೆ ಬೇಕಿರುವ ಬಲ ಹೊಂದಾಣಿಕೆಗೆ ಸೀಮಿತವಾಗಿತ್ತು ಎಂಬುದು ರಸಹಸ್ಯವಾಗೇನೂ ಉಳಿದಿರಲಿಲ್ಲ. ಚುನಾವಣಾ ಪ್ರಚಾರದ ಮಧ್ಯದಲ್ಲೇ ಹೇಳಿಕೆ ನೀಡಿದ್ದ ಅವರು, ‘ಮೈತ್ರಿಗಾಗಿ ರಾಷ್ಟ್ರೀಯ ಪಕ್ಷಗಳ ದೂತರು ಬಂದಿದ್ದಾರೆ’ ಎನ್ನುವ ಮೂಲಕ ತಮ್ಮ ಗುರಿ ಏನು ಎಂಬುದನ್ನು ಹೊರಗೆಡವಿದ್ದರು.

ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗಾಗಿಯೇ ಹಂಬಲಿಸುತ್ತಿದೆ ಎಂಬ ಸಂದೇಶ ಪಕ್ಷಕ್ಕೆ ಪ್ರತಿಕೂಲ ಪರಿಣಾಮ ಉಂಟು ಮಾಡಿದಂತಿದೆ. ಒಕ್ಕಲಿಗ ಮತದಾರರ ಬಾಹುಳ್ಯದ ಅನೇಕ ಕ್ಷೇತ್ರಗಳು ಜೆಡಿಎಸ್ ತೆಕ್ಕೆಯಿಂದ ಕಾಂಗ್ರೆಸ್ ಕೈಗೆ ಈ ಬಾರಿ ಜಾರಿವೆ. ‘ಈ ಬಾರಿ ನನಗೆ ಅವಕಾಶ ಕೊಡಿ’ ಎನ್ನುವ ಮೂಲಕ ಒಕ್ಕಲಿಗರೊಬ್ಬರು ಮುಖ್ಯಮಂತ್ರಿಯಾಗಲು ಬೆಂಬಲ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹಳೆ ಮೈಸೂರು ಭಾಗದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾಡಿದ ಮನವಿಯೂ ಜೆಡಿಎಸ್ ಬಲ ಕುಸಿತಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.